ಕೇಂದ್ರ ಬಜೆಟ್ 2024; ಮಧ್ಯಂತರ ಬಜೆಟ್‌ನಲ್ಲಿ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ರಕ್ಷಣಾ ವಲಯಕ್ಕೆ, ಕೃಷಿಗೆ ಎಷ್ಟು ಊಹಿಸಿ, ನಂತರ ಓದಿ
Feb 01, 2024 05:39 PM IST
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ಮಂಡಿಸಿದರು. ಇದು ಮಧ್ಯಂತರ ಬಜೆಟ್ ಆಗಿದ್ದು, ರಕ್ಷಣಾ ವಲಯಕ್ಕೆ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಕೃಷಿಗೆ ಎಷ್ಟು ಊಹಿಸಿ ನೋಡೋಣ.
ಕೇಂದ್ರ ಬಜೆಟ್ 2024: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಕೇಂದ್ರ ಬಜೆಟನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದು ಮಧ್ಯಂತರ ಬಜೆಟ್ ಆಗಿದ್ದು, ರಕ್ಷಣಾ ವಲಯಕ್ಕೆ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಕೃಷಿಗೆ ಎಷ್ಟು ಊಹಿಸಬಲ್ಲಿರಾ…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ (ಫೆ.1) ಬಜೆಟ್ ಭಾಷಣ ಮಾಡುತ್ತ, ದೇಶದ ಅಭಿವೃದ್ಧಿಯ ಬೆಳವಣಿಗೆಗೆ ಪೂರಕವಾಗಿರುವ ಆರ್ಥಿಕ ಸುಧಾರಣೆಗಳನ್ನು ಘೋಷಿಸಿದರು. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡನೆಯಾಗಿರುವ ಈ ಬಜೆಟ್ ಮಧ್ಯಂತರ ಬಜೆಟ್ ಆಗಿದ್ದು, ಜನಪ್ರಿಯ ಘೋಷಣೆಗಳು ಇರಲಿಲ್ಲ. ಆದರೆ, ವಿವಿಧ ಕ್ಷೇತ್ರಗಳಿಗೆ, ವಲಯಗಳಿಗೆ ಹಣಕಾಸು ಹಂಚಿಕೆಯ ವಿವರವನ್ನು ಹೊಂದಿತ್ತು.
ಆದಾಗ್ಯೂ, ಕೇಂದ್ರ ಬಜೆಟ್ 2024 ಬಿಜೆಪಿಯ ಆರ್ಥಿಕ ಪ್ರಣಾಳಿಕೆಯಂತೆ ರಾಜಕೀಯ ಪಕ್ಷಗಳು ನೋಡುತ್ತಿವೆ. ವ್ಯಾಪಾರೋದ್ಯಮಗಳಿಗೂ ಈ ಮಧ್ಯಂತರ ಬಜೆಟ್‌ನಲ್ಲಿ ಸಂದೇಶವಿದೆ. ಇದರಲ್ಲಿ ಹಣಕಾಸಿನ ಬಲವರ್ಧನೆ, ಸಾಲಗಳು, ಭವಿಷ್ಯದ ತೆರಿಗೆ ನೀತಿ, ಯೋಜನೆಗಳ ಒಳಸುಳಿವನ್ನು ಇದು ಮಾರುಕಟ್ಟೆಗೆ ನೀಡಿದೆ.
ಭಾರತದ ವೆಚ್ಚ ಬಂಡವಾಳವನ್ನು ಶೇಕಡ 11 ಹೆಚ್ಚಳ ಮಾಡಲಾಗಿದ್ದು, ಇದು 11.11 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಒಟ್ಟು ಜಿಡಿಪಿಯ ಶೇಕಡ 3.4ಕ್ಕೆ ಏರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕ್ಯಾಪೆಕ್ಸ್‌ನ ಮೂರು ಪಟ್ಟು ಹೆಚ್ಚಳವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಗುಣಿಸುವ ಪರಿಣಾಮವನ್ನು ಉಂಟುಮಾಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಹೇಳಿದರು.
ವಿಮಾನ ಯಾನ ಕ್ಷೇತ್ರವನ್ನು ಗಮನಿಸಿದರೆ ಇತ್ತೀಚಿನ ವರ್ಷದಲ್ಲಿ ಭಾರತದ ವಿಮಾನ ಯಾನ ಸಂಸ್ಥೆಗಳು 1,000 ಹೊಸ ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿವೆ. ಇದು ವೈಮಾನಿಕ ಕ್ಷೇತ್ರದ ಬೆಳವಣಿಗೆಗೆ ಸೂಚಕ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ರಕ್ಷಣಾ ಕ್ಷೇತ್ರಕ್ಕೆ ಸುಧಾರಿತ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಅದೇ ರೀತಿ, ಕೊಯ್ಲಿನ ನಂತರದ ಕೃಷಿ ಚಟುವಟಿಕೆಗಳಲ್ಲಿ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ವಿವಿಧ ಬೆಳೆಗಳಿಗೆ ನ್ಯಾನೋ ಡಿಎಪಿ ಬಳಕೆಯನ್ನು ಉತ್ತೇಜಿಸುವ ಉಪಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸಿಮೆಂಟ್ ಸೇರಿದಂತೆ ಮೂರು ಪ್ರಮುಖ ರೈಲ್ವೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು. 40,000 ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಮಧ್ಯಂತರ ಬಜೆಟ್ ದಾಖಲೆಗಳ ಪ್ರಕಾರ, ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕನಿಷ್ಠ ಅನುದಾನ ಕೃಷಿವಲಯಕ್ಕೆ ಸಿಕ್ಕಿದೆ.
ಕೇಂದ್ರ ಬಜೆಟ್ 2024; ಯಾವ ಸಚಿವಾಲಯಕ್ಕೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ
1) ರಕ್ಷಣಾ ಸಚಿವಾಲಯ - 6.1 ಲಕ್ಷ ಕೋಟಿ ರೂಪಾಯಿ
2) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ - 2.78 ಲಕ್ಷ ಕೋಟಿ ರೂಪಾಯಿ
3) ರೈಲ್ವೆ ಸಚಿವಾಲಯ - 2.55 ಲಕ್ಷ ಕೋಟಿ ರೂಪಾಯಿ
4) ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ- 2.13 ಲಕ್ಷ ಕೋಟಿ ರೂಪಾಯಿ
5) ಗೃಹ ಸಚಿವಾಲಯ - 2.03 ಲಕ್ಷ ಕೋಟಿ ರೂಪಾಯಿ
6) ಗ್ರಾಮೀಣಾಭಿವೃದ್ಧಿ ಸಚಿವಾಲಯ - 1.77 ಲಕ್ಷ ಕೋಟಿ ರೂಪಾಯಿ.
7) ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ- 1.68 ಲಕ್ಷ ಕೋಟಿ ರೂಪಾಯಿ
8) ಸಂವಹನ ಸಚಿವಾಲಯಕ್ಕೆ 1.37 ಲಕ್ಷ ಕೋಟಿ ರೂಪಾಯಿ
9) ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ - 1.27 ಲಕ್ಷ ಕೋಟಿ ರೂಪಾಯಿ