ಸತತ ನಾಲ್ಕನೇ ಗೆಲುವಿಗೆ ಮುತ್ತಿಕ್ಕಿದ ಆರ್ಸಿಬಿ; ಫಾಫ್ ಪಡೆ ಪ್ಲೇಆಫ್ ಆಸೆ ಜೀವಂತ, ಪಂಜಾಬ್ ಕಿಂಗ್ಸ್ ಎಲಿಮಿನೇಟ್
RCB vs PBKS Highlights: 17ನೇ ಆವೃತ್ತಿಯ ಐಪಿಎಲ್ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಆಸೆ ಜೀವಂತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 4ನೇ ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಅಂತರದಿಂದ ಅದ್ಭುತ ಜಯ ಸಾಧಿಸಿದ ಆರ್ಸಿಬಿ (RCB vs PBKS), ಪ್ಲೇಆಫ್ ಆಸೆ ಜೀವಂತವಾಗಿದೆ. ಅತ್ತ ಸೋತ ಪಿಬಿಕೆಎಸ್, ಮುಂಬೈ ಇಂಡಿಯನ್ಸ್ ನಂತರ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿತ್ತು. ಟೂರ್ನಿಯಲ್ಲಿ 5ನೇ ದಿಗ್ವಿಜಯ ಸಾಧಿಸಿದ ಫಾಫ್ ಪಡೆ, ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ 14 ಅಂಕ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆ. ಆದರೆ ಸಿಎಸ್ಕೆ, ಡೆಲ್ಲಿ, ಲಕ್ನೋ ತಂಡಗಳು ಎಲ್ಲಾ ಪಂದ್ಯಗಳನ್ನು ಸೋಲಬೇಕು. ಹೀಗಿದ್ದಾಗ ಮಾತ್ರ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಸುಲಭವಾಗುತ್ತದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ವಿರಾಟ್ ಕೊಹ್ಲಿ (92) ಮತ್ತು ರಜತ್ ಪಾಟೀದಾರ್ (55) ಅಬ್ಬರದ ಪ್ರದರ್ಶನ ನೀಡಿದ ಪರಿಣಾಮ ಬೆಂಗಳೂರು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ 17 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು.
ರೈಲಿ ರೊಸೊ ಅಬ್ಬರ ವ್ಯರ್ಥ
242 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಪಿಬಿಕೆಎಸ್, ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಭುಸಿಮ್ರಾನ್ ಸಿಂಗ್ ಬೌಂಡರಿ ಸಿಡಿಸಿ ಸ್ವಪ್ನಿಲ್ ಸಿಂಗ್ ಬೌಲಿಂಗ್ನಲ್ಲಿ ಹೊರ ನಡೆದರು. ಜಾನಿ ಬೈರ್ಸ್ಟೋ (27) ಕೆಲ ಹೊತ್ತು ಅಬ್ಬರಿಸಿ ಹೊರ ನಡೆದರೆ, ರೈಲಿ ರೊಸೊ ಸ್ಫೋಟಕ ಅರ್ಧಶತಕ (61) ಸಿಡಿಸಿ ಮಿಂಚಿದರು. ಆರ್ಸಿಬಿ ಬೌಲರ್ಗಳಿಗೆ ಸರಿಯಾಗಿ ದಂಡಿಸಿದರು. ಶಶಾಂಕ್ ಸಿಂಗ್ 37 ರನ್ ಗಳಿಸಿ ರನೌಟ್ ಆದರು. ಇದರೊಂದಿಗೆ ಪಂಜಾಬ್ ಸೋಲುವುದು ಖಚಿತವಾಯಿತು.
ಜಿತೇಶ್ ಶರ್ಮಾ (5), ಲಿಯಾಮ್ ಲಿವಿಂಗ್ಸ್ಟೋನ್ (0), ಸ್ಯಾಮ್ ಕರನ್ (22), ಅಶುತೋಷ್ ಶರ್ಮಾ (8), ನಿರಾಸೆ ಮೂಡಿಸಿದರು. ಹರ್ಷಲ್ ಪಟೇಲ್ (0), ರಾಹುಲ್ ಚಹರ್ (5), ಅರ್ಷದೀಪ್ ಸಿಂಗ್ (4) ಕೊನೆಯಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಮೊಹಮ್ಮದ್ ಸಿರಾಜ್ 3 ವಿಕೆಟ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯುಸನ್, ಕರಣ್ ಶರ್ಮಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಕೊಹ್ಲಿ-ರಜತ್ ಮಿಂಚು
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಡಬಲ್ ಆಘಾತಕ್ಕೆ ಒಳಗಾಯಿತು. ಫಾಫ್ ಡು ಪ್ಲೆಸಿಸ್ 9, ವಿಲ್ ಜಾಕ್ಸ್ 12 ರನ್ ಗಳಿಸಿ ವಿದ್ವತ್ ಕಾವೇರಪ್ಪ ಬೌಲಿಂಗ್ನಲ್ಲಿ ಹೊರನಡೆದರು. ಆರಂಭದಲ್ಲಿ ತಡಬಡಾಯಿಸಿದರೂ ಆಮೇಲೆ ಅಬ್ಬರಿಸಿದ ವಿರಾಟ್ ಕೊಹ್ಲಿ ಪಂಜಾಬ್ ಬೌಲರ್ಗಳಿಗೆ ದಂಡಿಸಿದರು. ಕೊಹ್ಲಿಗೆ ರಜತ್ ಪಾಟೀದಾರ್ ಸಖತ್ ಸಾಥ್ ನೀಡಿದರು. ಆದರೆ ಈ ಇಬ್ಬರ ತಲಾ 2 ಕ್ಯಾಚ್ಗಳನ್ನು ಪಿಬಿಕೆಎಸ್ ಫೀಲ್ಡರ್ಸ್ ಕೈಬಿಟ್ಟು ಕೆಟ್ಟರು.
ಎರಡೆರಡು ಜೀವದಾನ ಪಡೆದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ಸಖತ್ ಅರ್ಧಶತಕ ಸಿಡಿಸಿದರು. ಪಾಟೀದಾರ್ 23 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ ಭರ್ಜರಿ 55 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ಗಳೊಂದಿಗೆ ಅಮೋಘ 92 ರನ್ ಗಳಿಸಿ 8 ರನ್ಗಳಿಂದ ಶತಕ ವಂಚಿತರಾದರು. ಇವರಿಬ್ಬರ ಅದ್ಭುತ ಆಟದ ನೆರವಿನಿಂದ ತಂಡದ ಮೊತ್ತ 200ರ ಗಡಿ ದಾಟಿತು. ಕೊನೆಯಲ್ಲಿ ಕ್ಯಾಮರೂನ್ ಗ್ರೀನ್ 46, ದಿನೇಶ್ ಕಾರ್ತಿಕ್ 18 ರನ್ಗಳ ಕಾಣಿಕೆ ನೀಡಿದರು.