logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hathras Case: ಹತ್ರಾಸ್‌ ಅತ್ಯಾಚಾರ ಪ್ರಕರಣ, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಲು ವಿರೋಧಿಸಿದ ರಾಜ್ಯದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

Hathras Case: ಹತ್ರಾಸ್‌ ಅತ್ಯಾಚಾರ ಪ್ರಕರಣ, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಲು ವಿರೋಧಿಸಿದ ರಾಜ್ಯದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

HT Kannada Desk HT Kannada

Mar 27, 2023 01:44 PM IST

ಸುಪ್ರೀಂಕೋರ್ಟ್‌ (PTI)

  • Hathras Case: ಹೈಕೋರ್ಟ್‌ ನೀಡಿರುವ ಇಂತಹ ಆದೇಶವನ್ನು ರಾಜ್ಯವು ಪ್ರಶ್ನಿಸುವಂತಹ ಕೆಲಸ ಮಾಡಬಾರದು ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ಸುಪ್ರೀಂಕೋರ್ಟ್‌ (PTI)
ಸುಪ್ರೀಂಕೋರ್ಟ್‌ (PTI)

ನವದೆಹಲಿ: ಹತ್ರಾಸ್‌ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಈ ವಿಷಯದ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಟ್ರೆಂಡಿಂಗ್​ ಸುದ್ದಿ

Haryana politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

2020ರ ಸೆಪ್ಟೆಂಬರ್‌ನಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ 19 ವರ್ಷದ ದಲಿತ ಮಹಿಳೆಯ ಕುಟುಂಬಕ್ಕೆ ಉದ್ಯೋಗ ನೀಡಲು ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ ನೀಡಿರುವ ಇಂತಹ ಆದೇಶವನ್ನು ರಾಜ್ಯವು ಪ್ರಶ್ನಿಸುವಂತಹ ಕೆಲಸ ಮಾಡಬಾರದು ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠ ಸಲಹೆ ನೀಡಿದೆ.

"ಇವು ಕುಟುಂಬಕ್ಕೆ ಒದಗಿಸಿದ ಸೌಲಭ್ಯವಾಗಿದೆ. ಇದರಲ್ಲಿ ನಾವು ಮಧ್ಯಪ್ರವೇಶಿಸಬಾರದು" ಎಂದು ಪೀಠ ಹೇಳಿದೆ. ಜತೆಗೆ, ಹತ್ರಾಸ್‌ ಹೊರಗೆ ಕುಟುಂಬಕ್ಕೆ ಪುನರ್‌ವಸತಿ ಕಲ್ಪಿಸುವ ಹೈಕೋರ್ಟ್‌ನ ನಿರ್ದೇಶನವೂ ಸುಪ್ರೀಂಕೋರ್ಟ್‌ನ ಈ ನಿರ್ಧಾರದಿಂದ ಮಾನ್ಯವಾದಂತಾಗಿದೆ.

ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಸಂಕ್ಷಿಪ್ತ ಆದೇಶದ ಮೂಲಕ ರಾಜ್ಯದ ಮನವಿಯನ್ನು ವಜಾಗೊಳಿಸಿದೆ.

"ಪ್ರಕರಣದ ವಿಶೇಷ ಸಂಗತಿಗಳು ಮತ್ತು ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯವು ಒಲವು ಹೊಂದಿಲ್ಲ" ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

"ಈ ವಿಷಯವನ್ನು ಪರಿಗಣಿಸುವಾಗ ಹತ್ಯೆಗೀಡಾದ ಮಹಿಳೆಯ ಹಿರಿಯ ವಿವಾಹಿತ ಸಹೋದರನು ಅವಲಂಬಿತನಾಗಿರುತ್ತಾನೆಯೇ ಎಂಬ ಕಾನೂನಿನ ಅಂಶವನ್ನು ನ್ಯಾಯಾಲಯವು ಪರಿಗಣಿಸಬೇಕು" ಎಂದು ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಹೇಳಿದರು.

"ರಾಜ್ಯದ ಮನವಿಯನ್ನು ಪುರಸ್ಕರಿಸುವುದಿಲ್ಲ" ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠ ದೃಢವಾಗಿ ತಿಳಿಸಿದೆ.

"ಮಹಿಳೆಯ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಸೆಪ್ಟೆಂಬರ್ 30, 2020 ರಂದು ಲಿಖಿತವಾಗಿ ಕುಟುಂಬಕ್ಕೆ ನೀಡಿದ ಭರವಸೆಯನ್ನು ರಾಜ್ಯದ ಅಧಿಕಾರಿಗಳು ಪಾಲಿಸಬೇಕು" ಎಂದು ಜುಲೈ 2022 ರಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ಈ ಕುಟುಂಬವನ್ನು ಉತ್ತರ ಪ್ರದೇಶದೊಳಗೆ, ಹತ್ರಾಸ್‌ನ ಹೊರಗೆ ಸ್ಥಳಾಂತರಿಸಿ ಪುನರ್‌ವಸತಿ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಕುಟುಂಬದ ಒಪ್ಪಿಗೆಯಿಲ್ಲದೆ ಮಧ್ಯರಾತ್ರಿಯ ನಂತರ ತರಾತುರಿಯಲ್ಲಿ ಮಹಿಳೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಿರುವ ಈ ಪ್ರಕರಣದ ವಿರುದ್ಧ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

ದಲಿತ ಮಹಿಳೆಯು ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋದ ಸಂದರ್ಭದಲ್ಲಿ ನಾಲ್ವರು ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹತ್ರಾಸ್‌ನ ವಿಶೇಷ ನ್ಯಾಯಾಲಯವು ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾನನ್ನು ನರಹತ್ಯೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೋಷಿ ಎಂದು ನ್ಯಾಯಾಲಯವು ಘೋಷಿಸಿತ್ತು. ಆದರೆ, ಅತ್ಯಾಚಾರ ಆರೋಪಗಳಿಂದ ಖುಲಾಸೆಗೊಳಿಸಲಾಗಿತ್ತು.

ಸಿಸೋಡಿಯಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಮೂವರು ಸಹ ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು