Kannada News  /  Karnataka  /  Bengaluru News: Good News For Fish Lovers In Bengaluru ; Fresh Coastal Fish Will Be Supplied To Each Wards Fish Outlet; Shipment Of Fish By Flight
ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶದಲ್ಲಿ ಸ್ಟಾಲ್‌ಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶದಲ್ಲಿ ಸ್ಟಾಲ್‌ಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ. (CMO)

Bengaluru News: ಮೀನು ಪ್ರಿಯರಿಗೊಂದು ಖುಷಿ ಸುದ್ದಿ; ಪ್ರತಿ ವಾರ್ಡ್‌ಗೆ ತಾಜಾ ಕರಾವಳಿ ಮೀನು; ವಿಮಾನದಲ್ಲಿ ಮೀನುಗಳ ರವಾನೆ!

18 October 2022, 15:25 ISTHT Kannada Desk
18 October 2022, 15:25 IST

Bengaluru News: ಬೆಂಗಳೂರಿನ ಮೀನು ಪ್ರಿಯರಿಗೊಂದು ಖುಷಿಯ ಸುದ್ದಿ. ಪ್ರತಿವಾರ್ಡ್‌ನಲ್ಲಿ ತಾಜಾ ಮೀನಿನ ಔಟ್‌ ಲೆಟ್‌ ಬರಲಿದ್ದು, ಅಲ್ಲಿಗೆ ಕರಾವಳಿಯ ತಾಜಾ ಮೀನು ನಿತ್ಯೂ ಪೂರೈಕೆ ಆಗಲಿದೆ. ವಿಮಾನದ ಮೂಲಕ ಮೀನುಗಳ ರವಾನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿರುವ ಮೀನು ಪ್ರಿಯರಿಗೆ ಒಂದು ಖುಷಿಯ ಸುದ್ದಿ. ಪ್ರತಿ ವಾರ್ಡ್‌ನಲ್ಲೂ ತಾಜಾ ಮೀನಿನ ಔಟ್‌ಲೆಟ್‌ ಬರಲಿದ್ದು, ಅಲ್ಲಿ ಕರಾವಳಿಯ ತಾಜಾ ಮೀನು ಲಭ್ಯವಾಗಲಿದೆ. ಕರಾವಳಿಯ ಮೀನುಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸುವ ಯೋಜನೆ ಸಿದ್ಧವಾಗುತ್ತಿದೆ.

ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭಾನುವಾರ ಒಳನಾಡು ಮೀನು ಉತ್ಪಾದಕರ ಸಮಾವೇಶದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಎಲ್ಲ ಬಿಬಿಎಂಪಿ ವಾರ್ಡ್ ಗಳಲ್ಲಿ ಮೀನು ಆಹಾರ ಮಳಿಗೆ ಪ್ರಾರಂಭ ಮಾಡುವುದಾಗಿ ಹೇಳಿದ್ದರು.

ಬಿಬಿಎಂಪಿ ವಲಯಗಳಲ್ಲಿ ಮೀನಿನ ಆಹಾರಕ್ಕೆ ಬಹಳ ಬೇಡಿಕೆಯಿದೆ. ಪ್ರತಿಯೊಂದು ವಾರ್ಡಿನಲ್ಲಿ 1500-2000 ಚ.ಮೀ. ವಿಸ್ತೀರ್ಣದಲ್ಲಿ ಮೀನಿನ ಆಹಾರವನ್ನು ಒದಗಿಸುವ ಮಳಿಗೆಯನ್ನು ಪ್ರಾರಂಭಿಸುವ ಯೋಜನೆ ಇದೆ. ಬೆಂಗಳೂರಿನ 243 ವಾರ್ಡ್ ಗಳಲ್ಲಿಯೂ ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಖಾಸಗಿ ವಲಯದವರು ಇಲ್ಲಿ ಮಳಿಗೆಯನ್ನು ತೆರೆಯಬಹುದು. ಬೆಂಗಳೂರು ನಗರದಲ್ಲಿ ಈ ಯೋಜನೆ ಸಫಲವಾದರೆ, ರಾಜ್ಯದ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಪಬ್ಲಿಕ್‌ ಪ್ರೈವೇಟ್‌ ಪಾರ್ಟನರ್‌ ಶಿಪ್‌ (PPP) ಮಾದರಿಯ ಯೋಜನೆ

ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆ ಪಬ್ಲಿಕ್‌ ಪ್ರೈವೇಟ್‌ ಪಾರ್ಟನರ್‌ ಶಿಪ್‌ (PPP) ಮಾದರಿಯದಾಗಿದ್ದು, ಈ ಮೂಲಕ ತಾಜಾ ಮೀನನ್ನು ರಾಜ್ಯ ರಾಜಧಾನಿಗೆ ತಲುಪಿಸಲು ಉತ್ತೇಜನ ನೀಡಿದೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.), ಕರ್ನಾಟಕ ಸರ್ಕಾರ ಮತ್ತು ಶೀಘ್ರ್ ಸೀಫುಡ್ಸ್ & ಲಾಜಿಸ್ಟಿಕ್ಸ್ ಪ್ರೈ. ಲಿ. ಸಂಸ್ಥೆಗಳು ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆಬಾಗಿಲಿಗೆ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಶೀಘ್ರವಾಗಿ ತಲುಪಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಯೋಜನೆಯ ಹಂತಗಳು ಹೀಗಿವೆ

1. ಕರ್ನಾಟಕ ರಾಜ್ಯದ ಕರಾವಳಿ ಭಾಗದ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ವಿಮಾನದ ಮೂಲಕ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಬೆಂಗಳೂರಿನ ಸರ್ಜಾಪುರದಲ್ಲಿರುವ ಉಗ್ರಾಣಕ್ಕೆ ತಲುಪಿಸುವುದು.

2. ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕೇಜಿಂಗ್ ಮೂಲಕ ಬೆಂಗಳೂರಿನಲ್ಲಿರುವ 243 ಚಿಲ್ಲರೆ ಮಳಿಗೆಗಳಿಗೆ ತಲುಪಿಸುವುದು.

3. ಚಿಲ್ಲರೆ ಮಳಿಗೆಗಳ ಮುಖಾಂತರ ಜನಸಾಮಾನ್ಯರಿಗೆ ಮಾರಾಟ ಮಾಡುವುದು ಮತ್ತು ಆಪ್ ಮೂಲಕ ಖರೀದಿ ಮಾಡುವ ಗ್ರಾಹಕರ ಮನೆಬಾಗಿಲಿಗೆ ಉತ್ಪನ್ನಗಳನ್ನು ಪೂರೈಸುವುದು.

ಈ ಯೋಜನೆಯು ಜನಸಾಮಾನ್ಯರಿಗೆ ತಾಜಾ ಮತ್ತು ಆರೋಗ್ಯಕರ ಸಾಗರ ಆಹಾರ ಉತ್ಪನ್ನಗಳನ್ನು ಪೂರೈಸುತ್ತದೆ ಮತ್ತು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ದೂರದೃಷ್ಟಿಯ ಯೋಜನೆಯಾಗಿದೆ.

ಈ ಯೋಜನೆಯು ಅತ್ಯಂತ ಶೀಘ್ರದಲ್ಲಿ ಬೆಂಗಳೂರಿನಾದ್ಯಂತ ಆರಂಭವಾಗಲಿದೆ ಮತ್ತು ಕರ್ನಾಟಕ ಉಳಿದ ಪ್ರದೇಶಗಳಿಗೂ ವಿಸ್ತರಿಸಲಿದೆ ಎಂದು ಸಂಸ್ಥೆಯ ಪಾಲುದಾರರಾದ ಸುಭೀಷ್ ವಾಸುದೇವ್ ಮತ್ತು ಪ್ರಿಯೇಶ್ ನಾಯ್ಕ್ ತಿಳಿಸಿದ್ದಾರೆ.

ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಸರ್ಕಾರದ ಸಹಕಾರ

ರಾಜ್ಯದಲ್ಲಿ ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು , ಸ್ಥಳೀಯ ಮಾರುಕಟ್ಟೆ, ಹೀಗೆ ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ,ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕು ಎಂಬ ಆಶಯವನ್ನು ಅವರು ಸಮಾವೇಶದಲ್ಲಿ ವ್ಯಕ್ತಪಡಿಸಿದ್ದರು.