logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opposition Meet: ಲೋಕಸಭೆ ಚುನಾವಣೆ 2024,ಬಿಹಾರದಲ್ಲಿ ವಿಪಕ್ಷ ಮೈತ್ರಿಗೆ ಬುನಾದಿ, ಶಿಮ್ಲಾದಲ್ಲಿ ಮತ್ತೊಂದು ಸಭೆಗೆ ಸಿದ್ಧತೆಯ ವಿವರ ಚಿತ್ರಣ

Opposition Meet: ಲೋಕಸಭೆ ಚುನಾವಣೆ 2024,ಬಿಹಾರದಲ್ಲಿ ವಿಪಕ್ಷ ಮೈತ್ರಿಗೆ ಬುನಾದಿ, ಶಿಮ್ಲಾದಲ್ಲಿ ಮತ್ತೊಂದು ಸಭೆಗೆ ಸಿದ್ಧತೆಯ ವಿವರ ಚಿತ್ರಣ

Umesh Kumar S HT Kannada

Jun 23, 2023 08:16 PM IST

ಬಿಹಾರ ಮುಖ್ಯಮಂತ್ರಿ, ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ವಿರೋಧ ಪಕ್ಷಗಳ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತುಕತೆ ನಡೆಸಿದ ಕ್ಷಣ.

  • Opposition Meet: ಬಿಹಾರದ ಪಾಟ್ನಾದಲ್ಲಿ 17 ಪಕ್ಷಗಳ ನಾಯಕರು ಒಟ್ಟು ಸೇರಿ ವಿಪಕ್ಷಗಳ ಏಕೀಕೃತ ವೇದಿಕೆಯನ್ನು ರೂಪಿಸಿದ್ದಾರೆ. ಈ ಮಹತ್ವದ ಸಭೆಯನ್ನು ಬಿಹಾರ ಮುಖ್ಯಮಂತ್ರಿ ಮತ್ತು ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಆಯೋಜಿಸಿದ್ದರು. ಈ ಸಭೆಯು  ಬಿಜೆಪಿಯಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಈ ವಿಪಕ್ಷ ಮೈತ್ರಿಯ ಮಹಾಸಭೆಯ ಸ್ಪಷ್ಟ ಚಿತ್ರಣ ಇಲ್ಲಿದೆ.

ಬಿಹಾರ ಮುಖ್ಯಮಂತ್ರಿ, ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ವಿರೋಧ ಪಕ್ಷಗಳ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತುಕತೆ ನಡೆಸಿದ ಕ್ಷಣ.
ಬಿಹಾರ ಮುಖ್ಯಮಂತ್ರಿ, ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ವಿರೋಧ ಪಕ್ಷಗಳ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತುಕತೆ ನಡೆಸಿದ ಕ್ಷಣ. (PTI)

ಲೋಕಸಭಾ ಚುನಾವಣೆ 2024 ರ ಮುಂಚಿತವಾಗಿ ವಿಪಕ್ಷಗಳ ಮೈತ್ರಿ ರಚನೆಯ ಪ್ರಯತ್ನ ಚುರುಕಾಗಿದ್ದು, ಬಿಹಾರದ ರಾಜಧಾನಿಯಲ್ಲಿ ಶುಕ್ರವಾರ (ಜೂ.23) 17 ಪಕ್ಷಗಳ ನಾಯಕರು ಒಟ್ಟು ಸೇರಿ ಸಭೆ ನಡೆಸಿ ಗಮನಸೆಳೆದರು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವ ಸ್ಪಷ್ಟ ಸಂದೇಶವನ್ನು ಈ ಸಭೆಯ ಮೂಲಕ ರವಾನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಬಿಹಾರದ ಪಾಟ್ನಾದಲ್ಲಿ 17 ಪಕ್ಷಗಳ ನಾಯಕರು ಒಟ್ಟು ಸೇರಿ ವಿಪಕ್ಷಗಳ ಏಕೀಕೃತ ವೇದಿಕೆಯನ್ನು ರೂಪಿಸಿದ್ದಾರೆ. ಈ ಮಹತ್ವದ ಸಭೆಯನ್ನು ಬಿಹಾರ ಮುಖ್ಯಮಂತ್ರಿ ಮತ್ತು ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಆಯೋಜಿಸಿದ್ದರು. ಈ ಸಭೆಯು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯಿಂದ ಭಾರೀ ಟೀಕೆಗೆ ಗುರಿಯಾಗಿತ್ತು.

ಲೋಕಸಭೆ ಚುನಾವಣೆ 2024ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ಆಯಾ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಒಟ್ಟಾಗಿ ಹೇಗೆ ಮುನ್ನಡೆಯಬೇಕು ಎಂಬುದರ ಕುರಿತು ಕಾರ್ಯಸೂಚಿಯನ್ನು ಸಿದ್ಧಪಡಿಸಲು ಪ್ರತಿಪಕ್ಷಗಳ ನಾಯಕರು ಮುಂದಿನ ತಿಂಗಳು ಶಿಮ್ಲಾದಲ್ಲಿ ಮತ್ತೆ ಭೇಟಿಯಾಗುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆಗೆ ಮುನ್ನ ಬಿಹಾರದಲ್ಲಿ ಸಿಕ್ಕಿತು ವಿಪಕ್ಷ ಮೈತ್ರಿಗೆ ಬುನಾದಿ; ಆದರೆ….

ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಒಟ್ಟಾಗಿ ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಆರಂಭದ ಹಂತ ಎಂದು ಈ ಸಭೆಯನ್ನು ಪರಿಗಣಿಸಲಾಗಿದೆ. ಸಭೆಯಲ್ಲಿ ಹಾಜರಿದ್ದವರು ಬಿಜೆಪಿ ವಿರುದ್ಧ ತಮ್ಮ ಏಕೀಕೃತ ನಿಲುವಿಗೆ ಒತ್ತು ನೀಡಿದರು.

"ನಾವು ಒಟ್ಟಾಗಿದ್ದೇವೆ. ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ ... ಇತಿಹಾಸ ಇಲ್ಲಿಂದ ಪ್ರಾರಂಭವಾಗಿದೆ. ಇತಿಹಾಸ ಬದಲಾಗಬೇಕು ಎಂದು ಬಿಜೆಪಿ ಬಯಸುತ್ತದೆ ಮತ್ತು ಬಿಜೆಪಿ ಬದಲಾಯಿಸಲು ಹೊರಟಿರುವ ಇತಿಹಾಸವನ್ನು ಬಿಹಾರದಿಂದಲೇ ಉಳಿಸಬೇಕು ಎಂದು ನಾವು ಬಯಸುತ್ತೇವೆ. ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಮಾತನಾಡುವುದು ನಮ್ಮ ಉದ್ದೇಶವಾಗಿದೆ..." ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದು ಉತ್ತಮ ಪ್ರತಿಸ್ಪಂದನೆ ಸಿಕ್ಕ ಸಭೆಯಾಗಿದ್ದು, ಒಟ್ಟಿಗೆ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಯಲಿದೆ" ಎಂದು ವಿಪಕ್ಷ ಮೈತ್ರಿಯ ಮಹಾಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ನಿತೀಶ್‌ ಕುಮಾರ್ ಹೇಳಿದರು.

ವಿಪಕ್ಷ ಮೈತ್ರಿಯಲ್ಲಿ ಎಎಪಿ ವರ್ಸಸ್‌ ಕಾಂಗ್ರೆಸ್‌

ವಿಪಕ್ಷ ಮೈತ್ರಿ ಸಂಬಂಧಿಸಿ ಎಲ್ಲವೂ ಧನಾತ್ಮಕವಾಗಿದೆ ಎನ್ನುವಷ್ಟರಲ್ಲಿ, ದೆಹಲಿ ಸುಗ್ರೀವಾಜ್ಞೆಗೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು.

ಕಾಂಗ್ರೆಸ್‌ನ ಹಿಂಜರಿಕೆ ಮತ್ತು ಟೀಮ್ ಪ್ಲೇಯರ್ ಆಗಿ ಕಾರ್ಯನಿರ್ವಹಿಸಲು ನಿರಾಕರಿಸುವುದು, ವಿಶೇಷವಾಗಿ ಈ ವಿಷಯದಂತಹ ಪ್ರಮುಖ ವಿಷಯದ ಬಗ್ಗೆ, ಕಾಂಗ್ರೆಸ್ ಅನ್ನು ಒಳಗೊಂಡಿರುವ ಯಾವುದೇ ಮೈತ್ರಿಕೂಟದ ಭಾಗವಾಗಲು ಆಮ್‌ ಆದ್ಮಿ ಪಾರ್ಟಿಗೆ ತುಂಬಾ ಕಷ್ಟವಾಗುತ್ತದೆ. ಕರಾಳ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸುವವರೆಗೆ ಮತ್ತು ರಾಜ್ಯಸಭೆಯಲ್ಲಿ ತನ್ನ ಎಲ್ಲ 31 ರಾಜ್ಯ ಸಭಾ ಸದಸ್ಯರು ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಾರೆ ಎಂದು ಘೋಷಿಸುವವರೆಗೆ, ಕಾಂಗ್ರೆಸ್ ಭಾಗವಹಿಸುವ ಸಮಾನ ಮನಸ್ಕ ಪಕ್ಷಗಳ ಭವಿಷ್ಯದ ಸಭೆಗಳಲ್ಲಿ ಭಾಗವಹಿಸುವುದು ಎಎಪಿಗೆ ಕಷ್ಟಕರವಾಗಿರುತ್ತದೆ ಎಂದು ಎಎಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಂದಾಣಿಕೆಯೊಂದಿಗೆ ಚುನಾವಣೆಗೆ ಹೋರಾಟ ಎಂದ ರಾಹುಲ್‌ ಗಾಂಧಿ

ವಿರೋಧ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡಿರುವ ರಾಹುಲ್ ಗಾಂಧಿ, ಮುಂಬರುವ ತಿಂಗಳುಗಳಲ್ಲಿ "ಹೊಂದಾಣಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡುವ" ಅಗತ್ಯವನ್ನು ಒತ್ತಿ ಹೇಳಿದರು.

"ನಾವು ಸಾಮಾನ್ಯ ಕಾರ್ಯಸೂಚಿಯನ್ನು ಸಿದ್ಧಪಡಿಸಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ಸಭೆಯಲ್ಲಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕು ಮತ್ತು ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ವಿಪಕ್ಷ ಸಭೆಯಲ್ಲಿ ಭಾಗವಹಿಸಿದ ನಾಯಕರು ಇವರು..

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ನಾಯಕರು ಸಂಸದ ಸಂಜಯ್ ರಾವುತ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು.

ವಿಪಕ್ಷ ಮೈತ್ರಿಯ ಮಹಾಸಭೆ ಬಗ್ಗೆ ಅಮಿತ್‌ ಷಾ ಹೇಳಿರುವುದು ಇಷ್ಟು..

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು (ಜೂ.23) ಫೋಟೋ ಸೆಷನ್‌ ಚಾಲ್ತಿಯಲ್ಲಿದೆ. ಅವರು (ವಿಪಕ್ಷ ನಾಯಕರು) ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಯನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ಬಯಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 300ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ವಿಜಯಿಯಾಗುತ್ತಾರೆ ಎಂಬುದನ್ನು ನಾನು ನಿಮಗೆ ಹೇಳಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಹೇಳಿದರು. ಅವರ ಭಾಷಣದ ವಿಡಿಯೋ ಇಲ್ಲಿದೆ.

ಎಲ್ಲರ ದೃಷ್ಟಿ ಈಗ ಜುಲೈ 10-12ರ ಶಿಮ್ಲಾ ವಿಪಕ್ಷ ಮೈತ್ರಿಯ ಸಭೆಯ ಕಡೆಗೆ

ಬಿಹಾರದ ಪಾಟ್ನಾದಲ್ಲಿ ಇಂದು (ಜೂ.23) ನಡೆದ ವಿಪಕ್ಷ ಮಹಾಮೈತ್ರಿಯ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕರು ಜುಲೈ 10-12ರ ತನಕ ಶಿಮ್ಲಾದಲ್ಲಿ ಮುಂದಿನ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಅಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಸೂಚಿಗಳು ನಿರ್ಧಾರವಾಗು ಸಾಧ್ಯತೆ ಇದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ವಿಪಕ್ಷ ಮಹಾಮೈತ್ರಿ ರೂಪುಗೊಳ್ಳುವ ದೃಷ್ಟಿಯಿಂದ ಇಂದಿನ ಸಭೆ ಮತ್ತು ಮುಂದಿನ ಸಭೆಗಳು ಮಹತ್ವದ್ದಾಗಿರಲಿವೆ ಎಂದು ವರದಿಗಳು ಹೇಳುತ್ತವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ