ಕನ್ನಡ ಸುದ್ದಿ  /  ಕರ್ನಾಟಕ  /  Lokayukta Raids: ಕರ್ನಾಟಕದ 6 ಸರ್ಕಾರಿ ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ; ಆದಾಯ ಮೀರಿದ ಆಸ್ತಿ ಪ್ರಕರಣ

Lokayukta Raids: ಕರ್ನಾಟಕದ 6 ಸರ್ಕಾರಿ ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ; ಆದಾಯ ಮೀರಿದ ಆಸ್ತಿ ಪ್ರಕರಣ

ಕರ್ನಾಟಕದಾದ್ಯಂತ ಲೋಕಾಯುಕ್ತ ಇಲಾಖೆ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದ್ದು, ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ್ದಾರೆ. ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ. (ವರದಿ- ಎಚ್. ಮಾರುತಿ)

ಆದಾಯ ಮೀರಿದ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕದ 6 ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು (ಜ.9) ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ.
ಆದಾಯ ಮೀರಿದ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕದ 6 ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು (ಜ.9) ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ.

ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಆರು ಅಧಿಕಾರಿಗಳ ಮನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ (ಜ.9) ಬೆಳಗ್ಗೆಯೇ ದಾಳಿ ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಟ್ರೆಂಡಿಂಗ್​ ಸುದ್ದಿ

ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್, ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಎನ್. ಸತೀಶ್ ಬಾಬು, ಕುಂದಾಣ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮನಾಭ, ಕರ್ನಾಟಕ ಗ್ರಾಮೀಣ‌ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ‌ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಮಂಜೇಶ್ ಬಿ. ದಾಳಿಗೊಳಗಾದ ಪ್ರಮುಖರು.

ಜೊತೆಗೆ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್.‌ ಸುರೇಶ್ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಈ ಎಲ್ಲ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ‌ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಈ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಬೆಂಗಳೂರಿನ 10ಕಡೆ ಸೇರಿದಂತೆ ರಾಮನಗರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಸುಮಾರು 30 ಸ್ಥಳಗಳ ಮೇಲೆ‌ ಏಕಕಾಲಕ್ಕೆ ದಾಳಿ‌ಮಾಡಿದ್ದು, ಶೋಧ‌ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದ ಮನೆಗಳು, ಕಚೇರಿಗಳು, ಸಂಬಂಧಿಕರು ಮತ್ತು ಬೇನಾಮಿ ವ್ಯಕ್ತಿಗಳ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ

ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಬಿ. ಮಂಜೇಶ್ ಗೆ ಸಂಬಂಧಿಸಿದ ಮಳವಳ್ಳಿ ಹಾಗೂ‌ ಮದ್ದೂರು ತಾಲ್ಲೂಕಿನ 9 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಅಗಸನಪುರ ಗ್ರಾಮದ ಮಂಜೇಶ್ ಚಿಕ್ಕಪ್ಪನ ಮನೆ, ನಂಜಾಪುರದ ತೋಟದ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಮಂಜೇಶ್ ಸಂಬಂಧಿ ಸುರೇಂದ್ರ ಎಂಬುವವರಿಗೆ ಸೇರಿದ ಎರಡು ಮನೆಗಳ ಮೇಲೂ ದಾಳಿ‌ ನಡೆದಿದೆ. ಮದ್ದೂರು ತಾಲ್ಲೂಕಿನ ಎಸ್.ಐ. ಕೋಡಿಹಳ್ಳಿಯಲ್ಲಿ‌ರುವ ಮಂಜೇಶ್ ಅಜ್ಜಿಯ ಮನೆಗೂ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸುಜಿತ್ ನೇತೃತ್ವದಲ್ಲಿ ಪೊಲೀಸರ ತಂಡ ಶೋಧ ಕಾರ್ಯ ಮುಂದುವರಿಸಿದೆ.

ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಪ್ಲಾನ್, ‌ಒಸಿ ನೀಡಲು ಅಪಾರ ಪ್ರಮಾಣದ ಲಂಚ ಪಡೆಯುತ್ತಿದ್ದ ಆರೋಪ ಇವರ ಮೇಲಿತ್ತು. ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೂ ಒಸಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಜಯನಗರದ ಜೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಬಳಿ ಬಳಿ ಮೂರು ನಿವೇಶನ, ಕೃಷಿ ಜಮೀನು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ನಾಗರಾಜ್ ಕೆಲ ದಿನಗಳ‌ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದರು. ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದು, ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಾಜ್‌ಗೆ ಸಂಬಂಧಿಸಿದ ಬಿಎಡ್ ಕಾಲೇಜ್, ಡಿ ಎಡ್ ಕಾಲೇಜು, ಐಟಿಐ ಕಾಲೇಜು, ಪಿಯು ಕಾಲೇಜ್‌ಗಳನ್ನು ನಡೆಸುತ್ತಿದ್ದಾರೆ ನಾಗರಾಜ್‌ ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿದ್ದಾರೆ.

ಕೋಲಾರ ಮೂಲದ ಸತೀಶ್ ಬಾಬು ಲೋಕೋಪಯೋಗಿ ಇಲಾಖೆ ಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದುರ್ಗದ ಜೆ ಸಿ ಆರ್ ಬಡಾವಣೆ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆದಿದೆ. ಬೆಂಗಳೂರಿನ ಅಲ್ಲಾಲಸಂದ್ರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಆಭರಣ ಮತ್ತು ನಗದು ದೊರೆತಿದೆ.

ಕುಂದಣ ಪಿಡಿಒ ಪದ್ಮನಾಭ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ದಾಬಸ್ ಪೇಟೆಯಲ್ಲಿ ಗೋದಾಮು ಮತ್ತು ತುಮಕೂರಿನಲ್ಲಿಯೂ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.

ಕರ್ನಾಟಕ ಗ್ರಾಮೀಣ‌ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ‌ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಇವರ ನಿವಾಸದಲ್ಲಿ ಕಂಡು ಬಂದ ಚಿನ್ನ, ಬೆಳ್ಳಿ ವಜ್ರದ ಆಭರಣಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ.

ದಾಳಿ ಮುಂದುವರೆದಿದ್ದು, ಸಂಜೆಯ ವೇಳೆಗೆ ಒಟ್ಟು ಆಸ್ತಿ ಪ್ರಮಾಣದ ಲೆಕ್ಕ ಲಭ್ಯವಾಗಲಿದೆ.

IPL_Entry_Point