ಕನ್ನಡ ಸುದ್ದಿ  /  Karnataka  /  Karnataka Cet Problem: Cet Repeaters Got Opportunity Last Year Itself Said Higher Education Minister Dr C N Ashwath Narayan

Karnataka CET Problem: ಪುನರಾವರ್ತಿತರಿಗೆ ಸಿಕ್ಕಿತ್ತಲ್ಲ ಅವಕಾಶ? ಉನ್ನತ ಸಚಿವರ ಸಹಜ ಮಾತು

ಪುನರಾವರ್ತಿತರಿಗೆ ಕಳೆದ ಸಲವೇ ಸಿಕ್ಕಿತ್ತಲ್ಲ ಅವಕಾಶ? ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದ ತೀರ್ಮಾನ ಸರಿ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿಕಾಸಸೌಧದಲ್ಲಿ ಸಭೆ ನಡೆಸಿದ ವೇಳೆ ಸಮರ್ಥಿಸಿದ್ದಾರೆ. ಸಿಇಟಿ(CET) ರ್ಯಾಂಕಿಂಗ್‌ ಸಮಸ್ಯೆ (Karnataka CET Problem) ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಅವರು ಸಭೆ ನಡೆಸಿದ್ದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ (HT_PRINT)

ಬೆಂಗಳೂರು: ಸಿಇಟಿ ರ್ಯಾಂಕಿಂಗ್‌ನಿಂದ ಆಗಿರುವ ಸಮಸ್ಯೆ (Karnataka CET Problem) ವಿಚಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಡವಟ್ಟುಮಾಡಿದ್ದರಿಂದ ಅನ್ಯಾಯವಾಗಿದೆ ಎಂದು ಕಳೆದ ವರ್ಷದ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಪಾಲಕರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ. ಅದರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಇಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿಇಟಿ (CET) ರ್ಯಾಂಕಿಂಗ್‌ ವೇಳೆ ಸಿಇಟಿ ಮತ್ತು ಪಿಯುಸಿ ಪರೀಕ್ಷೆ ಅಂಕ ಶೇ. 50ರಷ್ಟು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತಿದೆ. ಇದರಲ್ಲೇನೂ ಗೊಂದಲ ಇಲ್ಲ ಎಂದು ಸಿಇಟಿ ರ್ಯಾಂಕಿಗ್​​ ಪಟ್ಟಿಯಲ್ಲಿ ಗೊಂದಲ ಹಿನ್ನೆಲೆ ವಿಕಾಸಸೌಧದಲ್ಲಿ ಮಂಗಳವಾರ ಸಭೆ ನಡೆಸಿದ ವೇಳೆ ಅವರು ಸ್ಪಷ್ಟಪಡಿಸಿದರು ಎಂದು ಟಿವಿ9 ಕನ್ನಡ ಸುದ್ದಿವಾಹಿನಿ ವರದಿ ಮಾಡಿದೆ.

ಕೋವಿಡ್‌ 19 ಸಂಕಷ್ಟದ ಕಾರಣ 2020-21 ರಲ್ಲಿ ಎಲ್ಲರನ್ನೂ ತೇರ್ಗಡೆಗೊಳಿಸಲಾಗಿತ್ತು. ಅವರಿಗೆ ಪಿಯುಸಿ ಅಂಕ ಪರಿಗಣಿಸಿರಲಿಲ್ಲ. ಸಿಇಟಿ ಪರೀಕ್ಷೆ ಮಾಡಿ ಅದರ ಅಂಕ ಮಾತ್ರ ನೀಡಲಾಗಿತ್ತು ಎಂದು ಅವರು ವಿವರಿಸಿದರು.

ಫ್ರಶರ್ಸ್‌ಗೆ ರ್ಯಾಂಕಿಂಗ್‌ ಹೀಗೆ

ಪ್ರಸಕ್ತ ವರ್ಷ ಅಂದರೆ 2022ರ ವಿದ್ಯಾರ್ಥಿಗಳಿಗೆ ಎರಡೂ ಪರೀಕ್ಷೆಗಳ ಅಂಕವನ್ನು ಪರಿಗಣಿಸಿ ರ್ಯಾಂಕ್‌ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಶೇಕಡ 40, ಪ್ರಥಮ ಪಿಯುಸಿ ಶೇಕಡ 40, ಗುಡ್ ಬಿಹೇವಿಯರ್ ಶೇಕಡ 10, ಇಂಟರ್ನಲ್ ಅಸೆಸ್ಮೆಂಟ್ ಶೇಕಡ 10 ಎಂದು ವರ್ಗೀಕರಿಸಿ ಅಂಕ ನೀಡಲಾಗಿದೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮಾನದಂಡವನ್ನು ಪರಿಗಣಿಸಲಾಗಿದೆ. ಅದರಲ್ಲಿ ಪಾಸ್ ಆಗಿದ್ದಾರೆ. ಹೀಗಾಗಿ ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೆಗೆದುಕೊಂಡ ನಿರ್ಧಾರ ಸರಿ ಇದೆ ಎಂದು ಸಚಿವ ಅಶ್ವತ್ಥ ನಾರಾಯಣ ಸಮರ್ಥನೆ ಮಾಡಿದ್ದಾರೆ.

2021ರ ಬ್ಯಾಚ್‌ನವರಿಗೆ ಕಳೆದ ಬಾರಿಯೇ ಅವಕಾಶ

ಈಗ ಪ್ರತಿಭಟನಾನಿರತ ಪುನರಾವರ್ತಿತರಿಗೆ ಅಂದರೆ, 2021ರ ಬ್ಯಾಚ್‌ನವರಿಗೆ ಕಳೆದ ಬಾರಿಯೇ ಅವಕಾಶ ಸಿಕ್ಕಿತ್ತು. ಹಾಗಾಗಿ ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೆಗೆದುಕೊಂಡ ನಿರ್ಣಯ ಸರಿ ಇದೆ.

ಇನ್ನು, ಐಸಿಎಸ್​ಸಿ, ಸಿಬಿಎಸ್​ಇ ವಿದ್ಯಾರ್ಥಿಗಳಿಗೆ ಕಳೆದ ಸಲ ಪರೀಕ್ಷೆ ಮಾಡಿರಲಿಲ್ಲ. ಅವರಲ್ಲಿ ಕೆಲವರಿಗೆ ಪಿಯು ಅಂಕ ಪರಿಗಣಿಸಿ ರ್ಯಾಂಕ್‌ ನೀಡಲಾಗಿದೆ ಎಂಬ ಆರೋಪ ಇದೆ. ಅಂತಹ ಲೋಪವನ್ನು ಪತ್ತೆ ಹಚ್ಚಿ ಈಗಾಗಲೇ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಐಸಿಎಸ್‌ಸಿ, ಸಿಬಿಎಸ್‌ಇಯ ಕಳೆದ ಬ್ಯಾಚ್‌ನ ವಿದ್ಯಾರ್ಥಿಗಳಿಗೂ ಈಗ ಪಿಯು ಅಂಕ ವಿತ್‌ಡ್ರಾ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಭೆಯಲ್ಲಿ ವಿವರಣೆ ನೀಡಿದ್ದಾರೆ.

ಪ್ರಾಧಿಕಾರ ಹೇಳಿದ್ದೇನು?

ಸಾಮಾನ್ಯವಾಗಿ ಸಿಇಟಿ ಬರೆಯುವ ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 2,000ದ ಆಸುಪಾಸಿನಲ್ಲಿರುತ್ತದೆ. ಈ ಬಾರಿ 24,000ಕ್ಕೂ ಹೆಚ್ಚು ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದು ನಿಜಕ್ಕೂ ದಂಗುಬಡಿಸುವ ವಿದ್ಯಮಾನ. ಯಾಕೆ ಹೀಗಾಗಿದೆ? ಇದರಿಂದಾಗಿಯೇ ಗೊಂದಲ ಮೂಡಿದೆ. ಕಳೆದ ವರ್ಷ ಸಿಇಟಿ ಮೂಲಕ ಸೀಟು ಹಂಚಿಕೆಯಾಗಿ ಕೋರ್ಸ್‌ಗೆ ಸೇರದವರು ಎಷ್ಟು ಮಂದಿ ಎಂಬುದನ್ನು ತಿಳಿಯಬೇಕು. ನಿಗದಿತ ದಿನಾಂಕದೊಳಗೆ ಸೀಟು ರದ್ದುಪಡಿಸದೇ ಇದ್ದರೆ ಅಂಥವರು ಮತ್ತೆ ಸಿಇಟಿ ಮೂಲಕ ಸೀಟು ಪಡೆಯಲು ಅರ್ಹರಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.‌ ರಮ್ಯಾ ತಿಳಿಸಿದ್ದಾಗಿ ಪ್ರಜಾವಾಣಿ ಆಗಸ್ಟ್‌ 1ರಂದು ವರದಿ ಮಾಡಿತ್ತು.

ಉತ್ತರ ಸಿಗದ ಪ್ರಶ್ನೆಗಳು

ಪುನರಾವರ್ತಿತರು ಮತ್ತು ಅವರ ಪಾಲಕರಿಗೆ ಸರ್ಕಾರ ಅಥವಾ ಪ್ರಾಧಿಕಾರದಿಂದ ಉತ್ತರ ಸಿಗದ ಪ್ರಶ್ನೆಗಳು ಕೆಲವು ಇವೆ. ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಹೇಳಿಕೆಗಳ ಸಮಾಧಾನ ನೀಡುವಂಥದ್ದಲ್ಲ ಎಂಬುದು ಪುನರಾವರ್ತಿತರು ಮತ್ತು ಅವರ ಪಾಲಕರ ವಾದ.

  1. ಸಿಇಟಿ ಪರೀಕ್ಷೆಯಲ್ಲಿ ಇಷ್ಟೇ ಸಂಖ್ಯೆಯ ಪುನರಾವರ್ತಿತರು ಭಾಗವಹಿಸಬೇಕು ಎಂಬ ಮಿತಿ ಏನಾದರೂ ಇದೆಯಾ? ಇದ್ದರೆ ಅದಕ್ಕೆ ಏನು ಮಾನದಂಡ? ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದನ್ನು ಪರೀಕ್ಷೆ ಮೊದಲೇ ಈ ಮಾನದಂಡಗಳನ್ನು ಯಾಕೆ ಘೋಷಿಸಿಲ್ಲ?
  2. ರಿಸಲ್ಟ್‌ ಬೆಟರ್‌ಮೆಂಟ್‌ ಮತ್ತು ಬೇರೆ ಕೋರ್ಸ್‌ ಸೇರುವುದಕ್ಕೆ ಪುನರಾವರ್ತಿತರು ಪರೀಕ್ಷೆ ಬರೆಯುವುದು ಸಹಜ. ಸಂಖ್ಯೆ ಹೆಚ್ಚಾದ ಕೂಡಲೇ ಪ್ರಾಧಿಕಾರ ಗೊಂದಲ, ಸಂದೇಹದಿಂದ ಯಾಕೆ ನೋಡುತ್ತೆ?
  3. ಕಳೆದ ವರ್ಷವೇ ಅವಕಾಶ ಸಿಕ್ಕಿತ್ತಲ್ಲ ಎಂಬ ಸಚಿವರ ವಿವರಣೆ ಪುನರಾವರ್ತಿತರಲ್ಲಿ ಮತ್ತು ಫ್ರೆಶರ್ಸ್‌ಗಳಲ್ಲಿ ಇನ್ನೂ ಗೊಂದಲ ಮೂಡಿಸಿದೆ. ಕಳೆದ ವರ್ಷ ಪರೀಕ್ಷೆ ಬರೆದವರು ಈ ವರ್ಷ, ಈ ವರ್ಷ ಬರೆದವರು ಮುಂದಿನ ವರ್ಷ ಮತ್ತೆ ಸಿಇಟಿ ಬರೆದು ಫಲಿತಾಂಶ ಸುಧಾರಿಸಿಕೊಂಡು ತಮಗಿಷ್ಟವಾದ ಕೋರ್ಸ್‌ ಸೇರಿಕೊಳ್ಳಬಾರದಾ?

ಇಂದು ಪಿಐಎಲ್‌ ಸಲ್ಲಿಕೆ ಸಾಧ್ಯತೆ

ಸಿಇಟಿ ಪುನರಾವರ್ತಿತರ ಗುಂಪು ಇಂದು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ದಾಖಲಿಸಲು ಸಿದ್ಧತೆ ನಡೆಸಿದೆ. ನಿನ್ನೆ ಈ ಸಂಬಂಧ ಎಲ್ಲರಿಂದ ಮಾಹಿತಿ ಕಲೆ ಹಾಕಿದ್ದು, ಅರ್ಜಿ ಸಲ್ಲಿಸಲು ಬೇಕಾದ ಪ್ರಾಥಮಿಕ ಸಿದ್ಧತೆ ಮಾಡಕೊಂಡಿದ್ದರು ಎಂದು ಈ ವಿದ್ಯಮಾನವನ್ನು ಕೆಲವು ವಿದ್ಯಾರ್ಥಿ ನಾಯಕರು HTಕನ್ನಡಕ್ಕೆ ತಿಳಿಸಿದ್ದಾರೆ.

IPL_Entry_Point