ಸಾಹಿತ್ಯ ಇಲ್ಲದೆ ಹಾಡಿಲ್ಲ, ಇಳಯರಾಜರಿಗೆ 4500 ಹಾಡುಗಳ ಸಂಪೂರ್ಣ ಮಾಲೀಕತ್ವ ನೀಡಲು ಸಾಧ್ಯವಿಲ್ಲ ಎಂದ ಕೋರ್ಟ್‌, ಏನಿದು ಕೇಸ್‌? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಮನರಂಜನೆ  /  ಸಾಹಿತ್ಯ ಇಲ್ಲದೆ ಹಾಡಿಲ್ಲ, ಇಳಯರಾಜರಿಗೆ 4500 ಹಾಡುಗಳ ಸಂಪೂರ್ಣ ಮಾಲೀಕತ್ವ ನೀಡಲು ಸಾಧ್ಯವಿಲ್ಲ ಎಂದ ಕೋರ್ಟ್‌, ಏನಿದು ಕೇಸ್‌? ಇಲ್ಲಿದೆ ವಿವರ

ಸಾಹಿತ್ಯ ಇಲ್ಲದೆ ಹಾಡಿಲ್ಲ, ಇಳಯರಾಜರಿಗೆ 4500 ಹಾಡುಗಳ ಸಂಪೂರ್ಣ ಮಾಲೀಕತ್ವ ನೀಡಲು ಸಾಧ್ಯವಿಲ್ಲ ಎಂದ ಕೋರ್ಟ್‌, ಏನಿದು ಕೇಸ್‌? ಇಲ್ಲಿದೆ ವಿವರ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಖಾಸಗಿ ರೆಕಾರ್ಡಿಂಗ್‌ ಕಂಪನಿಯೊಂದರ ನಡುವೆ 4500 ಹಾಡುಗಳಿಗೆ ಸಂಬಂಧಪಟ್ಟಂತೆ ವಿಚಾರಣೆಯೊಂದು ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದರೂ ಈ ಹಾಡುಗಳ ಸಂಪೂರ್ಣ ಮಾಲೀಕತ್ವ ಇವರಿಗೊಬ್ಬರಿಗೆ ನೀಡುವುದು ಸಾಧ್ಯವಾಗದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಂಗೀತ ನಿರ್ದೇಶಕ ಇಳಯರಾಜ
ಸಂಗೀತ ನಿರ್ದೇಶಕ ಇಳಯರಾಜ

ಬೆಂಗಳೂರು: ಸಂಗೀತ ನಿರ್ದೇಶಕ ಇಳಯರಾಜ ಮತ್ತು ಖಾಸಗಿ ರೆಕಾರ್ಡಿಂಗ್ ಕಂಪನಿ ಎಕೋ ರೆಕಾರ್ಡಿಂಗ್ ಪ್ರೈ. ಲಿಮಿಟೆಡ್ ನಡುವೆ ಮದ್ರಾಸ್‌ ಹೈಕೋರ್ಟ್‌ನಲ್ಲಿ 4500 ಹಾಡುಗಳ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಕಾನೂನು ಸಮರವೊಂದು ನಡೆಯುತ್ತಿದೆ. ಬುಧವಾರ ಈ ಕುರಿತು ಮದ್ರಾಸ್‌ ನ್ಯಾಯಾಲಯವು ಪ್ರಮುಖ ಅಭಿಪ್ರಾಯ ತಿಳಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ. ಹಲವು ಜನರು ಸೇರಿ ಒಟ್ಟಾಗಿ ಒಂದು ಹಾಡಿನ ರಚನೆಗೆ ಕಾರಣರಾಗುತ್ತಾರೆ. ಹೀಗಾಗಿ ಇಳಯರಾಜ ಮಾತ್ರ ಕೃತಿಯ ಏಕೈಕ ಮಾಲೀಕತ್ವ ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್‌ ತಿಳಿಸಿದೆ.

ಮದ್ರಾಸ್‌ ಹೈಕೋರ್ಟ್‌ ಹೇಳಿಕೆಯೇನು?

ಇಳಯರಾಜ ಅವರು ಸಂಗೀತ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳ ಜತೆ ಒಪ್ಪಂದಕ್ಕೆ ಪ್ರವೇಶಿಸಿದ ಬಳಿಕ ಎಲ್ಲಾ ವಾಣಿಜ್ಯ ವಹಿವಾಟುಗಳ ಹಕ್ಕುಗಳು ಬದಲಾಗುತ್ತವೆ. ಇಳಯರಾಜ ಸಂಯೋಜಿಸಿದ ಹಾಡುಗಳ ಮಾಲೀಕತ್ವ ಸಂಪೂರ್ಣವಾಗಿ ಒಬ್ಬರಿಗೆ ದೊರಕದು. ಇಳಯರಾಜ ಅವರು ಸಂಗೀತದ ನೋಟ್ಸ್‌ಗಳಿಗೆ ಮಾಲೀಕರಾಗಿರುತ್ತಾರೆ ಎಂದು ಈ ಸಂದರ್ಭದಲ್ಲಿ ವಾದಿಸಲಾಯಿತು. ವಿಶೇಷವಾಗಿ ಸಂಗೀತ ನಿರ್ದೇಶಕರಿಗೆ ಪೇಮೆಂಟ್‌ ದೊರಕಿದ ಬಳಿಕ ಆ ಹಾಡಿನ ಮಾಲೀಕತ್ವ ನಿರ್ಮಾಪಕರಿಗೆ ದೊರಕುತ್ತದೆ ಎಂಬ ವಾದವೂ ಕೇಳಿಬಂತು. ಆದರೆ ನಿರ್ಮಾಪಕರೊಂದಿಗಿನ ಒಪ್ಪಂದಗಳು ಏನೇ ಇದ್ದರೂ ತನ್ನ ಹಾಡುಗಳ ಹಕ್ಕನ್ನು ಇಳಯರಾಜ ಹೊಂದಿರಲು ಅರ್ಹರು ಎಂದು ಇಳಯರಾಜ ಪರ ವಕೀಲರು ವಾದ ಮಂಡಿಸಿದರು.

ಇದೇ ಸಮಯದಲ್ಲಿ ಹಾಡಿನ ಸಾಹಿತ್ಯವನ್ನು ಬೇರೆಯವರು ಬರೆದಿರುವುದರಿಂದ ಇಳಯರಾಜ ಅವರು ಹಾಡಿನ ಮೇಲೆ ಹಕ್ಕು ಸಾಧಿಸಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ ಎಂದು ಲೈವ್‌ ಲಾ ವೆಬ್‌ಸೈಟ್ ವರದಿ ಮಾಡಿದೆ. ಗೀತರಚನೆಕಾರ ಮತ್ತು ಸಂಯೋಜಕನ ಹೊರತಾಗಿ, ಒಬ್ಬ ಗಾಯಕ ಕೂಡ ಹಾಡಿಗೆ ಕೊಡುಗೆ ನೀಡುತ್ತಾನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಮೂಲಕ ಸಂಗೀತ ನಿರ್ದೇಶಕರೊಬ್ಬರೇ ಹಾಡುಗಳ ಏಕಮಾತ್ರ ಮಾಲೀಕನಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದೇ ರೀತಿ ಸಾಹಿತಿಗಳೂ ಹಾಡಿನ ಮಾಲೀಕತ್ವ ಕೇಳಿದರೆ ಏನಾಗುತ್ತದೆ ಎಂದು ಕೋರ್ಟ್‌ ಪ್ರಶ್ನಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್‌ಗೆ ಮುಂದೂಡಲಾಗಿದೆ.

ಇಳಯರಾಜ ಬಯೋಪಿಕ್‌

ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ, ಒಟ್ಟು ನಾಲ್ಕು ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿಯೂ ಇಳಯರಾಜಾ ಮುಡಿಗೇರಿದೆ. ಆ ಕಾರಣಕ್ಕೇ ಮ್ಯೂಸಿಕ್‌ ಮ್ಯಾಸ್ಟ್ರೋ ಎಂಬ ಬಿರುದು ಇಳಯರಾಜಾ ಅವರಿಗಿದೆ. ಒಂದೇ ಭಾಷೆಗೆ ಸೀಮಿತವಾಗದೆ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇತರೆ ಭಾರತೀಯ ಭಾಷೆಗಳ ಹಾಡುಗಳಿಗೂ ಸಂಗೀತ ಸಂಯೋಜಿಸಿದ್ದಾರೆ ಇಳಯರಾಜ. ಕಳೆದ 30 ವರ್ಷಗಳ ಅವಧಿಯಲ್ಲಿ ಎಷ್ಟೋ ಶಿಷ್ಯಂದಿರನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಇದೇ ದಂತಕತೆಯ ಜೀವನ ಸಿನಿಮಾ ರೂಪದಲ್ಲಿ ಸಿದ್ಧವಾಗಲಿದೆ.

ತಮಿಳು ನಟ ಧನುಷ್, ಮ್ಯೂಸಿಕ್ ಮಾಸ್ಟ್ರೋ ಬಯೋಪಿಕ್‌ನಲ್ಲಿ ಇಳಯರಾಜ ಪಾತ್ರಕ್ಕೆ ಜೀವತುಂಬಲಿದ್ದಾರೆ. ಈ ಬಯೋಪಿಕ್‌ ಬಗ್ಗೆ ಕಳೆದ ಕೆಲ ವರ್ಷಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆದಿದ್ದವು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಇದೇ ಸಿನಿಮಾ ಸದ್ದಿಲ್ಲದೆ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಬಯೋಪಿಕ್‌ನ ಹೆಸರನ್ನು ಮಾಡಿದೆ. ಈ ಬಯೋಪಿಕ್‌ಗೆ ಇಳಯರಾಜಾ; ದಿ ಕಿಂಗ್‌ ಆಫ್‌ ಮ್ಯೂಸಿಕ್‌ ಎಂಬ ಟ್ಯಾಗ್‌ಲೈನ್‌ ಕೂಡ ಇದೆ. ಈ ಸಿನಿಮಾಕ್ಕೆ ಸ್ವತಃ ಇಳಯರಾಜರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. 

Whats_app_banner