Mangalore News: ಆಸ್ಪತ್ರೆಯಿಂದ ಬಂದು ಲೋಕಸಭೆ ಚುನಾವಣೆಗೆ ಮನೆಯಲ್ಲಿ ಮತದಾನ ಮಾಡಿ ನಿಧನರಾದ ಮಾಜಿ ಸೈನಿಕ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಆಸ್ಪತ್ರೆಯಿಂದ ಬಂದು ಲೋಕಸಭೆ ಚುನಾವಣೆಗೆ ಮನೆಯಲ್ಲಿ ಮತದಾನ ಮಾಡಿ ನಿಧನರಾದ ಮಾಜಿ ಸೈನಿಕ

Mangalore News: ಆಸ್ಪತ್ರೆಯಿಂದ ಬಂದು ಲೋಕಸಭೆ ಚುನಾವಣೆಗೆ ಮನೆಯಲ್ಲಿ ಮತದಾನ ಮಾಡಿ ನಿಧನರಾದ ಮಾಜಿ ಸೈನಿಕ

ಮತದಾನ ಪವಿತ್ರ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ.ಕೆಲವರು ಮನೆಯಲ್ಲಿದ್ದರೂ, ರಜೆ ನೀಡಿದರೂ ಮತ ಹಾಕಲು ಬರೋಲ್ಲ. ಅನಾರೋಗ್ಯದ ನಡುವೆಯೂ ನಿವೃತ್ತ ಸೈನಿಕರೊಬ್ಬರು ಆಸ್ಪತ್ರೆಯಿಂದ ಬಂದ ಮತ ಹಾಕಿ ವಾಪಾಸ್‌ ಹೋದ ನಂತರ ತೀರಿಕೊಂಡಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮತ ಹಾಕಿ ಮೃತಪಟ್ಟ ಮಾಧವ ಪ್ರಭು
ಮತ ಹಾಕಿ ಮೃತಪಟ್ಟ ಮಾಧವ ಪ್ರಭು

ಮಂಗಳೂರು: ಮನೆಯಲ್ಲೇ ಕೆಲ ದಿನಗಳ ಹಿಂದೆ ಮತ ಚಲಾಯಿಸಿದ್ದ ಮಾಜಿ ಸೈನಿಕರೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿವೃತ್ತ ಯೋಧ ಮಾಧವ ಪ್ರಭು (85) ಮೃತಪಟ್ಟವರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿಯಾಗಿದ್ದರು. ಪತ್ನಿ, ಇಬ್ಬರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ. ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. 85 ವರ್ಷ ಪೂರೈಸಿದವರಿಗೆ ಮನೆಯಲ್ಲೇ ಮತದಾನ ಕಲ್ಪಿಸುವ ಅವಕಾಶವನ್ನು ಚುನಾವಣಾ ಆಯೋಗ ಒದಗಿಸಿದ್ದ ಹಿನ್ನೆಲೆಯಲ್ಲಿ ಅವರು ತಾನು ಮನೆಯಲ್ಲಿ ಮತದಾನ ಮಾಡುವೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ವಗ್ಗದಲ್ಲಿರುವ ಮನೆಗೆ ತೆರಳಿ, ಅಲ್ಲಿ ಮತದಾನ ಮಾಡಿ ಮತ್ತೆ ಮಂಗಳೂರಿನ ಆಸ್ಪತ್ರೆಗೆ ಮರಳಿದ್ದರು.

ಏಪ್ರಿಲ್ 15ರಂದು ಅವರು ಮತ ಚಲಾಯಿಸಿದ್ದು, ಮತ ಚಲಾಯಿಸಿದ ಸಮಾಧಾನ ಅವರಲ್ಲಿತ್ತು. ಏಪ್ರಿಲ್ 24ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಾಧವ ಪ್ರಭುಗಳು ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ತಪಾಸಣಾಧಿಕಾರಿ ಆಗಿ ಕರ್ತವ್ಯ ಸಲ್ಲಿಸಿದ್ದರು. ಬಳಿಕ ಸೈನ್ಯಕ್ಕೆ ಸೇರಿದ್ದ ಅವರು, ಅಲ್ಲಿಂದ ನಿವೃತ್ತಿ ಹೊಂದಿದ ಬಳಿಕ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು.

ಏಪ್ರಿಲ್ 26ರಂದು ಕಾರ್ಮಿಕರಿಗೆ ವೇತನಸಹಿತ ರಜೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರಿಗೆ ವೇತನ ಸಹಿತ ರಜೆ ಇರಲಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾಪ್ರತಿನಿಧಿಯ ಕಾಯಿದೆ ಕಲಂ 135 (ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ 1963 ಕಲಂ 3 (ಎ) ಅನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.

ಸಂವಿಧಾನಾತ್ಮಕ ಹಕ್ಕಾದ ಮತ ಚಲಾಯಿಸುವುದಕ್ಕಾಗಿ ಎಲ್ಲಾ ಸಂಸ್ಥೆಗಳ ಮಾಲೀಕರು ಹಾಗೂ ನಿಯೋಜಿಕರು ಅನುವು ಮಾಡಿಕೊಡಬೇಕು ಅರ್ಹ ಮತದಾರರಾಗಿರುವ ಎಲ್ಲಾ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಒಂದು ದಿನದ ವೇತನ ಸಹಿತ ರಜೆ ನೀಡಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ಕನ್ನಡ ಉಪ ವಿಭಾಗದ 1ಮತ್ತು 2 ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ: ಹರೀಶ ಮಾಂಬಾಡಿ. ಮಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner