ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಬೆಳಗಾವಿಯಲ್ಲಿ ನಿರ್ಣಾಯಕ ಪಂಚಮಸಾಲಿ ಮತ ಸೆಳೆಯಲು ಕಾಂಗ್ರೆಸ್ ಬಿಜೆಪಿ ರಣತಂತ್ರ

Belagavi News: ಬೆಳಗಾವಿಯಲ್ಲಿ ನಿರ್ಣಾಯಕ ಪಂಚಮಸಾಲಿ ಮತ ಸೆಳೆಯಲು ಕಾಂಗ್ರೆಸ್ ಬಿಜೆಪಿ ರಣತಂತ್ರ

Karnataka Elections 2023: ಬಿಜೆಪಿ ಪಾಲಿಗೆ ಕಿತ್ತೂರು ಕರ್ನಾಟಕ ರಾಜಕೀಯ ಶಕ್ತಿಕೇಂದ್ರ. ರಾಜ್ಯ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಲು ಕೇಸರಿ ಪಾಳಯ ವಿಶೇಷ ಪ್ರಯತ್ನ ಮಾಡಲೇ ಬೇಕಿದೆ.

ಬೆಳಗಾವಿಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ
ಬೆಳಗಾವಿಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ (HT_PRINT)

ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ. ಸಹಜವಾಗಿಯೇ ಈ ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚು. ಬರೋಬ್ಬರಿ 18 ಶಾಸಕರನ್ನು ವಿಧಾನಸಭೆಗೆ ಕಳುಹಿಸಿಕೊಡುವ ದೊಡ್ಡ ಸಂಖ್ಯೆಯ ಮತದಾರರನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಸದ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಆರಿಸಿ ಬಂದ ಶಾಸಕರ ಸಂಖ್ಯೆ ದೊಡ್ಡದಿದೆ. ಕಳೆದ ಬಾರಿಯ ಚುನಾವಣೆಯ ಬಳಿಕ ಮತದಾರ ಪ್ರಭು ಬಿಜೆಪಿಯ 13 ನಾಯಕರಿಗೆ ವಿಧಾನಸಭೆಯನ್ನು ಪ್ರವೇಶಿಸುವ ಅವಕಾಶ ನೀಡಿದ್ದಾರೆ. ಇದೇ ವೇಳೆ ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್, ತನ್ನ ಐವರು ನಾಯಕರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ರೆ, ಈ ಬಾರಿ ಕುಂದಾನಗರಿಯಲ್ಲಿ ಜನಾದೇಶ ಏನಾಗಲಿದೆ? ಜಿಲ್ಲೆಯಲ್ಲಿ ಮತದಾರರನ್ನು ಸೆಳೆದು ಚುನಾವಣೆ ಗೆಲ್ಲಲು ಪ್ರಧಾನ ಮಾನದಂಡ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.

ಮೇ 10ರಂದು ರಾಜ್ಯದಲ್ಲಿ ಮತದಾನದ ಹಬ್ಬ. ಆವರೆಗೂ ರಾಜಕೀಯ ಪಕ್ಷಗಳ ನಾಯಕರಿಗೆ ನಿದ್ದೆ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಪಾಲಿಗೆ ಬಹುಮತ ಸಾಧಿಸಿರುವ ಬಿಜೆಪಿ, ಈ ಬಾರಿ ಗೆಲುವಿನ ಪ್ರಮಾಣ ಹಾಗೂ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ವಿಧಾನಸಭೆಯಲ್ಲಿ ಬಹುಮತವನ್ನು ಉಳಿಸಿಕೊಳ್ಳುವ ಆಡಳಿತ ಪಕ್ಷದ ನಿರೀಕ್ಷೆಗಳಿಗೆ ಅತಿ ಪ್ರಮುಖವೆನಿಸಿರುವ ಜಿಲ್ಲೆಯಲ್ಲಿ, ಮತದಾರರ ಓಲೈಕೆಗೆ ಬಿಜೆಪಿಯು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ. ಅದರ ಭಾಗವಾಗಿ, ನಟ ಕಿಚ್ಚ ಸುದೀಪ್ ಜಿಲ್ಲೆಯಲ್ಲಿ ರೋಡ್‌ಶೋ ನಡೆಸಿ ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ.

ಬಿಜೆಪಿ ಪಾಲಿಗೆ ಕಿತ್ತೂರು ಕರ್ನಾಟಕ ರಾಜಕೀಯ ಶಕ್ತಿಕೇಂದ್ರ. ರಾಜ್ಯ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಲು ಕೇಸರಿ ಪಾಳಯ ವಿಶೇಷ ಪ್ರಯತ್ನ ಮಾಡಲೇ ಬೇಕಿದೆ. ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಮತ್ತು ರಾಜಕೀಯ ಪ್ರಾಮುಖ್ಯತೆ ಪಡೆದಿರುವ ಹಳೆ ಮೈಸೂರು ಭಾಗದಂತೆ, ಈ ಭಾಗದಲ್ಲೂ ಮೇಲುಗೈ ಸಾಧಿಸಲು ಬಿಜೆಪಿ ಸರ್ಕಸ್‌ ಮಾಡಬೇಕಿದೆ.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಿದರೆ, ಬೆಳಗಾವಿ ಅಥವಾ ಕಿತ್ತೂರು ಕರ್ನಾಟಕದ ಅನೇಕ ಭಾಗಗಳಲ್ಲಿ ಲಿಂಗಾಯತ ಮತಗಳೆ ನಿರ್ಣಾಯಕವಾಗಿವೆ.

ಜನಪರ ಯೋಜನೆಗಳನ್ನು ಮುಂದಿಟ್ಟು ಮತಯಾಚನೆ

“ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುತ್ತೇವೆ. ವಿಶೇಷವಾಗಿ ರೈತರಿಗಾಗಿ ತಂದ ಯೋಜನೆಗಳನ್ನು ಮುಂದಿಟ್ಟು ಮತ ಕೇಳುತ್ತೇವೆ. ನಮ್ಮ ಸರ್ಕಾರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ನೀರಾವರಿ ಯೋಜನೆಗಳಿಗೆ ಹಣ ಮಂಜೂರು ಮಾಡಿದೆ. ರೈತ ಕುಟುಂಬಗಳ 40 ಲಕ್ಷ ಮಕ್ಕಳಿಗೆ ಅನುಕೂಲವಾಗುವಂತೆ ನಾವು ಉಚಿತ ಶಿಕ್ಷಣ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿಯೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಉಚಿತ ವಿದ್ಯುತ್ ಮತ್ತು ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ ಮೇಲೆ ಹೆಚ್ಚುವರಿ 4,000 ರೂಪಾಯಿ ನೀಡುತ್ತಿದ್ದೇವೆ. ಬಡ್ಡಿರಹಿತ ಸಾಲ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ,” ಎಂದು ಬಿಜೆಪಿಯ ರಾಜ್ಯ ವಕ್ತಾರ ಮಾರುತಿ ಝಿರಲಿ ಹೇಳಿದ್ದಾರೆ. “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬ ಇಂಜಿನಿಯರ್. ಅಲ್ಲದೆ ಅವರು ಮೊದಲು ನೀರಾವರಿ ಸಚಿವರಾಗಿದ್ದರು,” ಎಂದು ಅವರು ಹೇಳಿದ್ದಾರೆ.

ಲಿಂಗಾಯತರ ಅಸಮಾಧಾನ

ಬಿಜೆಪಿಯ ಪ್ರಮುಖ ಕಾಳಜಿ ರೈತರು. ಅದರಲ್ಲೂ ಪಂಚಮಸಾಲಿ ಲಿಂಗಾಯತರೇ ಪಕ್ಷಗಳ ಪ್ರಮುಖ ಕಾಳಜಿ. ಲಿಂಗಾಯತರ ಈ ಪ್ರಬಲ ಉಪಪಂಗಡದಲ್ಲಿ ಬಹುಪಾಲು ಮತದಾರರು ರೈತರು. ಬೊಮ್ಮಾಯಿ ಸರ್ಕಾರವು ಪಂಚಮಸಾಲಿಗಳಿಗೆ ಮೂಲಭೂತವಾಗಿ ಅವಕಾಶ ಕಲ್ಪಿಸಲು ಲಿಂಗಾಯತ ಕೋಟಾವನ್ನು 2 ಶೇಕಡ ಹೆಚ್ಚಿಸಿದ್ದರೂ, ಲಿಂಗಾಯತರ ಅಸಮಾಧಾನ ಇನ್ನೂ ಶಮನಗೊಂಡಿಲ್ಲ.

ಬಗೆಹರಿಯದ ಮೀಸಲಾತಿ ಸಮಸ್ಯೆ

ಈ ಬಗ್ಗೆ ಮಮ್ಮಿಗಟ್ಟಿಯ ಟೀ ಸ್ಟಾಲ್‌ನಲ್ಲಿ ಹಿಂದೂಸ್ತಾನ್‌ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ ಪಂಚಮಸಾಲಿ ಲಿಂಗಾಯತ ಸಮುದಾಯದ ಮುರುಗೇಶ್ ಆರ್, ಬಿಜೆಪಿಯ ಜನಪರ ಕೆಲಸಗಳನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರವು ಬಹಳಷ್ಟು ಕೆಲಸ ಮಾಡಿದೆ. ನಮ್ಮ ಉತ್ಪನ್ನಗಳನ್ನು ಸಾಗಿಸಲು ನಮಗೆ ಸುಲಭವಾಗಿದೆ. ಆದರೆ ಮೀಸಲಾತಿ ಸಮಸ್ಯೆಯು ಇನ್ನೂ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪಂಚಮಸಾಲಿಗಳಿಗೆ ರಾಜ್ಯದ 3ಬಿ ಪಟ್ಟಿಯಲ್ಲಿ ಮೀಸಲಾತಿ ನೀಡಲಾಗಿದ್ದು, 3ಬಿಯಲ್ಲಿ ಅವರ ಕೋಟಾವನ್ನು ಶೇ.5ಕ್ಕೆ ನಿಗದಿಪಡಿಸಲಾಗಿದೆ. ಪಂಚಮಸಾಲಿಗಳು, ಬಣಜಿಗ ಲಿಂಗಾಯತರು ಇರುವ 2ಎ ಪಟ್ಟಿಯಲ್ಲಿ ಶೇ.15ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಬೇಡಿಕೆ ಇವರದ್ದು.

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರನ್ನು ಓಲೈಸಲು ಬಿಜೆಪಿ ಎಲ್ಲಾ ರೀತಿಯ ಕಸರತ್ತು ಮಾಡುತ್ತಿದೆ. ಪಕ್ಷದ ಪಂಚಮಸಾಲಿ ನಾಯಕರೊಂದಿಗೆ ಬಿಎಸ್ ಯಡಿಯೂರಪ್ಪ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬೆಳಗಾವಿಯಲ್ಲಿ ರೋಡ್‌ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ವಾರದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲಿ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್‌ ಪ್ರಯತ್ನ ಹೇಗಿದೆ?

ಮತ್ತೊಂದೆಡೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿ ನಿರ್ಜನವಾಗಿ ಕಂಗೊಳಿಸುತ್ತಿದೆ. ಪಂಚಮಸಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ನಾಯಕರು ಪ್ರವಾಸ ಮಾಡುತ್ತಿದ್ದಾರೆ. “ಬಿಜೆಪಿ ತಂದ 3ಎ ಮೀಸಲಾತಿಯಿಂದ ಯಾವುದೇ ಪ್ರಯೋಜನ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆಳಗಾವಿಗೆ ಬರಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಕಳೆದ ಐದು ವರ್ಷಗಳಲ್ಲಿ, ಬೊಮ್ಮಾಯಿ ಸರ್ಕಾರ ನೀಡಿದ 600 ಭರವಸೆಗಳಲ್ಲಿ 50ಕ್ಕಿಂತ ಕಡಿಮೆ ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಹೇಳಿದ್ದಾರೆ.

IPL_Entry_Point