ಕನ್ನಡ ಸುದ್ದಿ  /  ಕರ್ನಾಟಕ  /  Subramanya Dhareshwar: ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

Subramanya Dhareshwar: ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಶ್ರೇಷ್ಠ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ
ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ

ಮಂಗಳೂರು: ಕರ್ನಾಟಕದ ಯಕ್ಷಗಾನ ಭಾಗವತ, ಶ್ರೇಷ್ಠ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಧಾರೇಶ್ವರ ಅವರು ನಿಧನರಾಗಿರುವ ಮಾಹಿತಿ ತಿಳಿದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಕ ಸಂದೇಶ ರವಾನಿಸಿದ್ದಾರೆ.ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ.ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತರೂ ಆದ ಕರಾವಳಿ ಕೋಗಿಲೆ ಎಂದೇ ಹೇಳಲಾಗುವ ಸುಬ್ರಹ್ಮಣ್ಯ ಧಾರೇಶ್ವರ (ಜನನ 1957, ಸೆ.5) ತನ್ನ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಗುರುವಾರ ಬೆಳಿಗ್ಗೆ ನಿಧನ ಹೊಂದಿದರು. ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ. 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಜನಪ್ರಿಯವಾಗಿವೆ.

ವರದಿ: ಹರೀಶ ಮಾಂಬಾಡಿ. ಮಂಗಳೂರು

 

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

 

 

IPL_Entry_Point

ವಿಭಾಗ