ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಅನ್ನೇ ನೆಚ್ಚಿಕೊಂಡಿವೆ ಬಿಜೆಪಿ, ಕಾಂಗ್ರೆಸ್‌- ಅರುಣ್‌ ದೇವ್‌ ಅವಲೋಕನ

Karnataka Election 2023: ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಅನ್ನೇ ನೆಚ್ಚಿಕೊಂಡಿವೆ ಬಿಜೆಪಿ, ಕಾಂಗ್ರೆಸ್‌- ಅರುಣ್‌ ದೇವ್‌ ಅವಲೋಕನ

Karnataka Election 2023: ಬೆಳಗಾವಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಜಾರಕಿಹೊಳಿ ಸಹೋದರರನ್ನೇ ನೆಚ್ಚಿಕೊಂಡಿವೆ. ಈ ಕುಟುಂಬ 40 ಸ್ಥಾನಗಳಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸಿ ಕಿಂಗ್‌ ಮೇಕರ್‌ ಆಗುವುದಕ್ಕೆ ಸಿದ್ಧವಾಗುತ್ತಿರುವ ವಿದ್ಯಮಾನವನ್ನು ಅವಲೋಕಿಸಿದ್ದಾರೆ ಹಿಂದುಸ್ತಾನ್‌ ಟೈಮ್ಸ್‌ ಕರ್ನಾಟಕ ಬ್ಯೂರೋದ ಅಸಿಸ್ಟೆಂಟ್‌ ಎಡಿಟರ್‌ ಅರುಣ್‌ ದೇವ್‌.

ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ (HT Archive)

ಬೆಂಗಳೂರಿನ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದ ಬೆಳಗಾವಿಯಲ್ಲಿ ಸಕ್ಕರೆ ದೊರೆಗಳ ಗುಂಪು ಜಿಲ್ಲೆಯ ರಾಜಕೀಯ ನಾಡಿಮಿಡಿತವನ್ನು ನಿಯಂತ್ರಿಸುತ್ತದೆ. ಈ ಪೈಕಿ ಜಾರಕಿಹೊಳಿ ಕುಟುಂಬ ಪ್ರಮುಖವಾದುದು!

ಜಾರಕಿಹೊಳಿಗಳಲ್ಲದೆ, ಇತರ ಸಕ್ಕರೆ ದೊರೆಗಳಾದ ಕತ್ತಿಗಳು, ಕೋರೆಗಳು ಮತ್ತು ಪಾಟೀಲರು ಕೂಡ ತಮ್ಮ ಸಕ್ಕರೆ ಕಾರ್ಖಾನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಗಣನೀಯ ರಾಜಕೀಯ ಅಧಿಕಾರವನ್ನು ಹೊಂದಿದ್ದಾರೆ.

ಕರ್ನಾಟಕದ ಸಕ್ಕರೆ ಬಟ್ಟಲು ಎಂದೂ ಕರೆಯಲ್ಪಡುವ ಉತ್ತರ ಕರ್ನಾಟಕ ಭಾಗದ ಈ ಜಿಲ್ಲೆಯು 224 ಸದಸ್ಯ ಬಲದ ವಿಧಾನಸಭೆಗೆ 18 ಶಾಸಕರನ್ನು ಕಳುಹಿಸುತ್ತಿದ್ದು, ಮೇ 10 ರಂದು ಮತದಾನ ನಡೆಯಲಿದೆ.

ಬೆಳಗಾವಿಯಲ್ಲಿ, ಇದು ಇಬ್ಬರು ಸಹೋದರರಾದ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ನೇರ ರಾಜಕೀಯ ಜಗಳ ಮತ್ತು ಆಯಾ ಪಕ್ಷಗಳಲ್ಲಿ ಅವರ ಪ್ರಭಾವವಾಗಿದೆ. ರಮೇಶ್ ಗೋಕಾಕ ಕ್ಷೇತ್ರದಿಂದ ಹಾಗೂ ಸತೀಶ್ ಯಮಕನಮರಡಿಯಿಂದ ಸ್ಪರ್ಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ (2018ರಲ್ಲಿ) ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗೆ ಗೆಲುವು ತಂದುಕೊಟ್ಟ ನಿಪುಣ ರಾಜಕೀಯ ತಂತ್ರಗಾರ ಎಂದು ಪರಿಗಣಿಸಲ್ಪಟ್ಟವರು ಸತೀಶ್ ಜಾರಕಿಹೊಳಿ. ಅವರು ಈಗ ಬೆಳಗಾವಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. 2019 ರಲ್ಲಿ ಜನತಾ ದಳ (ಜಾತ್ಯತೀತ)-ಕಾಂಗ್ರೆಸ್ ಸಮ್ಮಿಶ್ರ ಆಡಳಿತದ ಪತನಕ್ಕೆ ಕಾರಣವಾದ ಡಜನ್‌ಗೂ ಹೆಚ್ಚು ಶಾಸಕರ ಪಕ್ಷಾಂತರವನ್ನು ಸಂಘಟಿಸಿದ್ದು ಅವರ ಹಿರಿಯ ಸಹೋದರ ರಮೇಶ್ ಜಾರಕಿಹೊಳಿ. ಅವರು ಜಿಲ್ಲೆಯಲ್ಲಿ ಈಗ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP)ದ ಪ್ರಚಾರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ತಂತ್ರಗಾರಿಕೆ

ಚುನಾವಣೆ ಸಮೀಪಿಸುತ್ತಿದ್ದರೂ, ಬೆಳಗಾವಿಯ ಕಾಂಗ್ರೆಸ್ ಕಚೇರಿ ಕಳೆದ ಭಾನುವಾರ ನಿರ್ಜನವಾಗಿ ಕಂಡುಬಂತು. ಕಚೇರಿಯೊಳಗೆ ಸತೀಶ್ ಜಾರಕಿಹೊಳಿ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರ ಜತೆ ಸಭೆ ನಡೆಸುತ್ತಿದ್ದರು. ಪಕ್ಷದ ಕಚೇರಿಯಲ್ಲಿ ನೀರಸ ಮೌನದ ಬಗ್ಗೆ ಕೇಳಿದಾಗ, ಅದು ಹೇಗಿರಬೇಕೋ ಹಾಗಿದೆ ಎಂದು ಹೇಳಿದರು.

“ಚುನಾವಣೆಯಲ್ಲಿ ಗೆಲುವು ಅಂತಿಮವಾಗಿ ನೀವು ನಿಲ್ಲಿಸುವ ಅಭ್ಯರ್ಥಿಗಳು ಮತ್ತು ಪ್ರಚಾರದ ಪರಿಣಾಮದ ಮೇಲೆ ಅವಲಂಬಿತವಾಗಿರುತ್ತದೆ. ಹಿರಿಯ ನಾಯಕರ ಭೇಟಿಯಿಂದ ಅಥವಾ ಅವರ ನಿರ್ದೇಶನದಿಂದ ನಮಗೆ (ಜಿಲ್ಲಾ ನಾಯಕತ್ವ) ಸಹಾಯ ಸಿಗುತ್ತದೆ. ಈ ಬಾರಿ ನಾವು ಉತ್ತಮ ಅಭ್ಯರ್ಥಿಗಳನ್ನು ಹೊಂದಿದ್ದೇವೆ ಮತ್ತು ಅವರಿಗೆ ಸ್ಪಷ್ಟ ಸೂಚನೆಗಳಿವೆ. ಕೆಲಸವು ನೆಲದ ಮೇಲೆ ನಡೆಯುತ್ತಿದೆ, ಅಲ್ಲಿ ಅದು ಮುಖ್ಯವಾಗಿದೆ” ಎಂದು ಸತೀಶ್ ಹೇಳಿದರು.

ಅವರ ಸಹೋದರ ಚುನಾವಣೆಯ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಪ್ರಶ್ನಿಸಿದಾಗ, ಬಿಜೆಪಿಯ ಅತ್ಯುನ್ನತ ನಾಯಕರು ಸಹ ಆಡಳಿತ ವಿರೋಧಿ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಪ್ರಭಾವವು ಅವರಿಗೆ ಸಹಾಯ ಮಾಡುವುದಿಲ್ಲ. ಅವರು (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ) ಮತ್ತು ಅವರಂತಹ ಉನ್ನತ ನಾಯಕರನ್ನು ಇಲ್ಲಿಗೆ ಕರೆತರುತ್ತಿರುವುದು ಗಮನಿಸಿದರೆ, ಅವರ ಸ್ಥಳೀಯ ನಾಯಕತ್ವವು ಗಾಬರಿಗೊಂಡಿರುವುದು ಕಂಡಬರುತ್ತದೆ. ಬೆಳಗಾವಿ ಜಿಲ್ಲೆಯ 18 ಸ್ಥಾನಗಳಲ್ಲಿ 12-13 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಲಕ್ಷ್ಮಣ ಸವದಿ ಅವರಂತಹ ಹಿರಿಯ ನಾಯಕರು ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ನೆರವಾಗಬಹುದು ಎಂಬುದನ್ನು ಅವರು ಒಪ್ಪಿಕೊಂಡು. ಅಲ್ಲದೆ, ಆಡಳಿತ ವಿರೋಧಿ ಅಲೆಯನ್ನು ಈ ಪಕ್ಷಾಂತರ ದೃಢೀಕರಿಸಿದೆ ಎಂದು ಹೇಳಿದರು.

ಈ ನಡುವೆ, ಚುನಾವಣೆ ಮುಗಿಯುವವರೆಗೆ ಯಾವುದೇ ರಾಜಕೀಯ ಹೇಳಿಕೆ ನೀಡದಂತೆ ಪಕ್ಷ ಸೂಚಿಸಿದೆ. ಮತ ಎಣಿಕೆ ಮುಗಿಯುವವರೆಗೂ ನಾನು ಯಾವುದೇ ಮಾಧ್ಯಮ ಹೇಳಿಕೆಗಳನ್ನು ನೀಡುವುದಿಲ್ಲ. ಹೇಳಿಕೆಗಳನ್ನು ಪಕ್ಷದ ವಿರುದ್ಧ ಬಳಸಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ಪಕ್ಷದ ವರಿಷ್ಠರು ಹೇಳಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ನಂತರ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು 2021ರ ಮಾರ್ಚ್‌ನಲ್ಲಿ ಉದ್ಯೋಗಕ್ಕಾಗಿ ಲೈಂಗಿಕ ಹಗರಣದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಬಿಜೆಪಿ ವಿರುದ್ಧ ದಾಳಿ ಮಾಡಲು ಪ್ರತಿಪಕ್ಷಗಳಿಗೆ ಆಹಾರವನ್ನು ಒದಗಿಸಿತು. ಚುನಾವಣೆಗೆ ಮುನ್ನ, ಬಿಜೆಪಿಯ ಪ್ರತಿ ಮತದಾರರಿಗೆ 6,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಕ್ಕಾಗಿ ಇವರ ವಿರುದ್ಧ ಜನವರಿ 22ರಂದು ಪೊಲೀಸ್‌ ದೂರು ದಾಖಲಾಗಿದೆ.

ಆದಾಗ್ಯೂ, ಜಿಲ್ಲೆಯಲ್ಲಿ ಹಿಂದಿನಿಂದಲೂ ಪ್ರಭಾವಿಯಾಗಿ ಇರುವಂತಹ ಜಾರಕಿಹೊಳಿ ಮೇಲೆ ಬಿಜೆಪಿ ವಿಶ್ವಾಸವನ್ನು ಇರಿಸಿಕೊಂಡಿದೆ. ಹಾಲಿ ಶಾಸಕರಾದ ಮಹೇಶ ಕುಮಟಳ್ಳಿ (ಅಥಣಿ), ಶ್ರೀಮಂತ ಪಾಟೀಲ (ಕಾಗವಾಡ), ನಾಗೇಶ ಮನ್ನೋಳಕರ (ಬೆಳಗಾವಿ ಗ್ರಾಮಾಂತರ), ಚಿಕ್ಕ ರೇವಣ್ಣ (ರಾಮದುರ್ಗ), ವಿಟ್ಲ ಹಲಗೇಕರ (ಖಾನಾಪುರ) ಮತ್ತು ಜಗದೀಶ ಗುಡಗುಂಟಿ (ಜಮಖಂಡಿ) ಅವರ ಉಮೇದುವಾರಿಕೆಗೆ ಪಕ್ಷದ ಹೈಕಮಾಂಡ್ ಅನುಮೋದನೆ ನೀಡಿದೆ. ರಮೇಶ್ ಜಾರಕಿಹೊಳಿ ಕೂಡ ಇದನ್ನು ಅನುಮೋದಿಸಿದರು. ಈ ನಿರ್ಧಾರ ಬಿಜೆಪಿ ಹಿರಿಯ ಲಿಂಗಾಯತ ನಾಯಕ ಎನಿಸಿಕೊಂಡಿದ್ದ ಲಕ್ಷ್ಮಣ ಸವದಿಗೆ ಹಿನ್ನಡೆ ಉಂಟುಮಾಡಿತು. ಪಕ್ಷದ ವಿಶ್ವಾಸ ಸವದಿಗಿಂತ ಹೆಚ್ಚು ಜಾರಕಿಹೊಳಿ ಮೇಲೆ ಇರುವುದು ಈ ನಡೆಯ ಮೂಲಕ ವ್ಯಕ್ತವಾಗಿದೆ.

"ಅವರು ತೀಕ್ಷ್ಣವಾಗಿ ಪ್ರಚಾರ ಮುಂದುವರಿಸಿದ್ದಾರೆ. ಅವರು ಕ್ಷೇತ್ರದಲ್ಲಿರುವ ದಿನಗಳಲ್ಲಿ ಅವರ ಬೆಂಬಲಿಗರು ಗ್ರಾಮಗಳಲ್ಲಿ ಮನೆ ಮನೆಗೆ ಹೋಗುತ್ತಾರೆ. ಅಗತ್ಯ ಮತ್ತು ಉದಾರ ನೆರವು ಒದಗಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಬೆದರಿಕೆ ವಿಶೇಷವಾಗಿ ಸಾಲ ವಸೂಲಾತಿ ಬೆದರಿಕೆ ಎದುರಿಸಿದಾಗ, ಮತ ಹಾಕುವಂತೆ ಬೆದರಿಕೆ ಹಾಕಿದಾಗ ಕೂಡ ಸ್ಥಳೀಯರ ನೆರವಿಗೆ ಅವರು ಬಂದಿದ್ದರು ಎಂದು ಸ್ಥಳೀಯರೊಬ್ಬರು ಅನಾಮಧೇಯತೆಯನ್ನು ಕೋರಿಕೊಂಡು ವಿವರಿಸಿದ್ದಾರೆ.

ಎರಡು ಬಂಡಾಯಗಳ ಇತಿಹಾಸ

ಅನಿರೀಕ್ಷಿತವಾಗಿದ್ದರೂ, ರಮೇಶ್ ಜಾರಕಿಹೊಳಿ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಸೋಲನ್ನು ಮನದಟ್ಟು ಮಾಡಿಕೊಂಡ ರಮೇಶ್, ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನವನ್ನು ಖಚಿತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆ (2018 ರ)ಯ ನಂತರ, ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರೂ ಸಹೋದರರನ್ನು ಮಂತ್ರಿಗಳಾಗಿ ನೇಮಿಸಲಾಯಿತು. ಆದರೆ, ಈ ಹಿಂದೆ ರಮೇಶ್ ಅವರ ಆಪ್ತರಾಗಿದ್ದ ಬೆಳಗಾವಿ (ಗ್ರಾಮೀಣ)ದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜತೆಗೆ ಮನಸ್ತಾಪ ಉಂಟಾಯಿತು. ಆಗ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ನಿಷ್ಠೆಯನ್ನು ಡಿಕೆ ಶಿವಕುಮಾರ್ ಕಡೆಗೆ ಬದಲಾಯಿಸಿದರು. ಶಿವಕುಮಾರ್ ಸಹಾಯದಿಂದ, ಅವರು ತಮ್ಮ ಅಭ್ಯರ್ಥಿಗಳನ್ನು ಬೆಳಗಾವಿಯ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಜಾರಕಿಹೊಳಿ ಕುಟುಂಬದ ನಿಷ್ಠಾವಂತರನ್ನು ಬದಲಾಯಿಸಿದರು. ಕಾಂಗ್ರೆಸ್ ನಾಯಕರು ಲಕ್ಷ್ಮಿಯನ್ನು ಬೆಂಬಲಿಸುತ್ತಿದ್ದಂತೆ, ಈ ನಡೆಗೆ ಸೇಡು ತೀರಿಸಿಕೊಳ್ಳಲು ರಮೇಶ್ ಸಂಚು ರೂಪಿಸಿದರು, ಅವರು ಸೇರಿ ಸುಮಾರು 14 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಬಿಜೆಪಿಗೆ ಸೇರಿ ಉಪಚುನಾವಣೆಗೆ ಗೆದ್ದು ಬಿಜೆಪಿ ಸರ್ಕಾರ ರೂಪಿಸುವಲ್ಲಿ ರಮೇಶ್‌ ಪ್ರಮುಖ ಪಾತ್ರ ವಹಿಸಿದರು. ಇದಕ್ಕಾಗಿ ಪಕ್ಷವು ಅವರನ್ನು ಸರಿಯಾಗಿ ಪುರಸ್ಕರಿಸಿತು. 2019 ರಲ್ಲಿ ಮಧ್ಯಮ ಮತ್ತು ದೊಡ್ಡ ನೀರಾವರಿ, ಪ್ಲಮ್ ಖಾತೆಯ ಮಂತ್ರಿಯನ್ನಾಗಿ ಮಾಡಿತು.

ಆದಾಗ್ಯೂ, 2021ರ ಮಾರ್ಚ್‌ನಲ್ಲಿ ಅವರು ಯುವತಿಯ ಜತೆಗಿದ್ದ ವಿಡಿಯೋ ವೈರಲ್ ಆಯಿತು. ಇದರೊಂದಿಗೆ ಅವರ ಸಚಿವ ಸ್ಥಾನವೂ ಹೊರಟು ಹೋಯಿತು. ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಉದ್ಯೋಗದ ಭರವಸೆ ನೀಡುವ ಮೂಲಕ ತನ್ನನ್ನು ಬಳಸಿಕೊಂಡರು ಎಂದು ಮಹಿಳೆ ದೂರಿಕೊಂಡಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಯನ್ನು ಮಹಿಳೆ ದಾಖಲಿಸಿಕೊಂಡರು. ಅಲ್ಲದೆ, ಸರ್ಕಾರ ಅಧಿಕಾರ ಬಳಸಿಕೊಂಡು ಜಾರಕಿಹೊಳಿ ಅವರನ್ನು ದೋಷಮುಕ್ತಗೊಳಿಸದಂತೆ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿದರು.

ಆದರೆ ರಮೇಶ್‌ ಜಾರಕಿಹೊಳಿ, ಈ ಪ್ರಕರಣದ ಷಡ್ಯಂತ್ರದ ಮೂಲಕ ಸಚಿವ ಸ್ಥಾನಕ್ಕೆ ಕುತ್ತುಬರುವಂತೆ ಮಾಡಿದ್ದು ಡಿ.ಕೆ.ಶಿವಕುಮಾರ್‌ ಎಂದು ಆರೋಪಿಸಿದರು. ಬಿಎಸ್‌ ಯಡಿಯೂರಪ್ಪ ಅವರ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ತಮ್ಮ ಸಚಿವ ಸ್ಥಾನ ವಾಪಸ್‌ ಪಡೆಯಲು ರಮೇಶ್‌ ಜಾರಕಿಹೊಳಿ ಹಲವು ಸಲ ಪ್ರಯತ್ನಿಸಿದ್ದರು. ಆದರೆ ಸಫಲರಾಗಲಿಲ್ಲ.

“ಸಿಡಿ ವಿವಾದವು ಮರೆಯಾಗುತ್ತಿರುವಾಗ, ಲಕ್ಷ್ಮಿ ಹೆಬ್ಬಾಳ್ಕರ್‌ ಜತೆಗೆ ರಮೇಶ್‌ ಅವರ ವೈಷಮ್ಯ ಮುಂದುವರೆದಿದೆ. ಅವರು ತಮ್ಮ ಸ್ವಂತ ಗೆಲುವನ್ನು ಭದ್ರಪಡಿಸುವ ಬದಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಸೋಲನ್ನು ಖಚಿತಪಡಿಸಿಕೊಳ್ಳಲು ತಮ್ಮ ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ.ಕೆ.ಶಿವಕುಮಾರ್ ಮೇಲಿನ ತೀವ್ರ ದ್ವೇಷ‌ ರಮೇಶ್‌ ಭಾಷಣಗಳಲ್ಲಿ ಎದ್ದುಕಾಣುತ್ತದೆ. ಈ ಚುನಾವಣೆಯು ಅವರಿಗೆ ವೈಯಕ್ತಿಕ ದ್ವೇಷ ತೀರಿಸುವ ಕಣವಾಗಿ ಮಾರ್ಪಟ್ಟಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿ ತಿಳಿಸಿದರು.

ಸಕ್ಕರೆ ಬೆರೆತ ರಾಜಕೀಯ

ಜಾರಕಿಹೊಳಿ ಸಹೋದರರದ್ದು ಈ ಪ್ರದೇಶದ ಪ್ರಮುಖ ರಾಜಕೀಯ ಕುಟುಂಬ. ಸಕ್ಕರೆ ಕಾರ್ಖಾನೆಗಳೇ ಅವರ ಶಕ್ತಿ. ಬೆಳಗಾವಿಯಲ್ಲಿ ಜಾರಕಿಹೊಳಿಗಳು, ಕತ್ತಿಗಳು, ಕೋರೆಗಳು, ಪಾಟೀಲರು ಸೇರಿ ಸಕ್ಕರೆ ಉದ್ಯಮಿಗಳು ತಮ್ಮ ತಮ್ಮ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆ. ಪರಸ್ಪರರ ಪ್ರದೇಶಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಅಘೋಷಿತ ಒಪ್ಪಂದದೊಂದಿಗೆ ಇವೆಲ್ಲ ಕಾರ್ಯಾಚರಿಸುತ್ತಿವೆ.

ದಲಿತ ಸಮುದಾಯದ ಭದ್ರಕೋಟೆ ಎಂದು ಪರಿಗಣಿಸಲಾದ ಗೋಕಾಕ್, ಯಮಕನಮರಡಿ ಮತ್ತು ಅರಭಾವಿ ಪ್ರದೇಶಗಳಲ್ಲಿ ಜಾರಕಿಹೊಳಿ ಕುಟುಂಬ ಪ್ರಾಬಲ್ಯ ಹೊಂದಿದೆ. ಹುಕ್ಕೇರಿ, ಚಿಕ್ಕೋಡಿ ಮತ್ತು ಬೆಳಗಾವಿಯ ಉತ್ತರ ಭಾಗಗಳನ್ನು ಮಾಜಿ ಹುಕ್ಕೇರಿ ಶಾಸಕ ದಿವಂಗತ ಉಮೇಶ ಕತ್ತಿ ಅವರ ಕುಟುಂಬ ನಿಯಂತ್ರಿಸುತ್ತದೆ. ಈಗ ಅವರ ಪುತ್ರ ನಿಖಿಲ್ ಕತ್ತಿ ಮತ್ತು ಸಹೋದರ ರಮೇಶ್ ಕತ್ತಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ದಶಕಗಳಿಂದ ಆತ್ಮೀಯ ಗೆಳೆಯರಾಗಿರುವ ಕತ್ತಿ ಕುಟುಂಬ ಹಾಗೂ ಬಿಜೆಪಿ ಸಂಸದ ಪ್ರಭಾಕರ ಕೋರೆ ಈ ಪ್ರದೇಶದಲ್ಲಿ ಲಿಂಗಾಯತ ಮತಬ್ಯಾಂಕ್ ಮೇಲೆ ಗಮನಾರ್ಹ ಪ್ರಭಾವ ಬೀರಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಸವದಿ ಅಥಣಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಅಧಿಕಾರ ಹಿಡಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜಾರಕಿಹೊಳಿಯವರು ಬೆಳಗಾವಿಯಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ - ಸತೀಶ್ ಶುಗರ್ಸ್ ಲಿಮಿಟೆಡ್, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮತ್ತು ಹರ್ಷ ಶುಗರ್ ಮಿಲ್. ಕತ್ತಿ ಕುಟುಂಬ ಒಂದು ಸಕ್ಕರೆ ಕಾರ್ಖಾನೆಯನ್ನು ಹೊಂದಿದ್ದರೆ ಪ್ರಭಾಕರ ಕೋರೆ ಎರಡು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್, ಶಾಮನೂರು ಶಿವಶಂಕರಪ್ಪ, ಸಿದ್ದು ನ್ಯಾಮಗೌಡ, ಮುರಗೇಶ್ ನಿರಾಣಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಈಶ್ವರ್ ಖಂಡ್ರೆ ಸೇರಿ ಇತರ ಸ್ಥಳೀಯ ರಾಜಕಾರಣಿಗಳು ಸಹ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಮತ್ತು ಸಕ್ಕರೆ ಉತ್ಪಾದನೆಯನ್ನು ಬೆಂಬಲಿಸುವ ಸ್ಥಳೀಯ ಬ್ಯಾಂಕುಗಳ ಮೇಲಿನ ನಿಯಂತ್ರಣ ಎಂದರೆ ಜನರ ಮೇಲೆ ನಿಯಂತ್ರಣ ಎಂದೇ ಅರ್ಥ. ''ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿ ನಡೆಯುತ್ತಿದ್ದರೂ ನಾಯಕರು ಕಾರ್ಖಾನೆಗಳನ್ನು ಸ್ಥಾಪಿಸುತ್ತಿದ್ದಾರೆ. ಕೆಲವೇ ರಾಜಕಾರಣಿಗಳ ಹಿಡಿತದಲ್ಲಿರುವ ಕಾರ್ಖಾನೆಗಳ ಮೇಲೆ ರೈತ ಅವಲಂಬಿತನಾಗಿರುವುದರಿಂದ ಅವರ ಉತ್ಪನ್ನಗಳಿಗೆ ಬೇರೆ ಖರೀದಿದಾರರಿಲ್ಲ' ಎಂದು ಹೆಸರು ಹೇಳಲು ನಿರಾಕರಿಸಿದ ಸ್ಥಳೀಯ ರೈತ ಹೋರಾಟಗಾರರೊಬ್ಬರು ತಿಳಿಸಿದರು.

ಕುಟುಂಬದ ಡೈನಾಮಿಕ್ಸ್

ಮುಂಬರುವ ಚುನಾವಣೆಗಳನ್ನು "ಸಹೋದರರ ನಡುವಿನ ಯುದ್ಧ" ಎಂದು ಪರಿಗಣಿಸಲಾಗಿದ್ದರೂ, ಬೆಳಗಾವಿಯ ಎಲ್ಲ ರಾಜಕಾರಣಿಗಳು ಅದನ್ನು ಒಪ್ಪಲು ಸಿದ್ಧರಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಕುಟುಂಬದ ರಾಜಕೀಯ ಗುರಿಗಾಗಿ ಜಾರಕಿಹೊಳಿ ಸಹೋದರರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕೆಲ ಮುಖಂಡರು ಹೇಳಿದ್ದಾರೆ.

ರಮೇಶ್ ಮತ್ತು ಬಾಲಚಂದ್ರ ಅವರು ವಿಧಾನಸಭೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದರೆ, ಸತೀಶ್ ಕಾಂಗ್ರೆಸ್ ಶಾಸಕರಾಗಿದ್ದಾರೆ. ಲಖನ್ ಅವರು ಇತ್ತೀಚೆಗೆ ಸ್ವತಂತ್ರವಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. 2013ರಲ್ಲಿ ಮತ್ತೊಬ್ಬ ಸಹೋದರ ಭೀಮಶಿ ಬಿಜೆಪಿಯಿಂದ ಕಾಂಗ್ರೆಸ್‌ನಲ್ಲಿದ್ದ ರಮೇಶ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

“ಇಬ್ಬರೂ ಸಹೋದರರು ನಿಲ್ಲಿಸಿದ ಅಭ್ಯರ್ಥಿಗಳನ್ನು ನೋಡಿ. ಸತೀಶ್ ಮತ್ತು ರಮೇಶ್ ಅಭ್ಯರ್ಥಿಗಳ ಆಯ್ಕೆಯ ಉಸ್ತುವಾರಿ ಹೊತ್ತಿದ್ದರೂ ಪರಸ್ಪರ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅವರು ಸಭೆಗಳನ್ನು ನಡೆಸುತ್ತಾರೆ. 2028 ರ ಚುನಾವಣೆಯ ವೇಳೆಗೆ ಕುಟುಂಬವು 40 ಪ್ಲಸ್ ಸೀಟುಗಳನ್ನು ನಿಯಂತ್ರಿಸುವ ಯೋಜನೆಯನ್ನು ಹೊಂದಿದ್ದಾರೆ. ಅವರು ಆ ಮೂಲಕ ಕಿಂಗ್‌ಮೇಕರ್‌ಗಳಾಗಿ ಬದಲಾಗುವ ಸಾಧ್ಯತೆ ಇದೆ”ಎಂದು ಈ ವಿದ್ಯಮಾನದ ಅರಿವು ಹೊಂದಿರುವ ಸ್ಥಳೀಯ ನಾಯಕರೊಬ್ಬರು ಹೆಸರು ಹೇಳಲಿಚ್ಛಿಸದೇ ವಿವರಿಸಿದರು.

ರಮೇಶ್ ಹೊರತು ಪಡಿಸಿ ಜಾರಕಿಹೊಳಿ ಸಹೋದರರು ಸಭೆ ನಡೆಸಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆ ಬೇರೆ ಪಕ್ಷಗಳ ಸಹೋದರರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ತೀರ್ಮಾನಿಸಿದ್ದಾರೆ. ಸತೀಶ್ ಹೇಳಿಕೆಗಳನ್ನು ನೋಡಿ, ವಿವಾದವನ್ನು ಕಡಿಮೆ ಮಾಡಿದ್ದಾರೆ. ಸತೀಶ್ ನಿಜವಾಗಿಯೂ ರಾಜಕೀಯ ಎದುರಾಳಿ ಆಗಿದ್ದರೆ ಅಂತಹ ಅವಕಾಶವನ್ನು ಕೈ ಬಿಡುತ್ತಿದ್ದರೇ?” ಎಂದು ಸ್ಥಳೀಯ ನಾಯಕರು ಪ್ರಶ್ನಿಸಿದರು.

(ಅವಲೋಕನ - ಅರುಣ್‌ದೇವ್‌, ಹಿಂದುಸ್ತಾನ್‌ ಟೈಮ್ಸ್‌ ಕರ್ನಾಟಕ ಬ್ಯೂರೋದ ಅಸಿಸ್ಟೆಂಟ್‌ ಎಡಿಟರ್‌)

(ಅನುವಾದ - ಉಮೇಶ್‌ ಕುಮಾರ್‌ ಶಿಮ್ಲಡ್ಕ, ನ್ಯೂಸ್‌ ಎಡಿಟರ್‌, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ )

ಮೂಲ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿ - Karnataka polls: Jarkiholi brothers lead BJP and Congress charge in Belagavi

IPL_Entry_Point