ಕನ್ನಡ ಸುದ್ದಿ  /  Cricket  /  Riyan Parag Stars As Rajasthan Royals Beat Delhi Capitals By 12 Runs Dc Loss 2nd Consecutive Match Sanju Samson Prs

ರಿಯಾನ್ ಪರಾಗ್ ಪರಾಕ್ರಮ; ರಾಜಸ್ಥಾನ್ ರಾಯಲ್ಸ್ ವಿರುದ್ಧ ಥಂಡಾ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸತತ 2ನೇ ಸೋಲು

Rajasthan Royals vs Delhi Capitals : ಜೈಪುರದ ಸವಾಯಿ ಮಾನ್​ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್​​ 12 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಥಂಡಾ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸತತ 2ನೇ ಸೋಲು
ರಾಜಸ್ಥಾನ್ ರಾಯಲ್ಸ್ ವಿರುದ್ಧ ಥಂಡಾ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್​ಗೆ ಸತತ 2ನೇ ಸೋಲು (AP)

ರಿಯಾನ್ ಪರಾಗ್ (84*) ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ 12 ರನ್​​ಗಳ ಅಮೋಘ ಗೆಲುವು ಸಾಧಿಸಿದೆ. 17ನೇ ಆವೃತ್ತಿಯಲ್ಲಿ ಸತತ ಎರಡನೇ ಜಯ ಸಾಧಿಸಿದ ಆರ್​ಆರ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ರಿಷಭ್ ಪಂತ್ ನೇತೃತ್ವದ ತಂಡವು ಸತತ ಎರಡನೇ ಸೋಲು ಕಂಡಿದ್ದು, 8ನೇ ಸ್ಥಾನದಲ್ಲಿದೆ. ಪ್ರಸಕ್ತ ಆವೃತ್ತಿಯ ಶ್ರೀಮಂತ ಲೀಗ್​ನಲ್ಲಿ ಈವರೆಗೂ ನಡೆದ ಪಂದ್ಯಗಳ ಪೈಕಿ ತವರಿನ ತಂಡಗಳೇ ಗೆದ್ದಿರುವುದು ವಿಶೇಷ.

ಜೈಪುರದ ಸವಾಯಿ ಮಾನ್​​ಸಿಂಗ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ನಡೆಸಿತು. ಪರಾಗ್ ಅವರ ಅದ್ಭುತ ಅರ್ಧಶತಕದ ಸಹಾಯದಿಂದ ಆರ್​​ಆರ್​, 5 ವಿಕೆಟ್​ಗೆ 185 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಡೆಲ್ಲಿ, 5 ವಿಕೆಟ್​ಗೆ 173 ರನ್​ಗಳಿಸಲಷ್ಟೇ ಶಕ್ತವಾಯಿತು. ಟ್ರಿಸ್ಟಾನ್ ಸ್ಟಬ್ಸ್​ ಅಜೇಯ 44 ರನ್ ಗಳಿಸಿದ್ದರೂ ಜಯ ತಂದುಕೊಡಲು ಸಾಧ್ಯವಾಗಿಲ್ಲ.

ವಾರ್ನರ್​-ಸ್ಟಬ್ಸ್ ಹೋರಾಟ

185 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೂಡ ಆರಂಭಿಕ ಡಬಲ್ ಆಘಾತಕ್ಕೆ ಒಳಗಾಯಿತು. ಅಬ್ಬರಿಸುತ್ತಿದ್ದ ಮಿಚೆಲ್ ಮಾರ್ಷ್ 23ಕ್ಕೆ ಔಟಾದರೆ, ರಿಕಿ ಭುಯಿ ಡಕೌಟ್​ ಆಗಿ ಹೊರನಡೆದರು. ಇಬ್ಬರನ್ನೂ ನಾಂಡ್ರೆ ಬರ್ಗರ್​ ಪೆವಿಲಿಯನ್​ ಸೇರಿಸಿದರು. ಆರಂಭದಲ್ಲಿ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ಡೇವಿಡ್ ವಾರ್ನರ್ ಏಕಾಏಕಿ ಸಿಡಿದು​ ರಾಜಸ್ಥಾನ್ ಮೇಲೆ ಸವಾರಿ ಮಾಡಿದರು. ಅವರಿಗೆ ರಿಷಭ್ ಪಂತ್ ಉತ್ತಮ ಸಾಥ್ ನೀಡಿದರು.

ಆದರೆ ತಂಡದ ಗೆಲುವನ್ನು ಹತ್ತಿರಕ್ಕೆ ತರುತ್ತಿದ್ದ ವಾರ್ನರ್ (49), ಹಾಫ್ ಸೆಂಚುರಿಗೆ 1 ರನ್ ಬೇಕಿದ್ದಾಗ ಔಟ್ ಆದರು. ವಾರ್ನರ್​ ಬೆನ್ನಲ್ಲೇ ರಿಷಭ್ ಪಂತ್ (28) ಸಹ ವಿಕೆಟ್ ಒಪ್ಪಿಸಿ ಬಿಟ್ಟರು. ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ (9) ಇಂಪ್ಯಾಕ್ಟ್ ಬೀರಲಿಲ್ಲ. ಇಬ್ಬರಿಗೂ ಯುಜ್ವೇಂದ್ರ ಚಹಲ್ ಗೇಟ್​ಪಾಸ್ ಕೊಟ್ಟರು. ಆದರೆ 44 ರನ್ ಗಳಿಸಿ ಹಿಟ್ಟರ್​ ಟ್ರಿಸ್ಟಾನ್ಸ್ ಸ್ಟಬ್ಸ್, ಅಜೇಯ 15 ರನ್ ಗಳಿಸಿ ಅಕ್ಷರ್​ ಪಟೇಲ್ ಕ್ರೀಸ್​ನಲ್ಲಿದ್ದರೂ ಗೆಲುವು ತಂದುಕೊಡಲಿಲ್ಲ.

ಕೊನೆಯ ಓವರ್​​​ನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಆದರೆ ಸ್ಟಬ್ಸ್ ಮತ್ತು ಅಕ್ಷರ್​ ಸಿಕ್ಸರ್​ ಮತ್ತು ಬೌಂಡರಿ ಸಿಡಿಸಲು ಪರದಾಡಿದರು. ಆವೇಶ್​ ಖಾನ್ ಈ ಓವರ್​​ನಲ್ಲಿ 4 ರನ್ ಬಿಟ್ಟುಕೊಟ್ಟರು. ಪರಿಣಾಮ ರಿಷಭ್ ನೇತೃತ್ವದ ತಂಡವು 12 ರನ್​ಗಳಿಂದ ಸೋಲೊಪ್ಪಿಕೊಂಡಿತು. ಯುಜ್ವೇಂದ್ರ ಚಹಲ್ ಮತ್ತು ನಾಂಡ್ರೆ ಬರ್ಗರ್ ತಲಾ 2 ವಿಕೆಟ್ ಪಡೆದರೆ, ಆವೇಶ್ ಖಾನ್ 1 ವಿಕೆಟ್ ಪಡೆದರು.

ಪರಾಗ್ ಪರಾಕ್ರಮ

ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್ ತಂಡಕ್ಕೆ ಯಶಸ್ವಿ ಜೈಸ್ವಾಲ್ (5) ಮತ್ತು ಜೋಸ್ ಬಟ್ಲರ್ (11) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ 15 ರನ್​ಗಳಿಗೆ ಆಟ ಮುಗಿಸಿದರು. 36ಕ್ಕೆ ಅಗ್ರ ಕ್ರಮಾಂಕದ ಮೂವರು ಔಟಾದ ಕಾರಣ ಆರ್​ಆರ್​ ಸಂಕಷ್ಟಕ್ಕೆ ಸಿಲುಕಿತು. ಅಲ್ಲದೆ, ಈ ಹಂತದಲ್ಲಿ ಸ್ಕೋರ್ ಕೂಡ ಸುಸ್ಥಿತಿಯಲ್ಲಿತ್ತು.

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​​ಗೆ ಬಂದ ರಿಯಾನ್ ಪರಾಗ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್ ಅಶ್ವಿನ್​, ಭರ್ಜರಿ ಮೂರು ಸಿಕ್ಸರ್ ಸಿಡಿಸಿ ಅಪಾಯದಲ್ಲಿದ್ದ ತಂಡವನ್ನು ಸುಸ್ಥಿತಿಗೆ ತಂದರು. ಜವಾಬ್ದಾರಿಯುತ ಆಟವಾಡಿದ ಅಶ್ವಿನ್, 5ನೇ ವಿಕೆಟ್​ಗೆ ಪರಾಗ್ ಜೊತೆಗೂಡಿ 54 ರನ್​ಗಳ ಪಾಲುದಾರಿಕೆ ಒದಗಿಸಿದರು.

ಆ್ಯಷ್ 19 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರೆ, ಧ್ರುವ್ ಜುರೆಲ್ 12 ಬಾಲ್​ಗಳಲ್ಲಿ 20 ರನ್ ಕಲೆ ಹಾಕಿದರು. ಆದರೆ ಸತತ ವಿಕೆಟ್​ಗಳ ನಡುವೆ ಮಿಂಚಿದ ಪರಾಗ್ ಕೊನೆವರೆಗೂ ಕ್ರೀಸ್​ ಕಾಯ್ದುಕೊಂಡು 45 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್​ ನೆರವಿನಿಂದ 84 ರನ್ ಚಚ್ಚಿದರು. ತಮ್ಮ ಇನ್ನಿಂಗ್ಸ್​ನ ಕೊನೆ ಓವರ್​​ನಲ್ಲಿ ಆ್ಯನ್ರಿಚ್ ನೋಕಿಯಾ ಬೌಲಿಂಗ್​ನಲ್ಲಿ 25 ರನ್ ಚಚ್ಚಿದರು. ಶಿಮ್ರಾನ್ ಹೆಟ್ಮೆಯರ್​ ಅಜೇಯ 14 ರನ್ ಗಳಿಸಿದರು. ಅಂತಿಮವಾಗಿ ಆರ್​ಆರ್​ 185 ರನ್ ಗಳಿಸಿತು.

IPL_Entry_Point