ಮಧ್ಯಪ್ರದೇಶದಲ್ಲಿ ಆಮ್ ಆದ್ಮಿ ಪಾರ್ಟಿ ಬಂದ್ರೆ 300 ಯೂನಿಟ್ ಕರೆಂಟ್ ಫ್ರೀ, ನಿರುದ್ಯೋಗಿಗಳಿಗೆ 3000 ರೂ; ಕೇಜ್ರಿವಾಲ್
Aug 21, 2023 02:35 PM IST
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
- Madhya Pradesh Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಗ್ಯಾರೆಂಟಿಗಳ ಮುಂದುವರಿಕೆ ಮಧ್ಯಪ್ರದೇಶದಲ್ಲಿ ಎದ್ದು ಕಾಣುತ್ತಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಆಪ್) 300 ಯೂನಿಟ್ ಉಚಿತ ವಿದ್ಯುತ್ ಕೊಡುವ ಭರವಸೆ ನೀಡಿದೆ.
ಸತ್ನಾ (ಮಧ್ಯಪ್ರದೇಶ): 2022ರಲ್ಲಿ ಪಂಜಾಬ್ ವಿಧಾನಸಭೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಮಧ್ಯಪ್ರದೇಶದಲ್ಲಿಯೂ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಗ್ಯಾರೆಂಟಿ ತಂತ್ರವನ್ನೇ ಅನುಸರಿಸಲು ಮುಂದಾಗಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಆಮ್ ಆದ್ಮಿ ಪಕ್ಷ ಪ್ರಚಾರ ಆರಂಭಿಸಿದೆ. ಸತ್ನಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮಧ್ಯಪ್ರದೇಶದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಜನರಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್, ಖಾಯಂ ಉದ್ಯೋಗಗಳು ಮತ್ತು ನಿರುದ್ಯೋಗಿ ಯುವಕರಿಗೆ 3,000 ರೂಪಾಯಿ ಮಾಸಿಕ ಭತ್ಯೆ ಸೇರಿದಂತೆ ವಿವಿಧ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.
“ನಾವು ದೇಶ ಕಟ್ಟಲು ಬಂದಿದ್ದೇವೆಯೇ ಹೊರತು ಹಣ ಗಳಿಸಲು ಅಲ್ಲ. ಎಎಪಿ ಸಜ್ಜನರು ಮತ್ತು ದೇಶಭಕ್ತರ ಪಕ್ಷವಾಗಿದೆ. ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ನೀವು ಬಯಸಿದರೆ, ಅದಕ್ಕಾಗಿ ಇಡೀ ದೇಶದಲ್ಲಿ ಇರುವುದು ಒಂದೇ ಪಕ್ಷ, ಅದು ಆಮ್ ಆದ್ಮಿ ಪಕ್ಷ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ನೀವು ಮಧ್ಯಪ್ರದೇಶದಲ್ಲಿ ಬಿಜೆಪಿಮತ್ತು ಕಾಂಗ್ರೆಸ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೀರಿ. ದೆಹಲಿ ಮತ್ತು ಪಂಜಾಬ್‌ನಲ್ಲಿರುವ ನಮ್ಮ ಸರ್ಕಾರಗಳನ್ನು ನೋಡಿ, ನಾವು ಎಲ್ಲಾ ಭರವಸೆಗಳನ್ನು ಪೂರೈಸುತ್ತೇವೆ. ಇದು ಕೇಜ್ರಿವಾಲ್ ಅವರ ಭರವಸೆ. ಚುನಾವಣೆಯಲ್ಲಿ ಎಎಪಿ ಗೆದ್ದರೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳು, ಚಿಕಿತ್ಸೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. 24 ಗಂಟೆಗಳ ನಿರಂತರ ಪೂರೈಕೆಯೊಂದಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ನವೆಂಬರ್ 30 ರವರೆಗಿನ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು” ಎಂದು ಘೋಷಿಸಿದ್ದಾರೆ.
“ನಿರುದ್ಯೋಗಿ ಯುವಕರಿಗೆ 3,000 ರೂಪಾಯಿ ಮಾಸಿಕ ಭತ್ಯೆ ನೀಡಲಾಗುವುದು. ತಾತ್ಕಾಲಿಕ ಅಥವಾ ಗುತ್ತಿಗೆ ಕೆಲಸಗಳಲ್ಲಿ ತೊಡಗಿರುವ ನೌಕರರ ಸೇವೆಗಳನ್ನು ಖಾಯಂಗೊಳಿಸಲಾಗುವುದು” ಎಂದು ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಇನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಚೌಹಾಣ್ ಅವರನ್ನು 'ಮಾಮಾ' ಎಂದು ಕರೆದಿದ್ದಾರೆ. ಮಾಮಾನನ್ನು ನಂಬಬೇಡಿ, ಈಗ ನಿಮ್ಮ 'ಚಾಚಾ' ಬಂದಿದ್ದಾರೆ, ಚಾಚಾನನ್ನು ನಂಬಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕೂಡ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಆಗಸ್ಟ್ 17 ರಂದು ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೂಡ ಕರ್ನಾಟಕದಲ್ಲಿ ಜಯಭೆರಿ ಬಾರಿಸಲು ಕಾರಣವಾಗಿದ್ದ ಗ್ಯಾರಂಟಿ ತಂತ್ರವನ್ನ ಮಧ್ಯಪ್ರದೇಶದಲ್ಲಿಯೂ ಅಳವಡಿಸುವ ಸಾಧ್ಯತೆ ಹೆಚ್ಚಿದೆ.
2018 ರಲ್ಲಿ, ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಕಾಂಗ್ರೆಸ್ 114 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ನೇತೃದ್ವದಲ್ಲಿ ಹಲವು ಕಾಂಗ್ರೆಸ್ ಶಾಸಕರು ಬಂಡಾಯದ ನಂತರ ಕಾಂಗ್ರೆಸ್ ಸರ್ಕಾರ ಪತನಗೊಂಡು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿತ್ತು.