ಕನ್ನಡ ಸುದ್ದಿ  /  Karnataka  /  Karnataka Student Calls Out Professor For Allegedly Calling Him A 'Terrorist'

Islamophobia in India: ಕರಾವಳಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದ ಪ್ರೊಫೆಸರ್‌, ಚಳಿ ಬಿಡಿಸಿದ ವಿದ್ಯಾರ್ಥಿ

ಕರ್ನಾಟಕದ ಕರಾವಳಿಯಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಆ ಕಾಲೇಜಿನ ಪ್ರೊಫೆಸರ್‌ "ಭಯೋತ್ಪಾದಕ" ಎಂದು ಕರೆದಿದ್ದಾರೆ. ಇದರಿಂದ ಕೋಪಗೊಂಡ ಆ ವಿದ್ಯಾರ್ಥಿಯು ಆ ಪ್ರೊಫೆಸರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಕರಾವಳಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದ ಪ್ರೊಫೆಸರ್‌
ಕರಾವಳಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದ ಪ್ರೊಫೆಸರ್‌

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಆ ಕಾಲೇಜಿನ ಪ್ರೊಫೆಸರ್‌ "ಭಯೋತ್ಪಾದಕ" ಎಂದು ಕರೆದಿದ್ದಾರೆ. ಇದರಿಂದ ಕೋಪಗೊಂಡ ಆ ವಿದ್ಯಾರ್ಥಿಯು ಆ ಪ್ರೊಫೆಸರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವಿಡಿಯೋದಲ್ಲಿರುವ ದೃಶ್ಯದಲ್ಲಿಯೇ ಪ್ರೊಫೆಸರ್‌ ಕ್ಷಮಾಪಣೆಯನ್ನೂ ಕೇಳಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ತರಗತಿ ಕೊಠಡಿಯಲ್ಲಿರುವ ವಿದ್ಯಾರ್ಥಿಯು "ನೀವು ಹೇಗೆ ಇಂತಹ ಹೇಳಿಕೆ ನೀಡುತ್ತೀರಿ?ʼʼ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆ ಪ್ರೊಫೆಸರ್‌ "ನಾನು ತಮಾಷೆಗಾಗಿ ಹೇಳಿದೆʼʼ ಎನ್ನುತ್ತಾರೆ. ಆ ವಿದ್ಯಾರ್ಥಿಯು ಆ ಚರ್ಚೆಯನ್ನು ಇನ್ನಷ್ಟು ವಿಸ್ತರಿಸುತ್ತಾನೆ. "26/11 ಘಟನೆಯು ತಮಾಷೆಯಲ್ಲ. ಮುಸ್ಲಿಂ ಆಗಿ ನಾವು ಈ ದೇಶದಲ್ಲಿ ಇಂತಹ ವಿಷಯಗಳನ್ನು ಎದುರಿಸುವುದು ತಮಾಷೆಯಲ್ಲʼʼ ಎಂದು ಹೇಳುತ್ತಾನೆ.

ವಿದ್ಯಾರ್ಥಿಯ ಮಾತಿನಿಂದ ವಿಚಲಿತರಾದ ಪ್ರೊಫೆಸರ್‌ ಆತನಲ್ಲಿ ಕ್ಷಮಾಪಣೆ ಕೇಳಿ, ನೀನು ನನ್ನ ಮಗನಂತೆ ಎಂದು ಹೇಳುತ್ತಾರೆ. "ನೀವು ನಿಮ್ಮ ಮಗನನ್ನು ಹೀಗೆ ಟ್ರೀಟ್‌ ಮಾಡುವಿರಾ? ಆತನಿಗೆ ಟೆರರಿಸ್ಟ್‌ ಎಂಬ ಹಣೆಪಟ್ಟಿ ಹಚ್ಚುವಿರಾ? ಈ ತರಗತಿಯಲ್ಲಿ ಎಲ್ಲರ ಮುಂದೆ ನಿಮ್ಮ ಮಗನನ್ನು ಈ ರೀತಿ ಕರೆಯುವಿರಾ? ಕ್ಷಮಾಪಣೆ ಕೇಳಿದರೆ ಸಾಲದು, ನಿಮ್ಮೊಳಗಿರುವ ಇಂತಹ ಮನಸ್ಥಿತಿ ಬದಲಾಗದುʼʼ ಎಂದು ಆ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಾಣಬಹುದು.

ಬಳಿಕ ಆ ಪ್ರೊಫೆಸರ್‌ ಆ ವಿದ್ಯಾರ್ಥಿಯ ಬಳಿಯಲ್ಲಿ ವೈಯಕ್ತಿಕವಾಗಿಯೂ ಕ್ಷಮಾಪಣೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿ ಮತ್ತು ಪ್ರೊಫೆಸರ್‌ ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಸಂದರ್ಭದ ವಿಡಿಯೋ ಮಾತ್ರ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಮುಸ್ಲಿಂ ಸಮುದಾಯದ ಮೇಲೆ ಇಂತಹ ಪೂರ್ವಾಗ್ರಹ ಬೇಡ ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಯುನೆಸ್ಕೊದ ಚೇರ್ಮನ್‌ ಆಗಿರುವ (ವಿಶ್ವಸಂಸ್ಥೆಯ ಶೈಕ್ಷಣಿಜ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಶೋಕ್‌ ಸಾವಿನ್‌ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಭಾರತದಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆಯಲಾಗುತ್ತಿದೆ. ಇದು ಭಾರತದಲ್ಲಿ ಅಲ್ಪಾಸಂಖ್ಯಾತರ ಸ್ಥಿತಿʼʼ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಆ ವಿದ್ಯಾರ್ಥಿಯು ಧೈರ್ಯದಿಂದ ಪ್ರೊಫೆಸರ್‌ ಎದುರು ಆ ರೀತಿ ಮಾತನಾಡಿರುವುದು, ಸ್ಪಷ್ಟವಾಗಿ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ.

ಇದೇ ರೀತಿ ಭಾರತದಲ್ಲಿ ಆಗುತ್ತದೆ ಎಂದು ಮಹಮ್ಮದ್‌ ಝುಬೈರ್‌ ಎನ್ನುವ ಟ್ವಿಟ್ಟರ್‌ ಬಳಕೆದಾರರು ಆ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. "ಇದೇ ರೀತಿ ಘಟನೆ ಈ ಹಿಂದೆಯೂ ನಡೆದಿದೆ. ವಿದ್ಯಾರ್ಥಿಯ ಹೆಸರು ಕೇಳಿದಾಗ ಆ ವಿದ್ಯಾರ್ಥಿಯು ತನ್ನ ಹೆಸರು ಹೇಳುತ್ತಾನೆ. ಓ ನೀನು ಕಸಬ್‌ ಕಡೆಯವನಾ? ಎಂದು ಆ ಪ್ರೊಫೆಸರ್‌ ಕೇಳಿದ್ದಾರೆ. ಯುನಿವರ್ಸಿಟಿ ಮತ್ತು ಆ ಘಟನೆಯ ಕುರಿತು ಮಾಹಿತಿಯನ್ನು ಆ ವಿದ್ಯಾರ್ಥಿಯ ವಿನಂತಿ ಮೇರೆಗೆ ಹೇಳುತ್ತಿಲ್ಲʼʼ ಎಂದು ಅವರು ಕಾಮೆಂಟ್‌ ಮಾಡಿದ್ದಾರೆ.

ಈ ವಿದ್ಯಾರ್ಥಿಯು ಪ್ರೊಫೆಸರ್‌ ವಿರುದ್ಧ ಧ್ವನಿಯೆತ್ತಿರುವ ರೀತಿಗೆ ಸಾಕಷ್ಟು ಜನರು ಟ್ವಿಟ್ಟರ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. "ಆತ ಈ ಸಂದರ್ಭವನ್ನು ಎದುರಿಸಿದ ರೀತಿ ಅತ್ಯುತ್ತಮವಾಗಿದೆ. ಈ ರೀತಿ ತಕ್ಷಣ ತಿಳಿಸಿದರೆ ಇಂತಹ ಘಟನೆ ನಡೆಯದು. ಈ ವಿದ್ಯಾರ್ಥಿಯು ಇಂತಹ ಶೋಷಣೆ ಅನುಭವಿಸುವವರಿಗೆ ಮಾದರಿʼʼ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಈ ಘಟನೆ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದೆ. ಮಣಿಪಾಲ ವಿಶ್ವವಿದ್ಯಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಭಾಗ