Kalburgi News: ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಕದ್ದ ಮೋದಿ, ಬಿಜೆಪಿಯದ್ದು ಸುಳ್ಳಿನ ಕಾರ್ಖಾನೆ, ಸಿದ್ದರಾಮಯ್ಯ ಕಟು ಟೀಕೆ
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಕದ್ದ ಮೋದಿ, ಬಿಜೆಪಿಯದ್ದು ಸುಳ್ಳಿನ ಕಾರ್ಖಾನೆ, ಸಿದ್ದರಾಮಯ್ಯ ಕಟು ಟೀಕೆ

Kalburgi News: ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಕದ್ದ ಮೋದಿ, ಬಿಜೆಪಿಯದ್ದು ಸುಳ್ಳಿನ ಕಾರ್ಖಾನೆ, ಸಿದ್ದರಾಮಯ್ಯ ಕಟು ಟೀಕೆ

Karnataka Politics ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.

ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಪ್ರಚಾರ.
ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಪ್ರಚಾರ.

ಕಲಬುರಗಿ: ನಮ್ಮ ಗ್ಯಾರಂಟಿಗಳನ್ನು ಕದ್ದಿರುವ ಮೋದಿ ಮತ್ತು ಟೀಮು ಪರಮ ಸುಳ್ಳುಗಾರರು ಎನ್ನುವುದು ದೇಶದ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಆಗಿದೆ. ಸುಳ್ಳುಗಳ ಮೂಲಕ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡುವ ಬಿಜೆಪಿಯ ಅಭಿಯಾನಕ್ಕೆ ಬ್ರೇಕ್ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಬುಧವಾರ ನಡೆದ ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡಮನಿ ಅವರ ಪರ ಪ್ರಚಾರವನ್ನು ಕೈಗೊಂಡು ಅವರು ಮಾತನಾಡಿದರು.ಮೋದಿಯವರು ಹತ್ತತ್ತು ವರ್ಷ ಪ್ರಧಾನಿಯಾಗಿ ಬಡ ಭಾರತೀಯರ, ಮಧ್ಯಮ ವರ್ಗದ ಭಾರತೀಯರ ಪ್ರಗತಿಗಾಗಿ, ಏಳಿಗೆಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿ ಮಾಡಿದ ಉದಾಹರಣೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಬಿಜೆಪಿ ಸಂಸದರ ಅಯೋಗ್ಯತನದ ಕಾರಣದಿಂದ ರಾಜ್ಯಕ್ಕೆ ಬರಬೇಕಾದ ಬರಗಾಲದ ಪಾಲನ್ನು ಪಡೆಯಲು ನಾವು ಸುಪ್ರೀಂಕೋರ್ಟ್ ಗೆ ಹೋಗಬೇಕಾಯಿತು. ಬರಗಾಲದ ಅನುದಾನದ ವಿಚಾರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಅಮಿತ್ ಶಾ ರಾಜ್ಯದ ಜನರಿಗೆ ದೊಡ್ಡ ಸುಳ್ಳು ಹೇಳಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇಡಿ ದೇಶದ ರೈತರ ಸಾಲ ಮನ್ನಾ ಮಾಡುವುದು ಖಚಿತ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ. ಈ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡುತ್ತೇವೆ. ಶೈಕ್ಷಣಿಕ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

371ಜೆ ಜಾರಿ ಆಗೋದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಕಾರಣ. ಇವರ ಹೋರಾಟ, ಶ್ರಮದಿಂದಾಗಿ ಈ ಭಾಗಕ್ಕೆ 371ಜೆ ಜಾರಿಯಾಗಿ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಮಟ್ಟದ ವರದನವಾಗಿದೆ. ಬಿಜೆಪಿಯವರು 371ಜೆ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ್ದರು. ಆದರೆ ಖರ್ಗೆಯವರ ಕಾರಣದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇದರ ಫಲವಾಗಿ 371ಜೆ ಈ ಭಾಗಕ್ಕೆ ದೊಡ್ಡ ಮಟ್ಟದ ಅನುಕೂಲ ಆಗಿದೆ ಎಂದು ಸಿಎಂ ಹೇಳಿದರು.

ಕೆಕೆಆರ್‌ಡಿಬಿ(KKRDB) ಮೂಲಕ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 5000 ಕೋಟಿ ರೂ. ನೀಡಲಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರ ಅಭಿವೃದ್ಧಿ ಮತ್ತು‌ ಏಳಿಗೆಗಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ನುಡಿದಂತೆ ನಡೆದು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗಡಯವರು ಸೋತಿದ್ದರಿಂದ ಖರ್ಗೆಯವರಿಗೆ ಹೆಚ್ಚು ನಷ್ಟ ಆಗಲಿಲ್ಲ. ಇವರ ಸೋಲಿನಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ. ಈ ಬಾರಿ ಮತ್ತೆ ತಪ್ಪಾಗಬಾರದು. ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆಯವರ ಸೋಲಿನಿಂದ ಈ ಭಾಗಕ್ಕೆ ಬಹಳ ನಷ್ಟ ಆಗಿದೆ. ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು. ಅಫ್ಜಲ್ ಪುರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಬಹುಮತ ಸಿಗುವುದು ಖಚಿತ. ಈ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಗೆಲ್ಲುವುದು ನೂರಕ್ಕೆ ನೂರು ಖಚಿತ. ಕಲಬುರಗಿ ಮತ್ತು ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಂದು ದಿನವೂ ಬಾಯಿ ಬಿಡದ ಬಿಜೆಪಿ ಸಂಸದರನ್ನು ಈ ಬಾರಿ ಸೋಲಿಸಿ ಎಂದು ಸಿ.ಎಂ. ಕರೆ ನೀಡಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, KKRDB ಅಧ್ಯಕ್ಷರಾದ ಅಜಯ್ ಸಿಂಗ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಸೇರಿ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner