ಲಕ್ನೋ ಸೂಪರ್ ಜೈಂಟ್ಸ್ ತೊರೆಯಲಿದ್ದಾರೆ ಕೆಎಲ್ ರಾಹುಲ್? ಆರ್ಸಿಬಿ ಸೇರುವಂತೆ ಫ್ಯಾನ್ಸ್ ಒತ್ತಾಯ
KL Rahul : ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋತ ಬೆನ್ನಲ್ಲೇ ನಾಯಕ ಕೆಎಲ್ ರಾಹುಲ್ ವಿರುದ್ಧ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಗರಂ ಆಗಿದ್ದಾರೆ. ಹೀಗಾಗಿ ರಾಹುಲ್ ತಂಡವನ್ನು ತೊರೆಯಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.?
ಭಾರತೀಯ ಕ್ರಿಕೆಟ್ನ ಪ್ರತಿಭಾವಂತ ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಅವರು ತಾನೆಂಥ ಬ್ಯಾಟರ್ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಐಪಿಎಲ್ (IPL) ಇತಿಹಾಸದಲ್ಲಿ ಪ್ರಮುಖ ರನ್ ಗಳಿಸಿದವರಲ್ಲಿ ಒಬ್ಬರಾದ ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಮೊದಲ ಎರಡು ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಮುನ್ನಡೆಸಿದ್ದಾರೆ. ಮೇ 8ರಂದು ನಡೆದ ಸನ್ರೈಸರ್ಸ್ ಹೈದರಾಬಾದ್ (SR) ವಿರುದ್ಧದ ಪಂದ್ಯದಲ್ಲಿ ರಾಹುಲ್ ನೇತೃತ್ವದ ಲಕ್ನೋ ತಂಡವು ಅತ್ಯಂತ ನಿರಾಶಾದಾಯಕ ಪ್ರದರ್ಶನ ಮಾಲೀಕರ ಕೋಪಕ್ಕೆ ಕಾರಣವಾಯಿತು. ಹೀಗಾಗಿ ಪಂದ್ಯದ ನಂತರ ಮಾಲೀಕರು, ನಾಯಕ ರಾಹುಲ್ಗೆ ತರಾಟೆ ತೆಗೆದುಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ರಾಹುಲ್ ಅವರ ಮೇಲೆ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಕೂಗಾಡಿದ್ದಾರೆ. ಪಂದ್ಯದಲ್ಲಿ ಮಾಡಲಾದ ತಪ್ಪುಗಳ ಬಗ್ಗೆ ರಾಹುಲ್ಗೆ ವಿವರಿಸಿದ್ದಾರೆ. ಸಾರ್ವಜನಿಕವಾಗಿ ರಾಹುಲ್ರನ್ನು ಅವಮಾನಿಸಿದ್ದಾರೆ. ಆದರೆ ಕ್ಯಾಪ್ಟನ್ ಬೇಸರದಿಂದ ಉತ್ತರಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಸಂಜೀವ್ ಗೋಯೆಂಕಾ ವರ್ತನೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಹಿರಿಯ ಆಟಗಾರನಿಗೆ ಕ್ರಿಕೆಟ್ ಗಂಧ-ಗಾಳಿ ಗೊತ್ತಿಲ್ಲದ ವ್ಯಕ್ತಿ ಬುದ್ಧಿವಾದ ಹೇಳುತ್ತಿದ್ದಾರೆ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಲಕ್ನೋ ತ್ಯಜಿಸಿ ಆರ್ಸಿಬಿ ತಂಡವನ್ನು ಸೇರುವಂತೆ ರಾಹುಲ್ಗೆ ಫ್ಯಾನ್ಸ್ ಕೇಳಿಕೊಂಡಿದ್ದಾರೆ.
ಈ ಘಟನೆ ಬೆನ್ನಲ್ಲೇ ಟೂರ್ನಿಯ ಬಳಿಕ ಕೆಎಲ್ ರಾಹುಲ್ ಅವರನ್ನು ಫ್ರಾಂಚೈಸಿಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಥವಾ ಕ್ರಿಕೆಟಿಗನೇ ಸ್ವತಃ ಎಲ್ಎಸ್ಜಿ ಶಿಬಿರದಿಂದ ಹೊರಬರುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೆಲವು ವರದಿಗಳು ರಾಹುಲ್ರನ್ನು ತಂಡದಿಂದ ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2025ರ ಮೆಗಾ ಹರಾಜಿನಲ್ಲಿ ಎಲ್ಎಸ್ಜಿ ನಾಯಕ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದ್ಯಾವುದು ಸಹ ಅಧಿಕೃತ ಮಾಹಿತಿ ಅಲ್ಲ. ವದಂತಿಗಳು ಮಾತ್ರ ಎದ್ದಿವೆ. ಒಂದು ವೇಳೆ ಆತ ಹರಾಜಿಗೆ ಬಂದರೆ ಯಾವ ತಂಡ ಸೇರಬಹುದು?
ಕೆಎಲ್ ರಾಹಲ್ ಖರೀದಿಸಲು ಆರ್ಸಿಬಿಗೆ ಉತ್ತಮ ಅವಕಾಶ
ಒಂದು ವೇಳೆ ಕರ್ನಾಟಕದ ಆಟಗಾರ ಮೆಗಾ ಹರಾಜಿಗೆ ಬಂದಿದ್ದೇ ಆದರೆ ಬೃಹತ್ ಮೊತ್ತಕ್ಕೆ ಸೇಲಾಗುವುದು ಖಚಿತ. ಆರ್ಸಿಬಿ ಆತನನ್ನು ಬುಟ್ಟಿಗೆ ಹಾಕಿಕೊಳ್ಳಲು ಉತ್ತಮ ಅವಕಾಶ ಆಗಿರಲಿದೆ. ಮೆಗಾ ಹರಾಜಿನಲ್ಲಿ ಆರ್ಸಿಬಿ ಹಲವು ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. 2025ರ ಐಪಿಎಲ್ನಲ್ಲಿ ಹೊಸದಾಗಿ ಪ್ರಾರಂಭಿಸಲು ಆರ್ಸಿಬಿ, ಚಿಂತನೆ ನಡೆಸಿದೆ. ಪ್ರಸ್ತುತ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನೂ ಸಹ ಕೈಬಿಡುವುದು ಖಚಿತವಾಗಿದೆ. ಹಾಗಾಗಿ ನೂತನ ನಾಯಕನ ಹುಟುಕಾಟ ನಡೆಸಲಿದೆ. ಒಂದು ವೇಳೆ ರಾಹುಲ್ ಮೆಗಾ ಹರಾಜಿಗೆ ಬಂದರೆ ಆರ್ಸಿಬಿ ಆತನ ಮೇಲೆ ಬಿಡ್ ಮಾಡಬಹುದು. ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿರಲಿದೆ.
ಲಕ್ನೋ ವಿರುದ್ಧ ಎಸ್ಆರ್ಹೆಚ್ ಗೆಲುವು
2024ರ ಐಪಿಎಲ್ನ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿತು. ಆಯುಷ್ ಬದೋನಿ 55* ರನ್, ನಿಕೋಲಸ್ ಪೂರನ್ 48* ರನ್ ಗಳಿಸಿದರು. 166 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್, 9.4 ಓವರ್ಗಳಲ್ಲೇ ಗೆದ್ದು ಬೀಗಿತು. ಅಭಿಷೇಕ್ ಶರ್ಮಾ ಅಜೇಯ 75 ರನ್, ಟ್ರಾವಿಸ್ ಹೆಡ್ 89 ರನ್ ಗಳಿಸಿ ಔಟಾಗದೆ ಉಳಿದರು. ಲಕ್ನೋ ಬೌಲರ್ಗಳ ಮೇಲೆ ನಿಜಕ್ಕೂ ದಂಡಯಾತ್ರೆ ನಡೆಸಿದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.