ಕನ್ನಡ ಸುದ್ದಿ  /  ಕ್ರಿಕೆಟ್  /  ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹೆಸರು ಶಾರ್ಟ್​ ಲಿಸ್ಟ್; ಆದರೆ ಒಬ್ಬರು ಅಂತಿಮ

ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹೆಸರು ಶಾರ್ಟ್​ ಲಿಸ್ಟ್; ಆದರೆ ಒಬ್ಬರು ಅಂತಿಮ

T20 World Cup 2024 : ಟಿ20 ವಿಶ್ವಕಪ್​ಗೆ ಭಾರತ ತಂಡ ಶೀಘ್ರದಲ್ಲೇ ಪ್ರಕಟವಾಗಲಿದೆ. ಆದರೆ ವಿಕೆಟ್​ ಕೀಪರ್​ಗಳಾದ ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹೆಸರು ಶಾರ್ಟ್​ ಲಿಸ್ಟ್; ಆದರೆ ಒಬ್ಬರು ಅಂತಿಮ
ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹೆಸರು ಶಾರ್ಟ್​ ಲಿಸ್ಟ್; ಆದರೆ ಒಬ್ಬರು ಅಂತಿಮ

ಜೂನ್ 1 ರಿಂದ ಪ್ರಾರಂಭವಾಗುವ 2024ರ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಟೀಮ್ ಇಂಡಿಯಾ (Team India) ಸಜ್ಜಾಗುತ್ತಿದೆ. ಮೇ 1ರೊಳಗೆ 15 ಸದಸ್ಯರ ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ ಒಂದೊಂದು ಸ್ಥಾನಕ್ಕೆ ಕನಿಷ್ಠ ನಾಲ್ಕೈದು ಆಟಗಾರರು ಪೈಪೋಟಿ ನಡೆಸುತ್ತಿರುವುದು ಆಯ್ಕೆದಾರರ ಗೊಂದಲ ಹೆಚ್ಚಿಸಿದೆ. ಅದರಂತೆ ವಿಕೆಟ್ ಕೀಪರ್ ಸ್ಥಾನಕ್ಕೂ 6 ಮಂದಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಒಂದೂವರೆ ವರ್ಷದಿಂದ ಭಾರತ ತಂಡಕ್ಕೆ ದೂರವಾಗಿದ್ದ ರಿಷಭ್ ಪಂತ್ (Rishabh Pant) ಈ ಸ್ಥಾನಕ್ಕೆ ಮೊದಲ ಆಯ್ಕೆಯಾಗಿದ್ದಾರೆ.

ರಿಷಭ್ ಪಂತ್ ಅವರು 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಪುನರಾಗಮನ ಮಾಡುವುದು ಖಚಿತವಾಗಿದೆ. ಆದರೆ, 2ನೇ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಸಂಜು ಸ್ಯಾಮ್ಸನ್ (Sanju Samson) ನಡುವೆ ನೇರಾನೇರ ಪೈಪೋಟಿ ನಡೆಯುತ್ತಿದೆ. ಉಳಿದಂತೆ ಇಶಾನ್ ಕಿಶನ್ (Ishan Kishan), ದಿನೇಶ್ ಕಾರ್ತಿಕ್ (Dinesh Karthik) ಮತ್ತು ಜಿತೇಶ್ ಶರ್ಮಾ ಎಷ್ಟೇ ಚೆನ್ನಾಗಿ ಆಡಿದರೂ ಅವಕಾಶ ಪಡೆಯುವುದು ಅಸಾಧ್ಯ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಜು ಸ್ಯಾಮ್ಸನ್ ಸ್ಟ್ಯಾಂಡ್-ಬೈ

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿಯ ಪ್ರಕಾರ, 15 ತಿಂಗಳ ಸುದೀರ್ಘ ವಿರಾಮದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ ರಿಷಭ್ ಪಂತ್, 2024ರ ಐಪಿಎಲ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನವು ಮೆಗಾ ಈವೆಂಟ್​ಗೆ ಮೊದಲ ಆಯ್ಕೆಯ ವಿಕೆಟ್-ಕೀಪರ್ ಸ್ಥಾನ ನೀಡುವಂತೆ ಮಾಡಿದೆ. ಆದರೆ, ಸ್ಯಾಮ್ಸನ್ ಮತ್ತು ರಾಹುಲ್ ಮಧ್ಯೆ ನೆಕ್ ಟು ನೆಕ್ ಕದನ ಏರ್ಪಟ್ಟಿದೆ. ಆದರೆ ಕೆಎಲ್​​ಗೆ ಅವಕಾಶ ನೀಡಿ ಸಂಜು ಸ್ಯಾಮ್ಸನ್​ರನ್ನು ಸ್ಟ್ಯಾಂಡ್-ಬೈ ಆಟಗಾರರಲ್ಲಿ ಸೇರಿಸಬೇಕೆಂಬ ಚರ್ಚೆಯೂ ಜರುಗುತ್ತಿದೆ. ಸೆಲೆಕ್ಟರ್​ಗಳ ಈ ಡಿಬೇಟ್ ಇನ್ನೂ ಅಂತಿಮಗೊಂಡಿಲ್ಲ.

ಕೆಎಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡದಿದ್ದರೂ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಸಂಜು ಮಧ್ಯಮ ಕ್ರಮಾಂಕದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇಲ್ಲಿಯವರೆಗೆ 2024ರ ಐಪಿಎಲ್‌ನಲ್ಲಿ ಪಂತ್ ಆಡಿರುವ 9 ಪಂದ್ಯಗಳಲ್ಲಿ 48.85 ಸರಾಸರಿ ಮತ್ತು 161.32 ಸ್ಟ್ರೈಕ್​ರೇಟ್‌ನಲ್ಲಿ 342 ರನ್‌ಗಳೊಂದಿಗೆ ವಿಕೆಟ್-ಕೀಪರ್‌ಗಳಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಸಂಜು ಸ್ಯಾಮ್ಸನ್ 8 ಪಂದ್ಯಗಳಲ್ಲಿ 62.80 ಸರಾಸರಿ ಮತ್ತು 152.42 ಸ್ಟ್ರೈಕ್ ರೇಟ್‌ನಲ್ಲಿ 314 ರನ್ ಗಳಿಸಿದ್ದಾರೆ. ಏತನ್ಮಧ್ಯೆ, ರಾಹುಲ್ ಎಂಟು ಪಂದ್ಯಗಳಲ್ಲಿ 37.75 ಸರಾಸರಿ ಮತ್ತು 141.12 ಸ್ಟ್ರೈಕ್ ರೇಟ್‌ನಲ್ಲಿ 302 ರನ್ ಗಳಿಸಿದ್ದಾರೆ. ಮೂವರಿಂದಲೂ ಉತ್ತಮ ಪ್ರದರ್ಶನ ಹೊರ ಬಂದರೂ ಪಂತ್​, ಆಕರ್ಷಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಫಾರ್ಮ್​ ಕಳವಳಕಾರಿ

ವಿಕೆಟ್ ಕೀಪರ್​ ಸ್ಥಾನದಂತೆ ಆಲ್​ರೌಂಡರ್​ ಸ್ಥಾನದ ಸಮಸ್ಯೆಯೂ ಇನ್ನೂ ಬಗೆಹರಿದಿಲ್ಲ. ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಟೀಮ್ ಇಂಡಿಯಾಕ್ಕೆ ಕಳವಳಕಾರಿಯಾಗಿದೆ. ಬ್ಯಾಟಿಂಗ್​​-ಬೌಲಿಂಗ್​ನಲ್ಲಿ ತೀವ್ರ ನಿರಾಸೆ ಮೂಡಿಸಿದ್ದಾರೆ. ಆದರೆ, ಬೇರೆ ಯಾವುದೇ ಪೇಸ್-ಬೌಲಿಂಗ್ ಆಲ್-ರೌಂಡ್ ಆಯ್ಕೆಗಳಿಲ್ಲದ ಕಾರಣ ಅವರನ್ನೇ ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಐಪಿಎಲ್‌ನಲ್ಲಿ ಶಿವಂ ದುಬೆ ಬೌಲಿಂಗ್ ಮಾಡದ ಕಾರಣ ಆತನ ಆಯ್ಕೆಗೆ ಹಿಂದೇಟು ಹಾಕಲಾಗುತ್ತಿದೆ. ಆದರೆ ದುಬೆ ಅವರು ವೆಸ್ಟ್ ಇಂಡೀಸ್ ಮತ್ತು ಯುಎಸ್​ಎಗೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ವಿಮಾನ ಹತ್ತಿದರೂ ಅಚ್ಚರಿ ಇಲ್ಲ.

ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಬೌಲಿಂಗ್ ಘಟಕದಲ್ಲಿರುವುದು ಖಚಿತವಾಗಿದೆ ಎಂದು ವರದಿಯಾಗಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಅವೇಶ್ ಖಾನ್, ಮಣಿಕಟ್ಟಿನ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಆಲ್​ರೌಂಡರ್ ಅಕ್ಷರ್ ಪಟೇಲ್ ಅವರೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

IPL_Entry_Point