ಕನ್ನಡ ಸುದ್ದಿ  /  Karnataka  /  Earthquake: A Team Of Experts Has Come To Study Why There Are Frequent Earthquakes In Dakshin Kannada And Kodagu

Earthquake: ದ.ಕ., ಕೊಡಗುಗಳಲ್ಲಿ ಏಕೆ ಪದೇಪದೆ ಭೂಕಂಪ- ಅಧ್ಯಯನಕ್ಕೆ ಬರ್ತಿದೆ ತಜ್ಞರ ತಂಡ

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಪದೇಪದೆ ಭೂಕಂಪ ಸಂಭವಿಸುತ್ತಿರುವುದೇಕೆ? ಈ ರೀತಿ ಆಗಿಯೇ ಹಿಂದೆ ಕೊಡಗಿನಲ್ಲಿ ಭೂಕುಸಿತ ಸಂಭವಿಸಿತ್ತು. ಇದು ಈ ಭಾಗದ ಜನರಲ್ಲಿ ಮೂಡಿರುವ ಆತಂಕ. ಭೂಕಂಪ ಯಾಕೆ ಸಂಭವಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ತಜ್ಞರ ತಂಡ ಈ ಜಿಲ್ಲೆಗಳಿಗೆ ಶೀಘ್ರದಲ್ಲೇ ಭೇಟಿ ಮಾಡಲಿದೆ ಎನ್ನುತ್ತಿದೆ ಸರ್ಕಾರ.

ಭೂಕಂಪ (ಸಾಂಕೇತಿಕ ಚಿತ್ರ)
ಭೂಕಂಪ (ಸಾಂಕೇತಿಕ ಚಿತ್ರ)

ಹೈದರಾಬಾದ್‌: ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪನ ಯಾಕೆ ಆಗುತ್ತಿದೆ? ಇದರ ಕಾರಣವೇನು ಎಂಬುದನ್ನು ಅಧ್ಯಯನ ನಡೆಸಲು ಹೈದರಾಬಾದ್‌ನಿಂದ ತಜ್ಞರ ತಂಡ ಈ ಜಿಲ್ಲೆಗಳಿಗೆ ತೆರಳಲಿದೆ.

ಕಳೆದ ಶನಿವಾರವೂ ಅಪರಾಹ್ನ 1.23ರ ಸುಮಾರಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿತ್ತು. ರಿಕ್ಟರ್‌ ಮಾಪಕದಲ್ಲಿ 1.8ರಷ್ಟು ತೀವ್ರತೆ ದಾಖಲಾಗಿತ್ತು. ಈ ಭಾಗಗಳಲ್ಲಿ 10ರಿಂದ 15 ದಿನಗಳ ಅವಧಿಯಲ್ಲಿ ಕನಿಷ್ಠ ಮೂರು ಬಾರಿ ಭೂ ಕಂಪನದ ಅನುಭವ ಸ್ಥಳೀಯರಿಗೆ ಆಗಿತ್ತು. ಅವರು ಅದನ್ನು ಜಿಲ್ಲಾಡಳಿತ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಗಮನಕ್ಕೂ ತಂದಿದ್ದರು.

ಕರ್ನಾಟಕದ ದಕ್ಷಿಣ ಕನ್ನಡ, ಕೊಡಗು ಮತ್ತು ಸುತ್ತಮುತ್ತಲಿನ ಕೆಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಈ ಭೂಕಂಪನ ನಿಗೂಢವಾಗಿದ್ದು, ಇದಕ್ಕೆ ಕಾರಣ ಏನು ಎಂಬುದನ್ನು ಅರಿಯವುದಕ್ಕಾಗಿಯೇ ಈ ಜಿಲ್ಲೆಗಳಿಗೆ ತಜ್ಞರ ತಂಡವನ್ನು ತನಿಖೆಗೆ ಕಳುಹಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ಯ ಪ್ರಕಟಣೆ ಕೂಡ ಭೂಕಂಪದ ಸುದ್ದಿಯನ್ನು ದೃಢೀಕರಿಸಿದೆ. ಇದರ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಶನಿವಾರ ಲಘು ಕಂಪನದ ಅನುಭವವಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗಗಳಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 1.8ರಷ್ಟು ತೀವ್ರತೆ ದಾಖಲಾಗಿದೆ. ಶನಿವಾರ ಮಧ್ಯಾಹ್ನ 1:23ಕ್ಕೆ ಭೂಕಂಪ ಸಂಭವಿಸಿದ್ದು, ಸುಳ್ಯ ತಾಲೂಕಿನ ದೊಡ್ಡಕುಮಾರಿಯಿಂದ ಪಶ್ಚಿಮಕ್ಕೆ 1.3 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಇತ್ತು.

ಎನ್‌ಜಿಆರ್‌ಐ ಮತ್ತು ಸಿಎಸ್‌ಐಆರ್ ತಜ್ಞರ ತಂಡ

ಈ ಕಂಪನಗಳ ನಂತರ, ಹೈದರಾಬಾದ್ ಮೂಲದ ಸಿಎಸ್‌ಐಆರ್-ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಜಿಆರ್‌ಐ) ತಜ್ಞರ ತಂಡವು ಭೂಕಂಪವನ್ನು ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಪ್ರದೇಶಕ್ಕೆ ಭೇಟಿ ನೀಡಲು ಸಿದ್ಧವಾಗಿದೆ. ಎನ್‌ಜಿಆರ್‌ಐ ತಂಡವು ಶೀಘ್ರದಲ್ಲೇ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಈ ತಂಡ ಕನಿಷ್ಠ ಒಂದು ವಾರ ಈ ಪ್ರದೇಶದಲ್ಲಿ ಇರಲಿದೆ.

ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ್‌ ಅವರು ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ “ಈ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭೂಕಂಪದ ಕಂಪನಗಳು ಪದೇಪದೆ ಸಂಭವಿಸಿರುವುದು ಕಳವಳಕಾರಿ ವಿಷಯವಾಗಿದೆ. ಇದರ ಹಿಂದಿನ ಕಾರಣಗಳನ್ನು ನಾವು ಅಧ್ಯಯನ ಮಾಡಬೇಕಾಗಿದೆ. ಹಾಗಾಗಿ ಎನ್‌ಜಿಆರ್‌ಐ ತಂಡ ಭೇಟಿ ನೀಡುತ್ತಿದೆ. ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಪ್ರದೇಶವನ್ನು ನಕ್ಷೆ ಮಾಡಲು ತಂಡದೊಂದಿಗೆ ಸಮನ್ವಯಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ" ಎಂದು ಹೇಳಿದ್ದರು.

ನಾಲ್ಕು ಬಾರಿ ಭೂಕಂಪನ

ಈ ಹಿಂದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ಭೂಕಂಪದ ಕೇಂದ್ರದಿಂದ ಗರಿಷ್ಠ 20-30 ಕಿಮೀ ವ್ಯಾಪ್ತಿಯಲ್ಲಿ ಕಡಿಮೆ ತೀವ್ರತೆಯ ಕಂಪನದ ಅನುಭವವಾಗಿದೆ. ಸುಳ್ಯ ತಾಲೂಕಿನ ಸಂಪಾಜೆ, ಗುಣಡ್ಕ, ತೊಡಿಕಾನ, ಪೆರಾಜೆ, ಪತ್ತುಕುಂಜ, ಕುಂದಾಡು ಮುಂತಾದೆಡೆ ಕಂಪನದ ಅನುಭವವಾಗಿತ್ತು. ಭೂಕಂಪದ ತೀವ್ರತೆ ತೀರಾ ಕಡಿಮೆ ಇರುವುದರಿಂದ ಸ್ಥಳೀಯ ಜನರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿತ್ತು.

ಸುಳ್ಯ ತಾಲೂಕಿನಲ್ಲಿ ಜೂ.25ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಭೂಕಂಪ ಸಂಭವಿಸಿದೆ. ಈ ಹಿಂದೆ ಜೂನ್ 25, ಜೂನ್ 28 ಮತ್ತು ಜುಲೈ 1 ರಂದು ತಾಲ್ಲೂಕಿನಲ್ಲಿ ವಿವಿಧ ತೀವ್ರತೆಯ ಭೂಕಂಪಗಳು ಸಂಭವಿಸಿದ್ದವು ಎಂಬುದನ್ನು ಜಿಲ್ಲಾಡಳಿತ, ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರಗಳು ದೃಢೀಕರಿಸಿದ್ದವು.

IPL_Entry_Point