ಕನ್ನಡ ಸುದ್ದಿ  /  Entertainment  /  Prakash Raj Angry On Kichcha Sudeep Get Ready To Answer Every Question A Citizen Will Ask You And Your Party Says Prakash Raj

Prakash Raj on Sudeep: ‘ಸುದೀಪ್‌ ಅವರೇ ಇನ್ಮೇಲೆ ನಿಮ್ಮನ್ನೂ ಬಿಡಲ್ಲ.. ತಯಾರಾಗಿರಿ!’; ಬಿಜೆಪಿ ಬೆಂಬಲಿಸಿದ್ದಕ್ಕೆ ಪ್ರಕಾಶ್‌ ರಾಜ್‌ ಗರಂ

ಕಿಚ್ಚ ಸುದೀಪ್‌ ಬಿಜೆಪಿ ಬೆಂಬಲಿಸಿ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ, ಬಹುಭಾಷಾ ನಟ ಪ್ರಕಾಶ್‌ ರಾಜ್‌ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

‘ಸುದೀಪ್‌ ಅವರೇ ಇನ್ಮೇಲೆ ನಿಮ್ಮನ್ನೂ ಬಿಡಲ್ಲ.. ತಯಾರಾಗಿರಿ!’; ಬಿಜೆಪಿ ಬೆಂಬಲಿಸಿದ್ದಕ್ಕೆ ಪ್ರಕಾಶ್‌ ರಾಜ್‌ ಗರಂ
‘ಸುದೀಪ್‌ ಅವರೇ ಇನ್ಮೇಲೆ ನಿಮ್ಮನ್ನೂ ಬಿಡಲ್ಲ.. ತಯಾರಾಗಿರಿ!’; ಬಿಜೆಪಿ ಬೆಂಬಲಿಸಿದ್ದಕ್ಕೆ ಪ್ರಕಾಶ್‌ ರಾಜ್‌ ಗರಂ

Prakash Raj on Sudeep: ರಾಜ್ಯದಲ್ಲೀಗ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳೂ ಘಟಿಸುತ್ತಿವೆ. ಈ ನಡುವೆ ಕಿಚ್ಚ ಸುದೀಪ್‌ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದರು. ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಈ ವಿಚಾರ ಹಲವರ ಕೆಂಗಣ್ಣಿಗೆ ಗುರಿಯಾದರೆ, ಇನ್ನು ಕೆಲವರು ಕಿಚ್ಚನ ನಿರ್ಧಾರವನ್ನು ಸ್ವಾಗತಿಸಿದ್ದರು. ಇದೀಗ ಸುದೀಪ್‌ ಅವರ ಈ ನಡೆಗೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಕಾಶ್‌ ರಾಜ್‌, ಸುದೀಪ್‌ ಅವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇಲ್ಲಿಯವರೆಗೆ ಇದ್ದ ಸುದೀಪ್‌ ಹೇಗೆ, ಇನ್ನು ಮೇಲಿನ ಸುದೀಪ್‌ ಹೇಗೆ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಪಕ್ಷದ ಜತೆಗೆ ನಿಮಗೂ ಪ್ರಶ್ನೆಗಳು ತೂರಿ ಬರಲಿವೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

ಪ್ರಕಾಶ್‌ ರಾಜ್‌ ಹೇಳಿದ್ದೇನು?

"ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ.. ಇನ್ನು ಮುಂದೆ ನಿಮ್ಮನ್ನೂ.. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ.." ಎಂದು ಪ್ರಕಾಶ್‌ ರೈ ಟ್ವಿಟ್‌ ಮಾಡಿದ್ದಾರೆ.

ಬುಧವಾರ ಸುದೀಪ್‌ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದಾಗಲೂ, ಟ್ವಿಟ್‌ ಮಾಡಿದ್ದ ಪ್ರಕಾಶ್‌ ರಾಜ್, "ಕರ್ನಾಟಕದಲ್ಲಿ ಸೋಲುವ ಭಯದಲ್ಲಿ.. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ" ಎಂದಿದ್ದರು.

ರಾಜಕೀಯದ ಬಗ್ಗೆ ಸುದೀಪ್‌ ಹೇಳಿಕೆ ಹೀಗಿತ್ತು...

ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಚ್ಚ, ನಾನೊಬ್ಬ ನಟ, ಕೆಲವೊಂದು ನಿಲುವುಗಳಿವೆ. ನನಗೆ ಎಲ್ಲಾ ಪಕ್ಷದವರು ಆತ್ಮೀಯರು, ಆದರೆ ನನ್ನ ಪರವಾಗಿ ಯಾರು ನಿಲ್ಲುತ್ತಾರೋ ನಾನು ಅವರ ಪರ ನಿಲ್ಲುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಹಾಗೇ ನನ್ನ ಮ್ಯಾನೇಜರ್‌, ನಿರ್ಮಾಪಕ ಜಾಕ್‌ ಮಂಜುಗೆ ಕೂಡಾ ನಾನು ಟಿಕೆಟ್‌ ಕೇಳಿಲ್ಲ. ಮತ್ತೊಬ್ಬರಿಗೆ ಚುನಾವಣೆಗೆ ಟಿಕೆಟ್‌ ಕೊಡಿಸುವಷ್ಟು ನಾನು ದೊಡ್ಡವನಲ್ಲ, ನಾನು ಚಿತ್ರರಂಗಕ್ಕೆ ಬಂದಾಗ ನನಗೆ ಅನೇಕ ಮಂದಿ ಸಹಾಯ ನೀಡಿದ್ದಾರೆ. ಎಲೆಕ್ಷನ್‌ ವಿಚಾರದಲ್ಲಿ ನಾನು ಅವರ ಪರ ನಿಲ್ಲುತ್ತಿದ್ದೇನೆ ಎಂದಿದ್ದರು ಸುದೀಪ್‌.

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ..

ಸುದೀಪ್‌ ಬಿಜೆಪಿ ಸೇರಲಿದ್ದಾರೆ, ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಅಭಿಮಾನಿ ವಲಯದಲ್ಲಿಯೂ ಕುತೂಹಲ ಮನೆ ಮಾಡಿತ್ತು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, "ನಾನು ಯಾವುದೇ ಪಕ್ಷದ ಜತೆ ಸೇರುತ್ತಿಲ್ಲ, ಸ್ಪರ್ಧಿಸುತ್ತಿಲ್ಲ. ಪ್ರಚಾರಕ್ಕೆ ಹೋಗುತ್ತಿದ್ದೇನೆ. ಏಕೆಂದರೆ, ರಾಜಕೀಯದಲ್ಲಿರುವ ಎಷ್ಟೋ ಜನ ನಮ್ಮ ಜೀವನಕ್ಕೆ ಹತ್ತಿರದವರು. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ, ನನ್ನ ಕಷ್ಟದ ಟೈಮ್‌ನಲ್ಲಿ ಕೈ ಹಿಡಿದವರು ಸಾಕಷ್ಟು ಜನರಿದ್ದಾರೆ. ಅವರ ಪರವಾಗಿ ಪ್ರಚಾರ ಮಾಡುವುದರಲ್ಲಿ ತಪ್ಪೇನಿಲ್ಲ. ಹಾಗಾಗಿ ನಾನು ಈ ಕೆಲಸಕ್ಕೆ ಮುಂದಾಗಿದ್ದೇನೆ" ಎಂಬುದು ಸುದೀಪ್‌ ಮಾತು.

IPL_Entry_Point