ಕನ್ನಡ ಸುದ್ದಿ  /  Karnataka  /  Massive Disruption Due To Torrential Rains In Mysore Young Man Died After He Stepped On An Electric Wire Rmy

Mysore Rain: ಮೈಸೂರಿನಲ್ಲಿ ಧಾರಾಕಾರ ಮಳೆಯಿಂದ ಭಾರಿ ಅವಾಂತರ; ರಸ್ತೆಗೆ ಉರಿಳಿದ ಮರ, ವಿದ್ಯುತ್ ತಂತಿ ತುಳಿದು ಯುವಕ ಸಾವು

ಮಳೆಯಿಂದಾಗಿ ಮೈಸೂರಿನಲ್ಲಿ ಧರೆಗುರಿಳಿದ್ದ ವಿದ್ಯುತ್ ತಂತಿಯನ್ನು ತುಳಿದು ಯುವಕನೊರ್ವ ಮೃತಪಟ್ಟಿದ್ದರೆ, ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ.

ಭಾರಿ ಮಳೆಯಿಂದಾಗಿ ಮೈಸೂರಿನಲ್ಲಿ ಮರವೊಂದು ರಸ್ತೆಗೆ ಉರುಳಿದೆ
ಭಾರಿ ಮಳೆಯಿಂದಾಗಿ ಮೈಸೂರಿನಲ್ಲಿ ಮರವೊಂದು ರಸ್ತೆಗೆ ಉರುಳಿದೆ

ಮೈಸೂರು: ರಾಜ್ಯದಾದ್ಯಂತ (Karnataka Rain) ನಿನ್ನೆಯಿಂದ ಭಾರಿ ಮಳೆಯಾಗುತ್ತಿದ್ದು, ಮೈಸೂರು (Mysore rain) ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜನ, ಜಾನುವಾರಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಬೆಳೆ ನಾಶ, ವಿದ್ಯುತ್‌ ಅವಘಡದಂತಹ ಘಟನೆಗಳು ಸಂಭವಿಸಿದೆ.

ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಮೃತಪಟ್ಟಿದ್ದು, ಮತ್ತೊಂದೆಡೆ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ. ಹೀಗೆ ಮೈಸೂರು ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಅನಾಹುತಗಳು ಸಂಭವಿಸಿವೆ.

ಪಿರಿಯಾಪಟ್ಟಣ ತಾಲೂಕಿನ ಬಾರಸೆ ಗ್ರಾಮದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ವಾಮಿ (18) ಎಂಬ ಯುವಕ ಸಾವನ್ನಪ್ಪಿದ್ದು, ಹರೀಶ್ ಹಾಗೂ ಸಂಜಯ್‌ ಎಂಬ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮತ್ತೊಂದೆಡೆ ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಹರೀಶ್ (42) ಮೃತಪಟ್ಟಿದ್ದಾರೆ. ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗಿದ್ದು ಜಮೀನಿನಲ್ಲಿದ್ದ ಗುಡಿಸಲಿನ ಬಳಿ ರೈತ ಹರೀಶ್ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೈಸೂರಿನ ಚಾಮರಾಜಪುರಂನಲ್ಲಿರುವ ಕೋರ್ಟ್‌ ಬಳಿ ಬೃಹತ್‌ ಮರವೊಂದು ಧರೆಗುರುಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿದ್ದ ಕಾರಣ ಜನರು ಅಪಾಯದಿಂದ ಪಾರಾಗಿದ್ದಾರೆ. ಜೊತೆಗೆ ನಗರದ ಹಲವು ಬಡಾವಣೆಗಳಲ್ಲಿ ಸಣ್ಣಪುಟ್ಟ ಮರಗಳು ಧರೆಗುರುಳಿವೆಯಾದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕೆಲವೆಡೆ ರಸ್ತೆಯಲ್ಲಿ ಅರ್ಧ ಅಡಿ ಹಾಗೂ ಒಂದು ಅಡಿಯಷ್ಟು ನೀರು ನಿಂತು ವಾಹನ ಸವಾರರಿಗೆ ತೊಂದರೆಯಾದ ಘಟನೆ ನಡೆಯಿತು.

ಹುಣಸೂರು ತಾಲೂಕಿನಲ್ಲಿ ಗಾಳಿ ಮಳೆಗೆ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಗಾಳಿಗೆ ಮನೆಯ ಮೇಲ್ಚಾವಣಿಗೆ ಹಾಕಿದ್ದ ಶೀಟ್‌ಗಳು ಹಾರಿ ಹೋಗಿವೆ. ಬಿರುಗಾಳಿ ಸಹಿತ ವರುಣನ ಆರ್ಭಟಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್, ರಸ್ತೆ ಸಂಪರ್ಕ ಬಂದ್ ಆಗಿದೆ.

ಹನಗೋಡು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹನಗೋಡು ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಹೊಸಕೋಟೆ ಗೇಟ್ ಬಳಿ ಬೃಹತ್ ಮರ ಉರುಳಿ ಸಂಚಾರ ಬಂದ್ ಆಗಿದೆ. ಹನಗೋಡು-ಕಿರಂಗೂರು ಹರಳಹಳ್ಳಿ ರಸ್ತೆ ಜಲಾವೃತಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಕಿರಂಗೂರಿನಲ್ಲಿ ಮಳೆಯಿಂದಾಗಿ 4 ಎಕರೆಯಲ್ಲಿ ಬೆಳೆದಿದ್ದ ಜೋಳ ನಾಶವಾಗಿದೆ. ಹಿಂಡಗುಡ್ಲುವಿನಲ್ಲಿ ಮನೆಗೆ ನೀರು ನುಗ್ಗಿ ದವಸ, ಧಾನ್ಯ, ವಸ್ತುಗಳು ನಾಶವಾಗಿವೆ. ಚನ್ನಸೋಗೆ ಗ್ರಾಮದಲ್ಲಿ ಮೇಲ್ಚಾವಣಿಗಳು ಹಾರಿಹೋಗಿ ಮನೆಗಳಿಗೆ ಹಾನಿಯಾಗಿದೆ.

ಇಂದು ರಾತ್ರಿ ಸಹ ಮೈಸೂರಿನಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಹಾಗೂ ದುರ್ಬಲ ಮರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಕೊಡಬೇಕಿದೆ. ಈ ಮೂಲಕ ಆಗಬಹುದಾದ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ನಿನ್ನೆ (ಮೇ 21, ಭಾನುವಾರ) ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕೆಎಸ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಸಿಕ್ಕಿಹಾಕಿಕೊಂಡ ಪರಿಣಾಮ 23 ವರ್ಷದ ಭಾನುರೇಖಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

IPL_Entry_Point

ವಿಭಾಗ