ಕನ್ನಡ ಸುದ್ದಿ  /  Karnataka  /  Ashwath Narayan Talks With Wdo About 'Karnataka Design Policy'

Karnataka Design Policy: 'ಕರ್ನಾಟಕ ಡಿಸೈನ್‌ ನೀತಿ' ಸಂಬಂಧ ಡಬ್ಲ್ಯುಡಿಒ ಜತೆ ಅಶ್ವತ್ಥ ನಾರಾಯಣ ಚರ್ಚೆ

ಗರಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವಾಕಾಂಕ್ಷೆಯಿಂದ 'ಕರ್ನಾಟಕ ಡಿಸೈನ್ ನೀತಿ'ಯನ್ನು ರೂಪಿಸುವ ಸಂಬಂಧ ವರ್ಲ್ಡ್ ಡಿಸೈನ್ ಆರ್ಗನೈಸೇಷನ್‌ನ (ಡಬ್ಲ್ಯುಡಿಒ) ಉನ್ನತ ಮಟ್ಟದ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಸೋಮವಾರ ವಿಸ್ತೃತ ಚರ್ಚೆ ನಡೆಸಿತು.

ಡಬ್ಲ್ಯುಡಿಒ ಜತೆ ಅಶ್ವತ್ಥ ನಾರಾಯಣ ಚರ್ಚೆ
ಡಬ್ಲ್ಯುಡಿಒ ಜತೆ ಅಶ್ವತ್ಥ ನಾರಾಯಣ ಚರ್ಚೆ

ಬೆಂಗಳೂರು: ನಗರಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವಾಕಾಂಕ್ಷೆಯಿಂದ 'ಕರ್ನಾಟಕ ಡಿಸೈನ್ ನೀತಿ'ಯನ್ನು ರೂಪಿಸುವ ಸಂಬಂಧ ವರ್ಲ್ಡ್ ಡಿಸೈನ್ ಆರ್ಗನೈಸೇಷನ್‌ನ (ಡಬ್ಲ್ಯುಡಿಒ) ಉನ್ನತ ಮಟ್ಟದ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಸೋಮವಾರ ವಿಸ್ತೃತ ಚರ್ಚೆ ನಡೆಸಿತು.

ಈ ಚರ್ಚೆಯಲ್ಲಿ ಐಟಿಬಿಟಿ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ, ಸರಕಾರದ ಪರವಾಗಿ ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಡಬ್ಲ್ಯುಡಿಒ ಪರವಾಗಿ ಅದರ ಅಧ್ಯಕ್ಷ ಡಾ.ಡೇವಿಡ್‌ ಕುಸುಮ, ಆಡಳಿತ ಮಂಡಲಿಯ ಸದಸ್ಯ ಪ್ರೊ.ಪ್ರದ್ಯುಮ್ನ ವ್ಯಾಸ್, ಚೀನಾದ ಶಾಂಘೈನಲ್ಲಿರುವ ಡಿಸೈನ್‌ ಇನ್ನೋವೇಶನ್‌ ಇನ್ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿ ಶ್ರೀನಿವಾಸನ್, ಮಣಿಪಾಲ್‌ ಸಮೂಹದ ಸೃಷ್ಟಿ ಡಿಸೈನ್‌ ಸ್ಕೂಲ್‌ನ ಡಾ.ಗೀತಾ ನಾರಾಯಣನ್‌ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ನಮ್ಮ ನಗರಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸುವ ಸವಾಲಿದೆ. ಈ ದೃಷ್ಟಿಯಿಂದ ಡಿಸೈನ್‌ಗೆ ಸಮಕಾಲೀನ ಜಗತ್ತಿನಲ್ಲಿ ಅಪಾರ ಬೇಡಿಕೆ ಇದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿನಂತಹ ನಗರಗಳನ್ನು ನಾವು ಜನರು ಸುಂದರ ಬದುಕನ್ನು ಕಟ್ಟಿಕೊಳ್ಳುವ ರೀತಿಯಲ್ಲಿ ಬೆಳೆಸಬೇಕಾದ ಸವಾಲಿದೆ. ಹೀಗಾಗಿ, ಡಬ್ಲ್ಯುಡಿಒ ಜತೆ ಈ ವಿಚಾರ ವಿನಿಮಯ ನಡೆಸಲಾಯಿತು" ಎಂದರು.

ಡಬ್ಲ್ಯುಡಿಒ ಅಧ್ಯಕ್ಷ ಡಾ.ಡೇವಿಡ್‌ ಕುಸುಮ ಮಾತನಾಡಿ, "ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ಬೆಳೆಸಬೇಕೆಂದರೆ ಸರಕಾರವು ಬಿಬಿಎಂಪಿಯ ನಗರ ಯೋಜನಾ ವಿಭಾಗ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ, ಸರಕಾರದ ನಗರಾಭಿವೃದ್ಧಿ ಇಲಾಖೆ ತರಹದ ಸಂಸ್ಥೆಗಳೊಂದಿಗೆ ಸರಿಯಾದ ಒಡಂಬಡಿಕೆ ಮಾಡಿಕೊಂಡು, ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯವಾಗಿದೆ" ಎಂದರು.

"ಡಬ್ಲ್ಯುಡಿಓ ಅಧ್ಯಯನದ ಪ್ರಕಾರ ಬೆಂಗಳೂರನ್ನು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಪ್ರೊಟೋಪೊಲಿಸ್‌ ಪರಿಕಲ್ಪನೆಗೆ ಆಯ್ಕೆ ಮಾಡಲು ಅವಕಾಶಗಳಿವೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಏನೇನು ಮಾಡಬೇಕು ಎನ್ನುವುದನ್ನು ಕುರಿತು ಸಚಿವರೊಂದಿಗೆ ಚರ್ಚಿಸಲಾಯಿತು" ಎಂದು ಅವರು ಹೇಳಿದ್ದಾರೆ.

"ಪ್ರೋಟೋಪೊಲಿಸ್‌ ಯೋಜನೆಯು ಪ್ರಗತಿ ಕಾಣಬೇಕೆಂದರೆ ಸರಕಾರವು ಸ್ವತಂತ್ರ ಮೂಲಸೌಕರ್ಯ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕಾದ ಅಗತ್ಯವಿದೆ. ಇದನ್ನು ಅಶ್ವತ್ಥನಾರಾಯಣ ಅವರ ಜತೆ ಚರ್ಚಿಸಲಾಗಿದೆ. ಈ ಕುರಿತು ಚಿಂತಿಸಲು ಮಾರ್ಚ್ ತಿಂಗಳಲ್ಲಿ ವರ್ಲ್ಡ್‌ ಡಿಸೈನ್‌ ಆರ್ಗನೈಸೇಷನ್‌ನ ಆಡಳಿತ ಮಂಡಲಿಯ ಸಭೆ ನಡೆಯಲಿದೆ" ಎಂದು ಅವರು ತಿಳಿಸಿದರು.

ಪಾರ್ಸಿ ಗಾರ್ಡನ್‌ನಲ್ಲಿ ಸಂದಲ್‌ ಉರುಸ್‌ - ಸಚಿವ ಅಶ್ವತ್ಥನಾರಾಯಣ ಭಾಗಿ

ಮಲ್ಲೇಶ್ವರದ ಬಾಂಧವ್ಯ ನಗರದಲ್ಲಿರುವ ಪಾರ್ಸಿ ಗಾರ್ಡನ್‌ನಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಹಮ್ಮಿಕೊಂಡಿದ್ದ ಸಂದಲ್‌ ಉರುಸ್‌ನಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು. ಉರುಸ್‌ಗೆ ಆಗಮಿಸಿದ ಸಚಿವರನ್ನು ಸಮುದಾಯದ ಸದಸ್ಯರು ಸಂಭ್ರಮದಿಂದ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಭಾರತದಲ್ಲಿ ನೂರಾರು ಸಮುದಾಯಗಳು, ಹತ್ತಾರು ಧರ್ಮಗಳು ಸಾವಿರಾರು ವರ್ಷಗಳಿಂದಲೂ ಅನ್ಯೋನ್ಯತೆ ಮತ್ತು ಸೌಹಾರ್ದತೆಯ ಭಾವದಿಂದ ಬದುಕುತ್ತಿವೆ. ಈ ವೈವಿಧ್ಯವು ನಮ್ಮ ಸಮಾಜದಲ್ಲಿ ಶಾಂತಿಗೆ ಕಾರಣವಾಗಿದ್ದು, ಸಮೃದ್ಧಿಯನ್ನು ತಂದಿದೆ" ಎಂದು ಬಣ್ಣಿಸಿದರು.

"ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಸಮುದಾಯಗಳು ಪರಸ್ಪರ ಗೌರವಿಸಬೇಕು. ನಾವೆಲ್ಲರೂ ಸೋದರ-ಸೋದರಿಯರಂತೆ ಕೊಡುಕೊಳ್ಳುವಿಕೆಯ ತತ್ತ್ವವನ್ನು ಆಧರಿಸಿ ಬದುಕಬೇಕು. ಈ ಮೂಲಕ ರಾಜ್ಯ ಮತ್ತು ದೇಶಗಳ ಪ್ರಗತಿಗೆ ನಮ್ಮ ಕಾಣಿಕೆ ಕೊಡಬೇಕು. ಸಾಮುದಾಯಿಕ ನೆಲೆಯ ಬದುಕು ಸಹಬಾಳ್ವೆ ಮತ್ತು ಸಹೋದರತೆಯ ಭಾವನೆಗಳನ್ನು ಬೆಳೆಸುತ್ತವೆ" ಎಂದು ಅವರು ನುಡಿದರು.

"ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮಲ್ಲಿ ಎಂದೂ ಆಕ್ರಮಣಶೀಲತೆ ಕಂಡುಬಂದಿಲ್ಲ. ಇಲ್ಲಿ ಯಾರೂ ಪ್ರತ್ಯೇಕತೆಯ ಭಾವನೆಯನ್ನು ಎಂದಿಗೂ ಬೆಳೆಸಿಕೊಂಡಿಲ್ಲ. ನಮ್ಮಲ್ಲಿನ ಧರ್ಮ ಮತ್ತು ಭಕ್ತಿ ಚಳವಳಿಗಳ ಪ್ರಭಾವವೂ ಈ ನೆಲದಲ್ಲಿದೆ. ಸಹಿಷ್ಣುತೆಯಿಂದಾಗಿ ರಾಜ್ಯವು ಇಂದು ಮೇಲ್ಪಂಕ್ತಿಯಲ್ಲಿದೆ" ಎಂದು ಅವರು ಅಭಿಪ್ರಾಯಪಟ್ಟರು.

IPL_Entry_Point

ವಿಭಾಗ