Brundavana Serial: ಹಳೆ ವಿಡಿಯೊ ನೋಡಿ ಕಣ್ಣೀರು ಸುರಿಸುವ ಭಾರ್ಗವಿ, ಸುಧಾಮೂರ್ತಿಗಿಲ್ಲ ನೆಮ್ಮದಿ
Brindavana Kannada Serial Today Episode Mar 27th: : ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಆಕಾಶ್‌ಗೆ ಮನದ ಭಾವನೆ ಹೇಳಿಕೊಳ್ಳಲು ಪರದಾಡುವ ಸಹನಾ, ಹಳೆ ವಿಡಿಯೊ ನೋಡಿ ಕಣ್ಣೀರು ಹಾಕುವ ಭಾರ್ಗವಿ, ಎಲ್ಲಿಗೆಂದು ಹೇಳದೆ ಪುಷ್ಪಾಳನ್ನು ಕಾರ್‌ನಲ್ಲಿ ಕರೆದ್ಯೊಯ್ದ ಆಕಾಶ್, ಅಣ್ಣನ ಮನೆಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡ್ತಾನಾ?
ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್ 27) ಸಂಚಿಕೆಯಲ್ಲಿ ಸಹನಾಗೆ ಕಾಲ್ ಮಾಡುವ ಆಕಾಶ್ ʼನಿನ್ನೆ ಕಾಲೇಜಿನಲ್ಲಿ ನನ್ನ ಬಳಿ ಏನೋ ಹೇಳಬೇಕು ಅಂತ ಕಾಯ್ತಾ ಇದ್ರರಂತೆ ಏನದು ಹೇಳಿʼ ಎಂದು ಕೇಳುತ್ತಾನೆ. ಆಗ ಸಹನಾ ʼಹೌದು ನಾನು ಮೊನ್ನೆ ಸಿಕ್ಕಾಗಲೂ ಅದನ್ನೇ ಹೇಳೋಕೆ ಅಂತಾನೆ ಬಂದಿದ್ದು, ನಿನ್ನೆ ಕೂಡ ಹೇಳಬೇಕು ಅಂತಿದ್ದೆ, ಆದ್ರೆ ಹೇಳೋಕೆ ಆಗ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅದಕ್ಕೆ ಆಕಾಶ್ ʼಮನದಲ್ಲಿ ಇರುವುದನ್ನು ಹೇಳಿಬಿಡಬೇಕು, ಸಮಯಕ್ಕಾಗಿ ಕಾಯಬಾರದುʼ ಎನ್ನುತ್ತಾನೆ. ಅವನ ಮಾತು ಕೇಳಿ ಇನ್ನೇನು ತನ್ನ ಮನದಲ್ಲಿರುವ ಭಾವನೆಗಳನ್ನು ಹೇಳಿ ಬಿಡಬೇಕು ಅಂದುಕೊಳ್ಳುತ್ತಾಳೆ, ಅಷ್ಟೊತ್ತಿಗ ಸರಿಯಾಗಿ ಭಾರ್ಗವಿ ಅಲ್ಲಿಗೆ ಬರ್ತಾಳೆ, ಕೂಡಲೇ ಮಾತು ನಿಲ್ಲಿಸುವ ಸಹನಾ ಆಕಾಶ್‌ಗೆ ಬಾಯ್ ಹೇಳಿ ಕಾಲ್ ಕಟ್ ಮಾಡ್ತಾಳೆ. ಮಗಳ ಬಳಿ ಯಾರ ಕಾಲ್ ಎಂದು ಕೇಳುವ ಭಾರ್ಗವಿಗೆ ಫ್ರೆಂಡ್ ಎಂದು ಹೇಳಿ ಮಾತು ಮರೆಸುತ್ತಾಳೆ ಸಹನಾ. ಆದರೆ ಮಗಳ ವರ್ತನೆ ಭಾರ್ಗವಿಯ ಮನದಲ್ಲಿ ಅನುಮಾನ ಮೂಡುವಂತೆ ಮಾಡುತ್ತದೆ.
ಲಾಡು ತಿನ್ನುವ ಭರದಲ್ಲಿ ಗಂಟಲಿಗೆ ಸಿಕ್ಕಿ ಸತ್ಯಮೂರ್ತಿ ಅವಾಂತರ
ಭಾರ್ಗವಿಯ ಬಗ್ಗೆಯೇ ಚಿಂತಿಸುವ ಸುಧಾಮೂರ್ತಿ ʼನಾನು ಏನು ಆಗಬಾರದು ಎಂದುಕೊಂಡಿದ್ದೆನೋ ಅದೇ ಆಗಿದೆ. ಈ ಭಾರ್ಗವಿ ನಮ್ಮ ಮನೆಯ ನೆಮ್ಮದಿ ಕೆಡಿಸಿಯೇ ತೀರುತ್ತಾಳೆ. ನಮ್ಮ ಮನೆಯ ಪರಿಸ್ಥಿತಿ ಮುಂದೇನುʼ ಎಂದು ಯೋಚಿಸಿ ಯೋಚಿಸಿ ಭಯ ಪಡುತ್ತಾರೆ.
ಇತ್ತ ಅತ್ತೆ (ಸುಧಾಮೂರ್ತಿ) ಲಾಡು ತಿನ್ನಬಾರದು ಎಂದು ವಾರ್ನಿಂಗ್ ಮಾಡಿದ್ದರೂ ಕೂಡ, ಲಾಡನ್ನು ಕದ್ದು ತರುವ ಸತ್ಯಮೂರ್ತಿ ಹೇಗಾದ್ರೂ ಲಾಡು ತಿನ್ನಬೇಕು ಎಂದು ನಿರ್ಧಾರ ಮಾಡುತ್ತಾರೆ. ಆ ಕಡೆಯಿಂದ ಹೆಂಡತಿ ಬರುವುದು ನೋಡಿ ಎರಡೂ ಲಾಡನ್ನು ಒಟ್ಟಿಗೆ ಬಾಯಿಗೆ ತುರುಕಿಕೊಳ್ಳುತ್ತಾರೆ. ಆ ಭರದಲ್ಲಿ ಲಾಡು ಗಂಟಲಿಗೆ ಸಿಕ್ಕಿ ಅವಾಂತರವಾಗುತ್ತದೆ. ಹೆಂಡತಿ ಅಲಮೇಲು ಸತ್ಯಮೂರ್ತಿಯ ಬೆನ್ನಿಗೆ ಗುದ್ದಿಸಿ ಲಾಡು ಹೊರ ತೆಗೆಯಲು ಸಹಾಯ ಮಾಡ್ತಾರೆ. ಅಷ್ಟೊತ್ತಿಗೆ ಮನೆಯವರೆಲ್ಲ ಅಲ್ಲಗೆ ಬರ್ತಾರೆ ಮಾತ್ರವಲ್ಲ, ಸತ್ಯಮೂರ್ತಿ ಸ್ಥಿತಿ ಕಂಡು ಅವರನ್ನು ಅಪಹಾಸ್ಯ ಮಾಡುತ್ತಾರೆ.
ವಿಡಿಯೊ ನೋಡಿ ಕಣ್ಣೀರು ಹಾಕುವ ಭಾರ್ಗವಿ
ಸುಧಾಮೂರ್ತಿ ಮುಂದೆ ನಾನು ದೀನಳಾಗಿ ಬೇಡಿಕೊಳ್ಳುತ್ತಿರುವ ಹಳೆಯ ವಿಡಿಯೊ ನೋಡಿ ಕಣ್ಣೀರು ಸುರಿಸುತ್ತಾ ಕುಳಿತಿರುತ್ತಾಳೆ ಭಾರ್ಗವಿ. ಆಗ ಅಲ್ಲಿಗೆ ಬರುವ ಸಹನಾ ತಾಯಿಯ ಕೈಯಿಂದ ಫೋನ್ ಕಿತ್ತು ʼಮಾಮ್, ಹಳೆಯ ನೆನಪುಗಳು ಹೆಣ ಇದ್ದ ಹಾಗೆ ಅವುಗಳನ್ನು ಬಹಳ ದಿನ ಹೊರಲು ಆಗುವುದಿಲ್ಲ. ನೀನ್ಯಾಕೆ ಈ ವಿಡಿಯೊ ನೋಡಿ ಮನಸ್ಸು ನೋಯಿಸಿಕೊಳ್ತೀಯಾ, ಅದನ್ನು ನೋಡೋಕೆ ಹೋಗಬೇಡʼ ಎಂದು ಬುದ್ಧಿವಾದ ಹೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯಸುವ ಭಾರ್ಗವಿ ʼನಾನು ಮನಸ್ಸು ನೋಯಿಸಿಕೊಳ್ಳಲು ವಿಡಿಯೊ ನೋಡ್ತಿಲ್ಲ ಸ್ವೀಟಿ, ದ್ವೇಷದ ಜ್ವಾಲೆ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ವಿಡಿಯೊ ನೋಡ್ತಿದ್ದೇನೆ. ನನಗೆ ನೋವು ಕೊಟ್ಟವರನ್ನ ಮರೆಯಬಾರದು ಎಂಬ ಕಾರಣಕ್ಕೆ ವಿಡಿಯೊ ನೋಡ್ತೀದ್ದೇನೆʼ ಎಂದು ಪ್ರತಿಕಾರದ ಮಾತನ್ನಾಡುತ್ತಾಳೆ. ಆದರೆ ಯಾವುದೇ ಕಾರಣಕ್ಕೂ ತಾನು ದ್ವೇಷ ಮಾಡುತ್ತಿರುವವರು ಯಾರು, ದ್ವೇಷಕ್ಕೆ ಕಾರಣ ಏನು ಎಂಬುದನ್ನು ಮಗಳಿಗೆ ಹೇಳುವುದಿಲ್ಲ. ತಾಯಿಯ ನೋವು ಕಂಡ ಸಹನಾ ʼನಿನ್ನ ನೋವಿಗೆ ಯಾರು ಕಾರಣ ಅವರನ್ನು ಸುಮ್ಮನೆ ಬಿಡಬೇಡ ಮಾಮ್, ನೀನಿಷ್ಟು ನೋವಲ್ಲಿ ಇದ್ದೀಯಾ ಅಂದ್ರೆ ಅವರು ನಿನಗೆ ಇನ್ನೆಷ್ಟು ನೋವು ಕೊಟ್ಟಿರಬೇಕುʼ ಎಂದು ತಾಯಿಯ ದುಃಖ ಕಂಡು ಮರುಗುತ್ತಾಳೆ.
ಇತ್ತ ತಂಗಿಯನ್ನ ನೆನಪು ಮಾಡಿಕೊಳ್ಳುವ ಅಪ್ಪಣ್ಣ ಪುಷ್ಪಾಳಿಗೆ ಕಾಲ್ ಮಾಡಿ ಮಾತಾಡ್ತಾನೆ. ನಿನ್ನನ್ನು ನೋಡಬೇಕು ಅನ್ನಿಸುತ್ತಿದೆ ಎಂದು ಹೇಳಿ ಮನೆಯವರ ಆರೋಗ್ಯ ವಿಚಾರಿಸುತ್ತಾನೆ. ಅದಕ್ಕೆ ಪುಷ್ಪಾ ʼನನಗೂ ನಿನ್ನನ್ನು ನೋಡಬೇಕು ಅನ್ನಿಸ್ತಿದೆ ಅಣ್ಣಾ, ಆದ್ರೆ ಆಕಾಶ್ ಅವರಿಗೆ ರಜೆ ಇಲ್ಲ. ಅವರಿಗೆ ರಜೆ ಇದ್ದಾಗ ಬರ್ತೀವಿʼ ಎಂದು ಅಣ್ಣನಿಗೆ ಸಮಾಧಾನ ಮಾಡಿ ಕಾಲ್ ಕಟ್ ಮಾಡ್ತಾಳೆ.
ಪುಷ್ಪಾಳನ್ನು ಹೊರಗಡೆ ಕರೆದುಕೊಂಡು ಹೋಗುವ ಆಕಾಶ್
ಪುಷ್ಪಾಳನ್ನು ಇನ್ನೊಮ್ಮೆ ಹೊರಗಡೆ ಕರೆದುಕೊಂಡು ಹೋಗಲು ಪ್ಲಾನ್ ಮಾಡುತ್ತಾನೆ ಆಕಾಶ್. ಅದಕ್ಕಾಗಿ ಮನೆಯವರ ಬಳಿ ಪರ್ಮಿಶನ್ ಕೂಡ ಕೇಳುತ್ತಾನೆ. ಆದರೆ ಎಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಮನೆಯವರಿಗೂ ಹೇಳುವುದಿಲ್ಲ. ಇತ್ತ ಪುಷ್ಪಾಗೂ ಹೇಳುವುದಿಲ್ಲ. ಕಾರ್ ಹತ್ತಿದ ಮೇಲೆ ಪುಷ್ಪಾ ಬಳಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಕೇಳೋಲ್ವಾ ಅಂತಾನೆ, ಅದಕ್ಕೆ ಪುಷ್ಪಾ ನೀವು ಎಲ್ಲಿಗೆ ಕರೆದುಕೊಂಡು ಹೋದ್ರು ನಾನು ಬರ್ತೀನಿ. ನಂಗೆ ನಿಮ್ಮ ಮೇಲೆ ನಂಬಿಕೆ ಇದೆ. ನಿಮ್ಮ ಜೊತೆ ಇರುವುದೇ ನನಗೆ ಖುಷಿ ಎಂದು ಮತ್ತೊಮ್ಮೆ ಗಂಡನ ಮೇಲೆ ಅಭಿಮಾನ ವ್ಯಕ್ತಪಡಿಸುತ್ತಾಳೆ.
ಭಾರ್ಗವಿ ದ್ವೇಷಕ್ಕೆ ಸಹನಾ ಕೂಡ ಜೊತೆಯಾಗ್ತಾಳಾ, ಸಹನಾ ಪ್ರೀತಿಯನ್ನು ಆಕಾಶ್ ಒಪ್ಪಿಕೊಂಡ್ರೆ ಮುಂದೇನಾಗಬಹುದು, ಆಕಾಶ್ ಪುಷ್ಪಾಳನ್ನು ಕರೆದುಕೊಂಡು ಹೋಗುತ್ತಿರುವುದು ಎಲ್ಲಿಗೆ? ಈ ಎಲ್ಲವನ್ನು ನೋಡಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.