ಕನ್ನಡ ಸುದ್ದಿ  /  Karnataka  /  Mallikarjuna Kharge Is The New Victim Of Authoritarian Attitude Of Congress Says Pralhad Joshi

Pralhad Joshi: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆಯ ಹೊಸ ಶಿಕಾರಿ: ಪ್ರಹ್ಲಾದ್‌ ಜೋಶಿ ಅಭಿಮತ!

ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿ ಧೋರಣೆ ಮನೆ ಮಾಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಧೋರಣೆಯ ಹೊಸ ಶಿಕಾರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೋಶಿ, ಕಾಂಗ್ರೆಸ್‌ನ್ನೂ ಈಗಲೂ ಗಾಂಧಿ ಪರಿವಾರವೇ ಆಳುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಇಲ್ಲಿದೆ ಮಾಹಿತಿ..

ಪ್ರಹ್ಲಾದ್‌ ಜೋಶಿ (ಸಂಗ್ರಹ ಚಿತ್ರ)
ಪ್ರಹ್ಲಾದ್‌ ಜೋಶಿ (ಸಂಗ್ರಹ ಚಿತ್ರ) (PTI)

ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿ ಧೋರಣೆ ಮನೆ ಮಾಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಧೋರಣೆಯ ಹೊಸ ಶಿಕಾರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೋಶಿ, ಸರ್ವಾಧಿಕಾರವನ್ನೇ ಉಸಿರಾಡುವ ಕಾಂಗ್ರೆಸ್‌ನಲ್ಲಿ, ಖರ್ಗೆ ಅವರಂತ ನಾಯಕರ ಉಸಿರುಗಟ್ಟುವುದು ಸಾಮಾನ್ಯ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನ ಯಾವುದೇ ಕಾರ್ಯಕ್ರಮವನ್ನಾದರೂ ತೆಗೆದುಕೊಳ್ಳಿ, ಅದರಲ್ಲಿ ಕೇವಲ ರಾಹುಲ್ ಗಾಂಧಿ ಅವರನ್ನು ಮಾತ್ರ ಹೊಗಳಲಾಗುತ್ತದೆ. ಅಲ್ಲದೇ ಎಲ್ಲವನ್ನೂ ರಾಹುಲ್‌ ಗಾಂಧಿ ಅವರ ಸಂದೇಶ ಎಂದೇ ಹೇಳಲಾಗುತ್ತದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದು, ಅವರು ಯಾವುದೇ ಸಂದೇಶವನ್ನು ಕೊಡುವುದಿಲ್ಲವೇ ಎಂದು ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿ ಧೋರಣೆ ತುಂಬಿ ತುಳುಕುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಖರ್ಗೆ ಕೇವಲ ಹೆಸರಿಗೆ ಮಾತ್ರ ಪಕ್ಷದ ಅಧ್ಯಕ್ಷರಾಗಿದ್ದು, ಎಲ್ಲ ನಿರ್ಣಯಗಳನ್ನು ಗಾಂಧಿ ಪರಿವಾರವೇ ತೆಗೆದುಕೊಳ್ಳುತ್ತಿದೆ ಎಂದು ಪ್ರಹ್ಲಾದ್‌ ಜೋಶಿ ಆರೋಪಿಸಿದರು.

ವಯಸ್ಸಾದ ಮೇಲೆ ನಿವೃತ್ತಿ ಪಡೆಯುವುದು ಹಾಗೂ ತಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ತೋರುವುದು ಇವೆರಡೂ ಕಾಂಗ್ರೆಸ್‌ನವರ ಡಿಎನ್ಎದಲ್ಲಿ ಇಲ್ಲ. ಸದಾ ಅಧಿಕಾರಕ್ಕೆ ಅಂಟಿಕೊಂಡಿರುವುದೇ ಅವರ ಚಾಳಿ ಎಂದು ಇದೇ ವೇಳೆ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಪುನಃ ಅಧಿಕಾರಕ್ಕೆ ಬಂದರೆ, ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಅಲ್ಲೇಕೆ ಅವರು ಅಕ್ಕಿಯನ್ನು ಕೊಡುತ್ತಿಲ್ಲ ಎಂದು ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದರು.

ಪಡಿತರ ಸರಬರಾಜು ವ್ಯವಸ್ಥೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾರದರ್ಶಕವಾಗಿಸಿದ್ದಾರೆ. ಆದರೆ ಈ ಪಾರದರ್ಶಕ ವ್ಯವಸ್ಥೆಯನ್ನು ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಹವಣಿಸುತ್ತಿದ್ದು, ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಕ್ಕೆ ಬಂದರೆ ಉಚಿತ ಅಕ್ಕಿ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ, ಎಲ್ಲಾ ಉತ್ತಮ ವ್ಯವಸ್ಥೆ ಮತ್ತೆ ಹಾಳಾಗಲಿದೆ. ಭ್ರಷ್ಟಾಚಾರ ಆರೋಪದಿಂದ ತಪ್ಪಿಸಿಕೊಳ್ಳಲು ಲೋಕಾಯುಕ್ತವನ್ನು ಮುಚ್ಚಿದ್ದ ಕಾಂಗ್ರೆಸ್‌ ನಾಯಕರು, ಮತ್ತೆ ಅಧಿಕಾರಕ್ಕೆ ಬಂದರೆ ಇನ್ನೇನು ಮಾಡುತ್ತಾರೋ ಆ ಭಗವಂತನಿಗೆ ಗೊತ್ತು ಎಂದು ಪ್ರಹ್ಲಾದ್‌ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.

ಅಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ಅವರನ್ನು, ಚಾಮುಂಡಿ ಕ್ಷೇತ್ರದ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಹುಡುಕಿಕೊಂಡು ಅಲೆಯುತ್ತಿದ್ದಾರೆ. ಒಂದು ವೇಳೆ ಸ್ವಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ಸಿದ್ದರಾಮಯ್ಯನವರಿಗೆ ಇಂದು ಕ್ಷೇತ್ರ ಹುಡುಕಿಕೊಂಡು ಅಲೆಯುವ ದುಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರಹ್ಲಾದ್‌ ಜೋಶಿ ತರಾಟೆಗೆ ತೆಗೆದುಕೊಂಡರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್‌ ಜೋಶಿ, ಅಂತಹ ಯಾವ ಸಮೀಕ್ಷೆ ಬಗ್ಗೆಯೂ ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ ಜನತೆ, ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದರು.

ರಾಜ್ಯದ ಜನತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕೂಡ ಜನತೆಗೆ ಹಿಡಿಸಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಆಡಳಿತ ಇರಲಿ ಎಂಬುದೇ ಜನರ ಅಭಿಲಾಷೆಯಾಗಿದೆ ಎಂದು ಪ್ರಹ್ಲಾದ್‌ ಜೋಶಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

IPL_Entry_Point

ವಿಭಾಗ