Bhagavad Gita: ಭಗವಂತನ ಆಜ್ಞೆಯಂತೆ ಎಷ್ಟೋ ಸಂಗತಿಗಳು ನಡೆಯುತ್ತವೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನ ಆಜ್ಞೆಯಂತೆ ಎಷ್ಟೋ ಸಂಗತಿಗಳು ನಡೆಯುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 9 ರಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 9
ನ ಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಞ್ಜಯ|
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು ||9||
ಅನುವಾದ: ಧನಂಜಯನೆ, ಈ ಎಲ್ಲ ಕಾರ್ಯವು ನನ್ನನ್ನು ಬಂಧಿಸುವುದಿಲ್ಲ. ನಾನು ತಟಸ್ಥನಂತೆ ಕುಳಿತಿದ್ದು ಈ ಎಲ್ಲ ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುತ್ತೇನೆ.
ಭಾವಾರ್ಥ: ಈ ಸಂದರ್ಭದಲ್ಲಿ ಭಗವಂತನಿಗೆ ಯಾವ ಕೆಲಸವೂ ಇಲ್ಲ ಎಂದು ಭಾವಿಸಬಾರದು. ಅವನ ದಿವ್ಯಜನಗತ್ತಿನಲ್ಲಿ ಅವನು ಸದಾ ಕಾರ್ಯನಿರತನಾಗಿರುತ್ತಾನೆ. ಬ್ರಹ್ಮಸಂಹಿತೆಯಲ್ಲಿ (5.6)ಹೀಗೆ ಹೇಳಿದೆ-ಆತ್ಮಾರಾಮಸ್ಯ ತಸ್ಯಾಸ್ತಿ ಪ್ರಕೃತ್ಯಾ ನ ಸಮಾಗಮಃ - ಆತನು ಯಾವಾಗಲೂ ತನ್ನ ಶಾಶ್ವತವಾದ, ಆನಂದಮಯವಾದ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಆದರೆ ಈ ಐಹಿಕ ಚಟುವಟಿಕೆಗಳಿಗೂ ಅವನಿಗೂ ಯಾವುದೇ ಸಂಬಂಧವಿಲ್ಲ. ಐಹಿಕ ಚಟುವಟಿಕೆಗಳನ್ನು ಅವನ ಬೇರೆ ಬೇರೆ ಶಕ್ತಿಗಳು ನಡೆಸಿಕೊಂಡು ಹೋಗುತ್ತವೆ.
ಸೃಷ್ಟಿಯಾದ ಜಗತ್ತಿನ ಐಹಿಕ ಕ್ರಿಯೆಗಳ ವಿಷಯದಲ್ಲಿ ಪ್ರಭುವು ಯಾವಾಗಲೂ ತಟಸ್ಥನು. ಈ ತಾಟಸ್ಥ್ಯವನ್ನು ಇಲ್ಲಿ ಉದಾಸೀನವತ್ ಎನ್ನುವ ಪದದಿಂದ ಹೇಳಿದೆ. ಅವನಿಗೆ ಐಹಿಕ ಕ್ರಿಯೆಗಳ ಪ್ರತಿಯೊಂದು ವಿವರದ ಮೇಲೂ ಹತೋಟಿಯಿದೆ. ಆದರೂ ತಟಸ್ಥನಂತೆ ಕುಳಿತಿರುತ್ತಾನೆ. ತನ್ನ ಆಸನದಲ್ಲಿ ಕುಳಿತಿರುವ ಉಚ್ಚ ನ್ಯಾಯಾಲಯದ ನ್ಯಾಯಾಧೀಶನ ನಿದರ್ಶನವನ್ನು ಕೊಡಬಹುದು. ಅವನ ಆಜ್ಞೆಯಂತೆ ಎಷ್ಟೋ ಸಂಗತಿಗಳು ನಡೆಯುತ್ತವೆ. ಯಾರನ್ನೋ ನೇಣುಹಾಕುತ್ತಿರುತ್ತಾರೆ. ಯಾರನ್ನೋ ಸೆರೆಮನೆಗೆ ಕಳಿಸುತ್ತಾರೆ.
ಮತ್ತೊಬ್ಬರಿಗೆ ಅಪಾರ ಧನವನ್ನು ಕೊಡುತ್ತಾರೆ. ಆದರೆ ಆತನು ತಟಸ್ಥ. ಈ ಲಾಭ ನಷ್ಟಗಳಿಗೂ ಅವನಿಗೂ ಸಂಬಂಧವಿಲ್ಲ. ಹೀಗೆಯೇ ಪ್ರತಿಯೊಂದು ಕ್ರಿಯೆಯಲ್ಲೂ ಭಗವಂತನ ಕೈಯಿದ್ದರೂ ಅವನು ಸದಾ ತಟಸ್ಥ. ವೇದಾಂತ ಸೂತ್ರದಲ್ಲಿ (2.1.34) ವೈಷಮ್ಯ ನೈಘೃಣ್ಯೇನ-ಆತನು ಐಹಿಕ ಜಗತ್ತಿನ ದ್ವಂದ್ವಗಳಲ್ಲಿ ಸಿಲುಕಿಲ್ಲ ಎಂದು ಹೇಳಿದೆ. ಆತನು ಈ ದ್ವಂದ್ವಗಳಿಗೆ ಅತೀತನು. ಈ ಐಹಿಕ ಜಗತ್ತಿನ ಸೃಷ್ಟಿ ಮತ್ತು ನಾಶಗಳ ವಿಷಯದಲ್ಲಿ ನಿರ್ಲಿಪ್ತನು. ಜೀವಿಗಳು ತಮ್ಮ ಹಿಂದಿನ ಕ್ರಿಯೆಗಳಿಗೆ ಅನುಗುಣವಾಗಿ ವಿವಿಧ ಜೀವವರ್ಗಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯುತ್ತಾರೆ. ಭಗವಂತನು ಅವರ ವಿಷಯಗಳಲ್ಲಿ ಕೈ ಹಾಕುವುದಿಲ್ಲ.