Assembly Election 2023: ಕನ್ನಡ ಚಿತ್ರರಂಗದಲ್ಲೂ ಚುನಾವಣೆ ರಂಗು.. ಅಖಾಡಕ್ಕೆ ಇಳಿಯಲಿದ್ದಾರಂತೆ ಪ್ರವೀಣರೊಂದಿಗೆ ನವೀನರು!
ನಟಿ ಮೇಘನಾ ರಾಜ್, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು ಬಿಜೆಪಿಗೆ ಸೇರಲಿದ್ಧಾರೆ, ಈ ಬಾರಿ ಅವರು ಕೂಡಾ ವಿಧಾನಸಭೆ ಚುನಾವಣೆಗೆ ನಿಲ್ಲಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆ ನಿಗದಿ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿವೆ. ಕೆಲವೊಂದು ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರೆ, ಇನ್ನೂ ಕೆಲವೆಡೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆ ಆಗುತ್ತಿದೆ.
ಈ ಬಾರಿ ಸ್ಯಾಂಡಲ್‌ವುಡ್‌ನಿಂದ ಕೂಡಾ ಬಹುತೇಕರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಸುಮಲತಾ ಅಂಬರೀಶ್, ತಾರಾ ಅನುರಾಧ, ಮುಖ್ಯಮಂತ್ರಿ ಚಂದ್ರು, ಮಾಳವಿಕಾ ಅವಿನಾಶ್, ಜಯಮಾಲಾ, ಜಗ್ಗೇಶ್, ಪೂಜಾಗಾಂಧಿ, ನಿಖಿಲ್ ಕುಮಾರಸ್ವಾಮಿ ಹಾಗೂ ಇನ್ನಿತರರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿ ಈ ಬಾರಿ ಅಖಾಡಕ್ಕೆ ಇಳಿಯುವ ಪ್ರಯತ್ನ ಮಾಡಿದ್ದಾರೆ. ಈಗ ಕೆಲವು ಹೊಸ ನಟ-ನಟಿಯರ ಹೆಸರು ಕೇಳಿಬರುತ್ತಿದೆ. ಜೊತೆಗೆ ರಾಜಕೀಯದಿಂದ ದೂರ ಉಳಿದಿರುವವರ ಹೆಸರು ಕೂಡಾ ಮುಂಚೂಣಿಯಲ್ಲಿದೆ.
ಅನಂತ್‌ನಾಗ್
ಹಿರಿಯ ನಟ ಅನಂತ್‌ನಾಗ್ ಈಗಾಗಲೇ ಸಚಿವರಾಗಿ ಕೆಲಸ ಮಾಡಿದ್ಧಾರೆ. ಬಹಳ ವರ್ಷಗಳಿಂದ ಅವರು ರಾಜಕೀಯದಿಂದ ದೂರ ಉಳಿದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚುನಾವಣೆ ಮೂಲಕ ಅವರು ರಾಜಕೀಯಕ್ಕೆ ರೀ ಎಂಟ್ರಿ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಅನಂತ್‌ನಾಗ್ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಫೆಬ್ರವರಿ 22 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮುಹೂರ್ತ ಕೂಡಾ ಫಿಕ್ಸ್ ಆಗಿತ್ತು. ಆದರೆ ನಟ ಅನಂತ್‌ನಾಗ್ ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದುವರೆಗೂ ಮತ್ತೆ ಅವರು ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿಲ್ಲ. ಈ ಬಾರಿ ಅವರು ಸ್ವತಂತ್ರ್ಯ ಸ್ಪರ್ಧಿಯಾಗಿ ಭಾಗವಹಿಸಬಹುದು ಎನ್ನಲಾಗುತ್ತಿದೆ.
ರಮ್ಯಾ
ತಂದೆ ನಿಧನದ ನಂತರ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿ ಆಗಿದ್ದ ನಟಿ ರಮ್ಯಾ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಸಂಸದೆ ಆಗಿ ಆಯ್ಕೆ ಆಗಿದ್ದರು. ಆದರೆ ಮರುವರ್ಷ ನಡೆದ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಎದುರು ಸೋತ್ತಿದ್ದರು. ಕೆಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ರಮ್ಯಾ ಈಗ ಮತ್ತೆ ಸಿನಿಮಾಗೆ ವಾಪಸ್ ಬಂದಿದ್ದಾರೆ. ಆದರೂ ಅವರು ಈ ಬಾರಿ ಮತ್ತೆ ಕಾಂಗ್ರೆಸ್‌ನಿಂದ ಎಲೆಕ್ಷನ್‌ನಲ್ಲಿ ಭಾಗವಹಿಸಬಹುದು, ಪದ್ಮನಾಭ ನಗರ, ಮಂಡ್ಯ ಅಥವಾ ಚನ್ನಪಟ್ಟಣ, ಈ ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ರಮ್ಯಾ ಅಖಾಡಕ್ಕೆ ಇಳಿಯಬಹುದು ಎಂಬ ಮಾತು ಕೇಳಿಬರುತ್ತಿದೆ.
ಟೆನ್ನಿಸ್ ಕೃಷ್ಣ
ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ಆಮ್ ಆದ್ಮಿ ಪಾರ್ಟಿ ಸೇರಿದ್ದು ತುರುವೇಕೆರೆಯಿಂದ ಸ್ಪರ್ಧಿಸುತ್ತಿದ್ದಾರೆ. ಟೆನ್ನಿಸ್ ಕೃಷ್ಣ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ.
ನಿರ್ದೇಶಕ ಶ್ರೀನಿವಾಸ್
ನಿರ್ದೇಶಕ ಸ್ಮೈಲ್ ಸೀನು (ಶ್ರೀನಿವಾಸ್) ಕೂಡಾ ಎಎಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈ ವಿಧಾನಸಭೆ ಚುನಾವಣೆಯಲ್ಲಿ ಅವರು ಕೂಡ್ಲಿಗಿಯಿಂದ ಸ್ಪರ್ಧಿಸಲಿದ್ದಾರಂತೆ.
ಅಭಿಷೇಕ್ ಅಂಬರೀಶ್
ಅಂಬರೀಶ್ ನಿಧನದ ನಂತರ ಮಂಡ್ಯ ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದ ಸುಮಲತಾ 2019 ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡಾ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಮೇಘನಾ ರಾಜ್
ನಟಿ ಮೇಘನಾ ರಾಜ್, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು ಬಿಜೆಪಿಗೆ ಸೇರಲಿದ್ಧಾರೆ, ಈ ಬಾರಿ ಅವರು ಕೂಡಾ ವಿಧಾನಸಭೆ ಚುನಾವಣೆಗೆ ನಿಲ್ಲಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಎಷ್ಟು ನಿಜ, ಎಷ್ಟು ಸುಳ್ಳು ಶೀಘ್ರದಲ್ಲೇ ತಿಳಿಯಲಿದೆ.
ಕೆ.ಮಂಜು
ನಿರ್ಮಾಪಕ ಕೆ. ಮಂಜು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಕನ್ಫರ್ಮ್ ಆಗಿದ್ದು ಪದ್ಮನಾಭ ನಗರದಿಂದ ಅಖಾಡಕ್ಕೆ ಇಳಿಯಲಿದ್ದಾರಂತೆ. ಆದರೆ ಇದುವರೆಗೂ ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಅನ್ನೋದು ತಿಳಿದುಬಂದಿಲ್ಲ.
ಇವರಲ್ಲಿ ಈ ಬಾರಿ ಯಾರೆಲ್ಲಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ವಿಭಾಗ