GT vs MI Qualifier 2: ಗುಜರಾತ್-ಮುಂಬೈ ಸೆಮಿಫೈನಲ್; ಗೆದ್ದವರಿಗೆ ಫೈನಲ್ ಟಿಕೆಟ್, ಸೋತವರು ಔಟ್; ದಾಖಲೆ ಬರೆಯಲು ಉಭಯ ತಂಡಗಳು ಸಜ್ಜು
May 26, 2023 11:19 AM IST
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ
- ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians), 6ನೇ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ (Hardik Pandya) ಸಾರಥ್ಯದ ಗುಜರಾತ್ ಟೈಟಾನ್ಸ್ (Gujarat Titans) ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.
ಎಲಿನಿಮೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians), 16ನೇ ಆವೃತ್ತಿಯ ಐಪಿಎಲ್ನ ಕ್ವಾಲಿಫೈಯರ್ -2ರಲ್ಲಿ (IPL Qualifier 2) ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಎದುರಿಸಲು ಸಜ್ಜಾಗಿದೆ. ಇದರೊಂದಿಗೆ ಉಭಯ ತಂಡಗಳು ಮತ್ತೊಂದು ಫೈನಲ್ ಕನಸಿನಲ್ಲಿವೆ.
ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, 6ನೇ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಈ ಉಭಯ ತಂಡಗಳ ಮೆಗಾ ಕಾದಾಟಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದ ಎನಿಸಿರುವ ನರೇಂದ್ರ ಮೋದಿ ಸ್ಟೇಡಿಯಂ ವೇದಿಕೆ ಕಲ್ಪಿಸಲಿದೆ.
ಆತ್ಮವಿಶ್ವಾಸದಲ್ಲಿ ರೋಹಿತ್ ಬಳಗ
ಟೂರ್ನಿಯ ಆರಂಭಿಕ 7ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋಲು ಕಂಡಿತ್ತು. ದ್ವಿತೀಯಾರ್ಧದಲ್ಲಿ ಪುಟಿದೆದ್ದ ಮುಂಬೈ, 7ರಲ್ಲಿ ಗೆದ್ದು 2ರಲ್ಲಿ ಸೋಲು ಕಂಡಿತ್ತು. ಮೊದಲಾರ್ಧದಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಪರದಾಡಿದ್ದ ಮುಂಬೈ, 2ನೇ ಹಂತದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿತ್ತು. 4 ಬಾರಿ 200+ ರನ್ಗಳನ್ನೇ ಚೇಸ್ ಮಾಡಿದೆ.
ಸೂರ್ಯಕುಮಾರ್ ಲಯಕ್ಕೆ ಮರಳುವ ಜೊತೆಗೆ ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್, ನೇಹಾಲ್ ವಧೇರಾ ಅದ್ಭುತ ಸಾಥ್ ನೀಡಿದರು. ಸನ್ರೈಸರ್ಸ್ ವಿರುದ್ಧ ನಿರ್ಣಾಯಕ ಅಂತಿಮ ಲೀಗ್ ಪಂದ್ಯದಲ್ಲಿ 4 ವಿಕೆಟ್ ಪಡೆದು ಅಬ್ಬರಿಸಿದ್ದ ವೇಗಿ ಆಕಾಶ್ ಮಧ್ವಾಲ್, ಎಲಿಮಿನೇಟರ್ ಪಂದ್ಯದಲ್ಲೂ ದಾಖಲೆಯ 5 ವಿಕೆಟ್ ಉರುಳಿಸಿದರು. ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅದ್ಭುತ ಕೊಡುಗೆ ಅಪಾರ.
ಗುಜರಾತ್ ಸ್ಥಿರ ಪ್ರದರ್ಶನ
ಗುಜರಾತ್ ಟೈಟಾನ್ಸ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್-ಬೌಲಿಂಗ್ನಲ್ಲಿ ಸ್ಥಿರ ನಿರ್ವಹಣೆ ತೋರುತ್ತಾ ಬಂದಿದೆ. ಶುಭ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಾಹ, ಡೇವಿಡ್ ಮಿಲ್ಲರ್, ಅದ್ಭುತ ಆಟವಾಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಮಾರಕ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ.
ಗುಜರಾತ್ ತಂಡಕ್ಕೆ 2ನೇ ಅವಕಾಶ
2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದರೆ, ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಲಿದೆ. ಆ ಮೂಲಕ ಈ ಸಾಧನೆ ಮಾಡಿದ 3ನೇ ತಂಡ ಎನಿಸಲಿದೆ. ಸಿಎಸ್ಕೆ, ಮುಂಬೈ ತಂಡಗಳು ಹೊರತುಪಡಿಸಿದರೆ ಬೇರೆ ಯಾವ ತಂಡಗಳು ಈ ಸಾಧನೆ ಮಾಡಿಲ್ಲ. ಗುಜರಾತ್ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್-2 ಆಡುತ್ತಿದೆ. ಕಳೆದ ಬಾರಿ ಮೊದಲ ಕ್ವಾಲಿಫೈಯರ್ನಲ್ಲೇ ಗೆದ್ದು ಫೈನಲ್ ಪ್ರವೇಶಿಸಿತ್ತು.
ಮುಂಬೈ ತಂಡಕ್ಕೆ 7ನೇ ಅವಕಾಶ
ಗುಜರಾತ್ ವಿರುದ್ಧ ಗೆಲುವು ಸಾಧಿಸಿದರೆ, 7ನೇ ಬಾರಿಗೆ ಫೈನಲ್ ಪ್ರವೇಶ ಮಾಡಲಿದೆ. ಇದಕ್ಕೂ ಮುನ್ನ 2010ರಲ್ಲಿ ರನ್ನರ್ ಅಪ್ ಆಗಿತ್ತು. 2012, 2015, 2017, 2019, 2020ರಲ್ಲಿ ಚಾಂಪಿಯನ್ ಆಗಿತ್ತು. ಮುಂಬೈ ಈ ಹಿಂದೆ 3 ಬಾರಿ ಕ್ವಾಲಿಫೈಯರ್ ಪಂದ್ಯಗಳನ್ನಾಡಿದ್ದು, ಎರಡಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು.
ಉಭಯ ತಂಡಗಳ ಮುಖಾಮುಖಿ
ಮುಂಬೈ ಮತ್ತು ಗುಜರಾತ್ ಉಭಯ ತಂಡಗಳು ಒಟ್ಟು 3 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 2 ಸಲ, ಹಾರ್ದಿಕ್ ಪಡೆ 1 ಗೆದ್ದಿದೆ. ಪ್ಲೇ ಆಫ್ ಹಂತದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಎದುರಾಗುತ್ತಿವೆ. ಈ ಬಾರಿಯ ಲೀಗ್ ಹಂತದಲ್ಲಿ 2 ಬಾರಿ ಎದುರಾಗಿದ್ದು, ತಲಾ 1ರಲ್ಲಿ ಗೆದ್ದಿವೆ.
ಪಿಚ್ ರಿಪೋರ್ಟ್
ಅಹಮದಾಬಾದ್ನ ಪಿಚ್ ಬ್ಯಾಟಿಂಗ್ಗೆ ನೆರವಾಗಲಿದೆ. ಉತ್ತಮ ಮೊತ್ತ ಕಲೆ ಹಾಕಲು ಈ ಪಿಚ್ ಸಹಾಯವಾಗಲಿದೆ. ವೇಗಿಗಳೂ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಭುವನೇಶ್ವರ್ ಕುಮಾರ್ ಪಂದ್ಯವೊಂದರಲ್ಲಿ 5 ವಿಕೆಟ್ ಉರುಳಿಸಿದ್ದರು. ಟಾಸ್ ಗೆದ್ದ ತಂಡವು ಚೇಸಿಂಗ್ಗೆ ಹೆಚ್ಚು ಆದ್ಯತೆ ನೀಡಲಿದೆ. ಪಂದ್ಯ ಮುಂದುವರೆದಂತೆ ಇಬ್ಬನಿ ಕಾಡಲಿದೆ.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಸುನ್ ಶನಕ, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್.