ಕನ್ನಡ ಸುದ್ದಿ  /  Karnataka  /  Mangaluru News Ground Water Problem In Costal Karnataka Water Problem Without Paddy Crop Agriculture Kannada News Rst

Mangaluru News: ಭತ್ತ ಬೆಳೆಯದೆ ಬತ್ತಿದೆ ಅಂತರ್ಜಲ: ಕರಾವಳಿಯನ್ನು ಕಾಡುತ್ತಿದೆ ಬರಗಾಲ

ಕರಾವಳಿ ಭಾಗದಲ್ಲಿ ತಕ್ಕ ಮಟ್ಟಿಗೆ ಮಳೆಯಾಗದರೂ ನದಿಗಳಲ್ಲಿ ನೀರಿನ ಒರತೆ ಬತ್ತಿಹೋಗಿದೆ. ಅತ್ತ ಬೋರ್‌ವೆಲ್‌ಗಳಲ್ಲೂ ನೀರು ಕ್ಷೀಣವಾಗಿದೆ. ಬಾವಿಗಳಲ್ಲೂ ನೀರಿನ ಮಟ್ಟ ಇಳಿಮುಖವಾಗಿದೆ. ಇದಕ್ಕೆ ಅಂತರ್ಜಲ ಕೊರತೆ ಕಾರಣ ಜಲತಜ್ಞರು ಎನ್ನುತ್ತಾರೆ. ಸಾಂಪ್ರದಾಯಿಕ ಬೆಳೆ ಕೈಬಿಟ್ಟು ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದು ಮುಳುವಾಯ್ತೇ ಎಂಬ ಪ್ರಶ್ನೆ ಎದುರಾಗಿದೆ.

ಕರಾವಳಿಯಲ್ಲಿ ಅಂತರ್ಜಲ ಪ್ರಮಾಣದಲ್ಲಿ ಕುಸಿತವಾಗಿದೆ
ಕರಾವಳಿಯಲ್ಲಿ ಅಂತರ್ಜಲ ಪ್ರಮಾಣದಲ್ಲಿ ಕುಸಿತವಾಗಿದೆ

ಮಂಗಳೂರು: ನಾಲ್ಕೈದು ವರ್ಷಗಳ ಬಳಿಕ ಕರಾವಳಿ ಕರ್ನಾಟಕ ಭೂಗರ್ಭದಲ್ಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿದೆ. ಸ್ಮಾರ್ಟ್ ಸಿಟಿ ಎಂದು ರೂಪುಗೊಳ್ಳುತ್ತಿರುವ ಮಂಗಳೂರಲ್ಲಿ ಕುಡಿಯುವ ನೀರಿಗೆ ರೇಷನಿಂಗ್ ಆರಂಭಗೊಂಡಿದ್ದರೆ, ಸಮೀಪದ ಬಂಟ್ವಾಳದಲ್ಲಿ ಎರಡು ದಿನಕ್ಕಾಗುವಷ್ಟೇ ನೀರಿನ ಸ್ಟಾಕ್ ಇದೆ. ಕೃಷಿ, ಕೈಗಾರಿಕೆಗೆ ನೀರಿಲ್ಲ. ನೀರಿನ ಮೂಲಗಳಾದ ನದಿಯಲ್ಲಿ ಹೊಯ್ಗೆ ಕಾಣಿಸಿಕೊಂಡರೆ, ಬೋರ್‌ವೆಲ್ ತೋಡಿದರೂ ನೀರು ಸಿಗುತ್ತಿಲ್ಲ. ಅಂತರ್ಜಲ ವೃದ್ಧಿಯಾಗದೆ ಬತ್ತಿಹೋಗುತ್ತಿರುವುದು ಇದಕ್ಕೆ ಕಾರಣ.

ಈ ಕುರಿತು ಸಾಂಪ್ರದಾಯಿಕ ಕೃಷಿ ಕೈಗೊಳ್ಳುವ ಭತ್ತ ಬೆಳೆಗಾರರು ಇದಕ್ಕೆ ಮೂಲ ಕಾರಣ ಭತ್ತ ಬೆಳೆಯದೇ ಇರುವುದು ಎನ್ನುತ್ತಾರೆ. ಹಿಂದೆ ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಹಾಗೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ಭತ್ತ ನಂಬರ್ ಒನ್ ಆಗಿತ್ತು. ಇವತ್ತು ಭತ್ತದ ಗದ್ದೆಗಳೆಲ್ಲವೂ ಅಡಕೆ ತೋಟಗಳಾಗಿವೆ. ಅಲ್ಲೊಂದು, ಇಲ್ಲೊಂದು ಕಡೆ ಭತ್ತ ಬೆಳೆ ಬೆಳೆಯಲಾಗುತ್ತಿದೆ. ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ, ಲಾಭದಾಯಕವಾಗಿಲ್ಲದೇ ಇರುವುದು, ಪ್ರಾಕೃತಿಕ ವೈಪರೀತ್ಯ… ಹೀಗೆ ಹತ್ತು ಹಲವು ಕಾರಣಗಳನ್ನು ರೈತರು ನೀಡುತ್ತಾರೆ. ಇತ್ತೀಚೆಗೆ ಮಂಗಳೂರು ಪರಿಸರದ ಭತ್ತದ ಕಣಜವೆಂದೇ ಹೇಳಲಾಗುವ ಪ್ರದೇಶಗಳಾದ ಸುರತ್ಕಲ್ ಪರಿಸರದಲ್ಲಿ ಯಥೇಚ್ಛ ಕೈಗಾರೀಕರಣಗಳು ,ದೊಡ್ಡ ದೊಡ್ಡ ಉದ್ದಿಮೆಗಳು ಭತ್ತದ ಗದ್ದೆಗಳ ಮೇಲೆ ಎದ್ದು ನಿಂತಿವೆ. ಅಭಿವೃದ್ಧಿಯ ನೆಪದಲ್ಲಿ ಅನ್ನ ನೀಡುವ ಭೂಮಿ ನಾಶವಾಗಿದೆ.

ಭತ್ತಕ್ಕೆ ಗುಡ್ ಬೈ

ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ಆಹಾರ ಬೆಳೆಯಾದ ಭತ್ತವನ್ನು ಬಹಿಷ್ಕರಿಸಿ ವಾಣಿಜ್ಯ ಬೆಳೆಗೆ ಕೃಷಿಕ ಮುಖ ಮಾಡಿ ಹಲವು ವರ್ಷಗಳೇ ಕಳೆದು ಹೋದವು. ಹಿಂದೆ ಗದ್ದೆ ನಾಟಿ ಮಾಡುವಾಗ ವರ್ಷದ ಒಂಬತ್ತರಿಂದ ಹತ್ತು ತಿಂಗಳು ಕೂಡ ನೀರನ್ನು ಗದ್ದೆಗೆ ಹರಿಸಿ ಗದ್ದೆಯಲ್ಲಿ ನೀರನ್ನು ಶೇಖರಿಸುವ ಪದ್ಧತಿ ಇತ್ತು ಇದು ಅಂತರ್ಜಲ ವೃದ್ಧಿಗೆ ಪೂರಕವಾಗುತ್ತಿತ್ತು.

ಭತ್ತ ಬೆಳೆಯುವಾಗ ಗದ್ದೆಯಲ್ಲಿ ಅರ್ಧ ವರ್ಷಗಳ ಕಾಲ ನೀರು ನಿಂತು ಅದು ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತಿತ್ತು. ಆಹಾರ ಬೆಳೆ ಬೆಳೆಯುವುದು ಕಡಿಮೆಯಾಗಿ ವಾಣಿಜ್ಯ ಬೆಳೆಗೆ ಕೃಷಿಕ ಮುಖ ಮಾಡಿದ್ದಾನೆ. ಪರಿಣಾಮವಾಗಿ ಗದ್ದೆಯಲ್ಲಿ ನಿರಂತರವಾಗಿ ನೀರು ನಿಲ್ಲುವ ಪ್ರಕ್ರಿಯೆ ಕುಂಠಿತವಾಗಿದೆ. ತಿಂಗಳುಗಟ್ಟಲೆ ಭೂಮಿಯಲ್ಲಿ ನೀರು ಇಂಗಿಸುವ ಪ್ರಕ್ರಿಯೆ ಇಲ್ಲದಿರುವುದು ಅಂತರ್ಜಲ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ. ಭೂಮಿ ಸಾಕಷ್ಟು ನೀರನ್ನು ತನ್ನ ಒಡಲಲ್ಲಿ ಹೀರಿಕೊಂಡು ಗದ್ದೆಯಲ್ಲಿ ನೀರನ್ನು ಉಳಿಸಿಕೊಳ್ಳುತ್ತಿತ್ತು. ಆದರಿಂದ ಕೃಷಿ ಭೂಮಿ ಪ್ರಲಪ್ರದವಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಂಡಿತ್ತು. ಆದರೆ ಈ ಹೀರಿಕೊಳ್ಳುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ.

ಒಡ್ಡುಗಳೇ ಇಲ್ಲ

ನೀರಾವರಿಗಾಗಿ ಕಲ್ಲಿನಿಂದ ಕಟ್ಟಿದ ಒಡ್ಡುಗಳ ನಿರ್ಮಾಣದಿಂದ ನೀರು ಶೇಖರಣೆಯಾಗುತ್ತಿತ್ತು. ಒಡ್ಡುಗಳ ಕೆಳಗೆ ಹೂಳು ತೆಗೆಯದೆ ಇರುವುದರಿಂದ ನೀರು ಶೇಖರಣೆಗೆ ಆಧಾರವಾಗಿ ಇರುತ್ತಿತ್ತು. ಇದರಿಂದ ನೀರಿನ ಮಟ್ಟವು ಏರುತ್ತಿತ್ತು. ನೀರಿನ ಒಡ್ಡುಗಳ ಬದಲಿಗೆ ಚೆಕ್ ಡ್ಯಾಮ್ ನಿರ್ಮಾಣವಾಗಿದೆ. ರಾಜಕಾರಣಿಗಳ ಪೋಸ್ಟರ್ ಕಟೌಟುಗಳಲ್ಲಿ ಡ್ಯಾಮುಗಳದ್ದೇ ಚಿತ್ರಗಳು. ಆದರೆ ಇದರಿಂದ ನೀರು ಶೇಖರಣ ಸಾಮರ್ಥ್ಯ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಚೆಕ್ ಡ್ಯಾಮ್‌ಗಳಲ್ಲಿ ಎರಡು ಹಲಗೆಯನ್ನು ಜೋಡಿಸಿ ನಡುವಿನಲ್ಲಿ ಮಣ್ಣು ತುಂಬಿಸದೆ, ಒಂದೇ ಹಲಗೆಯನ್ನು ಜೋಡಿಸುವುದರಿಂದ ನೀರಾವರಿಗಾಗಿ ನೀರು ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಚೆಕ್ ಡ್ಯಾಮ್‌ಗಳ ಕೆಳಗಡೆ ಹೂಳನ್ನು ಎತ್ತಿ ಟ್ರೆಂಚ್ ರಚಿಸುವುದರಿಂದ ನೀರಿನ ಶೇಖರಣ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಚೆಕ್ ಡ್ಯಾಮ್‌ಗಳ ಮೇಲ್ಗಡೆ ಹೂಳು ತುಂಬಿದ್ದು ಅದನ್ನು ತೆಗೆಯದೆ ಇರುವುದಿಂದಲೂ ನೀರು ಸಂಗ್ರಹಣ ವ್ಯಾಪ್ತಿ ಕಡಿಮೆಯಾಗುತ್ತದೆ.

ಅರಣ್ಯದಲ್ಲೂ ಸಂಗ್ರಹ ಕಡಿಮೆ

ಅರಣ್ಯದಲ್ಲಿನ ಗುಂಡಿಗಳಲ್ಲಿ ಶೇಖರಣೆಯಾದ ನೀರನ್ನು ಪೈಪ್‌ನ ಮುಖಾಂತರ ಕೃಷಿ ಭೂಮಿಗೆ ತರದೆ, ಆ ನೀರನ್ನು ಕಣಿ-ಕಾಲುವೆ ಮಾಡಿ ತಂದರೆ, ಭೂಮಿ ತನಗೆ ಬೇಕಾದ ನೀರು ಹೀರಿ ಮುಂದೆ ಹರಿದುಕೊಂಡು ಹೋಗುತ್ತದೆ. ಮಳೆಗಾಲದಲ್ಲಿ ಅರಣ್ಯದಲ್ಲಿ ಬೀಳುವ ಮಳೆ ನೀರಿನ ಸಂಗ್ರಹ ಇಲ್ಲದಿರುವುದು, ಇಂಗುಗುಂಡಿ ಕೂಡ ಇತ್ಯಾದಿ ಸಮರ್ಪಕವಾಗಿ ರಚಿಸದೇ ಇರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಕಾಡಿನ ಹಳ್ಳ ತೊರೆಗಳಲ್ಲಿ ಕಟ್ಟೆ ಕಟ್ಟಿ ಅಲ್ಲಿ ನೀರನ್ನು ಇಂಗಿಸುವ ಪ್ರಕ್ರಿಯೆ ನಿಂತುಹೋಗಿದೆ. ಹಳೆ ಮರಗಳನ್ನು ವಿಲೇವಾರಿ ಮಾಡದೆ ಕಾಡಿನಲ್ಲಿ ಬಿದ್ದಲ್ಲಿಯೇ ಬಿಡಬೇಕು. ಇದರಿಂದ ನೀರಿಗೆ ತಡೆಯಾಗಿ ನೀರು ಅಲ್ಲಿಯೇ ಇಂಗುತ್ತದೆ ಎಂದು ಹಿರಿಯರು ಹೇಳುವ ಮಾತಿದೆ. ವಿಪರೀತವಾಗಿ ಕೊಳವೆ ಬಾವಿಗಳನ್ನು ಕೊರೆಸುವುದು ಇನ್ನೊಂದು ಸಮಸ್ಯೆ.

ಜಲಮರುಪೂರಣ ಕಡಿಮೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜಲಮರುಪೂರಣ ಕುರಿತ ಜಾಗೃತಿ ಕಡಿಮೆ. ಹಳೆ ಬಾವಿ, ಬತ್ತಿದ ಹಳ್ಳಕೊಳ್ಳಕ್ಕೆ ಮಳೆಗಾಲದಲ್ಲಿ ನೀರಿನ ಜಲ ಪೂರಣವನ್ನು ಮಾಡಬೇಕು ಎಂಬುದು ಹೇಳಿಕೆಗಷ್ಟೇ ಸೀಮಿತವಾಗಿದೆ. ಹೆಚ್ಚು ನೆರಳು ಕೊಡುವ ಮತ್ತು ಸೊಂಪಾಗಿ ಬೆಳೆಯುವ ಗಿಡಗಳನ್ನು ನೆಡಬೇಕು ಮತ್ತು ಅದನ್ನು ಉಳಿಸಿಕೊಂಡು ಹೋಗಬೇಕು.

ವರದಿ: ಹರೀಶ ಮಾಂಬಾಡಿ

IPL_Entry_Point