ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ht Kannada Explainer: ರಸ್ತೆ ರಿಪೇರಿ, ಕಸ ವಿಲೇವಾರಿ ಶಾಸಕರ ಕೆಲಸವಲ್ಲ, ನಿಜವಾಗಿಯೂ ಎಂಎಲ್‌ಎ ಕೆಲಸವೇನು? ಮತದಾರರು ತಿಳಿದಿರಬೇಕಾದ ಮಾಹಿತಿ

HT Kannada Explainer: ರಸ್ತೆ ರಿಪೇರಿ, ಕಸ ವಿಲೇವಾರಿ ಶಾಸಕರ ಕೆಲಸವಲ್ಲ, ನಿಜವಾಗಿಯೂ ಎಂಎಲ್‌ಎ ಕೆಲಸವೇನು? ಮತದಾರರು ತಿಳಿದಿರಬೇಕಾದ ಮಾಹಿತಿ

Roles and responsibilities of MLA: ರಸ್ತೆ ರಿಪೇರಿ, ಕಾಲುವೆ ರಿಪೇರಿಗೆ ಸ್ಥಳೀಯ ಪುರಸಭೆ, ಕಾರ್ಪೊರೇಟರ್‌ಗಳಿದ್ದಾರೆ. ಉತ್ತಮ ನೀತಿಗಳು ಮತ್ತು ನಗರದ ಆಡಳಿತವನ್ನು ಸ್ಮಾರ್ಟ್ ಮತ್ತು ಪರಿಣಾಮಕಾರಿಯಾಗಿ ಮಾಡುವ ಯೋಜನೆಗಳಿಗಾಗಿ ಕಾನೂನು ರೂಪಿಸುವುದು ಶಾಸಕರ ಪ್ರಮುಖ ಕೆಲಸ.

ವಿಧಾನಸೌಧ
ವಿಧಾನಸೌಧ

ಇದು ಚುನಾವಣಾ ಸಮಯ (Karnataka Election). ರಾಜಕಾರಣಿಗಳು ಬಾಯಿತೆರೆದರೆ ಅಶ್ವಾಸನೆಗಳ ಮಹಾ ಪ್ರವಾಹವೇ ಹೊರಬರುತ್ತಿದೆ. ಎಂಎಲ್‌ಎಯೊಬ್ಬರು ತಮ್ಮ ರಾಜಕೀಯ ಭಾಷಣದಲ್ಲಿ "ನಿಮ್ಮ ರಸ್ತೆ ರಿಪೇರಿ ಮಾಡಿಕೊಡ್ತಿವಿ, ಆ ಕಾಮಗಾರಿ ಮಾಡ್ತಿವಿ, ಈ ಕಾಮಗಾರಿ ಮಾಡ್ತಿವಿ" ಎಂದಾಗ ಮತದಾರ ಮಹಾಪ್ರಭುಗಳು ಗೊಂದಲಕ್ಕೆ ಈಡಾಗಬಹುದು. ಆದರೆ, ಮತದಾರರು ಎಂಎಲ್‌ಎ/ಶಾಸಕರಾಗಲು ಬಯಸುವವರಿಂದ ಇಂತಹ ಅಶ್ವಾಸನೆಗಳು ಕೇಳಿಬಂದರೆ ನಂಬಬೇಡಿ. ರಸ್ತೆ ರಿಪೇರಿ, ಕಾಲುವೆ ರಿಪೇರಿಗೆ ಸ್ಥಳೀಯ ಪುರಸಭೆ, ಕಾರ್ಪೊರೇಟರ್‌ಗಳಿದ್ದಾರೆ. ಹಾಗಾದರೆ, ನಾವು ಚುನಾಯಿಸಿ ಆಯ್ಕೆ ಮಾಡುವ ಎಂಎಲ್‌ಎ/ ಶಾಸಕರ ಕೆಲಸವೇನು? ಎಂಬ ಪ್ರಶ್ನೆ ಸಹಜವಾಗಿ ಮೂಡಿಬರಬಹುದು.

ಯಾರು ಎಂಎಲ್‌ಎ ಆಗಬಹುದು?

ಶಾಸಕರಾಗಲು ಅರ್ಹತೆಗಳು ಈ ಮುಂದಿನಂತೆ ಇವೆ.

  1. ಭಾರತೀಯ ನಾಗರಿಕ ಆಗಿರಬೇಕು.
  2. ಎಂಎಲ್‌ಎ ಆಗಲು ಕನಿಷ್ಠ 25 ವರ್ಷ ವಯಸ್ಸು ಪೂರೈಸಿರಬೇಕು.
  3. ಆದಾಯ ತರುವ ಕಚೇರಿ ( office of profit) ಹೊಂದಿರಬಾರದು.
  4. ಭಾರತದ ಸಂಸತ್‌ ನಿಗದಿತಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.
  5. ಮಾನಸಿಕ ಸ್ಥಿತಿ ಉತ್ತಮವಾಗಿರಬೇಕು. ಕೋರ್ಟ್‌ನಿಂದ ಅನರ್ಹತೆ ಪಡೆದಿರಬಾರದು.
  6. ಆಯಾ ರಾಜ್ಯದ ಮತದಾರರಿಂದ ಆಯ್ಕೆಯಾಗಿರಬೇಕು.

ಶಾಸಕ/ ಎಂಎಲ್‌ಎಗಳ ಕೆಲಸಗಳು ಮತ್ತು ಜವಾಬ್ದಾರಿಗಳು

ಎಂಎಲ್‌ಎಗಳ ಕೆಲಸವೇನು ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಕಂಡುಕೊಳ್ಳೋಣ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ಉತ್ತಮ ನೀತಿಗಳು ಮತ್ತು ನಗರದ ಆಡಳಿತವನ್ನು ಸ್ಮಾರ್ಟ್ ಮತ್ತು ಪರಿಣಾಮಕಾರಿಯಾಗಿ ಮಾಡುವ ಯೋಜನೆಗಳಿಗಾಗಿ ಕಾನೂನು ರೂಪಿಸುವುದು ಶಾಸಕರ ಪ್ರಮುಖ ಕೆಲಸ. ಡೆಕ್ಕನ್‌ ಹೆರಾಲ್ಡ್‌ ವರದಿಯೊಂದರ ಪ್ರಕಾರ, "ಕಳೆದ ಹಲವು ವರ್ಷಗಳಲ್ಲಿ ಶಾಸಕರು ತಾವೇ ಕಾರ್ಪೊರೇಟರ್‌ಗಳಂತೆ ವರ್ತಿಸುತ್ತಾರೆ. ಕಟ್ಟಡ ಯೋಜನೆಗೆ ಪರವಾನಿಗೆ ನೀಡುವುದರಿಂದ ಕಸ ವಿಲೇವಾರಿ ಒಪ್ಪಂದದವರೆಗೆ ಎಲ್ಲದರ ಮೇಲೂ ಅವರು ಅಧಿಕಾರ ಚಲಾಯಿಸುತ್ತಾರೆ. ಇದೇ ರೀತಿ ಜನರು ಕೂಡ ತಮ್ಮ ನಾಗರಿಕ ಸಮಸ್ಯೆಗಳಿಗೆ ಎಂಎಲ್‌ಎಗಳನ್ನು ಭೇಟಿಯಾಗುತ್ತಿದ್ದಾರೆ. ರಸ್ತೆ, ಚರಂಡಿ ಮತ್ತು ಇತರೆ ಸ್ಥಳೀಯ ಸಮಸ್ಥೆಗಳನ್ನು ಬಗೆಹರಿಸಲು ಎಂಎಲ್‌ಎ ಬಳಿ ಹೋಗುವುದು ಈಗ ಸಾಮಾನ್ಯವಾಗಿದೆ.

ಆದರೆ, ಎಂಎಲ್‌ಎಗಳ ಕೆಲಸ ಉತ್ತಮ ನೀತಿ ಮತ್ತು ಯೋಜನೆಗಳಿಗೆ ಕಾನೂನು ರೂಪಿಸುವುದು. ಮುಂದೆ ನೀವು ಮತ ಚಲಾಯಿಸುವಾಗ ನಿಮ್ಮೂರಿನ ಶಾಸಕ ಅಭ್ಯರ್ಥಿಯು ಇಂತಹ ಕಾನೂನು ರೂಪಿಸಲು ಎಷ್ಟು ಶ್ರಮಿಸಿದ್ದಾನೆ ಎಂಬ ಮಾಹಿತಿ ಪಡೆಯಿರಿ" ಎಂದು ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ವಿಪಿನ್‌ ಅಂದಾನಿ ಎನ್ನುವವರು ಬರೆದಿದ್ದರು. "ಈ ಮಾಹಿತಿ ನೀಡುವಂತೆ ಸರಕಾರವನ್ನು ಒತ್ತಾಯಿಸಲು ನಾವು ಅಭಿಯಾನ ಆರಂಭಿಸಬಹುದು" ಎಂದು ಡಿಎನ್‌ ಎಂಬ ಬಳಕೆದಾರರು ಕಾಮೆಂಟ್‌ ಮಾಡಿದ್ದರು. "ಜನರಿಗೆ ರಾಜಕೀಯ ಸಾಕ್ಷರತೆ ಕಡಿಮೆ ಇರುವುದು ನಿಜವಾದ ಸಮಸ್ಯೆ. ಬೆಂಗಳೂರಿನ ಶಾಸಕರು ಕಳೆದ ಐದು ವರ್ಷದಲ್ಲಿ ತಮಗೆ ಸಂವಿಧಾನ ನೀಡಲಾದ ಅಧಿಕಾರವನ್ನು ಬಳಸದೆ ವ್ಯರ್ಥ ಮಾಡಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವಲ್ಲಿ ಇವರು ವಿಫಲರಾಗಿದ್ದಾರೆ" ಎಂಬಿತ್ಯಾದಿ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ನಡೆದಿದೆ.

ರಸ್ತೆ ರಿಪೇರಿ, ಚರಂಡಿ ರಿಪೇರಿ, ಬೀದಿದೀಪ, ಕಸ ವಿಲೇವಾರಿ ಶಾಸಕರ ಕೆಲಸವಲ್ಲ

ಯಾವುದೇ ಕ್ಷೇತ್ರದ ಸೂಕ್ಷ್ಮ ಸಮಸ್ಯೆಗಳನ್ನು ವಾರ್ಡ್‌ಮಟ್ಟದಲ್ಲಿ ನಿರ್ವಹಿಸಬೇಕು. ಇವರು ಕೌನ್ಸಿಲರ್‌ ಜತೆ ಕೆಲಸ ಮಾಡಬೇಕು. ಆದರೆ, ಈಗ ಏನಾಗುತ್ತಿದೆಯಂದರೆ ಮತದಾರರು ತಮ್ಮ ರಸ್ತೆ ರಿಪೇರಿ, ಬೀದಿದೀಪ, ಚರಂಡಿ ರಿಪೇರಿ, ಕಸ ವಿಲೇವಾರಿ ಇತ್ಯಾದಿ ಸಮಸ್ಯೆಗಳನ್ನು ಶಾಸಕರ ಬಳಿಗೆ ತರುತ್ತಾರೆ. ನಗರ ಪುರಸಭೆಗಳಿಗೆ ಅಧಿಕಾರ ಮತ್ತು ಹಣದ ಅಸಮರ್ಪಕ ವಿಕೇಂದ್ರೀಕರಣದಿಂದಾಗಿ ಇದು ಸಂಭವಿಸುತ್ತದೆ ಎಂದು ಸಿಟಿಜನ್ಸ್‌ ಮ್ಯಾಟರ್ಸ್‌ ವೆಬ್‌ನಲ್ಲಿ ವಿವರ ನೀಡಲಾಗಿದೆ. ಸಿಟಿಜನ್‌ ಮ್ಯಾಟರ್ಸ್‌ ವೆಬ್‌ ತಾಣದಲ್ಲಿರುವ ಮಾಹಿತಿ ಪ್ರಕಾರ, ಶಾಸಕರ ಪ್ರಾಥಮಿಕ ಜವಾಬ್ದಾರಿಯು ರಾಜ್ಯ ವಿಧಾನಸಭೆಯ ಸುಗಮ ಮತ್ತು ದಕ್ಷ ಕಾರ್ಯನಿರ್ವಹಣೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿಧಾನಸಭೆಯ ಮೂರು ಮುಖ್ಯ ಕಾರ್ಯಗಳಿಗೆ ಸಂಬಂಧಪಟ್ಟಂತೆ ಕಾನೂನುಗಳನ್ನು ರೂಪಿಸುವುದು, ರಾಜ್ಯ ಕಾರ್ಯಕಾರಿಣಿಯನ್ನು ಹೊಣೆಗಾರರನ್ನಾಗಿ ಮಾಡುವುದು ಮತ್ತು ಸಾರ್ವಜನಿಕ ವೆಚ್ಚವನ್ನು ಮಂಜೂರು ಮಾಡುವುದು ಇವರ ಪ್ರಮುಖ ಕೆಲಸವಾಗಿದೆ.

ಎಂಎಲ್‌ಎ/ ಶಾಸಕರ ಕಾರ್ಯವನ್ನು ಹೀಗೆ ಪಟ್ಟಿ ಮಾಡಬಹುದು.

- ಮಸೂದೆಗಳನ್ನು ಪರಿಚಯಿಸುವುದು, ಚರ್ಚಿಸುವುದು ಮತ್ತು ತಿದ್ದುಪಡಿ ಮಾಡುವುದು, ಕಾನೂನುಗಳನ್ನು ರಚಿಸುವುದು ಮತ್ತು ರಾಜ್ಯ ಪಟ್ಟಿ ಮತ್ತು ಸಮಕಾಲೀನ ಪಟ್ಟಿಯಲ್ಲಿ ನಮೂದಿಸಲಾದ ವಿಷಯಗಳ ಮೇಲೆ ಮತದಾನ ಮಾಡುವುದು. ಸಚಿವರಲ್ಲದ ಶಾಸಕರು ಖಾಸಗಿ ಸದಸ್ಯರ ವಿಧೇಯಕವನ್ನು ಬಳಸಿಕೊಂಡು ಕಾಯಿದೆಯಾಗಿ ಅಂಗೀಕರಿಸಲು ಕ್ರಮ ವಹಿಸುವುದು. ಆದರೆ, ಈಗ ವಿಧಾನಸಭೆಯಲ್ಲಿ ಮಸೂದೆ ಇತ್ಯಾದಿಗಳ ಕುರಿತು ಚರ್ಚೆಗಳೇ ನಡೆಯದೇ ಅನಗತ್ಯ ವಿಷಯಗಳು ಚರ್ಚೆಯಾಗುತ್ತಿರುವುದನ್ನು ಗಮನಿಸಬಹುದು.

  1. - ವಿಧಾನಸಭೆ ಅಧಿವೇಶನದಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸುವುದು.
  2. - ರಾಜ್ಯ ಅಥವಾ ನಗರ ಸರ್ಕಾರವು ಘೋಷಿಸಿದ ಯೋಜನೆಗಳು ಅವರ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು. ಉದಾಹರಣೆಗೆ, ಇಡೀ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆಯಾಗದಿದ್ದರೆ, ಶಾಸಕರು ತಮ್ಮ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರ ಮೇಲೆ ಪರಿಣಾಮ ಬೀರುವ ಕಾರಣ ವಿಧಾನಸಭೆಯಲ್ಲಿ ಈ ಸಮಸ್ಯೆಯ ಪ್ರಸ್ತಾಪ ಮಾಡಬಹುದು.
  3. - ರಾಜ್ಯವು ತೆರಿಗೆದಾರರ ಹಣವನ್ನು ಹೇಗೆ ಖರ್ಚು ಮಾಡುತ್ತಿದೆ ಎಂಬುದನ್ನು ಪರಿಶೀಲಿಸುವುದು ಮತ್ತು ವ್ಯತ್ಯಾಸಗಳಿದ್ದಲ್ಲಿ ಹಣಕಾಸು ಸಚಿವರೊಂದಿಗೆ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡುವುದು.
  4. - ರಾಜ್ಯ ಸರ್ಕಾರದ ನೀತಿಗಳನ್ನು ಕಾರ್ಯನಿರ್ವಾಹಕರು ಅನುಷ್ಠಾನಗೊಳಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು
  5. - ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಶಾಸಕರು ಮಾಡಬೇಕು.

ಎಂಎಲ್‌ಎ/ಶಾಸಕರು ಎಂಪಿ ಅಥವಾ ಕಾರ್ಪೊರೇಷನ್‌ ಕೌನ್ಸಿಲರ್‌ಗಳಿಗಿಂತ ಭಿನ್ನ ಹೇಗೆ?

ಭಾರತವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಗರ ಸರ್ಕಾರವನ್ನು ಒಳಗೊಂಡಿರುವ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಅನುಸರಿಸುತ್ತದೆ. ಸಂಸದರು (ಸಂಸತ್ತಿನ ಸದಸ್ಯರು) ಲೋಕಸಭೆ ಮತ್ತು ರಾಜ್ಯಸಭೆಗೆ (ಕೇಂದ್ರ) ಚುನಾಯಿತರಾಗುತ್ತಾರೆ. ಶಾಸಕರು ವಿಧಾನಸಭೆಗೆ (ರಾಜ್ಯ) ಚುನಾಯಿತರಾಗುತ್ತಾರೆ. ಕೌನ್ಸಿಲರ್‌ಗಳು ನಿಗಮಕ್ಕೆ (ನಗರ) ಚುನಾಯಿತರಾಗುತ್ತಾರೆ. ಸಂಸದರಾಗಿ ಆಯ್ಕೆಯಾದವರ ಪ್ರಮುಖ ಪಾತ್ರವು ರಾಷ್ಟ್ರದ ಸರಕಾರಕ್ಕೆ ಸಂಬಂಧಿಸಿದೆ. ಕೇಂದ್ರ ಕಾನೂನು, ಕಾನೂನು ತಿದ್ದುಪಡಿಗಳು, ರಕ್ಷಣೆ, ವಿದೇಶಾಂಗ ವ್ಯವಹಾರ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಮೇಲೆ ಮತ ಚಲಾಯಿಸುತ್ತಾರೆ.

ಕೌನ್ಸಿಲರ್‌ಗಳು ತಮ್ಮ ವಾರ್ಡ್‌ನ ಮತದಾರರನ್ನು ಪ್ರತಿನಿಧಿಸುತ್ತಾರೆ. ಇಲ್ಲಿ ಮೇಯರ್‌ ಅನ್ನು ಆಯ್ಕೆ ಮಾಡುವ ಜವಾಬ್ದಾರಿ ಇವರಿಗೆ ಇರುತ್ತದೆ. ನಗರ ಬಜೆಟ್‌ ಮಂಡನೆ, ನಗರ ಸಭೆಯಲ್ಲಿ ಪಾಲ್ಗೊಳ್ಳುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಾರೆ. ವಾರ್ಡ್‌ನಲ್ಲಿರುವ ಎಲ್ಲಾ ನಾಗರಿಕರಿಗೆ ರಸ್ತೆಗಳು, ಕಸ ನಿರ್ವಹಣೆ, ನೀರು ಸರಬರಾಜು, ವಿದ್ಯುತ್ ಮುಂತಾದ ಪುರಸಭೆಯ ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಕೌನ್ಸಿಲರ್ ಕೆಲಸವಾಗಿದೆ. ಆದರೆ, ಈಗ ಶಾಸಕರು ಇದು ತಮ್ಮ ಕೆಲಸವೆಂಬಂತೆ ವರ್ತಿಸುತ್ತಾರೆ.

(ಲೇಖನ: ಪ್ರವೀಣ್‌ ಚಂದ್ರ ಪುತ್ತೂರು. ಪೂರಕ ಮಾಹಿತಿ: ಸಿಟಿಜನ್‌ ಮ್ಯಾಟರ್ಸ್‌, ಡೆಕ್ಕನ್‌ ಹೆರಾಲ್ಡ್‌ ಮತ್ತು ಇಂಟರ್‌ನೆಟ್‌ )

IPL_Entry_Point