600 ರನ್, 400 ಸಿಕ್ಸರ್, 3 ತಂಡಗಳ ವಿರುದ್ಧ 1000 ರನ್; ಶತಕ ವಂಚಿತನಾದರೂ ಹಲವು ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿ
Virat Kohli : ಪಂಜಾಬ್ ಕಿಂಗ್ಸ್ ವಿರುದ್ಧ 92 ರನ್ ಗಳಿಸಿ 8 ರನ್ಗಳ ಅಂತರದಿಂದ ವಿರಾಟ್ ಕೊಹ್ಲಿ ಶತಕ ವಂಚಿತನಾದರೂ ಹಲವು ಮೈಲಿಗಲ್ಲು ತಲುಪಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ 2024ರ 58ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶತಕ ವಂಚಿತರಾದರು. 47 ಎಸೆತಗಳಲ್ಲಿ 7 ಬೌಂಡರಿ, 6 ಭರ್ಜರಿ ಸಿಕ್ಸರ್ಗಳೊಂದಿಗೆ 92 ರನ್ ಗಳಿಸಿ 8 ರನ್ಗಳ ಅಂತರದಿಂದ ಐಪಿಎಲ್ನ 9ನೇ ಸೆಂಚುರಿ ತಪ್ಪಿಸಿಕೊಂಡರು. 195ರ ಸ್ಟ್ರೈಕ್ರೇಟ್ನಲ್ಲಿ ವಿನಾಶಕಾರಿ ಬ್ಯಾಟಿಂಗ್ ನಡೆಸಿದ ಕಿಂಗ್ ಕೊಹ್ಲಿ, ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ಆಡಿದ 12 ಪಂದ್ಯಗಳಲ್ಲಿ 70.44ರ ಬ್ಯಾಟಿಂಗ್ ಸರಾಸರಿಯಲ್ಲಿ 634 ರನ್ ಸಿಡಿಸಿರುವ ಆರ್ಸಿಬಿ ಸ್ಟಾರ್ ಬ್ಯಾಟರ್, 5 ಅರ್ಧಶತಕ, 1 ಶತಕವನ್ನು ಸಿಡಿಸಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ 153.51ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿರುವ ಕೊಹ್ಲಿ, ಈವರೆಗೂ 55 ಬೌಂಡರಿ, 30 ಸಿಕ್ಸರ್ ಸಿಡಿಸಿದ್ದಾರೆ. ಅಲ್ಲದೆ, ಆತನ ಸ್ಟ್ರೈಕ್ರೇಟ್ ಬಗ್ಗೆ ಟೀಕಿಸಿದವರಿಗೂ ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. 92 ರನ್ ಚಚ್ಚಿ ಈ ಪಂದ್ಯದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ.
ಮೂರು ತಂಡಗಳ ವಿರುದ್ಧ 1000 ರನ್
ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 92 ರನ್ ಗಳಿಸುವ ಮೂಲಕ 1000 ರನ್ಗಳ ಮೈಲಿಗಲ್ಲನ್ನು ದಾಟಿದರು. ಪಿಬಿಕೆಎಸ್ ವಿರುದ್ಧವೇ ಒಟ್ಟು 1020 ರನ್ ಸಿಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳ ವಿರುದ್ಧ 1000+ ರನ್ ಗಳಿಸಿದ ಏಕೈಕ ಆಟಗಾರ ಎನಿಸಿದ್ದಾರೆ. ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ (1030) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (1006) ವಿರುದ್ಧ ಈ ಸಾಧನೆ ಮಾಡಿದ್ದಾರೆ. ಈಗ ಪಂಜಾಬ್ ಎದುರು ವಿಶೇಷ ಮೈಲಿಗಲ್ಲು ತಲುಪಿದ್ದಾರೆ.
ನಾಲ್ಕನೇ ಬಾರಿ 600+ ರನ್ ಸಿಡಿಸಿದ ಕೊಹ್ಲಿ
92 ರನ್ ಗಳಿಸುವ ಮೂಲಕ ಕೊಹ್ಲಿ ಪ್ರಸಕ್ತ ಐಪಿಎಲ್ನಲ್ಲಿ 600 ರನ್ಗಳ ಗಡಿ ದಾಟಿದ ಮೊದಲ ಆಟಗಾರ ಎನಿಸಿದ್ದಾರೆ. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ 4 ಋತುಗಳಲ್ಲಿ 600 ರನ್ ಗಳಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದರೊಂದಿಗೆ ನಾಲ್ಕು ಬಾರಿ ಈ ಸಾಧನೆ ಮಾಡಿರುವ ಕೆಎಲ್ ರಾಹುಲ್ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಈ ಹಿಂದೆ 2013, 2016, 2023ರನಲ್ಲಿ 600 ರನ್ ಗಡಿ ದಾಟಿದ್ದರು.
ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್ಗಳು
ಈ ಪಂದ್ಯದಲ್ಲಿ ಭರ್ಜರಿ 6 ಸಿಕ್ಸರ್ ಸಿಡಿಸಿದ ಕೊಹ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಬಾರಿಸಿದ್ದಾರೆ. ಆ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ 400 + ಸಿಕ್ಸರ್ ಬಾರಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಕೊಹ್ಲಿಯ ಸಿಕ್ಸರ್ಗಳ ಸಂಖ್ಯೆ 401 ಆಗಿದೆ. ರೋಹಿತ್ ಶರ್ಮಾ ಟಿ20 ಫಾರ್ಮೆಟ್ನಲ್ಲಿ 506 ಸಿಕ್ಸರ್ಗಳನ್ನು ಬಾರಿಸಿದ್ದಾರೆ.