ಕನ್ನಡ ಸುದ್ದಿ  /  ಕರ್ನಾಟಕ  /  Exit Polls: ಎಕ್ಸಿಟ್‌ ಪೋಲ್‌ ಎಂದರೇನು, ನಡೆಸುವುದು ಹೇಗೆ; ಕರ್ನಾಟಕ ಚುನಾವಣೆ 2023ರ ಈ ಸಂದರ್ಭದಲ್ಲಿ ನೀವು ತಿಳಿಯಬೇಕಾದ ಅಂಶ ಇಲ್ಲಿವೆ

Exit Polls: ಎಕ್ಸಿಟ್‌ ಪೋಲ್‌ ಎಂದರೇನು, ನಡೆಸುವುದು ಹೇಗೆ; ಕರ್ನಾಟಕ ಚುನಾವಣೆ 2023ರ ಈ ಸಂದರ್ಭದಲ್ಲಿ ನೀವು ತಿಳಿಯಬೇಕಾದ ಅಂಶ ಇಲ್ಲಿವೆ

Exit Polls: ಕರ್ನಾಟಕ ವಿಧಾನಸಭೆಯ ನಿರ್ಣಾಯಕ ಘಟ್ಟದ ಸಂದರ್ಭದಲ್ಲಿ ಮತದಾನೋತ್ತರ ಸಮೀಕ್ಷೆ ಕಡೆಗೆ ಎಲ್ಲ ಗಮನ ನೆಟ್ಟಿದೆ. ಎಕ್ಸಿಟ್‌ ಪೋಲ್‌ ಎಂಬುದು ಬಹಳ ಕುತೂಹಲಕರ ವಿಚಾರ. ಇದನ್ನು ನಡೆಸುವುದು ಹೇಗೆ? ಇದಕ್ಕೆ ನಿಯಮ ನಿಬಂಧನೆಗಳಿವೆಯಾ? ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಇವಿಎಂನೊಂದಿಗೆ ಚುನಾವಣಾ ಸಿಬ್ಬಂದಿ (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ಇವಿಎಂನೊಂದಿಗೆ ಚುನಾವಣಾ ಸಿಬ್ಬಂದಿ (ಸಾಂಕೇತಿಕ ಚಿತ್ರ) (PTI Photo/Shailendra Bhojak)

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election)ಗೆ ಸಂಬಂಧಿಸಿದ ಎಕ್ಸಿಟ್‌ ಪೋಲ್‌ (Exit Poll) ಅಥವಾ ಚುನಾವಣೋತ್ತರ ಸಮೀಕ್ಷೆಯ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಇಂದು (ಮೇ 10) ಸಂಜೆ 6 ಗಂಟೆಗೆ ಮತದಾನ ಕೊನೆಗೊಂಡ ನಂತರ ಎಕ್ಸಿಟ್‌ ಪೋಲ್‌ ವರದಿಗಳು ಪ್ರಸಾರವಾಗಲಿವೆ.

ಟ್ರೆಂಡಿಂಗ್​ ಸುದ್ದಿ

ಎಕ್ಸಿಟ್‌ ಪೋಲ್‌ಗಳ ಫಲಿತಾಂಶದ ಕಡೆಗೆ ಹೆಚ್ಚು ಕುತೂಹಲ ಇರುತ್ತದೆ. ವಾಸ್ತವದಲ್ಲಿ ಈ ಎಕ್ಸಿಟ್‌ ಪೋಲ್‌ ಎಂದರೇನು? ಅದನ್ನು ಹೇಗೆ ನಡೆಸುತ್ತಾರೆ? ಪ್ರಕ್ರಿಯೆ ಏನು? ಇದಕ್ಕೆ ಸಂಬಂಧಿಸಿ ಏನಾದರೂ ಕಾನೂನು, ನಿಯಮಗಳ ಚೌಕಟ್ಟು ಇದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇದು.

ಏನಿದು ಎಕ್ಸಿಟ್‌ ಪೋಲ್ಸ್‌ ಅಥವಾ ಚುನಾವಣೋತ್ತರ ಸಮೀಕ್ಷೆ ಎಂದರೇನು?

ಎಕ್ಸಿಟ್‌ ಪೋಲ್‌ ಅಂದ್ರೆ ಬೇರೇನೂ ಅಲ್ಲ. ಅದೂ ಒಂದು ಸಮೀಕ್ಷೆ. ಚುನಾವಣೆ ನಡೆಯುತ್ತಿರುವ ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯದ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ನಡೆಸುವಂಥ ಸಮೀಕ್ಷೆ ಇದು. ಈ ಸಮೀಕ್ಷೆಯನ್ನು ಮತದಾನೋತ್ತರ ಸಮೀಕ್ಷೆ, ಚುನಾವಣೋತ್ತರ ಸಮೀಕ್ಷೆ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಮಾಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಅವರು ಮತ ಚಲಾಯಿಸಿದ ನಂತರ ಅವರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಮತ್ತು ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಮತದಾರರನ್ನು ಕೇಳುವುದು. ಅವರು ಮತ ಚಲಾಯಿಸಿದ ತಕ್ಷಣ ಸತ್ಯವನ್ನು ಹೇಳಲು ಮತದಾರ ಹೆಚ್ಚು ಎಂಬ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತಾರೆ. ಮತದಾರರ ಮನಸ್ಥಿತಿಯನ್ನು ತಿಳಿಸುವುದು ಮತ್ತು ಚುನಾವಣಾ ಫಲಿತಾಂಶದ ಬಗ್ಗೆ ಸ್ಥೂಲ ಕಲ್ಪನೆಯನ್ನು ನೀಡುವುದು ಈ ಸಮೀಕ್ಷೆಯ ಮೂಲ ಉದ್ದೇಶ.

ಈ ಸಮೀಕ್ಷೆಯನ್ನು ಯಾರು ನಡೆಸುತ್ತಾರೆ?

ಈ ಎಕ್ಸಿಟ್ ಪೋಲ್‌ಗಳನ್ನು ಯಾವುದೇ ಸರ್ಕಾರಿ ಸಂಸ್ಥೆಗಳು ನಡೆಸುವುದಲ್ಲ. ಸಾಮಾನ್ಯವಾಗಿ ಕೆಲವು ಮಾಧ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಸಮೀಕ್ಷೆ ಮಾಡುವ ಖಾಸಗಿ ಸಂಸ್ಥೆಗಳು ಇಂತಹ ಎಕ್ಸಿಟ್‌ ಪೋಲ್‌ಗಳನ್ನು ನಡೆಸುತ್ತವೆ ಎಂಬುದನ್ನು ಮತದಾರರು ತಿಳಿದಿರಬೇಕು. ಆಯ್ದ ಮತದಾರರನ್ನು ಮಾತನಾಡಿಸಿ ಈ ಸಮೀಕ್ಷಾ ವರದಿಯನ್ನು ತಯಾರಿಸಲಾಗುತ್ತದೆ. ಬಹುತೇಕ ಫಲಿತಾಂಶದ ಸಮೀಪ ಇರುತ್ತದೆ ಎಂಬ ವಿಶ್ವಾಸ. ಈ ಸಮೀಕ್ಷೆಗಳು ಅಗಾಧವಾಗಿ ಜನಪ್ರಿಯತೆ ಹೊಂದಿದ್ದರೂ ಅವುಗಳ ನಿಖರತೆ ವಿಚಾರಕ್ಕೆ ಬಂದರೆ ಇನ್ನೂ ಪ್ರಶ್ನಾರ್ಹವಾಗಿಯೇ ಇವೆ.

ಎಕ್ಸಿಟ್‌ ಪೋಲ್‌ಗಳ ನಿಖರತೆ ಪ್ರಮಾಣ ಎಷ್ಟು?

ಕೆಲವು ಸಂಸ್ಥೆಗಳು, ಸಂಘಟನೆಗಳು ತಮ್ಮ ರಾಜಕೀಯ ಪಕ್ಷಪಾತ ಅಥವಾ ಸೈದ್ಧಾಂತಿಕ ಪ್ರವೃತ್ತಿ ಕಾರಣ ಪಕ್ಷದ ಪರವಾಗಿ ನಕಲಿ ಎಕ್ಸಿಟ್‌ ಪೋಲ್‌ಗಳನ್ನು ಸೃಷ್ಟಿಸಿದ ಅನೇಕ ನಿದ‍ರ್ಶನಗಳು ಕಣ್ಣಮುಂದೆ ಇವೆ. ಇದೇ ರೀತಿ ಅನೇಕ ರಾಜಕಾರಣಿಗಳ ಆರೋಪವೂ ಇದೆ. ಎಕ್ಸಿಟ್‌ ಪೋಲ್‌ಗಳನ್ನು ಮಾಧ್ಯಮ ಸಂಸ್ಥೆಗಳು ಸರಿಯಾಗಿ ನಡೆಸಿಲ್ಲ ಎಂಬ ಟೀಕೆಯೂ ವ್ಯಕ್ತವಾಗುವುದುಂಟು.

ವಾಸ್ತವದಲ್ಲಿ ‘ಎಕ್ಸಿಟ್ ಪೋಲ್’ ಯಾವುದೇ ಏಜೆನ್ಸಿ ನಡೆಸಿದರೂ ಅದು ನಿಖರವಲ್ಲ. ಅದು ಹಾಗಾಗಲೂ ಸಾಧ್ಯವಿಲ್ಲ. ಆದಾಗ್ಯೂ, ಬಹುತೇಕ ಸಂದರ್ಭಗಳಲ್ಲಿ ಎಕ್ಸಿಟ್‌ ಪೋಲ್‌ಗಳು ಚುನಾವಣಾ ಫಲಿತಾಂಶದ ದಿಕ್ಸೂಚಿಯಾಗಿ ಬಂದಿರುವ ಉದಾಹರಣೆಗಳಿವೆ. ಇಷ್ಟಾಗ್ಯೂ, ಚುನಾವಣಾ ಫಲಿತಾಂಶವಷ್ಟೇ ನಿಖರ ಎಂಬುದನ್ನು ಸಾರ್ವಜನಿಕರು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಎಕ್ಸಿಟದ ಪೋಲ್‌ ನಡೆಸುವುದು ಹೇಗೆ?

ಮತದಾರರು ಮತ ಚಲಾಯಿಸಿದ ನಂತರ ಅವರಿಗೆ ನಿಶ್ಚಿತ ಪ್ರಶ್ನೆಗಳನ್ನು ಕೇಳುವ ಮೂಲಕ ಎಕ್ಸಿಟ್ ಪೋಲ್ ಅನ್ನು ನಡೆಸಲಾಗುತ್ತದೆ. ಇದು ಒಪೀನಿಯನ್ ಪೋಲ್‌ಗಿಂತ ಭಿನ್ನವಾಗಿದೆ. ಏಕೆಂದರೆ ಚುನಾವಣೆಗಳು ನಡೆಯುವ ಮೊದಲು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಒಪೀನಿಯನ್‌ ಪೋಲ್‌ ವರದಿ ಪ್ರಕಟಿಸಲಾಗುತ್ತದೆ. ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಮತದಾರನು ತಾನು ಯಾವ ಪಕ್ಷ ಮತ್ತು ಅಭ್ಯರ್ಥಿಗೆ ಮತ ಹಾಕಿದ್ದಾನೆ ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವ ರೀತಿಯಲ್ಲಿ ಪ್ರಶ್ನಾವಳಿಯನ್ನು ರಚಿಸಿ ಉತ್ತರ ಪಡೆಯಲಾಗುತ್ತದೆ.

ಎಕ್ಸಿಟ್‌ ಪೋಲ್‌ಗಳ ನಿಯಂತ್ರಣಕ್ಕೆ ನಿಯಮಗಳಿವೆಯಾ?

ಈ ಎಕ್ಸಿಟ್ ಪೋಲ್‌ಗಳನ್ನು ಯಾವಾಗ ಪ್ರಕಟಿಸಬೇಕು ಎಂಬುದು ಬಹುಕಾಲದ ಚರ್ಚಾ ವಿಷಯ. ಇದು ಒಂದೆರೆಡು ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಂತರ ಈ ಸಮೀಕ್ಷೆಗಳು ಯಾವಾಗ ಪ್ರಕಟಿಸಬೇಕು ಎಂಬ ಬಗ್ಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಮಾಡಲಾಯಿತು. ಪ್ರಚಾರ ಅಂತ್ಯವಾದ ಬಳಿಕ ಮತದಾನ ಪ್ರಾರಂಭವಾಗುವ ಮೊದಲು ಮತ್ತು ಅಂತಿಮ ಮತ ಚಲಾವಣೆಯಾಗುವವರೆಗೆ ಮತ್ತು ಕೊನೆಯ ಹಂತದ ಮತದಾನ ಮುಗಿಯುವವರೆಗೆ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದಕ್ಕೆ ಅನುಗುಣವಾಗಿ ಚುನಾವಣಾ ಆಯೋಗ ಎಕ್ಸಿಟ್‌ ಪೋಲ್‌ ಪ್ರಕಟಣೆಗೆ ಚುನಾವಣೆಯ ಎಲ್ಲ ಹಂತಗಳ ಮತದಾನದ ಮುಗಿದು ಒಂದು ಗಂಟೆ ಕಳೆದ ನಂತರ ಅವಕಾಶ ನೀಡುವುದನ್ನು ರೂಢಿಸಿಕೊಂಡಿದೆ.

IPL_Entry_Point