ಕನ್ನಡ ಸುದ್ದಿ  /  Karnataka  /  Profile Of Vinay Kulkarni Congress Candidate In Dharwada Karnataka Assembly Election 2023 News In Kannada Rsm

Vinay Kulkarni Profile:ಯೋಗೀಶ್‌ ಗೌಡ ಹತ್ಯೆ ಪ್ರಕರಣದ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ,ಧಾರವಾಡ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪ್ರೊಫೈಲ್

ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್‌ ಗೌಡ ತನಿಖೆ ಎದುರಿಸುತ್ತಿದ್ದಾರೆ. 2016 ಜೂನ್‌ 2 ರಂದು ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್‌ ಗೌಡ ಅವರನ್ನು ಕೆಲವು ದುಷ್ಕರ್ಮಿಗಳು ಜಿಮ್‌ನಲ್ಲಿ ಹತ್ಯೆ ಮಾಡಿದ್ದರು. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಎಂದು ಯೋಗೀಶ್‌ ಕುಟುಂಬಸ್ಥರು ಆರೋಪಿಸಿದ್ದರು.

ಧಾರವಾಡ ಅಭ್ಯರ್ಥಿ ವಿನಯ್‌ ಕುಲಕರ್ಣಿ
ಧಾರವಾಡ ಅಭ್ಯರ್ಥಿ ವಿನಯ್‌ ಕುಲಕರ್ಣಿ (PC: Vinay Kulkarni Facebook)

ಈ ಬಾರಿ ವಿಧಾನಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿನಯ್‌ ಕುಲಕರ್ಣಿ ಸ್ಪರ್ಧಿಸುತ್ತಿದ್ದಾರೆ. ವಿನಯ್‌ ಕುಲಕರ್ಣಿ ಯಾರು? ಅವರ ವಿದ್ಯಾಭ್ಯಾಸ, ರಾಜಕೀಯ ಪ್ರವೇಶ ಹೇಗಾಯ್ತು? ವಿನಯ್‌ ಕುಲಕರ್ಣಿ ಮೇಲಿರುವ ಆರೋಪಗಳೇನು? ಸೇರಿದಂತೆ ಇನ್ನಿತರ ಮಾಹಿತಿಗಳು ಇಲ್ಲಿವೆ.

ಬಾಲ್ಯ - ವಿದ್ಯಾಭ್ಯಾಸ

ವಿನಯ್‌ ಕುಲಕರ್ಣಿ, ಧಾರವಾಡದ ನವಲಗುಂದದ ಗುಮ್ಮಗೋಳಲ್ಲಿ 07 ನವೆಂಬರ್‌ 1967 ರಂದು ಜನಿಸಿದರು. ಇವರು ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ವಿನಯ್‌ ಕುಲಕರ್ಣಿ ಕೃಷಿ ವಿಭಾಗದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ.

ರಾಜಕೀಯ ಪ್ರವೇಶ

ವಿನಯ್ ಕುಲಕರ್ಣಿ ಯುವ ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ. 2004 ರಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು. 2008 ರಲ್ಲಿ ಬಿಜೆಪಿಯ ಸೀಮಾ ಮಸೂತಿ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದರು. ಮತ್ತೆ 2013ರ ಚುನಾವಣೆಯಲ್ಲಿ ಧಾರವಾಡ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಅಮೃತ್‌ ಅಯ್ಯಪ್ಪ ದೇಸಾಯಿ ವಿರುದ್ಧ ಗೆದ್ದು ವಿಧಾನಸಭೆಗೆ ಆಯ್ಕೆ ಆದರು. 2014ರ ಲೋಕಸಭೆ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡರು. 2016 ರಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿ ನೇಮಕಗೊಂಡರು.

2028 ರಲ್ಲಿ ವಿನಯ್‌ ಕುಲಕರ್ಣಿ ಬಿಜೆಪಿಯ ಅಮೃತ್‌ ದೇಸಾಯಿ ವಿರುದ್ಧ 85,123 ಮತಗಳನ್ನು ಗಳಿಸಿ ಸೋತಿದ್ದರು. ಕಳೆದ ಲೋಕಸಭೆ ಚುನಾವಣೆ (2019) ರಲ್ಲಿ ಕಾಂಗ್ರೆಸ್‌ ಪಕ್ಷ, ವಿನಯ್‌ ಕುಲಕರ್ಣಿ ಅವರನ್ನು ಪ್ರಹ್ಲಾದ್‌ ಜೋಶಿ ವಿರುದ್ಧ ಸ್ಪರ್ಧೆಗೆ ಇಳಿಸಿತ್ತು. ಆದರೆ ಅಲ್ಲೂ ವಿನಯ್‌ ಕುಲಕರ್ಣಿ ಸೋಲು ಕಂಡಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿಜಯ್‌ ಕುಲಕರ್ಣಿ ಧಾರವಾಡ ಕ್ಷೇತ್ರದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವೈಯಕ್ತಿಕ ಜೀವನ

ವಿನಯ್ ಕುಲಕರ್ಣಿ ಶಿವಲೀಲಾ ಎಂಬುವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ವೈಶಾಲಿ ಹಾಗೂ ಹೇಮಂತ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ವಿನಯ್‌ ಕುಲಕರ್ಣಿ ರಾಜಕೀಯದಲ್ಲಿ ಸಕ್ರಿಯರಾಗಿರುವ ಜೊತೆಗೆ ವ್ಯವಸಾಯ ಕೂಡಾ ಮಾಡುತ್ತಾರೆ. ಹೈನುಗಾರಿಕೆಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ.

ವಿವಾದಗಳು

2016 ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್‌ ಗೌಡ ತನಿಖೆ ಎದುರಿಸುತ್ತಿದ್ದಾರೆ. 2016 ಜೂನ್‌ 2 ರಂದು ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್‌ ಗೌಡ ಅವರನ್ನು ಕೆಲವು ದುಷ್ಕರ್ಮಿಗಳು ಜಿಮ್‌ನಲ್ಲಿ ಹತ್ಯೆ ಮಾಡಿದ್ದರು. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಎಂದು ಯೋಗೀಶ್‌ ಕುಟುಂಬಸ್ಥರು ಆರೋಪಿಸಿದ್ದರು. 2019 ಸೆಪ್ಟೆಂಬರ್‌ನಲ್ಲಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ತನಿಖೆ ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು 2020ರಲ್ಲಿ ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಕೆಲವು ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದ ವಿನಯ್‌ ಕುಲಕರ್ಣಿ 2021ರಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಅಂದಿನಿಂದ ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿತ್ತು.

ಇದೀಗ ವಿನಯ್‌ ಕುಲಕರ್ಣಿ ಧಾರವಾಡ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿನ್ನೆಲೆ ಕೆಲವು ದಿನಗಳ ಮಟ್ಟಿಗಾದರೂ ಜಿಲ್ಲೆಯನ್ನು ಪ್ರವೇಶಿಸುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ವಿಜಯ್‌ ಕುಲಕರ್ಣಿ ಅರ್ಜಿಯನ್ನು ವಜಾಗೊಳಿಸಿದೆ. ಸದ್ಯಕ್ಕೆ ವಿನಯ್‌ ಕುಲಕರ್ಣಿ ಪರ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಮಗಳು ವೈಶಾಲಿ ಧಾರವಾಡದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಮತದಾರರು ವಿನಯ್‌ ಕುಲಕರ್ಣಿ ಕೈ ಹಿಡಿಯಲಿದ್ದಾರಾ? ಒಂದು ವೇಳೆ ಈ ಚುನಾವಣೆಯಲ್ಲಿ ಗೆದ್ದರೆ ಧಾರವಾಡ ಪ್ರವೇಶಿಸಲು ಅನುಮತಿ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕು.

ಯೋಗೀಶ್ ಗೌಡ ಕೊಲೆ ಪ್ರಕರಣ ಹೊರತುಪಡಿಸಿ ಜೈಲಿನಿಂದ ಹೊರ ಬಂದ ನಂತರ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ವಿನಯ್‌ ಕುಲಕರ್ಣಿ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.

IPL_Entry_Point