ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಬೆಂಗಳೂರು ಮೆಟ್ರೋ ಹಳಿಗೆ ಬಿದ್ದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ, ಸಂಚಾರದಲ್ಲಿ ವ್ಯತ್ಯಯ

Namma Metro: ಬೆಂಗಳೂರು ಮೆಟ್ರೋ ಹಳಿಗೆ ಬಿದ್ದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ, ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೆಟ್ರೋದ ಅತ್ತಿಗುಪ್ಪೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಆ ಭಾಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯಗೊಂಡು ಪುನಾರಂಭಗೊಂಡಿದೆ.

ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಕಾನೂನು ವಿದ್ಯಾರ್ಥಿ
ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಕಾನೂನು ವಿದ್ಯಾರ್ಥಿ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಸಂಚರಿಸುತ್ತಿದ್ದ ವೇಳೆಯೇ ಹಳಿ ಮೇಲೆ ಹಾರಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟಿರುವ ಯುವಕನನ್ನು ಮಹಾರಾಷ್ಟ್ರ ಮೂಲದ ಧೃವ್‌ ಠಕ್ಕರ್‌(19) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಸರ್ಕಾರಿ ಕಾನೂನು ಮಹಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಛಿದ್ರಗೊಂಡ ದೇಹ

ಮಧ್ಯಾಹ್ನ 2.10 ರ ಸಮಯದಲ್ಲಿ ಯುವಕನೊಬ್ಬ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದ. ಪರ್ಪಲ್‌ ಲೈನ್‌ನಲ್ಲಿ ರೈಲು ಬರುತ್ತಿದ್ದಂತೆ ಆತ ಏಕಾಏಕಿ ಹಾರಿದ್ದಾನೆ. ಅಲ್ಲಿದ್ದ ಪ್ರಯಾಣಿಕರು ಆಶ್ಚರ್ಯದಿಂದಲೇ ಇದನ್ನು ಗಮನಿಸಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆತನ ದೇಹದ ಭಾಗ ಛಿದ್ರವಾಗಿ ಹೋಗಿವೆ.

ರೈಲು ನಿಲ್ಲಿಸಿ ಕೂಡಲೇ ಸಿಬ್ಬಂದಿ, ಭದ್ರತಾಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಜನರೂ ಕೂಡ ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅವರೂ ಅಲ್ಲಿ ಜಮಾಯಿಸಿದರು. ಪೊಲೀಸರು ಆಗಮಿಸಿ ಮಹಜರು ನಡೆಸಿ ಹಳಿ ಮೇಲೆ ಬಿದ್ದಿದ್ದ ದೇಹದ ಭಾಗಗಳನ್ನು ಸಂಗ್ರಹಿಸಿ ಆಸ್ಪತ್ರೆಗೆ ರವಾನಿಸಿದರು.

ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್‌ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಲ್ಲವೋ ಎನ್ನುವ ಕುರಿತು ಸಿಸಿಟಿವಿ ಫೂಟೇಜ್‌ ಸಹಿತ ಮಾಹಿತಿಗಳು, ಪ್ರತ್ಯಕ್ಷದರ್ಶಿಗಳಿಂದ ವಿವರ ಪಡೆದುಕೊಂಡಿದ್ದಾರೆ.

ಮೆಟ್ರೋದಲ್ಲಿ ಚಲಿಸುತ್ತಿದ್ದ ರೈಲಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಮೊದಲು. ಈ ಕಾರಣದಿಂದ ಸಿಬ್ಬಂದಿಯಲ್ಲೂ ಆತಂಕ ಕಂಡು ಬಂದಿತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನುವುದು ಗೊತ್ತಾಗಿದೆ. ಈ ಕುರಿತು ಪೊಲೀಸ್‌ ತನಿಖೆ ಮುಂದುವರಿದಿದೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಯುವಕನ ಕುರಿತು ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಹಾರಾಷ್ಟ್ರದಿಂದ ಇಲ್ಲಿಗೆ ಕಾನೂನು ಪದವಿ ಶಿಕ್ಷಣಕ್ಕಾಗಿ ಆತ ಆಗಮಿಸಿದ್ದ. ಎಲ್ಲಿ ವಾಸವಿದ್ದ. ಈ ಕೃತ್ಯಕ್ಕೆ ಕಾರಣವಾದರೂ ಏನು ಎನ್ನುವ ಆಯಾಮದಲ್ಲೂ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ಹೊತ್ತು ಸ್ಥಗಿತ

ಘಟನೆ ಹಿನ್ನೆಲೆಯಲ್ಲಿ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸಂಚಾರ ವ್ಯತ್ಯಯಗೊಂಡಿತ್ತು. ವೈಟ್‌ಫೀಲ್ಡ್‌ನಿಂದ ಮಾಗಡಿ ರಸ್ತೆ ನಿಲಾಣದ ಹೊಸಹಳ್ಳಿವರೆಗೆ ಮಾತ್ರ ರೈಲು ಸಂಚಾರವಿತ್ತು. ಚಲ್ಲಘಟ್ಟದಿಂದ ಮಾಗಡಿ ರಸ್ತೆವರೆಗಿನ ಸಂಚಾರ ತಾತ್ಕಾಲಿಕ ರದ್ದುಪಡಿಸಿ ನಂತರ ಆರಂಭಿಸಲಾಗಿದೆ.

ಪ್ರಯಾಣಿಕರ ಆಕ್ರೋಶ

ಬೆಂಗಳೂರು ಮೆಟ್ರೋದಲ್ಲಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇವೆ. ಆದರೆನಿಲ್ದಾಣಗಳಲ್ಲಿ ಮೆಟ್ರೋ ಸುರಕ್ಷತೆಯನ್ನು ಕೈಗೊಳ್ಳುತ್ತಿಲ್ಲ. ಚೆನ್ನೈ ಮಾದರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಎರಡು ತಿಂಗಳ ಅಂತರದಲ್ಲಿಯೇ ಎರಡು ಘಟನೆ ನಡೆದಿವೆ. ಜಾಲಹಳ್ಳಿ ಹಾಗೂ ಇಂದಿರಾನಗರ ಮೆಟ್ರೋ ಬಳಿ ಇದೇ ರೀತಿ ಪುರುಷ ಹಾಗೂ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ವರದಿಯಾಗಿದ್ದವು. ಆದರೆ ಅವರು ಗಾಯಗೊಂಡಿದ್ದರು. ಮೊದಲ ಬಾರಿ ಯುವಕ ಜೀವ ಕಳೆದುಕೊಂಡಿದ್ದಾನೆ.

IPL_Entry_Point