ಕನ್ನಡ ಸುದ್ದಿ  /  ಕರ್ನಾಟಕ  /  Praveen Nettaru: ಪ್ರವೀಣ್‌ ನೆಟ್ಟಾರು ಹಂತಕರಿಗೆ ಪಿಎಫ್‌ಐ ನಂಟು ಇರುವ ಸಾಧ್ಯತೆ- ಎಡಿಜಿಪಿ

Praveen Nettaru: ಪ್ರವೀಣ್‌ ನೆಟ್ಟಾರು ಹಂತಕರಿಗೆ ಪಿಎಫ್‌ಐ ನಂಟು ಇರುವ ಸಾಧ್ಯತೆ- ಎಡಿಜಿಪಿ

ಬೆಳ್ಳಾರೆಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಬಿಜೆಪಿ ಯುವಮೋರ್ಚದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಪಿಎಫ್‌ಐ ಜತೆ ನಂಟು ಇರುವ ಮಾಹಿತಿಯಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಪ್ರವೀಣ್‌ ನೆಟ್ಟಾರು ಹಂತಕರಿಗೆ ಪಿಎಫ್‌ಐ ನಂಟು ಇರುವ ಸಾಧ್ಯತೆ
ಪ್ರವೀಣ್‌ ನೆಟ್ಟಾರು ಹಂತಕರಿಗೆ ಪಿಎಫ್‌ಐ ನಂಟು ಇರುವ ಸಾಧ್ಯತೆ

ಪುತ್ತೂರು (ದಕ್ಷಿಣ ಕನ್ನಡ): ಬೆಳ್ಳಾರೆಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಬಿಜೆಪಿ ಯುವಮೋರ್ಚದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಪಿಎಫ್‌ಐ ಜತೆ ನಂಟು ಇರುವ ಮಾಹಿತಿಯಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ವಿಚಾರಣೆ ವೇಳೆ ಅವರಿಗೆ ಪಿಎಫ್‌ಐ ಜತೆ ನಂಟು ಇರುವ ಕುರಿತು ಮಾಹಿತಿ ಲಭಿಸಿದೆ. ಪಿಎಫ್‌ಐಯು ರಿಜಿಸ್ಟ್ರೇಷನ್‌ ಇರುವ ಸಂಘಟನೆಯಲ್ಲ. ಅದರ ಕಾರ್ಯವಿಧಾನ ಬೇರೆ ರೀತಿ ಇರುತ್ತದೆʼʼ ಎಂದು ಅವರು ಹೇಳಿದ್ದಾರೆ.

"ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ. ದಾಖಲೆ ಸಂಗ್ರಹಿಸಿದ ಬಳಿಕವಷ್ಟೇ ಈ ಆರೋಪಿಗಳಲ್ಲಿ ಎಷ್ಟು ಜನರಿಗೆ ಪಿಎಫ್‌ಐ ಜತೆ ನಂಟು ಇದೆ ಎಂದು ಖಚಿತಪಡಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ.

ಬಂಧಿತ ಆರೋಪಿಗಳ ವಿಚಾರಣೆ ನಡೆಸಿ ಅವರಲ್ಲಿ ಪಿಎಫ್‌ಐನವರು ಇರುವ ಕುರಿತು ಖಚಿತಪಡಿಸುತ್ತೇವೆ. ದಾಖಲೆ ಹೇಳದೆ ಬಾಯ್ಮಾತಿನಲ್ಲಿ ಹೇಳಿದರೆ ಸರಿಯಾಗದು. ಕೆಲವರಿಗೆ ಈಗಾಗಲೇ ಪಿಎಫ್‌ಐ ಜತೆ ಸಂಪರ್ಕವಿರುವ ಸಂಶಯವಿದೆ. ಈ ಕುರಿತು ದಾಖಲೆ ಸಂಗ್ರಹಿಸಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

"ಈಗಾಗಲೇ ಈ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಅವರ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿ ಆಸ್ತಿ ಮುಟ್ಟುಗೋಲು ಸೇರಿದಂತೆ ಇತರೆ ಪ್ರಕ್ರಿಯೆಗಳನ್ನು ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆʼʼ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ನಿನ್ನೆ ಹೇಳಿದ್ದರು.

"ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಪದೇಪದೇ ಜಾಗ ಬದಲಾಯಿಸುತ್ತಿರುವ ಮಾಹಿತಿ ಇದೆ. ಇವರು ತಲೆಮರೆಸಿಕೊಳ್ಳಲು ಸಹಕರಿಸಿದವರನ್ನೂ ಬಂಧಿಸುತ್ತೇವೆ. ಎನ್‌ಐಎ ತಂಡವೂ ನಮ್ಮ ಜತೆಯೇ ಇದೆ. ಈ ಪ್ರಕರಣವನ್ನು ಕರ್ನಾಟಕ ಪೊಲೀಸ್‌ ಮತ್ತು ಎನ್‌ಐಎ ಜತೆಯಾಗಿ ತನಿಖೆ ನಡೆಸುತ್ತಿದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

"ಆರೋಪಿಗಳ ಹೆಸರು, ಅವರ ಹೆತ್ತವರ ಹೆಸರು, ಪತ್ನಿ ಹೆಸರು, ವಿಳಾಸ, ಭಾವಚಿತ್ರ ಇತ್ಯಾದಿ ಪ್ರಮುಖ ದಾಖಲೆಗಳು ದೊರಕಿವೆ. ಅವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಸದ್ಯ ಬಂಧನಕ್ಕೆ ಒಳ್ಗಾದ ಏಳು ಆರೋಪಿಗಳು ದಕ್ಷಿಣ ಕನ್ನಡದವರು. ದಕ್ಷಿಣ ಕನ್ನಡ ಜತೆಗೆ ಮಂಡ್ಯ, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸರೂ ತನಿಖೆಗೆ ಸಹಕರಿಸುತ್ತಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ಬೈಕ್‌ನಲ್ಲಿ ಬಂದ ದುಷ್ಮರ್ಮಿಗಳು ಬಿಜೆಪಿಯ ಕಾರ್ಯಕರ್ತರಾದ ಪ್ರವೀಣ್‌ ನೆಟ್ಟಾರು ಅವರನ್ನು ಬೆಳ್ಳಾರೆ ಪೇಟೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್‌ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್‌ ನೆಟ್ಟಾರು ಅವರು ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿದ್ದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಪ್ರವೀಣ್‌ ಅವರನ್ನು ಅಟ್ಟಾಡಿಸಿಕೊಂಡು ದಾಳಿ ಮಾಡಿದ್ದರು ಎಂದು ವರದಿಗಳು ಹೇಳಿವೆ. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್‌ ನೆಟ್ಟಾರು ಅವರನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದ ಬಳಿಕ ಮೃತಪಟ್ಟಿರುವುವುದನ್ನು ಘೋಷಿಸಲಾಗಿತ್ತು.

IPL_Entry_Point