MS Dhoni: ದಾಖಲೆಯ 250ನೇ ಪಂದ್ಯಕ್ಕೆ ಎಂಎಸ್ ಧೋನಿ ಸಜ್ಜು; ಐಪಿಎಲ್ಗೆ ಇವತ್ತೇ ಗುಡ್ಬೈ ಹೇಳಲು ನಿರ್ಧರಿಸಿದ್ರಾ ಸಿಎಸ್ಕೆ ಕ್ಯಾಪ್ಟನ್?
May 28, 2023 12:22 PM IST
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ
- MS Dhoni: 16ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವೇ ಎಂಎಸ್ ಧೋನಿ ಪಾಲಿಗೆ ಕೊನೆ ಐಪಿಎಲ್ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 31ರಂದು ಎಲ್ಲಿ, ಯಾವ ಮೈದಾನದಲ್ಲಿ ಯಾವ ತಂಡಗಳ ನಡುವೆ ಕಾದಾಟದೊಂದಿಗೆ ಪ್ರಸಕ್ತ ಸಾಲಿನ ಐಪಿಎಲ್ (IPL 2023) ಆರಂಭವಾಗಿತ್ತೋ, ಅದೇ ಮೈದಾನದಲ್ಲಿ ಅದೇ ಎರಡು ತಂಡಗಳ ಮುಖಾಮುಖಿಗೆ ಬಂದು ನಿಂತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು (Chennai Super Kings vs Gujarat Titans, Final) ಪ್ರಶಸ್ತಿಗಾಗಿ ಇಂದು ಹೋರಾಟ ನಡೆಸಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium, Ahmedabad) ಈ ಅಂತಿಮ ಹಣಾಹಣಿ ನಡೆಯಲಿದೆ. ಈ ಪಂದ್ಯ ಅನೇಕ ವಿಶೇಷಗಳಿಗೆ ಸಾಕ್ಷಿಯಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು 10 ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. 4 ಬಾರಿ ಟ್ರೋಫಿಯೂ ಗೆದ್ದಿದೆ. ಈಗ 5ನೇ ಕಪ್ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಕಳೆದ ವರ್ಷ ಟ್ರೋಫಿ ಗೆದ್ದ ಗುಜರಾತ್ ಎರಡನೇ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ಹಾಕಿದೆ. ಆದರೆ ಈ ಪಂದ್ಯವೇ ಎಂಎಸ್ ಧೋನಿ (MS Dhoni) ಪಾಲಿಗೆ ಕೊನೆ ಐಪಿಎಲ್ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಟೂರ್ನಿಯ ಆರಂಭದಿಂದಲೂ ಹರಿದಾಡುತ್ತಿದೆ.
ಹೀಗಾಗಿ, ಚೆನ್ನೈ ಮಾತ್ರವಲ್ಲದೆ, ಸಿಎಸ್ಕೆ ತಂಡ ಟೂರ್ನಿಯಲ್ಲಿ ಆಡಿದ ಬಹುತೇಕ ಎಲ್ಲಾ ಎದುರಾಳಿ ಮೈದಾನಗಳಲ್ಲಿ ಧೋನಿ ಆಟವನ್ನು ನೋಡಲು ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಫ್ಯಾನ್ಸ್ ತುಂಬಿ ತುಳುಕಿದ್ದರು. ಆದರೆ ಧೋನಿ ಮಾತ್ರ ನಿವೃತ್ತಿಯ ಗುಟ್ಟು ಬಿಟ್ಟುಕೊಡದೆ, ಈ ಬಗ್ಗೆ ನಿರ್ಧಾರಕ್ಕೆ ಇನ್ನೂ 8 ರಿಂದ 9 ತಿಂಗಳು ಸಮಯ ಇದೆ ಎಂದು ಹೇಳಿದ್ದಾರೆ. ಒಂದು ವೇಳೆ ಧೋನಿ ಮುಂದಿನ ವರ್ಷ ಕಣಕ್ಕಿಳಿಯದಿದ್ದರೆ ಇದೇ ಅವರ ಪಾಲಿಗೆ ಕೊನೆಯ ಐಪಿಎಲ್ ಪಂದ್ಯವಾಗಲಿದೆ.
41 ವರ್ಷದ ಧೋನಿ ಹಾಲಿ ಐಪಿಎಲ್ನಲ್ಲಿ ಗಾಯದ ನಡುವೆಯೂ ಆಡುತ್ತಿದ್ದಾರೆ. ಮೊಣಕಾಲು ಗಾಯವಾದ ಕಾರಣ, ಕೊನೆಯ ಎರಡು ಓವರ್ಗಳಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. ಮತ್ತೊಂದೆಡೆ ಸಿಎಸ್ಕೆಗೆ ಭವಿಷ್ಯದ ನಾಯಕನನ್ನು ಗುರುತಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಸದ್ಯಕ್ಕೆ ಗೊಂದಲವೂ ಇದೆ. ಇದರ ನಡುವೆ ಇದೇ ಕೊನೆಯ ಪಂದ್ಯ ಆದರೆ ಪ್ರಶಸ್ತಿ ಗೆಲುವಿನ ವಿದಾಯ ಸಿಗುತ್ತಾ ಎಂಬ ಕೌತುಕವೂ ಸೃಷ್ಟಿಯಾಗಿದೆ.
2022ರಲ್ಲಿ ಚೆನ್ನೈನ ಚೆಪಾಕ್ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಲಿದ್ದೇನೆ ಎಂದು ಹೇಳಿದ್ದರು. ಆದರೆ ಯಾವಾಗ ಎಂದು ಅಂತಿಮಪಡಿಸಿರಲಿಲ್ಲ. ಈಗ ನಿವೃತ್ತಿ ಕುರಿತು ಯೋಚಿಸಲು ಬೇಕಾದಷ್ಟು ಸಮಯ ಇದೆ. ನಾನು ಯಾವಾಗಲೂ ಸಿಎಸ್ಕೆ ಪರ ಇರುತ್ತೇನೆ ಎಂದು ಹೇಳಿದ್ದಾರೆ. ಇದು ನಿವೃತ್ತಿ ತೆಗೆದುಕೊಳ್ಳುತ್ತಾರಾ ಇಲ್ಲವೇ ಎಂಬುದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿರೋದಂತೂ ಸುಳ್ಳಲ್ಲ.
ಐಪಿಎಲ್ನಲ್ಲಿ ಧೋನಿ 250ನೇ ಪಂದ್ಯ
ಮಹೇಂದ್ರ ಸಿಂಗ್ ಧೋನಿ ಇಂದು ಐಪಿಎಲ್ನಲ್ಲಿ ಮಹತ್ವದ ಪಂದ್ಯವನ್ನು ಆಡಲಿದ್ದಾರೆ. ಫೈನಲ್ನಲ್ಲಿ ಐತಿಹಾಸಿಕ ಪಂದ್ಯಕ್ಕೂ ಕಾಲಿಡಲಿದ್ದಾರೆ. ಹೌದು ಇಂದು ಧೋನಿ ಶ್ರೀಮಂತ ಲೀಗ್ನಲ್ಲಿ 250ನೇ ಪಂದ್ಯವನ್ನು ಆಡಲಿದ್ದಾರೆ. ಆ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಲಿದ್ದಾರೆ.