logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rbi News: ಆರ್‌ಬಿಐ ರೆಪೋ ದರ ಆರನೇ ಬಾರಿಯೂ ಯಥಾಸ್ಥಿತಿ, ಗೃಹಸಾಲಗಾರರಿಗೆ ನಿರಾಸೆ

RBI News: ಆರ್‌ಬಿಐ ರೆಪೋ ದರ ಆರನೇ ಬಾರಿಯೂ ಯಥಾಸ್ಥಿತಿ, ಗೃಹಸಾಲಗಾರರಿಗೆ ನಿರಾಸೆ

Umesha Bhatta P H HT Kannada

Feb 08, 2024 09:50 PM IST

ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌.

    • ಮುಂಬೈನಲ್ಲಿ ನಡೆದ ಆರ್‌ಬಿಐಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರ ಬದಲಾವಣೆ ವಿಚಾರದಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ.
ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌.
ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌.

ಮುಂಬೈ: ಭಾರತದಲ್ಲಿ ರೆಪೋ ದರ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಗುರುವಾರ ಭಾರತೀಯ ರಿಸರ್ವ್‌ ಬ್ಯಾಂಕ್‌ ಸದ್ಯಕ್ಕೆ ರೆಪೋ ದರ ಏರಿಕೆಯಿಲ್ಲ ಎಂದು ಹೇಳುವ ಮೂಲಕ ಇದನ್ನು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ರೆಪೋ ದರ ಕಡಿಮೆಯಾಗಿ ಗೃಹ ಸಾಲದ ಬಡ್ಡಿ ದರ ತಗ್ಗಿ, ಮಾಸಿಕ ಕಂತಿನ ದರದಲ್ಲಿ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಭಾರತದ ಲಕ್ಷಾಂತರ ಸಾಲಗಾರರಿಗೆ ನಿರಾಸೆ ಮೂಡಿಸಿತು.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ವರ್ಷದ ಹಿಂದೆ ರೆಪೋ ದರವನ್ನು ಏರಿಕೆ ಮಾಡಲಾಗಿತ್ತು. ಅದಾದ ನಂತರ ಒಟ್ಟು ಆರು ಬಾರಿ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ನಡೆದರೂ ದರ ಇಳಿಕೆಗೆ ಒಪ್ಪಿಗೆ ನೀಡಿಲ್ಲ. ಈ ಬಾರಿಯೂ ಅದೇ ನಿರ್ಣಯ ಹೊರ ಬಿದ್ದಿದೆ.

ಆರ್‌ ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ರೆಪೋ ದರದ ಕುರಿತು ಚರ್ಚೆ ನಡೆದರೂ ಯಾವುದೇ ಬದಲಾವಣೆ ಮಾಡಲಿಲ್ಲ. ಸದ್ಯ ಇರುವ ರೆಪೋ ದರ ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಸಮಿತಿಯ ಸದಸ್ಯರು ಅನುಮತಿ ನೀಡಿದ್ದಾರೆ ಎಂದು ಆರ್‌ಬಿಐ ಗವರ್ನರ್‌ ಮಾಹಿತಿ ನೀಡಿದ್ದಾರೆ.

ಸಭೆಯ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಶಕ್ತಿಕಾಂತ್‌ ದಾಸ್.‌ ಭಾರತದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಆರ್‌ಬಿಐ ಅಂದಾಜು ಮಾಡಿರುವ ಮಿತಿಯೊಳಗೆ ಹಣದುಬ್ಬರ ಬರುವವರೆಗೂ ಬಡ್ಡಿ ದರದಲ್ಲಿ ಬದಲಾವಣೆ ಆಗುವುದಿಲ್ಲ. ಸಮಿತಿಯಲ್ಲೂ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಎದುರಾಗಿರುವ ಅನಿಶ್ಚಿತ ಪರಿಸ್ಥಿತಿ ಹಾಗೂ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿಯೇ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಗಮನ ನೀಡುತ್ತೇವೆ ಎಂದು ತಿಳಿಸಿದರು.

2023ರ ಅಕ್ಟೋಬರ್‌ನಲ್ಲಿ ಶೇ 4.9ರಷ್ಟು ಕನಿಷ್ಠ ಮಟ್ಟದಲ್ಲಿ ದಾಖಲಾಗಿದ್ದ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 5.7ರಷ್ಟು ಏರಿಕೆಯಾಗಿತ್ತು. ದೇಶದಲ್ಲಿ 2023–24ನೇ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5.4ರಷ್ಟು ಇರುವ ಅಂದಾಜಿದೆ. 2024–25ನೇ ಹಣಕಾಸು ವರ್ಷದಲ್ಲಿ ಶೇ 4.5ಕ್ಕೆ ಇಳಿಕೆ ಕಾಣಬಹುದು ಎನ್ನುವುದನ್ನು ಆರ್‌ಬಿಐನ ಹಣಕಾಸು ನೀತಿ ಸಮಿತಿ ಅಂದಾಜು ಮಾಡಿದೆ. ಆಹಾರ ಪದಾರ್ಥಗಳು ಮತ್ತು ತರಕಾರಿ ಬೆಲೆ ಹೆಚ್ಚಳವು ಇದಕ್ಕೆ ಕಾರಣವಾಗಿತ್ತು. ಸದ್ಯ ದೇಶದಲ್ಲಿ ರಾಬಿ ಅವಧಿಯ ಬಿತ್ತನೆಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿರುವುದು ಹಣದುಬ್ಬರದ ನಿಯಂತ್ರಣಕ್ಕೆ ಸಹಕಾರಿಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಂದಿನ ಸಭೆಯು ಏಪ್ರಿಲ್‌ 3ರಿಂದ 5ರ ವರೆಗೆ ನಡೆಯಲಿದ್ದು, ಆಗ ರೆಪೋ ದರ ಪರಿಷ್ಕರಿಸುವ ಪ್ರಸ್ತಾವವೂ ಮತ್ತೆ ಬರಬಹುದು. ಆಗ ಸ್ಥಿತಿ ನೋಡಿಕೊಂಡು ತೀರ್ಮಾನವಾಗಲಿದೆ ಎನ್ನುವುದು ಅವರ ವಿವರಣೆ.

ದೇಶೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆ ಆತಂಕ ಪಡುವ ಹಾಗೇನೂ ಇಲ್ಲ. ಹೂಡಿಕೆ ವಲಯದ ಚಟುವಟಿಕೆಗಳು ಚೇತರಿಕೆ ಕಂಡಿವೆ. ತಯಾರಿಕಾ ಮತ್ತು ಉತ್ಪಾದನಾ ವಲಯದಲ್ಲಿನ ಚಟುವಟಿಕೆಗಳು ಪೂರಕವಾಗಿಯೇ ಕಂಡು ಬರುತ್ತಿವೆ. ಆಂತರಿಕ ಉತ್ಪನ್ನದಲ್ಲಿನ ಒಟ್ಟು ಮೌಲ್ಯ ವರ್ಧನೆಯು ಶೇ 6.9ರಷ್ಟು ಏರಿಕೆ ಕಂಡಿದೆ. ದೇಶದ ಜಿಡಿಪಿ ಶೇ 7 ಬೆಳವಣಿಗೆ ಅಂದಾಜು 2024–25ನೇ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಪ್ರಗತಿ ಕಾಣುವ ಅಂದಾಜು ಕೂಡ ಇದೆ ಎಂದು ವಿವರಿಸಿದರು.

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿರತೆಯೂ ಹಣದುಬ್ಬರದ ಏರಿಕೆಗೆ ಒಂದು ಅಂಶ. ಭಾರತದಲ್ಲೂಆಹಾರ ವಸ್ತುಗಳ ಬೆಲೆ ಏರಿಕೆಯೇ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿರುವುದನ್ನು ಗಮನಿಸಿದ್ದೇವೆ. ಈ ಎಲ್ಲಾ ಅಂಶಗಳನ್ನು ಆರ್‌ಬಿಐ ಗಂಭೀರವಾಗಿಯೇ ವಿಚಕ್ಷಣೆ ಮಾಡುತ್ತಿದೆ ಎಂದು ತಿಳಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ