Daredevil Musthafa: ಕರುನಾಡಿಂದ ಫಾರಿನ್ ಕಡೆ ಹೊರಟ ಡೇರ್ ಡೆವಿಲ್ ಮುಸ್ತಾಫಾ; ವಿದೇಶದಲ್ಲೂ ಕಣ್ತುಂಬಿಕೊಳ್ಳಿ ಪೂಚಂತೇ ಪ್ರಪಂಚ
ಕರುನಾಡಲ್ಲಿ ಗೆಲುವಿನ ಕಹಳೆಯೂದಿದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿತ ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾ ಇದೀಗ, ವಿದೇಶಕ್ಕೆ ಹೊರಟು ನಿಂತಿದೆ. ಅಮೆರಿಕಾ, ಯೂರೋಪ್, ದುಬೈನ ಹಲವೆಡೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
Dare Devil Musthafa: ಪೂರ್ಣಚಂದ್ರ ತೇಜಸ್ವಿ (Poornachandra Tejasvi) ಅವರ ಡೇರ್ ಡೆವಿಲ್ ಮುಸ್ತಾಫಾ ಕಥೆ ಬೆಳ್ಳಿತೆರೆ ಮೇಲೆ ಮಿನುಗುತ್ತಿದೆ. ನೋಡಿದವರು ಪೂಚಂತೆ ಪ್ರಪಂಚವನ್ನು ಮನಸಾರೆ ಹೊಗಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಂದಿಯೂ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ವಾರ (ಮೇ 19) ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಅಮೋಘ ಎರಡನೇ ವಾರಕ್ಕೂ ಸಿನಿಮಾ ದಾಪುಗಾಲಿಟ್ಟಿದೆ. ರಾಜ್ಯದಲ್ಲಿ ಯಶಸ್ವಿ ಪ್ರಯಾಣ ಮುಂದುವರಿಸಿರುವ ಈ ಸಿನಿಮಾ, ಈಗ ವಿದೇಶಕ್ಕೂ ಲಗ್ಗೆ ಇಟ್ಟಿದೆ.
ರಾಜ್ಯದಲ್ಲಿ ಚುನಾವಣೆಯ ರಂಗು ಜೋರಾಗಿತ್ತು, ಟಿವಿಯಲ್ಲಿ ಐಪಿಎಲ್ ಹಬ್ಬವೂ ಕಳೆಗಟ್ಟಿತ್ತು. ಇದೆಲ್ಲದರ ನಡುವೆ ಚಿತ್ರಮಂದಿರಕ್ಕೆ ಬಂದಿದ್ದ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ, ನೋಡುಗರಿಂದ ಬಹುಪರಾಕ್ ಗಿಟ್ಟಿಸಿಕೊಂಡಿತ್ತು. ಚಿತ್ರಮಂದಿರದತ್ತ ಸುಳಿಯದ ಈ ಕಾಲಮಾನದಲ್ಲಿ ಈ ಸಿನಿಮಾ ನೋಡಲೆಂದೇ ಜನ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಓದುಗರು ಥಿಯೇಟರ್‌ನತ್ತ ಆಗಮಿಸುತ್ತಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಥಿಯೇಟರ್ ನಲ್ಲಿ ಯಾವ ಚಿತ್ರಕ್ಕೂ ಸಿಗದ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಕ್ಕಿದೆ.
ಇದನ್ನೂ ಓದಿ: ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್
ರಾಜ್ಯದ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಕೇಂದ್ರಗಳಲ್ಲಿ ಡೇರ್ ಡೆವಿಲ್ ಮುಸ್ತಾಫಾ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕ ಇದು ಹೃದಯ ಬೆಸೆಯುವ ಕಥೆ. ಪ್ರತಿಯೊಬ್ಬರು ಇಂತಹ ಚಿತ್ರ ಮಿಸ್ ಮಾಡದೇ ನೋಡಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಎಲ್ಲರ ಬಾಯಲ್ಲಿ ನಲಿದ ಈ ಚಿತ್ರವೀಗ ವಿದೇಶಕ್ಕೂ ಹೊರಟು ನಿಂತಿದೆ.
ಈ ವಾರ ಅಮೆರಿಕಾ, ಯುರೋಪ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಬಿಡುಗಡೆ ಆಗುತ್ತಿದೆ. ಮುಂದಿನ ವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಸೇರಿ ವಿಶ್ವದ ಇನ್ನೂ ಹಲವೆಡೆ ರಿಲೀಸ್ ಆಗಲಿದೆ. ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕ್ರೌಡ್ ಫಂಡಿಂಗ್ ಸಿನಿಮಾ. ಪೂರ್ಣಚಂದ್ರ ತೇಜಸ್ವಿ ಅವರ 200ಕ್ಕೂ ಅಧಿಕ ಅಭಿಮಾನಿಗಳೇ ಸಿನಿಮಾಮರ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ರಕ್ತಾಕ್ಷ ಚಿತ್ರಕ್ಕೆ ಸಿಕ್ತು ಸಿಂಹ ಕಂಠ; ರಾಯಚೂರು ಹುಡುಗನ ಚಿತ್ರಕ್ಕೆ ಸಾಥ್ ನೀಡಿದ ವಸಿಷ್ಠ
ನಟ ಡಾಲಿ ಧನಂಜಯ್ ಡಾಲಿ ಪಿಕ್ಚರ್ಸ್‌ನಡಿ ಈ ಚಿತ್ರವನ್ನು ನಾಡಿನ ಜನತೆಗೆ ಪ್ರಸೆಂಟ್ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.