Puneeth Silicon Statue: ಸ್ವತ: ಅಪ್ಪುವೇ ಎದ್ದು ಬಂದಂತೆ ಕಾಣ್ತಿದೆ ಅಭಿಮಾನಿ ತಯಾರಿಸಿರುವ ಈ ಪ್ರತಿಮೆ!
ಈ ಸ್ಟಾಚು ತಯಾರಿಸಲು ಸುಮಾರು 10 ತಿಂಗಳ ಕಾಲ ಸಮಯ ಬೇಕಾಯ್ತಂತೆ. ಅಪ್ಪು ಹುಟ್ಟುಹಬ್ಬಕ್ಕೆ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಉದ್ದೇಶದಿಂದ ಮಾರ್ಚ್ 17ವರೆಗೂ ಕಾದು ಈ ವಿಶೇಷ ದಿನ ಈ ಸ್ಟಾಚುವನ್ನು ಅನಾವರಣಗೊಳಿಸಲಾಗಿದೆ.
ಇಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅಪ್ಪು ಉತ್ಸವವನ್ನು ಆಚರಿಸುತ್ತಿದ್ದಾರೆ. ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಊರಿನಲ್ಲೂ ಅಭಿಮಾನಿಗಳು ಅಪ್ಪು ಫೋಟೋಗೆ ಪೂಜೆ ಮಾಡಿ ಸಿಹಿ ಹಂಚುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೂಡಾ ಅಪ್ಪು ಕುಟುಂಬದವರು ಅವರಿಗಿಷ್ಟವಾದ ತಿಂಡಿಗಳನ್ನು ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಈ ನಡುವೆ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಅಪ್ಪುವಿನ ಸಿಲಿಕಾನ್ ಸ್ಟಾಚು ತಯಾರಿಸಿ ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದ್ದಾರೆ. ಏಕೆಂದರೆ ಈ ಪ್ರತಿಮೆ ನೋಡುತ್ತಿದ್ದರೆ, ಸ್ವತ: ಪುನೀತ್ ರಾಜ್‌ಕುಮಾರ್ ಅವರನ್ನೇ ನೋಡಿದಂತಾಗುತ್ತಿದೆ. ಸ್ವತ: ಅಪ್ಪು, ಸೋಫಾ ಮೇಲೆ ಕುಳಿತಿರುವಂತೆ ಕಾಣುತ್ತಿದೆ. ಈ ಪ್ರತಿಮೆ ನೋಡುತ್ತಿದ್ದಂತೆ ಅಲ್ಲಿದ್ದವರಿಗೆ ಒಂದು ಕ್ಷಣ ಅಳು, ಸಂತೋಷ ಒಟ್ಟಿಗೆ ಆಗಿದೆ. ಅಂದಹಾಗೆ ಅಪ್ಪು ಅಭಿಮಾನಿ ಕಲಾವಿದ ಶ್ರೀಧರ್ ಮೂರ್ತಿ ಎನ್ನುವವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ. ಬೆಂಗಳೂರಿನ ಪೀಣ್ಯದ ಉದ್ಯಮಿ ಅದ್ವಿಕ್ ಎನ್ನುವವರು ಈ ಪ್ರತಿಮೆಯನ್ನು ಮಾಡಿಸಿದ್ದಾರೆ.
ಈ ಸ್ಟಾಚು ತಯಾರಿಸಲು ಸುಮಾರು 1 ತಿಂಗಳ ಕಾಲ ಸಮಯ ಬೇಕಾಯ್ತಂತೆ. ಅಪ್ಪು ಹುಟ್ಟುಹಬ್ಬಕ್ಕೆ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಉದ್ದೇಶದಿಂದ ಮಾರ್ಚ್ 17ವರೆಗೂ ಕಾದು ಈ ವಿಶೇಷ ದಿನ ಈ ಸ್ಟಾಚುವನ್ನು ಅನಾವರಣಗೊಳಿಸಲಾಗಿದೆ. ಅಪ್ಪು 48ನೇ ಹುಟ್ಟುಹಬ್ಬದ ಅಂಗವಾಗಿ ಈ ಪ್ರತಿಮೆಯನ್ನು ಅವರ ಸಮಾಧಿ ಬಳಿ ಇರಿಸಲಾಗಿದ್ದು ಬಂದವರೆಲ್ಲಾ ಒಂದು ಕ್ಷಣ, ಅಪ್ಪುವೇ ಎದ್ದು ಬಂದು ಇಲ್ಲಿ ಕುಳಿತಿದ್ದಾರೇನೋ ಅಂದುಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಪ್ರತಿಮೆ ಗಮನ ಸೆಳೆಯುತ್ತಿದೆ.
ಅಪ್ಪು ಬರ್ತ್‌ಡೇ ವಿಶೇಷವಾಗಿ ವಿವಿಧ ಕಾರ್ಯಕ್ರಮ
ಇಂದು ಹುಟ್ಟುಹಬ್ಬದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಬೆಳಗೆ 9 ಗಂಟೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 10 ಗಂಟೆಯಿಂದ ಸಂಜೆವರೆಗೂ ನಿರಂತರ ಅನ್ನ ದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ 6 ಗಂಟೆಗೆ ಅಪ್ಪು ಸಂಗೀತೋತ್ಸವ ಇದ್ದು ವಿವಿಧ ಗಾಯಕರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಅಪ್ಪು ಪುಣ್ಯಭೂಮಿಯಲ್ಲಿ ದಸರಾ ರೀತಿಯ ಅದ್ದೂರಿ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ಅಪ್ಪು ಉತ್ಸವದ ಹೆಸರಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗುತ್ತಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ 'ಗಂಧದಗುಡಿ'
ಇಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ 'ಗಂಧದಗುಡಿ' ಸ್ಟ್ರೀಮ್ ಆಗುತ್ತಿದೆ. ಕರ್ನಾಟಕದ ಕಣ್ಮನ ಸೆಳೆಯುವ ನಿಸರ್ಗ ಮತ್ತು ಅಮೋಘ ಸಂಸ್ಕೃತಿಯನ್ನು ಒಳಗೊಂಡಿರುವ 'ಗಂಧದಗುಡಿ' - ಜರ್ನಿ ಆಫ್ ಎ ಟ್ರೂ ಹೀರೋ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಮಡ್ ಸ್ಕಿಪ್ಪರ್ ಸಹ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಮೋಘವರ್ಷ, ಈ ಪ್ರಾಜೆಕ್ಟ್ ನಿರ್ದೇಶಿಸಿದ್ದಾರೆ.
ಇಂದು 'ಕಬ್ಜ' ರಿಲೀಸ್
ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಹಾಗೂ ಸುದೀಪ್ ನಟಿಸಿರುವ 'ಕಬ್ಜ' ಇಂದು ತೆರೆ ಕಂಡಿದೆ. ''ಕಬ್ಜ ಚಿತ್ರದ ಪೋಸ್ಟರ್ ನೋಡಿ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಶೂಟಿಂಗ್ ಸೆಟ್‌ಗೆ ಕೂಡಾ ಭೇಟಿ ನೀಡಿದ್ದರು. ಚಿತ್ರದ ಕೆಲವೊಂದು ತುಣುಕುಗಳನ್ನು ನೋಡಿ ಹಾಲಿವುಡ್ ಸಿನಿಮಾದಂತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೆ, ಈ ಚಿತ್ರಕ್ಕೆ ಬೆಂಬಲ ನೀಡುವುದಾಗಿ ಕೂಡಾ ಅಪ್ಪು ನಮ್ಮೊಂದಿಗೆ ಹೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪುನೀತ್ ಹುಟ್ಟುಹಬ್ಬದಂದು ನಾವು ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ'' ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದರು.