ಮಂಗಳೂರಿನಿಂದ ಸಾಗುವ ಈ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳ ಅಳವಡಿಕೆ -Mangalore News
Mangalore news: ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್ ಪ್ರೆಸ್ ಸೇರಿದಂತೆ ಮಂಗಳೂರು ರೈಲು ನಿಲ್ದಾಣದಿಂದ ಸಾಗುವ ಕೆಲ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ. (ವರದಿ: ಹರೀಶ ಮಾಂಬಾಡಿ)

ಮಂಗಳೂರು: ಮಂಗಳೂರಿನಿಂದ ಸಾಗುವ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಸೇರ್ಪಡೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರವಾಗಿ ಈ ಉಪಕ್ರಮವನ್ನು ಅನುಸರಿಸಲಾಗಿದೆ. ನಂ.16603 ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 27ರಿಂದ 31ರವರೆಗೆ ತಾತ್ಕಾಲಿಕವಾಗಿ ಎಸಿ 3 ಟೈರ್ ಬೋಗಿ ಅಳವಡಿಕೆ ಆಗಲಿದೆ. ನಂ.16604 ತಿರುವನಂತಪುರ ಮಂಗಳೂರು ಸೆಂಟ್ರಲ್ ಗೆ ಸಾಗುವ ಮಾವೇಲಿ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ಎಸಿ 3 ಟೈರ್ ಕೋಚ್ ಅಳವಡಿಕೆ ಆಗಲಿದೆ.
ನಂ.12620 ಮಂಗಳೂರು ಸೆಂಟ್ರಲ್ ಮುಂಬಯಿಗೆ ಸಾಗುವ ಲೋಕಮಾನ್ಯ ತಿಲಕ್ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 25ರಿಂದಲೇ ತಾತ್ಕಾಲಿಕವಾಗಿ ಹೆಚ್ಚುವರಿ ಸ್ಲೀಪರ್ ಕೋಚ್ ಸೇರ್ಪಡೆ ಆಗಿದೆ. ಪ್ರಯಾಣಿಕರ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ಮಂಗಳೂರು ಸೆಂಟ್ರಲ್ ಮಧ್ಯೆ ಸಾಗುವ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 26ರಿಂದ ಹೆಚ್ಚುವರಿ ಸ್ಲೀಪರ್ ಕೋಚ್ ಸೇರ್ಪಡೆ ಆಗಿದೆ.
ಮಾರ್ಚ್ 16348 ಮಂಗಳೂರು ಸೆಂಟ್ರಲ್ ತಿರುವನಂತಪುರ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 27, 29 ಮತ್ತು 31ರಂದು ಹೆಚ್ಚು ಸ್ಲೀಪರ್ ಕೋಚ್ ಇರಲಿದೆ. ನಂ.16347 ತಿರುವನಂತಪುರ ಸೆಂಟ್ರಲ್ ನಿಂದ ಮಂಗಳೂರು ಸೆಂಟ್ರಲ್ ಮಧ್ಯೆ ಸಾಗುವ ಎಕ್ಸ್ ಪ್ರೆಸ್ ರೈಲಿಗೆ ಮಾರ್ಚ್ 28, 30 ಮತ್ತು ಏಪ್ರಿಲ್ 1ರಂದು ಹೆಚ್ಚುವರಿ ಸ್ಲೀಪರ್ ಕೋಚ್ ಅಳವಡಿಕೆ ಆಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 16603: ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್ ಪ್ರೆಸ್ ಈ ರೈಲು ವಾರದ ಎಲ್ಲಾ ದಿನಗಳಲ್ಲೂ ಸಂಚರಿಸುತ್ತಿದ್ದು, ಪ್ರತಿ ದಿನ ಸಂಜೆ 5.30ಕ್ಕೆ ಮಂಗಳೂರು ರೈಲು ನಿಲ್ದಾಣದಿಂದ ಹೊರಟರೆ ಮರು ದಿನ ಬೆಳಗ್ಗೆ 6.20ಕ್ಕೆ ತಿರುವನಂತಪುರ ಸೆಂಟ್ರಲ್ ತಲುಪುತ್ತದೆ. ಮಂಗಳೂರಿನಿಂದ ತಿರುವನಂತಪುರಂ ಸೆಂಟ್ರಲ್ ತಲುಪಲು 13 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ತ್ರಿಶೂಲ್, ಎರ್ನಾಕುಲಂ ಜಂಕ್ಷನ್ ಸೇರಿ 31 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. 120 ದಿನಗಳ ಮುಂಚಿತವಾಗಿಯೇ ಈ ರೈಲಿಗೆ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇದನ್ನು ಮಾವೇಲಿ ಎಕ್ಸ್‌ಪ್ರೆಸ್ ರೈಲು ಎಂದು ಕರೆಯಲಾಗುತ್ತದೆ. (ವರದಿ: ಹರೀಶ ಮಾಂಬಾಡಿ)
