Dheeren Ramkumar: ‘ಪ್ರತಿ ಪೀಳಿಗೆಗೂ ಸದಾ ಸ್ಫೂರ್ತಿ ನೀವು’; ಅಪ್ಪು ಮಾಮನ ದಾರಿಯಲ್ಲಿ ಅಳಿಯ ಧೀರೇನ್ ರಾಮ್‌ಕುಮಾರ್..
ಅಪ್ಪು ಮಾಮನಿಗಾಗಿ ವಿಶೇಷ ಹಾಡಿಗೆ ಧ್ವನಿಯಾಗಿದ್ದಾರೆ ಧೀರೇನ್ ರಾಮ್‌ಕುಮಾರ್. ವಂಶಿ ಚಿತ್ರದ ಈ ಹಾಡಿಗೆ ಅಷ್ಟೇ ಸುಮಧುರ ಕಂಠ ನೀಡಿದ್ದಾರೆ ಧೀರೇನ್.
Dheeren Ramkumar: ಇಂದು (ಮಾ. 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಈ ದಿನವನ್ನು ಪುನೀತ್ ಅವರ ಅನುಪಸ್ಥಿತಿಯಲ್ಲಿಯೇ ಅಭಿಮಾನಿ ಬಳಗ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಪ್ರತಿ ಕ್ಷಣವೂ ಅವರನ್ನು ಸಂಭ್ರಮಿಸುವುದೊಂದೇ ನಮ್ಮ ಕೆಲಸವೆಂದು ಅವರನ್ನೇ ಸ್ಫೂರ್ತಿಯಾಗಿಸಿಕೊಂಡು ಸಾಮಾಜಿಕ ಕಳಕಳಿಯ ಕೆಲಸಕ್ಕೆ ಧುಮುಕುತ್ತಿದ್ದಾರೆ. ಇತ್ತ ಸಮಾಧಿ ಬಳಿಯೂ ಈ ವಿಶೇಷ ದಿನದ ನಿಮಿತ್ತ ಕುಟುಂಬದಿಂದ ಪೂಜೆ ಪುನಸ್ಕಾರಗಳೂ ನಡೆಯಲಿವೆ.
ಸೋಷಿಯಲ್ ಮೀಡಿಯಾದಲ್ಲಿಯೂ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಹಂಚುತ್ತಿದ್ದಾರೆ. ಹರಡುತ್ತಿದ್ದಾರೆ. ಅವರೊಂದಿಗಿನ ಬೆಲೆ ಕಟ್ಟಲಾಗದ ಫೋಟೋವನ್ನು ಶೇರ್ ಮಾಡಿಕೊಂಡು ಮತ್ತೆ ಕರ್ನಾಟಕದಲ್ಲಿಯೇ ಹುಟ್ಟಿ ಬನ್ನಿ ಎಂದು ಕೋರುತ್ತಿದ್ದಾರೆ. ಈ ನಡುವೆ ಡಾ. ರಾಜ್ ಕುಟುಂಬದ ಕುಡಿ, ರಾಮ್‌ಕುಮಾರ್ ಮತ್ತು ಪೂರ್ಣಿಮಾ ದಂಪತಿಯ ಪುತ್ರ ಧೀರೇನ್ ರಾಮ್‌ಕುಮಾರ್ ಪುನೀತ್ ಹಾದಿಯಲ್ಲಿಯೇ ಹೊರಟಿದ್ದಾರೆ.
ಪುನೀತ್ ರೀತಿ ಗಾಯನ...
ಈ ಹಿಂದೆ ಅಪ್ಪಾಜಿ ವರನಟ ಡಾ. ರಾಜ್‌ಕುಮಾರ್ ಅವರ ಬರ್ತ್‌ಡೇ ಪ್ರಯುಕ್ತ ಸ್ಟುಡಿಯೋದಲ್ಲಿ ನಿಂತು ನಿನ್ನ ಕಂಗಳ ಬಿಸಿಯ ಹನಿಗಳು.. ಗೀತೆಗೆ ಪುನೀತ್ ಧ್ವನಿಯಾಗಿದ್ದರು. ಆ ಗೀತೆ ಡಾ. ರಾಜ್ ಅವರ ಮೂಲ ಹಾಡಿಗಿಂತಲೂ ಹೆಚ್ಚು ಜನಪ್ರಿಯ ಗಳಿಸಿತ್ತು. ಇದೀಗ ಅದೇ ರೀತಿ ಧೀರೇನ್ ರಾಮ್‌ಕುಮಾರ್ ವಂಶಿ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಆ ಹಾಡನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
"ಪ್ರತಿ ಪೀಳಿಗೆಗೂ ಸದಾ ಸ್ಫೂರ್ತಿ ನೀವು. ಅಪ್ಪು ಮಾಮಾ ಅವರ ಜನ್ಮದಿನಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಅಭಿಮಾನಿಗಳೇ ನಮ್ಮ ಮನೆ ದೇವರು" ಎಂದು ಕ್ಯಾಪ್ಶನ್ ನೀಡಿದ್ದಾರೆ. ಧೀರೇನ್ ಹಾಡನ್ನು ಕಂಡ ಅಭಿಮಾನಿಗಳು "ನಿಮ್ಮ ಧ್ವನಿಯೂ ಪುನೀತ್ ಅವರಂತೆಯೇ ಇದೆ" ಎಂದು ಕಮೆಂಟ್ ಮಾಡುತ್ತಿದ್ದಾರೆ.
ಪುನೀತ್ ಕಂಠದಲ್ಲಿ ಮೂಡಿಬಂದಿದ್ದ ಹಾಡು ಇಲ್ಲಿದೆ..
ಈ ಸಲದ ಪುನೀತ್ ರಾಜ್‌ಕುಮಾರ್ ಬರ್ತ್‌ಡೇಯ ಐದು ವಿಶೇಷತೆಗಳಿವು..
ಪ್ರೈಂನಲ್ಲಿ ಗಂಧದ ಗುಡಿ ಸ್ಟ್ರೀಮಿಂಗ್..
ಪುನೀತ್ ಬರ್ತ್‌ಡೇ ಪ್ರಯುಕ್ತ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಗಂಧದಗುಡಿ ಸ್ಟ್ರೀಮ್ ಆಗುತ್ತಿದೆ. ಕರ್ನಾಟಕದ ಕಣ್ಮನ ಸೆಳೆಯುವ ನಿಸರ್ಗ ಮತ್ತು ಅಮೋಘ ಸಂಸ್ಕೃತಿಯನ್ನು ಒಳಗೊಂಡಿರುವ 'ಗಂಧದಗುಡಿ' - ಜರ್ನಿ ಆಫ್ ಎ ಟ್ರೂ ಹೀರೋ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ.
ಯುವರತ್ನ ಮರು ಬಿಡುಗಡೆ
ಪುನೀತ್ ಬರ್ತ್‌ಡೇ ಪ್ರಯುಕ್ತ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಯುವರತ್ನ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, 2021ರಲ್ಲಿ ಬಿಡುಗಡೆ ಆಗಿತ್ತು.
ನರ್ತಕಿ ಚಿತ್ರಮಂದಿರದ ಬಳಿ ಕಟೌಟ್...
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪುನೀತ್ ರಾಜ್‌ಕುಮಾರ್, ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ, ಅವರೀಗ 48ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿರುತ್ತಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿಯೇ ಬೆಂಗಳೂರಿನ ಗಾಂಧಿನಗರದಲ್ಲಿನ ನರ್ತಕಿ ಚಿತ್ರಮಂದಿರದ ಮುಂಭಾಗದಲ್ಲಿ ಬರ್ತ್‌ಡೇ ಪ್ರಯುಕ್ತ ಪುನೀತ್ ಅವರ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ವಿಶೇಷ ಹೂವಿನ ಮಾಲೆಯನ್ನೂ ಮಾಡಿ ಹಾಕುವ ಕೆಲಸ ಪ್ರಗತಿಯಲ್ಲಿದೆ.
ಪುನೀತ್‌ಗಾಗಿ ಕಥಾ ಗಾನಂ ವಿಶೇಷ ಗೀತೆ
ಬಿವಿಎಂ ಪ್ರೊಡಕ್ಷನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪುನೀತ್ ಅವರ ಜಯಂತಿ ಪ್ರಯುಕ್ತ ವಿಶೇಷ ಹಾಡೊಂದು ಬಿಡುಗಡೆ ಆಗಿದೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿರುವ ಈ ಗೀತೆಗೆ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ. ಬಿವಿಎಂ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ.
ಕಬ್ಜ ಬಿಡುಗಡೆ...
ಪುನೀತ್ ಬರ್ತ್‌ಡೇ ಪ್ರಯುಕ್ತ ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಇಂದು (ಮಾ. 17) ಬಿಡುಗಡೆ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿಯೂ ಬಿಡುಗಡೆ ಆಗಿದೆ.