logo
ಕನ್ನಡ ಸುದ್ದಿ  /  ಜೀವನಶೈಲಿ  /  Explainer: ಲಕ್ಷದ್ವೀಪ ಸೂಕ್ಷ್ಮ ಮಾರಾಯ್ರೆ, ಪ್ರವಾಸೋದ್ಯಮ ಗುಂಗಿನಲ್ಲಿ ಮರೀಬೇಡಿ ಪರಿಸರದ ಹಂಗು, ಕಳ್ಕೊಂಡ್ರೆ ಸಿಗಲ್ಲ ನೋಡಿ ಮತ್ತೆ

Explainer: ಲಕ್ಷದ್ವೀಪ ಸೂಕ್ಷ್ಮ ಮಾರಾಯ್ರೆ, ಪ್ರವಾಸೋದ್ಯಮ ಗುಂಗಿನಲ್ಲಿ ಮರೀಬೇಡಿ ಪರಿಸರದ ಹಂಗು, ಕಳ್ಕೊಂಡ್ರೆ ಸಿಗಲ್ಲ ನೋಡಿ ಮತ್ತೆ

Reshma HT Kannada

Jan 12, 2024 03:07 PM IST

ಲಕ್ಷದ್ವೀಪ ಮತ್ತು ಪರಿಸರ

    • ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಫೋಟೊ ಹಂಚಿಕೊಂಡಾಗಿನಿಂದ ಎಲ್ಲಿ ಕೇಳಿದ್ರೂ ಲಕ್ಷದ್ವೀಪದ್ದೇ ಸುದ್ದಿ. ಈ ನಡುವೆ ಲಕ್ಷದ್ವೀಪವನ್ನು ಅಭಿವೃದ್ಧಿ ಪಡಿಸಬೇಕು, ಪ್ರವಾಸೋದ್ಯಮಕ್ಕೆ ಮುಕ್ತ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೆಲ್ಲಾ ಸರಿ ಆದರೆ ಈ ಗುಂಗಿನಲ್ಲಿ ಪರಿಸರವನ್ನು ಮರೆಯಬಾರದು ಅಲ್ವೇ? 
ಲಕ್ಷದ್ವೀಪ  ಮತ್ತು ಪರಿಸರ
ಲಕ್ಷದ್ವೀಪ ಮತ್ತು ಪರಿಸರ

ಜನವರಿ 4 ರಿಂದ ಯಾರ ಬಾಯಲ್ಲಿ ಕೇಳಿದರೂ ಲಕ್ಷದ್ವೀಪದ್ದೇ ಮಾತು. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದು ಮಾತ್ರವಲ್ಲ, ಇಲ್ಲಿನ ಫೋಟೊಗಳನ್ನು ಹಂಚಿಕೊಂಡು ಲಕ್ಷದ್ವೀಪದ ಸೊಬಗನ್ನು ವಿವರಿಸಿದ್ದರು. ಇದರಿಂದ ಹಲವರು ಲಕ್ಷದ್ವೀಪದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿದವರು ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ, ಮಾತ್ರವಲ್ಲ ಲಕ್ಷದ್ವೀಪಕ್ಕೆ ತೆರಳುವಂತೆ ಮನವಿ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಲಕ್ಷದ್ವೀಪ ಎನ್ನುವುದು ಸುಂದರ ಪ್ರಾಚೀನ ಕಡಲತೀರಗಳು, ಹವಳದ ಬಂಡೆಗಳು, ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಜನನಿಬಿಡ ಪ್ರದೇಶ. ಇಲ್ಲಿ ಪ್ರವಾಸೋದ್ಯಮ ಚಾಲ್ತಿಯಲ್ಲಿದ್ದರೂ ಕೆಲವು ವಿಚಾರಗಳಿಂದ ನಿರ್ಬಂಧ ಹೇರಲಾಗಿದೆ. ಸುಪ್ರಿಂಕೋರ್ಟ್‌ ಲಕ್ಷದ್ವೀಪಕ್ಕೆ ಸಂಬಂಧಿಸಿ ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿದೆ.

ಆದರೆ ಇದೀಗ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿದ ಫೋಟೊ ಹಂಚಿಕೊಂಡಿದ್ದು, ಇದರ ಬಗ್ಗೆ ಮಾಲ್ಡೀವ್ಸ್‌ನ ಸಚಿವರು ಕಾಮೆಂಟ್‌ ಮಾಡಿದ್ದು, ಭಾರತೀಯರು ಮಾಲ್ಡೀವ್ಸ್‌ ಅನ್ನು ವಿರೋಧಿಸಿದ್ದು ಈ ಎಲ್ಲದರ ನಡುವೆ ಮತ್ತೆ ಲಕ್ಷದ್ವೀಪ ಪ್ರವಾಸೋದ್ಯಮದ ವಿಚಾರ ಮುನ್ನೆಲೆಗೆ ಬಂದಿದೆ.

ಲಕ್ಷದ್ವೀಪವು ಮಾಲ್ಡೀವ್ಸ್‌ನಷ್ಟೇ ಸುಂದರವಾಗಿದ್ದು, ಅದ್ಭುತ ತಿಳಿ ನೀಲಿ ಸಮುದ್ರದಿಂದ ಸುತ್ತುವರಿದಿದ್ದರೂ ಇಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ ಎಂಬುದು ಸತ್ಯ. ಮಾಲ್ಡೀವ್ಸ್‌ನಂತಹ ಅಭಿವೃದ್ಧಿ ಹೊಂದಿದ ತಾಣದೆದುರು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಲಕ್ಷದ್ವೀಪ ಹೋರಾಡುತ್ತಿರುವುದು ನಿಜ.

ಪರಿಸರಕ್ಕೆ ಹಾನಿ

ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದರಿಂದ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತದೆ ಎನ್ನುವುದು ಕೂಡ ಅಷ್ಟೇ ವಾಸ್ತವ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆ ಈ ಎರಡೂ ಅವಳಿ ಅಂಚಿನ ಕತ್ತಿಯಾಗಿದೆ. ಪ್ರಕೃತಿಯನ್ನು ಉಳಿಸುವ ಸಲುವಾಗಿ ಅಭಿವೃದ್ಧಿಯನ್ನು ಮುಂದೂಡುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಜೊತೆಗೆ ಆಧುನಿಕ ಪ್ರಗತಿಯ ಮಾನದಂಡಗಳು ಲಕ್ಷದ್ವೀಪಕ್ಕೆ ಮಾರಕವಾಗಬಹುದು.

ಲಕ್ಷದ್ವೀಪದಲ್ಲಿನ ಬಂಗಾರಮ್‌ನಂತಹ ದ್ವೀಪಗಳು, ಬೆರಗುಗೊಳಿಸುವ ಕಡಲತೀರಗಳು, ಹವಳದ ಬಂಡೆಗಳು ಹಾಗೂ ನೀಲಿ ಕಡಲು ಎಲ್ಲವೂ ಅದ್ಭುತ ನೋಟಕ್ಕೆ ಹೆಸರಾದರೂ ಕೂಡ ಇಲ್ಲಿನ ದುರ್ಬಲ ಪರಿಸರ ವ್ಯವಸ್ಥೆಯು ಅಪಾಯಕ್ಕೆ ಎಡೆ ಮಾಡಿಕೊಡಬಹುದು. ಇದು ಪರಿಸರ ಸೇರಿದಂತೆ ಇಲ್ಲಿನ ಪ್ರಾಕೃತಿಕ ತಾಣಗಳ ಅವನತಿಗೆ ಕಾರಣವಾಗಬಹುದು. ಈ ಬಗ್ಗೆ ಗಮನ ಹರಿಸದೇ ಕೇವಲ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಿದರೆ ತೊಂದರೆ ಎದುರಾಗುವುದು ಖಂಡಿತ.

ಇದನ್ನೂ ಓದಿ: ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಟೀಕಿಸಿದ ಮಾಲ್ಡೀವ್ಸ್ 'ಬೈಕಾಟ್ ಮಾಲ್ಡೀವ್ಸ್' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್; ಏನಿದು ಪ್ರಕರಣ

ಈ ವಿಚಾರಕ್ಕೆ ಬಂದಾಗ ಮೊದಲು ಹಾನಿಯಾಗುವುದು ಹವಳದ ಬಂಡೆಗಳಿಗೆ ಎನ್ನುವುದು ತಜ್ಞರ ವಾದ. ಇದು ಲಕ್ಷದ್ವೀಪದ ಸೌಂದರ್ಯದ ಮೂಲಾಧಾರವಾಗಿದೆ.

ಲಕ್ಷದ್ವೀಪದಲ್ಲಿನ ಏಕೈಕ ರೆಸಾರ್ಟ್‌ ಬಂಗಾರಮ್‌ ಐಲ್ಯಾಂಡ್‌ ರೆಸಾರ್ಟ್‌. ಸಿಜಿಇ ಗ್ರೂಪ್‌ ನಡೆಸುತ್ತಿದ್ದ ಈ ರೆಸಾರ್ಟ್‌ ಅನ್ನು ನ್ಯಾಯಲಯದ ಆದೇಶದಂತೆ ಮುಚ್ಚಲಾಗಿತ್ತು. ಆ ನಂತರ ಲಕ್ಷದ್ವೀಪಕ್ಕೆ ತೆರಳುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಹನಿಮೂನ್‌ಗೆ ತೆರಳುವವರು ಹಾಗೂ ಸಮುದ್ರದ ಬಗ್ಗೆ ಸಂಶೋಧನೆ ಮಾಡುವ ಕೆಲವರಷ್ಟೇ ಇಲ್ಲಿಗೆ ಭೇಟಿ ನೀಡುತ್ತಾರೆ.

ಜೀವವೈವಿಧ್ಯಕ್ಕೂ ಅಪಾಯ

ಹವಳದ ಬಂಡೆಗಳ ಬಗ್ಗೆ ಹೇಳುವುದಾದರೆ ಇವು ಸಮುದ್ರದ ಜೀವವೈವಿದ್ಯತೆಗೆ ನಿರ್ಣಾಯಕವಾಗಿವೆ. ಕರಾವಳಿ ಪ್ರದೇಶಗಳನ್ನು ಸವೆತದಿಂದ ರಕ್ಷಿಸುವ ಹಾಗೂ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯವನ್ನು ಒದಗಿಸುವ ಕೆಲಸವನ್ನು ಇವು ಮಾಡುತ್ತಿವೆ. ಆದರೂ ಹವಾಮಾನ ವೈಪರೀತ್ಯದಿಂದ ಏರುತ್ತಿರುವ ಸಮುದ್ರದ ತಾಪಮಾನ ಹಾಗೂ ಬೋಟ್‌ ಆಂಕರ್‌ ಹಾಗೂ ಮಾಲಿನ್ಯದಂತಹ ಸಮರ್ಥನೀಯವಲ್ಲದ ಪ್ರವಾಸೋದ್ಯಮವು ದುರ್ಬಲ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುವುದು ಖಂಡಿತ ಎನ್ನಲಾಗುತ್ತಿದೆ.

ಲಕ್ಷದ್ವೀಪದಂತಹ ಯಾವುದೇ ಸೂಕ್ಷ್ಮ ಪರಿಸರ ಹೊಂದಿರುವ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದರಿಂದ ಅಪಾಯ ಎದುರಾಗುವುದು ಖಚಿತ. ಇದು ಹೆಚ್ಚು ತಗ್ಗು ಪ್ರದೇಶವಾದ ಕಾರಣ ಹೆಚ್ಚು ಸವಕಳಿ ಉಂಟಾಗಬಹುದು.

ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಆಗ ಇವರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಜೊತೆಗೆ ವಿಮಾನ ನಿಲ್ದಾಣಗಳನ್ನೂ ನಿರ್ಮಿಸಲಾಗುತ್ತದೆ. ಈ ಎಲ್ಲವೂ ನಡೆದರೆ ಪರಿಸರದ ಕಥೆ ಏನು? ಎಂಬ ಪ್ರಶ್ನೆ ಕಾಡುವುದು ಸಹಜ.

ಇದನ್ನೂ ಓದಿ: Maldives Issue: ಭಾರತ ವಿರುದ್ದ ಅವಹೇಳನಕಾರಿ ಹೇಳಿಕೆ, ಮಾಲ್ಡೀವ್ಸ್‌ನ ಮೂವರು ಸಚಿವರು ವಜಾ: ಪ್ರವಾಸೋದ್ಯಮ ಹೊಡೆತಕ್ಕೆ ಬೆಚ್ಚಿದ ದ್ವೀಪ ರಾಷ್ಟ

ಮರಳು ಹಾಗೂ ಗಿಡಗಳ ನಾಶವು ಭೂ ಸವೆತದ ವೇಗವನ್ನು ಹೆಚ್ಚಿಸುತ್ತದೆ. ಇದರಿಂದ ಕಡಲತೀರವೂ ಅಲ್ಲೋಲ್ಲ ಕಲ್ಲೋಲವಾಗಬಹುದು. ಸಿಹಿನೀರಿನ ಮೂಲಗಳಿಗೆ ಉಪ್ಪು ನೀರು ಸೇರಬಹುದು. ಆ ಜಾಗದ ಪರಿಸ್ಥಿತಿಯೇ ಬದಲಾಗಬಹುದು. ಒಟ್ಟಿನಲ್ಲಿ ಹೇಳಬೇಕು ಎಂದರೆ ಏನೋ ಮಾಡಲು ಹೋಗಿ ಇನ್ಯಾವುದನ್ನೋ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಸ್ಥಳೀಯರ ಅಳಿವು-ಉಳಿವಿನ ಪ್ರಶ್ನೆ

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಅಭಿವೃದ್ಧಿ ಹೊಂದಿದ ನಂತರ ಸ್ಥಳೀಯ ಸಮುದಾಯಗಳು, ಬುಡಕಟ್ಟುಗಳ ಸವಕಳಿ, ಅವನತಿ, ಆವಾಸಸ್ಥಾನದ ನಷ್ಟ ಹಾಗೂ ಆತಂಕಕಾರಿ ನಗರೀಕರಿಣ ಇಂತಹ ಹಲವು ಸವಾಲುಗಳನ್ನು ಎದುರಿಸಿದ್ದು ಸುಳ್ಳಲ್ಲ. ಜೊತೆಗೆ ಹಲವು ವರ್ಷಗಳಿಂದ ಇಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ಸಮುದಾಯುಗಳು ನೆಮ್ಮದಿ ಕಳೆದುಕೊಂಡಿರುವುದು ಸುಳ್ಳಲ್ಲ.

ಲಕ್ಷದ್ವೀಪದಲ್ಲೂ ಕೂಡ ಇಂತಹ ಹಲವು ಸಮುದಾಯಗಳಿವೆ. ಆದರೆ ಇಲ್ಲಿಯವರೆಗೆ ಈ ಸಮುದಾಯವು ಮುಖ್ಯವಾಹಿನಿಗೆ ಬಾರದೇ ಇದ್ದರೂ ಅವರ ಪಾಡಿಗೆ ಅವರು ಅಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಈಗ ಪ್ರವಾಸೋದ್ಯಮದ ಹೆಸರಿನಲ್ಲಿ ಅವರ ಬದುಕಿನ ನೆಮ್ಮದಿ ಕಸಿಯಬಾರದು. ಅಲ್ಲಿ ವಾಸಿಸುವವರಿಗೆ ಯಾವುದೇ ಹೇರಿಕೆಗಳನ್ನು ಮಾಡದೇ ಅವರ ಸರಳ ಜೀವನದಲ್ಲೇ ಅವರು ಮುಂದುವರಿಯುವಂತೆ ಮಾಡುವುದು ಮುಖ್ಯವಾಗುತ್ತದೆ.

ಪ್ರವಾಸೋದ್ಯಮ ಅಭಿವೃದ್ಧಿಯಾದ ತಕ್ಷಣ ಒಂದರ ಹಿಂದೆ ಒಂದರಂತೆ ಚಟುವಟಿಕೆಗಳು ಆರಂಭವಾಗುತ್ತದೆ. ಆದರೆ ಪ್ರವಾಸಿಗರು ಧೋಸ್‌ನಲ್ಲಿ ಜಿಗಿಯುತ್ತಾ ದ್ವೀಪಕ್ಕೆ ಹೋಗುತ್ತಾರೆ, ಅದು ಸಮುದ್ರ ಜೀವಿಗಳಿಗೆ ತೊಂದರೆಯಾಗುವುದಿಲ್ಲ ಅಥವಾ ನಾಶಪಡಿಸುವುದಿಲ್ಲ ಮತ್ತು ಯುಗಯುಗಾಂತರಗಳಿಂದ ಅವರ ಸುಸ್ಥಿರ ಸಾರಿಗೆ ವಿಧಾನವಾಗಿ ಅಸ್ತಿತ್ವದಲ್ಲಿದೆ.

ಸಮುದ್ರದ ನೀರೂ ಕಲುಷಿತವಾಗಬಹುದು

ದೊಡ್ಡ ಹಡಗುಗಳು ಬಂದರೆ ಸಮುದ್ರ ಮಾಲಿನ್ಯವೂ ಜೊತೆಯಾಗುತ್ತದೆ. ಸಂಸ್ಕರಿಸದ ಚರಂಡಿ ಮತ್ತು ರೆಸಾರ್ಟ್‌ಗಳು, ದೋಣಿಗಳು ಹಾಗೂ ಪ್ರವಾಸಿಗರಿಂದ ಕಲುಷಿತವಾಗುವ ಪ್ರದೇಶ ಹಾಗೂ ತ್ಯಾಜ್ಯವು ಲಕ್ಷದೀಪದ ಶುದ್ಧ ನೀರನ್ನು ಕಲುಷಿತಗೊಳಿಸುವುದು ಖಂಡಿತ. ಇದು ನೇರವಾಗಿ ಸಮುದ್ರಜೀವಿಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ. ಆಹಾರ ಸರಪಳಿಯ ಕೊಂಡಿಯನ್ನು ಕತ್ತರಿಸಬಹುದು. ಮಾತ್ರವಲ್ಲ ಈ ಕಲುಷಿತ ವಾತಾವರಣವು ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡಬಹುದು.

ಲಕ್ಷದ್ವೀಪದಲ್ಲಿ ಸಾಕಷ್ಟು ಸಿಹಿನೀರಿನ ಕೊರತೆ ಇದೆ. ಇಲ್ಲಿ ಡಸಲೀಕರಣ ಹಾಗೂ ಮಳೆನೀರು ಕೊಯ್ಲು ಮಾಡಲಾಗುತ್ತದೆ. ಪ್ರವಾಸೋದ್ಯಮ ಚಟುವಟಿಕೆ ಹೆಚ್ಚುವುದರಿಂದ ನೀರಿನ ಬೇಡಿಕೆಯೂ ಹೆಚ್ಚುತ್ತದೆ. ಸದ್ಯಕ್ಕೆ ಸೀಮಿತವಾಗಿರುವ ಸಿಹಿನೀರಿನ ಮೂಲಗಳು ಒಣಗಬಹುದು.

ಹೀಗೆ ಒಂದಲ್ಲ ಎರಡಲ್ಲೂ ನೂರಾರು ಸಮಸ್ಯೆಗಳು ಎದುರಾಗಬಹುದು. ಅನಿಯಂತ್ರಿತ ಪ್ರವಾಸೋದ್ಯಮವು ಲಕ್ಷದ್ವೀಪದ ನಿಕಟ ಸಮುದಾಯಗಳನ್ನು ಮುಳುಗಿಸುತ್ತದೆ, ಇದು ಸಾಂಸ್ಕೃತಿಕ ಗುರುತು, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಮಾಜಿಕ ಒಗ್ಗಟ್ಟಿನ ನಷ್ಟಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಅಪಾಯಗಳನ್ನು ಕಡಿಮೆ ಮಾಡಲು ಸುಸ್ಥಿರ ಪ್ರವಾಸೋದ್ಯಮದತ್ತ ಗಮನ ಹರಿಸುವುದು ಮುಖ್ಯವಾಗುತ್ತದೆ.

ಪರಿಹಾರಕ್ಕೂ ಇದೆ ಮಾರ್ಗ

ಹಾಗಂತ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಬಾರದು ಎಂದಲ್ಲ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉಂಟಾಗುವ ಹಾನಿಯನ್ನು ಮೊದಲು ಅರಿತು ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಪ್ರವಾಸಿಗರ ಸಂಖ್ಯೆಯನ್ನು ಮಿತಿಗೊಳಿಸುವುದು, ಪರಿಸರ ಸ್ನೇಹಿ ರೆಸಾರ್ಟ್‌ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲೂ ಪರಿಸರಕ್ಕೆ ಒತ್ತು ನೀಡುವುದು, ಕಠಿಣ ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುದು, ಜವಾಬ್ದಾರಿಯುತ ಪ್ರವಾಸೋದ್ಯಮ ಅಭ್ಯಾಸಗಳ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು, ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದು. ಈ ಎಲ್ಲವೂ ಆಗಬೇಕಿದೆ.

    ಹಂಚಿಕೊಳ್ಳಲು ಲೇಖನಗಳು