ಕನ್ನಡ ಸುದ್ದಿ  /  ಕರ್ನಾಟಕ  /  Praveen Nettaru Murder Case: ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ

Praveen Nettaru Murder Case: ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA)ಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮಹತ್ವದ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಈ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕುರಿತಂತೆ ಪೊಲೀಸ್‌ ಮಹಾನಿರ್ದೇಶಕರು ಮತ್ತು ಐಜಿ ಜೊತೆಗೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಹತ್ಯೆ ಸಂಘಟಿತ ಅಪರಾಧವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಈ ಪ್ರಕರಣವು ಅಂತಾರಾಜ್ಯ ವಿಚಾರವಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನೂ ಸಂಗ್ರಹಿಸಲು ಹೇಳಿದ್ದೇನೆ. ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ಮಾಹಿತಿ ಪಡೆದ ಮೇಲೆ ಎನ್​​ಐಎಗೆ ಪತ್ರ ಬರೆಯುಲು ತಿಳಿಸಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಮೀಸಲು ಪಡೆ(KSRP)ಪಿಯ ಇನ್ನೊಂದು ಬೆಟಾಲಿಯನ್​ ನಿಯೋಜಿಸಲಾಗುವುದು. ಕೇರಳ ಗಡಿಯಲ್ಲಿ ಸಂಪೂರ್ಣವಾಗಿ ಸಿಸಿಟಿವಿ ಮೂಲಕ ಕಣ್ಗಾವಲು ವಹಿಸಲಾಗುವುದು. ಎರಡು ರಾಜ್ಯಗಳ ಸಂಪರ್ಕ ಇರುವ ಕಡೆ ಚೆಕ್​ ಪೋಸ್ಟ್ ಹಾಕಬೇಕು. ಸೂಕ್ಷ್ಮ ಊರುಗಳಲ್ಲಿ ಪೊಲೀಸರು ತಾತ್ಕಾಲಿಕ ಕ್ಯಾಂಪ್ ಮಾಡಬೇಕು. ಜೊತೆಗೆ ರಾತ್ರಿ ಗಸ್ತು ಹೆಚ್ಚಳ ಸೇರಿದಂತೆ ಹಲವು ಕ್ರಮಗಳಿಗೆ ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ವಿಚಾರವಾಗಿ ಇಂದು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ. ಕೇರಳ ಗಡಿ ಭಾಗದಲ್ಲಿ 55 ರಸ್ತೆಗಳನ್ನು ನಿಭಾಯಿಸುವುದು ಮತ್ತು ಈ ಪ್ರದೇಶಗಳಲ್ಲಿ ನಿರ್ಬಂಧ ಹೇರಿಕೆ ಸೇರಿದಂತೆ ಪ್ರಮುಖ ತೀರ್ಮಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಂದು ಕೊಲೆ ನಡೆದ ಬಗ್ಗೆ ಮಾಹಿತಿ ಬಂದಿದೆ. ಮೂರೂ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಯೊಬ್ಬ ನಾಗರಿಕನ ಜೀವವೂ ಸರ್ಕಾರಕ್ಕೆ ಮುಖ್ಯ. ತನಿಖೆ ನಡೆಯುತ್ತಿದೆ. ಮೂರು ಕೊಲೆಗಳಾಗಿರುವುದು ಜನರಲ್ಲಿ ಆತಂಕ ಮೂಡಿಸಿರುವುದು ಸಹಜ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡಲಾಗಿದೆ. ರಾಜಕೀಯ ಪ್ರೇರಣೆ ಕೂಡ ಇದರ ಹಿಂದಿದೆ. ಇದರಲ್ಲಿ ಹಲವು ಆಯಾಮಗಳಿವೆ. ಇವೆಲ್ಲಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಮಸೂದ್ ಕೊಲೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇನ್ನೆರಡು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಅದರ ಹಿಂದೆ ದೊಡ್ಡ ಸಂಘಟನೆಗಳಿವೆ. ಇದು ಕೇವಲ ಕೊಲೆ ಎಂದು ಪರಿಗಣಿಸಲಾಗುತ್ತಿಲ್ಲ. ಇದೊಂದು ಯೋಜನಾಬದ್ಧ ದುಷ್ಕೃತ್ಯವಾಗಿದ್ದು, ಇದರ ಹಿಂದಿರುವ ಸಮಾಜಘಾತುಕ ಸಂಘಟನೆಗಳನ್ನು ಸದೆಬಡೆಯುವ ಮಹತ್ವದ ಕೆಲಸ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕ್ರಮಗಳು ಜನರಿಗೆ ವೇದ್ಯವಾಗಲಿದೆ ಎಂದರು.

ಪ್ರವೀಣ್​​ ನೆಟ್ಟಾರು ಹತ್ಯೆ ಅತ್ಯಂತ ಖಂಡನೀಯ.ಇದು ಕೊಲೆಯಷ್ಟೇ ಅಲ್ಲ, ದೇಶದ್ರೋಹದ ಕೆಲಸವೂ ಆಗಿದೆ. ಇದು ಪೂರ್ವ ನಿಯೋಜಿತ ಕೃತ್ಯದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೇರಳದ ಗಡಿಯಲ್ಲೇ ಹತ್ಯೆ ನಡೆದಿದೆ. ಹಲವಾರು ವರ್ಷಗಳಿಂದ ಹೀಗೆ ಕರಾವಳಿಯಲ್ಲಿ ಕೊಲೆಗಳು ನಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ನಿನ್ನೆ ತಿಳಿಸಿದ್ದರು.

IPL_Entry_Point