ಕನ್ನಡ ಸುದ್ದಿ  /  Karnataka  /  Aimim Releases The First List Of Candidates For Karnataka Assembly Polls

Asaduddin Owaisi: ರಾಜ್ಯ ವಿಧಾನಸಭೆ ಚುನಾವಣೆ; ಎಐಎಂಐಎಂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಓವೈಸಿ

ಮುಂಬರುವ ಕರ್ನಾಟಕ ಹಾಗೂ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘೋಷಿಸಿದ್ದಾರೆ.

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಫೋಟೋ-PTI)
ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಫೋಟೋ-PTI)

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಎಎಪಿ ಈಗಾಗಲೇ ಭರ್ಜರಿ ಚುನಾವಣಾ ಪ್ರಚಾರಗಳನ್ನು ಆರಂಭಿಸಿವೆ. ಇದರ ನಡುವೆ ಒಂದಿಷ್ಟು ಇತರೆ ಪಕ್ಷಗಳು ಕೂಡ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಪೈಪೋಟಿ ನಡೆಸಲಿವೆ.

ಇದೀಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ - ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರ್ನಾಟಕ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಳಿದಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇವತ್ತು(ಮಾರ್ಚ್ 5, ಭಾನುವಾರ) ಘೋಷಣೆ ಮಾಡಿದ್ದಾರೆ.

ಎಐಎಂಐಎಂ ನ ಮೊದಲ ಪಟ್ಟಿಯಲ್ಲಿ ಮೂರು ಹೆಸರುಗಳನ್ನು ಪಕ್ಷದಿಂದ ಘೋಷಿಸಲಾಗಿದ್ದು, ಇನ್ನಷ್ಟು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಎಐಎಂಐಎಂ ಪಕ್ಷದ ಮೂಲಗಳ ಪ್ರಕಾರ, ಬೆಳಗಾವಿ ಉತ್ತರದಿಂದ ಲತೀಫ್ ಖಾನ್ ಅಮೀರ್ಖಾನ್ ಪಠಾಣ್, ಹುಬ್ಬಳ್ಳಿ ಧಾರವಾಡ ಪೂರ್ವದಿಂದ ದುರ್ಗಪ್ಪ ಕಾಶಪ್ಪ ಬಿಜವಾಡ ಹಾಗೂ ಬಸವನ ಬಾಗೇವಾಡಿಯಿಂದ ಅಲ್ಲಾಬಕ್ಷ್ ಮೆಹಬೂಬ್ ಸಾಬ್ ಬಿಜಾಪುರ್ ಅವರು ಅಭ್ಯರ್ತಿಗಳು. ಇವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದೆ.

ಕರ್ನಾಟಕ ಮತ್ತು ರಾಜಸ್ಥಾನ ಎರಡರಲ್ಲೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಳೆದ ಗುರುವಾರ ಹೇಳಿದ್ದರು. ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಿಜೆಪಿಯ ದ್ವೇಷ ರಾಜಕಾರಣವನ್ನು ಎದುರಿಸಲು ಹಾಗೂ ಹೊಲಸು ರಾಜಕಾರಣವನ್ನು ಹೊರ ಹಾಕಲು ಪಕ್ಷದ ಕಾರ್ಯಕರ್ತರು ಅದರ ಶ್ರಮಿಸಬೇಕು ಎಂದಿದ್ದಾರೆ.

ತೆಲಂಗಾಣ ಕೋಮು ದ್ವೇಷದಿಂದ ಮುಕ್ತವಾಗಿದೆ. ವಾಸ್ತವವಾಗಿ ತೆಲಂಗಾಣದ ಜಿಡಿಪಿ ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಿಂತ ಹೆಚ್ಚಾಗಿದೆ. ಮತದಾನ ಮಾಡಲು ಹೊರಡುವ ಮೊದಲು ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್‌ಗಳಿಗೆ ‘ನಮಸ್ಕಾರ’ ಮಾಡುವಂತೆ ನಾನು ಎಲ್ಲ ರಾಜ್ಯಗಳ ಜನರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಎಐಎಂಐಎಂ ಸ್ಪರ್ಧಿಸುತ್ತಿದೆ.

ಜೆಡಿಎಸ್ ಬಹುತೇಕ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಂದಿಷ್ಟು ಕ್ಷೇತ್ರಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಷ್ಟೇ ಅಭ್ಯರ್ತಿಗಳ ಹೆಸರುಗಳನ್ನು ಘೋಷಣೆ ಮಾಡಬೇಕಿದೆ. ಇದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ರಾಜ್ಯದಲ್ಲಿ ಈ ಬಾರಿ ಎಂ3 ಹೆಸರಿನ ಸುಧಾರಿತ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಈ ಮತಯಂತ್ರ ಹಿಂದಿನ ಮತಯಂತ್ರಕ್ಕಿಂತ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಮತಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಒಂದೇ ಬಾರಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 384 ಅಭ್ಯರ್ಥಿಗಳ ತನಕ ಮತ ಹಾಕಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಎಂ3 ಮತಯಂತ್ರದ ಕಂಟ್ರೋಲ್ ಯೂನಿಟ್ ಗೆ 24 ಬ್ಯಾಲೇಟ್ ಯೂನಿಟ್ ಗಳನ್ನು ಒಂದೇ ಬಾರಿಗೆ ಸಂಪರ್ಕ ಕಲ್ಪಿಸಬಹುದಾಗಿದೆ.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ 7 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,083 ಮತಗಟ್ಟೆಗಳಿದ್ದು, ಈ ಬಾರಿಯ ಚುನಾವಣೆಗೆ ಕನಿಷ್ಠ 15 ಸಾವಿರ ಸಿಬ್ಬಂದಿ ಅವಶ್ಯಕತೆಯಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಬಾರಿ ಒಂದು ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಏಪ್ರಿಲ್ ಅಥವಾ ಮೇ ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದು, ಈ ಬಾರಿ ಎಎಪಿಯೂ ಸಮಾವೇಶಗಳ ಮೂಲಕ ಸದ್ದು ಮಾಡುತ್ತಿದೆ.

IPL_Entry_Point