Harbhajan Singh: ಶ್ರೀಶಾಂತ್‌ಗೆ ಹೊಡೆದು ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ; ವಿರಾಟ್, ಗಂಭೀರ್‌ಗೆ ಹರ್ಭಜನ್ ಅಮೂಲ್ಯ ಸಲಹೆ
May 02, 2023 03:40 PM IST
ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದಕ್ಕೆ ತಾನು ಈಗಲೂ ವಿಷಾದಿಸುವುದಾಗಿ ಹರ್ಭಜನ್ ಹೇಳಿದ್ದಾರೆ
- "2008ರಲ್ಲಿ ನನ್ನ ಮತ್ತು ಶ್ರೀಶಾಂತ್ ನಡುವೆ ಇಂತಹದೇ ಘಟನೆ ಸಂಭವಿಸಿತು. ಅದಾಗಿ ಇಂದಿಗೆ 15 ವರ್ಷಗಳೇ ಕಳೆದರೂ, ಈಗ ಆ ಬಗ್ಗೆ ಯೋಚಿಸುವಾಗ ನನ್ನ ಮೇಲೆಯೇ ನನಗೆ ನಾಚಿಕೆಯಾಗುತ್ತದೆ. ಆಗ ನಾನು ಮಾಡಿದ್ದೇ ಸರಿ ಎಂದು ಅನಿಸಿತ್ತು. ಆದರೆ ನಾನು ಮಾಡಿದ್ದು ತಪ್ಪು" ಎಂದು ಕೊಹ್ಲಿ ಮತ್ತು ಗಂಭೀರ್‌ಗೆ ಹರ್ಭಜನ್ ಸಲಹೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ಸೋಮವಾರ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಡುವಿನ ಪಂದ್ಯವು ಕೆಲವು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಯ್ತು. ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಕಿತ್ತಾಟ ಟ್ರೋಲ್‌ಗೆ ಒಳಗಾಯ್ತು. ಆರ್‌ಸಿಬಿ ತಂಡದ ಮಾಜಿ ನಾಯಕ ಕೊಹ್ಲಿ ಮತ್ತು ಲಖನೌ ತಂಡದ ಮೆಂಟರ್ ಗಂಭೀರ್ ನಡುವಣ ಸನ್ನೆಗಳು ಮತ್ತು ವಾಗ್ವಾದ ವ್ಯಾಪಕ ಟೀಕೆಗೂ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ಟ್ರೋಲ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ.
ಪಂದ್ಯ ಮುಗಿದ ಮರುದಿನ, ಮೈದಾನದಲ್ಲಿ ವಾಗ್ವಾದ ನಡೆಸಿದ ಈ ಇಬ್ಬರು ಮತ್ತು ನವೀನ್‌ಗೆ ಬಿಸಿಸಿಐ ದಂಡ ವಿಧಿಸಿದೆ. ಈ ಜಗಳದ ಕುರಿತಾಗಿ ವಿವಿಧ ವಲಯಗಳಿಂದ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಈ ನಡುವೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಕೊಹ್ಲಿ ಮತ್ತು ಗಂಭೀರ್‌ಗೆ ತಮ್ಮ ಅಮೂಲ್ಯ ಸಲಹೆಯನ್ನು ನೀಡಿದ್ದಾರೆ. ತಮ್ಮ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಅದನ್ನು ಬದಿಗಿಟ್ಟು ಪರಸ್ಪರ ಶಾಂತಿಯಿಂದ ಆಡುವಂತೆ ಅವರಿಗೆ ಮನವಿ ಮಾಡಿದ್ದಾರೆ.
ಹರ್ಭಜನ್ ಸಿಂಗ್ ಅವರು ತಮ್ಮ ಅಭಿಪ್ರಾಯ ಹೇಳುವ ಸಂದರ್ಭದಲ್ಲಿ 2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಬಳಿಕ, ಶ್ರೀಶಾಂತ್‌ಗೆ ಹರ್ಭಜನ್ ಕಪಾಳಮೋಕ್ಷ ಮಾಡಿದ್ದರು. ಇದರಿಂದಾಗಿ ಅವರು ಸುದೀರ್ಘ ಅವಧಿಯ ನಿಷೇಧ ಶಿಕ್ಷೆಯನ್ನು ಎದುರಿಸಿದ್ದರು. ಈ ಬಗ್ಗೆ ಇದೀಗ ಮಾತನಾಡಿರುವ ಮಾಜಿ ಸ್ಪಿನ್ನರ್, ತಾನು ಅಂದು ಮಾಡಿದ ತಪ್ಪಿಗೆ ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ. ಹೀಗಾಗಿ ಐಪಿಎಲ್‌ನಲ್ಲಿ ಪರಸ್ಪರ ದ್ವೇಷ ಸಾಧಿಸುತ್ತಿರುವ ಕೊಹ್ಲಿ ಮತ್ತು ಗಂಭೀರ್ ಕೂಡಾ ಹಲವು ವರ್ಷಗಳ ಬಳಿಕ ಇದೇ ರೀತಿಯ ಭಾವನೆ ಅನುಭವಿಸುವಂತಾಗಬಾರದು ಎಂದು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
“ಇದು ಇಲ್ಲಿಗೆ ನಿಲ್ಲುವುದಿಲ್ಲ. ಜನರು ಆಗಾಗ ಅದರ ಬಗ್ಗೆ ಮಾತನಾಡುತ್ತಾರೆ. ಯಾರು ಏನು ಮಾಡಿದರು ಎಂದು ವಿವರಿಸಲು ಪ್ರಯತ್ನಿಸುತ್ತಾರೆ. ಆದರೆ ಇವೆಲ್ಲವೂ ಹೊರಗಿನ ಮಾತು. ನಾನು ಕೂಡಾ ಈ ರೀತಿ ಬದುಕಿದವನಾಗಿ ಈ ಮಾತನ್ನು ಹೇಳುತ್ತಿದ್ದೇನೆ. 2008ರಲ್ಲಿ ನನ್ನ ಮತ್ತು ಶ್ರೀಶಾಂತ್ ನಡುವೆ ಇದೇ ರೀತಿಯ ಘಟನೆ ಸಂಭವಿಸಿತು. ಆ ಘಟನೆ ನಡೆದು ಇಂದಿಗೆ 15 ವರ್ಷಗಳೇ ಕಳೆದಿವೆ. ಈಗಲೂ ಆ ಬಗ್ಗೆ ಯೋಚಿಸುವಾಗ ನನಗೆ ನನ್ನ ಮೇಲೆ ನಾಚಿಕೆಯಾಗುತ್ತದೆ. ಆ ಸಂದರ್ಭದಲ್ಲಿ ನಾನು ಮಾಡಿದ್ದೇ ಸರಿ ಎಂದು ಅನಿಸಿತ್ತು. ಆದರೆ ನಾನು ಮಾಡಿದ್ದು ತಪ್ಪು” ಎಂದು ಹರ್ಭಜನ್ ತಮ್ಮ ಯೂಟ್ಯೂಬ್ ಪೇಜ್‌ನಲ್ಲಿ ಈ ಬಗ್ಗೆ ಹೇಳಿದ್ದಾರೆ.
“ವಿರಾಟ್ ಕೊಹ್ಲಿ, ನೀವೊಬ್ಬ ಲೆಜೆಂಡ್. ನೀವು ಇಂತಹ ಜಗಳದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ಅವರು ಸದಾ ಹುರುಪಿನಿಂದ ಆಡುವ ಆಟಗಾರ. ಆಟದಲ್ಲಿ ತೊಡಗಿಸಿಕೊಂಡಿದ್ದಾಗ ಹೀಗೆ ಸಂಭವಿಸುತ್ತದೆ. ಜನರು ಅದರಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಇವೆಲ್ಲಾ ಕ್ರಿಕೆಟ್‌ಗೆ ಒಳ್ಳೆಯದಲ್ಲ. ನೀವಿಬ್ಬರೂ ಅಂತಹ ದೊಡ್ಡ ಆಟಗಾರರು. ಇಬ್ಬರೂ ನನ್ನ ಕಿರಿಯ ಸಹೋದರರು. ಇಂತಹ ಕಿತ್ತಾಟದಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಾನು ಹೇಳುತ್ತೇನೆ” ಎಂದು ಹರ್ಭಜನ್ ಹೇಳಿದ್ದಾರೆ.
“ನಾನು ಹಾಗೆ ಮಾಡಬಾರದಿತ್ತು ಎಂದು ನನಗೆ ಈಗಲೂ ಅನಿಸುತ್ತದೆ. ಆ ಬಗ್ಗೆ ನಾನು ತುಂಬಾ ವಿಷಾದಿಸುತ್ತೇನೆ. ನಾವು ಯಾಕೆ ಜಗಳವಾಡುತ್ತಿದ್ದೆವು ಎಂದು 15 ವರ್ಷಗಳ ನಂತರ ನೀವಿಬ್ಬರೂ ಯೋಚಿಸುತ್ತೀರಿ ಎಂದು ನನಗೆ ಖಂಡಿತಾ ಗೊತ್ತಿದೆ. ಇದು ಸಣ್ಣ ವಿಷಯ, ನಾವು ಅದನ್ನು ಅಲ್ಲಿಯೇ ಪರಿಹರಿಸಬಹುದಿತ್ತು. ನಾವು ಒಳ್ಳೆಯ ನೆನಪುಗಳನ್ನು ಮಾತ್ರ ಉಳಿಸಿಕೊಳ್ಳಬೇಕು. ದಯವಿಟ್ಟು ಇವೆಲ್ಲವನ್ನೂ ಮರೆತುಬಿಡಿ. ಈ ವಿಷಯವನ್ನು ಇಲ್ಲಿಗೆ ಮುಗಿಸಿ. ಒಬ್ಬರನ್ನೊಬ್ಬರು ಭೇಟಿಯಾಗಿ ಪರಸ್ಪರ ಅಪ್ಪಿಕೊಳ್ಳಿ. ಕ್ರಿಕೆಟ್ ಅನ್ನು ನೀವೆಲ್ಲರೂ ಸೇರಿ ಸಂಭ್ರಮಿಸಿದ್ದೀರಿ. ನಿಮ್ಮನ್ನು ಮಕ್ಕಳು ಕೂಡಾ ನೋಡಿ ಕಲಿಯುತ್ತಾರೆ. ಈ ಆಟದ ರಾಯಭಾರಿಗಳಾಗಿ ಅದನ್ನು ಸರಿಯಾದ ರೀತಿಯಲ್ಲಿ ಪ್ರತಿನಿಧಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನನ್ನ ಸಹೋದರರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಉತ್ತಮ ಸಂದೇಶವನ್ನು ಕಳುಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹರ್ಭಜನ್ ಹೇಳಿದ್ದಾರೆ.