ಕನ್ನಡ ಸುದ್ದಿ  /  ಕರ್ನಾಟಕ  /  Kedambadi Ramaiah Gowda History: ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಇಂದು; ಅವರು ಯಾರು? ಇತಿಹಾಸ ಏನು?

Kedambadi Ramaiah Gowda history: ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಇಂದು; ಅವರು ಯಾರು? ಇತಿಹಾಸ ಏನು?

Kedambadi Ramaiah Gowda history: ದೇಶದ ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ಬುನಾದಿ ಎಂಬಂತೆ ಎರಡು ದಶಕ ಮೊದಲು ನಡೆದ ರೈತ ಹೋರಾಟದ ಸಂಘಟನಾ ಶಕ್ತಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು. ಇತಿಹಾಸದ ಪುಟಗಳಲ್ಲಿ ಅವರ ಚಿತ್ರಣ ಹೀಗಿದೆ ಗಮನಿಸಿ.

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ
ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ

ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು ಅನಾವರಣಗೊಳ್ಳಲಿದೆ. ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಅವರು ಸಂಘಟನಾ ಚತುರರಾಗಿ ತಮ್ಮದೇ ಛಾಪು ಮೂಡಿಸಿದವರು.

ದೇಶದ ಮೊದಲ ಸ್ವಾತಂತ್ರ್ಯ ಸಮರ 1857 ಎಂದು ಉಲ್ಲೇಖಿಸಲ್ಪಟ್ಟಿದ್ದರೂ, ಅದಕ್ಕೂ ಎರಡು ದಶಕ ಮೊದಲೇ 1837ರಲ್ಲಿ ರೈತ ಸಮರ ಒಂದು ನಡೆದಿತ್ತು. ಅದು ಸ್ವಾತಂತ್ರ್ಯ ಸಮರದ ಬುನಾದಿಗಳಲ್ಲಿ ಒಂದು ಎಂದೇ ಹೇಳಬಹುದು. ಅಮರ ಸುಳ್ಯ ಸಮರ ಎಂದೇ ಜನಪ್ರಿಯವಾಗಿರುವ ತುಳುನಾಡಿನಲ್ಲಿ ಕಲ್ಯಾಣಪ್ಪನ ಕಾಟ್‌ಕಾಯಿ ಎಂದೇ ಜನಜನಿತ. ಕೆದಂಬಾಡಿ ರಾಮಯ್ಯ ಗೌಡರ ವ್ಯಕ್ತಿತ್ವವನ್ನು ಪರಿಚಯಿಸುವುದಕ್ಕಾಗಿ ಆ ಸಮರ ಸನ್ನಿವೇಶದ ಕಡೆಗೊಂದು ಇಣುಕುನೋಟ ಇದು.

ಸ್ವಾತಂತ್ರ್ಯಪೂರ್ವದ ಸನ್ನಿವೇಶ. ಮೈಸೂರಿನಲ್ಲಿ 1799ರಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆ ಪತನಗೊಂಡ ನಂತರ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶ ವಸಾಹತುಶಾಹಿಗಳ ತೆಕ್ಕೆಗೆ ಜಾರಿತು. ಆಗ, ತುಳುನಾಡಿನ ಒಂದು ಭಾಗವನ್ನು ಮತ್ತು ಸದ್ಯದ ಕೊಡಗನ್ನು ಹಾಲೇರಿ ರಾಜವಂಶಸ್ಥರು ಆಳುತ್ತಿದ್ದರು. ಆಗ ರಾಜನಾಗಿದ್ದವರು ಲಿಂಗರಾಜ ಒಡೆಯರು. ಸುಳ್ಯದ ಮಿತ್ತೂರು ನಾಯರ್‌ ಉಲ್ಲಾಕುಲು ದೈವಗಳಿಗೆ ಅವರು ರತ್ನಖಚಿತ ಕಿರೀಟವನ್ನು ಸಮರ್ಪಿಸಿದ್ದರು. ಅಲ್ಲಿ ಮೊಕ್ತೇಸರರಾಗಿದ್ದವರು ಕೆದಂಬಾಡಿ ರಾಮಯ್ಯ ಗೌಡರು. ಲಿಂಗರಾಜ ಒಡೆಯರ ಜತೆಗೆ ನಿಕಟ ಸಂಪರ್ಕ ಇತ್ತು. ಲಿಂಗರಾಜ ಒಡೆಯರ ನಂತರ ಅವರ ಮಗ ಚಿಕ್ಕವೀರ ರಾಜೇಂದ್ರ ಒಡೆಯರು ಕೂಡ ಕೆದಂಬಾಡಿ ರಾಮಯ್ಯ ಗೌಡರ ಜತೆಗೆ ಉತ್ತಮ ಸಂಬಂಧ ಹೊಂದಿದ್ದರು.

1830ರ ಆಸುಪಾಸಿನಲ್ಲಿ ವಸಾಹತುಶಾಹಿಗಳ ಕಾಟ ವಿಪರೀತವಾಗಿತ್ತು. ರೈತರ, ಜನಸಾಮಾನ್ಯರ ಅಸಹನೆಗೆ ಅವರ ಅವೈಜ್ಞಾನಿಕ ಕಂದಾಯ ನಿಗದಿ, ಉಪ್ಪು, ಹೊಗೆಸೊಪ್ಪುಗಳ ಏಕಸ್ವಾಮ್ಯದ ವಿಚಾರ ಕಾರಣವಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇತ್ತು.

1834ರಲ್ಲಿ ಚಿಕ್ಕವೀರರಾಜೇಂದ್ರ ಒಡೆಯರನ್ನು ಬ್ರಿಟಿಷರು ವಂಚನೆಯಿಂದ ಬಂಧಿಸಿ, ಇಡೀ ಕೊಡಗು ಮತ್ತು ತುಳುನಾಡನ್ನು ವಶಪಡಿಸಿಕೊಂಡು ಈಸ್ಟ್‌ ಇಂಡಿಯಾ ಕಂಪನಿ ಆಡಳಿತ ಹೇರಿದರು. ಇದು ಈ ಭಾಗದ ಜನರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಯಿತು. ಮುಂದೆ ಮೂರು ವರ್ಷದ ಅವಧಿಯಲ್ಲಿ ಜನಜಾಗೃತಿ, ಸಂಘಟನೆ, ಶಸ್ತ್ರಾಸ್ತ್ರ ಕ್ರೋಢೀಕರಣ ಕಾರ್ಯಗಳು ನಡೆದವು.

ಈ ಎಲ್ಲ ಕಾರ್ಯದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪಾತ್ರ ಮುಖ್ಯವಾದುದು. ಕೊಡ್ಲಿಪೇಟೆಯಿಂದ 2,000 ಖರ್ಡ ಮತ್ತು ಬಂದೂಕು ಮುಂತಾದವುಗಳನ್ನು ತರಿಸುತ್ತಾರೆ. ಹಾಲೇರಿ ವಂಶಸ್ಥ ಕಲ್ಯಾಣಸ್ವಾಮಿಯನ್ನು ಬ್ರಿಟಿಷರು ಮೈಸೂರಿನಲ್ಲಿ ಬಂಧಿಸಿದ ಸಂದರ್ಭದಲ್ಲಿ ರಾಮಯ್ಯ ಗೌಡರು, ಪುಟ್ಟಬಸಪ್ಪ ಎಂಬ ಕುರಿಗಾಹಿಯನ್ನು ಕರೆತಂದು ಹಾಲೇರಿ ರಾಜಮನೆತನದ ಕಲ್ಯಾಣಸ್ವಾಮಿ ಎಂದು ಬಿಂಬಿಸುತ್ತಾರೆ. ಅಧ್ಯಾತ್ಮದ ಛಾಯೆಯಲ್ಲಿ ಬ್ರಿಟಿಷರ ವಿರುದ್ಧ ಜನಸಂಘಟನೆ ಮಾಡಿದರು.

ರೈತ ಹೋರಾಟಕ್ಕೆ 1837ರಲ್ಲಿ ಮುಹೂರ್ತ ನಿಗದಿಯಾಗಿತ್ತು. ಮಿತ್ತೂರಿನ ಮದುವೆಗದ್ದೆಯಲ್ಲಿ ಚಪ್ಪರವೂ ಸಿದ್ಧವಾಗಿತ್ತು. ಮಗನ ಮದುವೆ ಎಂದು ಡಂಗುರ ಹೊಡೆಸಿದ ರಾಮಯ್ಯ ಗೌಡರು, ರೈತ ಹೋರಾಟಗಾರರನ್ನು ಹೋರಾಟಕ್ಕೆ ಅಣಿಮಾಡಿದ್ದರು. ಅದು ಅತ್ಯಂತ ಶಿಸ್ತುಬದ್ಧವಾಗಿತ್ತು.

ಈ ಕಲ್ಯಾಣಸ್ವಾಮಿ ನೇತೃತ್ವದ ರೈತ ಹೋರಾಟಗಾರರ ಸೈನ್ಯ ಆಯುಧಗಳೊಂದಿಗೆ ಬೆಳ್ಳಾರೆಗೆ ಸಾಗಿ ಅಲ್ಲಿ ಕಂಪನಿಯ ಖಜಾನೆಯನ್ನು ವಶಪಡಿಸಿತು. ಬೆಳ್ಳಾರೆಯಲ್ಲಿ ರೈತ ಸೈನ್ಯ ನಾಲ್ಕು ತಂಡಗಳಾದವು. ಮೊದಲ ತಂಡ ಕುಂಬಳೆ, ಕಾಸರಗೋಡು, ಮಂಜೇಶ್ವರದ ಕಡೆ, ಎರಡನೇ ತಂಡು ಬಂಟ್ವಾಳ, ಕಾರ್ಕಳಕ್ಕೆ, ಮೂರನೇ ತಂಡ ಉಪ್ಪಿನಂಗಡಿ, ಬಿಸಿಲೆಗೆ ಹೋಯಿತು. ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ ಮತ್ತು ಕುಕ್ಕುನಾಡು ಚೆನ್ನಯ್ಯರನ್ನು ಒಳಗೊಂಡ ಪ್ರಧಾನ ಸೈನ್ಯ ಮಂಗಳೂರಿನ ಕಡೆ ಹೊರಟಿತು. ಪುತ್ತೂರಿನಲ್ಲಿನ ಕಂಪೆನಿ ಕಚೇರಿ ಮಂಗಳೂರಿಗೆ ಹೊರಟ ಮುಖ್ಯ ದಂಡಿನ ಕೈವಶವಾಯಿತು. ಕಂಪನಿಯ ಕ್ಯಾಪ್ಟನ್ ಲೆವಿನ್ ಸೈನ್ಯ ಅಪಾಯವನ್ನು ಅರಿತು ಮಂಗಳೂರನ್ನು ರಕ್ಷಿಸಲು ಏಪ್ರಿಲ್ 2ರಂದು ಮಂಗಳೂರಿಗೆ ಓಡಿತು. ಪುತ್ತೂರಿನಿಂದ ಮಂಗಳೂರಿನ ಕಡೆಗೆ ಸಾಗಿದ ರೈತರ ಸೈನ್ಯದ ಜತೆಗೆ ನಂದಾವರದ ಲಕ್ಷ್ಮಪ್ಪ ಬಂಗರಸ ಸೇನೆಯೂ ಸೇರಿತು. ನಗರದ ಕಾವಲು ಪಡೆ ಯೋಧರು, ಮಂಗಳೂರಿನ ವರ್ತಕರು ಕೂಡ ತಮ್ಮ ನಿಷ್ಠೆ ಬದಲಿಸಿ ಹೋರಾಟಗಾರರೊಂದಿಗೆ ಕೈ ಜೋಡಿಸಿದರು. ಈಗ ಬಾವುಟಗುಡ್ಡೆ ಎಂದು ಕರೆಯುವ ಲೈಟ್ ಹೌಸ್ ಪ್ರದೇಶದಲ್ಲಿದ್ದ ಬ್ರಿಟಿಷ್‌ ಬಂಗಲೆಗಳಿಗೆ ಬೆಂಕಿ ಹಚ್ಚಲಾಯಿತು. ಲೈಟ್ ಹೌಸ್‌ನಲ್ಲಿ ಸ್ಥಾಪಿಸಲಾದ ಧ್ವಜಸ್ತಂಭದ ಮೇಲಿನ ಈಸ್ಟ್ ಇಂಡಿಯಾ ಕಂಪೆನಿ ಧ್ವಜ ಕಿತ್ತೆಸದು ರಾಜಲಾಂಛನದ ಧ್ವ ಜವನ್ನು ಹಾರಿಸಿದರು. ಇಷ್ಟಾಗುವ ಹೊತ್ತಿಗೆ ರೈತ ಸೇನೆಯ ಬಲ 10,000ದ ಗಡಿ ದಾಟಿತ್ತು.

ನಿರಂತರ 13 ದಿನ ನಡೆದ ಯುದ್ಧದಲ್ಲಿ ಮಂಗಳೂರನ್ನು ಕಳೆದುಕೊಂಡ ವಸಾಹತುಶಾಹಿಗಳು ಮುಂಬಯಿಯಿಂದ ಸೈನ್ಯ, ಮದ್ದು ಗುಂಡು, ಯುದ್ದ ಸಾಮಗ್ರಿಗಳನ್ನು ತರಿಸಿಕೊಂಡು ಪ್ರತಿ ಹೋರಾಟಕ್ಕೆ ಸಜ್ಜಾದರು. ಬ್ರಿಟಿಷರ ಸುಸಜ್ಜಿತ ಸೇನೆ ಮತ್ತು ರೈತ ಸೈನ್ಯದ ನಡುವೆ ನಡೆದ ರಕ್ತಸಿಕ್ತ ಕಾಳಗ ನಡೆಯಿತು. ರೈತ ಹೋರಾಟಗಾರರು ಮಂಗಳೂರನ್ನು ಉಳಿಸಲಾಗಲಿಲ್ಲ. ಈ ಹೋರಾಟದಲ್ಲಿ ಬ್ರಿಟಿಷರು 1,115 ಹೋರಾಟರಾಗರನ್ನು ಬಂಧಿಸಿ ಶಿಕ್ಷೆಗೊಳಪಡಿಸಿದರು. ಪ್ರಮುಖಪಾತ್ರ ವಹಿಸಿದ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿಯ ಮಂಜ, ಪುಟ್ಟಬಸವನನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ ಸಹಿತ ಹಲವಾರು ಸ್ವಾತಂತ್ರ್ಯ ಯೋಧರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ದೇಶಗಳಿಗೆ ಬ್ರಿಟಿಷರು ಸಾಗಿಸಿದರು.

ಇಂತಹ ಸ್ವಾತಂತ್ರ್ಯ ಸಮರದ ಇತಿಹಾಸಕ್ಕೀಗ ಮನ್ನಣೆ ಸಿಗುತ್ತಿರುವುದು ವಿಶೇಷ. ಆ ಇತಿಹಾಸ ಪುರುಷರ ಪ್ರಾತಸ್ಮರಣೀಯರು. ಸದಾಕಾಲ ನೆನಪಿರಬೇಕಾದ ವಿಚಾರ ಇದು.

IPL_Entry_Point