ಕನ್ನಡ ಸುದ್ದಿ  /  Entertainment  /  Why Famous Commentator Kapil Sharma Tried To Commit Suicide In 2017?

2017ರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಖ್ಯಾತ ನಿರೂಪಕ ಕಪಿಲ್‌ ಶರ್ಮಾ? ಅಂದಿನ ಘಟನೆಯನ್ನು ನೆನೆದು ಕಪಿಲ್‌ ಹೇಳಿದ್ದೇನು?

ಹಿಂದಿಯ ಖ್ಯಾತ ನಿರೂಪಕ, ನಟ ಕಪಿಲ್‌ ಶರ್ಮಾ 2017ರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಅಂದಿನ ಅವರ ಆ ನಿರ್ಧಾರಕ್ಕೆ ಕಾರಣವೇನು? ಅಂದಿನ ಘಟನೆಗಳನ್ನು ಇಂದು ಅವರು ನೆನಪಿಸಿಕೊಂಡಿದ್ದೇಕೆ? ಬದುಕಿನಲ್ಲಿ ಸೋತು ಖಿನ್ನತೆಗೆ ಒಳಗಾದವರಿಗೆ ಕಪಿಲ್‌ ಹೇಳುವುದೇನು?

ಕಪಿಲ್‌ ಶರ್ಮಾ
ಕಪಿಲ್‌ ಶರ್ಮಾ

ಖ್ಯಾತ ನಿರೂಪಕ, ಹಾಸ್ಯನಟ ಕಪಿಲ್‌ ಶರ್ಮಾ ತಮ್ಮ ಜೀವನದ ಕೆಟ್ಟ ಗಳಿಗೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ 2017ರಲ್ಲಿ ನಾನು ಜೀವನಕ್ಕೆ ಅಂತ್ಯ ಹಾಡಲು ಹೊರಟಿದ್ದೆ ಎಂಬ ಅಘಾತಕಾರಿ ವಿಷಯವನ್ನು ಬಚ್ಚಿಟ್ಟಿದ್ದಾರೆ. ಕಪಿಲ್‌ ನಟನೆ ʼಕಿಸ್‌ ಕಿಸ್ಕೊ ಪ್ಯಾರ್‌ ಕರೂನ್‌ʼ ಸಿನಿಮಾದ ಸೋಲು ಹಾಗೂ ಅದೇ ವರ್ಷ ಕಪಿಲ್‌ ಶರ್ಮಾ ಷೋನಲ್ಲಿ ಖ್ಯಾತ ಹ್ಯಾಸನಟ ಸುನಿಲ್‌ ಗ್ರೋವರ್‌ ಅವರೊಂದಿಗೆ ನಡೆದ ಜಗಳದ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದರಂತೆ ಕಪಿಲ್‌. ಹಿಂದಿನ ದಿನಗಳನ್ನು ನೆನೆದ ಕಪಿಲ್‌ ಶರ್ಮಾ, ಇದನ್ನು ಕಲಿಕೆಯ ಅನುಭವ ಎಂದಿದ್ದಾರೆ, ಅಲ್ಲದೆ ಅದರಿಂದ ಚೇತರಿಸಿಕೊಂಡು ಬದುಕುವ ದಾರಿ ಕಂಡುಕೊಂಡೆ ಎಂದು ಆತ್ಮವಿಶ್ವಾಸ ಮಾತುಗಳನ್ನಾಡಿದ್ದಾರೆ.

ಸದ್ಯ ಕಪಿಲ್‌ ನಂದಿತಾ ದಾಸ್‌ ನಿರ್ದೇಶನದ ʼಜ್ವಿಗಾಟೊʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಫುಡ್‌ ಡೆಲಿವರಿ ಏಜೆಂಟ್‌ ಪಾತ್ರ. ಚಿತ್ರದಲ್ಲಿ ಸಹನಾ ಗೋಸ್ವಾಮಿ ಕಪಿಲ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವು ಇದೇ ಮಾರ್ಚ್‌ 17ರಂದು ಬಿಡುಗಡೆಯಾಗಲಿದೆ.

ಜ್ವಿಗಾಟೊ ಚಿತ್ರದ ಪ್ರಮೋಶನ್‌ ವೇಳೆಯಲ್ಲಿ ಕಪಿಲ್‌ ಅವರ ಬಳಿ ʼಜೀವನದಲ್ಲಿ ಖಿನ್ನತೆಗೆ ಒಳಗಾಗಿ, ಕುಗ್ಗಿ ಹೋದವರಿಗೆ ನಿಮ್ಮ ಸಲಹೆ ಏನುʼ ಎಂಬ ಪ್ರಶ್ನೆ ಕೇಳಲಾಗಿತ್ತು. ಆ ವೇಳೆ ತಮ್ಮ ಜೀವನದ ಕೆಟ್ಟ ಗಳಿಗೆಗಳನ್ನು ನೆನಪಿಸಿಕೊಂಡಿದ್ದಾರೆ ಈ ನಟ.

ಆಜ್‌ತಕ್‌ ಹಿಂದಿಯ ʼಸೀದಿ ಬಾತ್‌ʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʼಒಬ್ಬ ಸೆಲೆಬ್ರಿಟಿಯಾಗಿ ನಾವು ಸಾವಿರಾರು ಜನಕ್ಕೆ ಪರಿಚಯವಾಗಿರುತ್ತೇವೆ. ಅಲ್ಲದೆ ಅವರನ್ನು ಮನರಂಜಿಸಿರುತ್ತೇವೆ. ಆದರೆ ಮನೆಗೆ ಬಂದಾಗ ನಾವು ಒಂಟಿಯಾಗಿರುತ್ತೇವೆ. ಸೆಲೆಬ್ರಿಟಿ ಅನ್ನಿಸಿಕೊಂಡ ಮೇಲೆ ಸಮುದ್ರತೀರದಲ್ಲಿ ಹೋಗಿ ಕುಳಿತು ಅಲೆಗಳ ಎದುರು ನಮ್ಮ ದುಃಖವನ್ನು ತೋಡಿಕೊಳ್ಳುವ ಅವಕಾಶವೂ ಇರುವುದಿಲ್ಲ. ಎರಡು ಕೊಠಡಿ ಇರುವ ಫ್ಲ್ಯಾಟ್‌ನಲ್ಲಿ ಬದುಕುತ್ತಿರುತ್ತೇವೆ. ಸಂಜೆಯಾದ ಮೇಲೆ ಕತ್ತಲೆಯಾಗುತ್ತದೆ, ಆದರೆ ಆ ಸಮಯದಲ್ಲಿ ನಮ್ಮನ್ನು ಆವರಿಸುವ ಕೆಟ್ಟ ಆಲೋಚನೆಗಳನ್ನು ವಿವರಿಸಲು ಆಗುವುದಿಲ್ಲʼ ಎಂದು ಸೆಲೆಬ್ರಿಟಿ ಜೀವನದ ಮಾನಸಿಕ ತುಮುಲಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ.

ʼನೀವು ಎಂದಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದೀರಾ?ʼ ಎಂದು ಕಪಿಲ್‌ ಅವರಲ್ಲಿ ಕೇಳಿದಾಗ ʼನಾನು ಸೋತಾಗ, ಆ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದೆ. ನನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ನನ್ನೊಂದಿಗೆ ಯಾರೂ ಇಲ್ಲ ಎಂದು ಭಾವಿಸಿದ್ದೆ. ನಾನು ಬಂದಿರುವ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಮಾಡುವ ಹಾಗೆಯೂ ಇರಲಿಲ್ಲ. ಆದರೆ ಇದು ನನಗೆ ಮೊದಲ ಬಾರಿಯ ಅನುಭವವಲ್ಲ. ನಾನು ಬಾಲ್ಯದಲ್ಲಿದ್ದಾಗ ಯಾವುದಾದರೂ ಘಟನೆಗಳಿಂದ ಕುಗ್ಗಿದಾಗ, ಮಾನಸಿಕ ನೋವು ಅನುಭವಿಸುತ್ತಿದ್ದಾಗ, ಯಾರೂ ಅದನ್ನು ಗಮನಿಸುತ್ತಿರಲಿಲ್ಲ. ಒಮ್ಮೆ ನೀವು ಹಣ ಸಂಪಾದನೆಯ ಉದ್ದೇಶದಿಂದ ಮನೆಯಿಂದ ಹೊರಗೆ ಒಬ್ಬಂಟಿಯಾಗಿದ್ದರೆ, ನಿಮ್ಮನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಆದರೆ ಈ ಸಮಯದಲ್ಲಿ ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು, ಅದೇನೆಂದರೆ ನಿಮ್ಮ ಸುತ್ತಲಿನ ಜನರು ನಿಮ್ಮ ಮೇಲೆ ಕೆಟ್ಟ ಉದ್ದೇಶಗಳನ್ನು ಇರಿಸಿಕೊಂಡೇ ನಿಮ್ಮನ್ನು ಮಾತನಾಡಿಸುತ್ತಾರೆ ಹೊರತು, ಅವರಲ್ಲಿ ಒಳ್ಳೆಯ ಉದ್ದೇಶ ಇರುವುದಿಲ್ಲ. ಅದರಲ್ಲೂ ಕಲಾವಿದರಾದವರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಆದರೆ ಒಮ್ಮೆ ನೀವು ಆ ಕೆಟ್ಟ ಗಳಿಗೆಗಳನ್ನು ದಾಟಿ ಮುಂದೆ ಬಂದರೆ ನಿಮ್ಮ ಸುತ್ತಲಿನ ಪ್ರಪಂಚವನ್ನು ಗುರುತಿಸಲು ಆರಂಭಿಸುತ್ತೀರಿ. ನಿಮ್ಮ ಕಣ್ಣುಗಳನ್ನು ತೆರೆದು ಪ್ರಪಂಚವನ್ನು ನೋಡುತ್ತೀರಿ. ಒಬ್ಬ ಕಲಾವಿದ ಸೂಕ್ಷ್ಮಜೀವಿ ಎಂದರೆ ಅವನು ಮೂರ್ಖ ಎಂದರ್ಥವಲ್ಲʼ ಎನ್ನುವ ಮೂಲಕ ತಮ್ಮ ಜೀವನದ ಹಿಂದಿನ ಘಟನೆಗಳು ಹಾಗೂ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ʼಜೀವನದಲ್ಲಿ ಸಂತೋಷ, ದುಃಖ ಯಾವುದೂ ಶಾಶ್ವತವಲ್ಲ. ಇಂತಹ ಘಟನೆಗಳು ನಡೆಯುವುದು ಒಳ್ಳೆಯದು, ಇದರಿಂದ ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯʼ ಎಂದಿದ್ದಾರೆ ಕಪಿಲ್‌.

IPL_Entry_Point

ವಿಭಾಗ