ಕನ್ನಡ ಸುದ್ದಿ  /  ಕರ್ನಾಟಕ  /  Public Health: ಚಿಕಿತ್ಸೆ ನೀಡಲು ನಿರಾಕರಿಸಿದರೆ ಶಿಸ್ತು ಕ್ರಮ; ಜಿಲ್ಲಾಸ್ಪತ್ರೆಗಳಲ್ಲಿʻಉಚಿತʼ ಸಿಟಿ / Mri ಸ್ಕ್ಯಾನ್‌ ಸರ್ಕಾರದ ಚಿಂತನೆ

Public health: ಚಿಕಿತ್ಸೆ ನೀಡಲು ನಿರಾಕರಿಸಿದರೆ ಶಿಸ್ತು ಕ್ರಮ; ಜಿಲ್ಲಾಸ್ಪತ್ರೆಗಳಲ್ಲಿʻಉಚಿತʼ ಸಿಟಿ / MRI ಸ್ಕ್ಯಾನ್‌ ಸರ್ಕಾರದ ಚಿಂತನೆ

Public health: ಚಿಕಿತ್ಸೆ ನೀಡುವುದನ್ನು ನಿರಾಕರಿಸಿದಲ್ಲಿ, ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ/ಇತರ, ಸಿಬ್ಬಂದಿಯನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಅದು ಅವರ ದುರ್ನಡತೆ ಎಂದು ಪರಿಗಣಿಸಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಸಚಿವ ಡಾ.ಕೆ.ಸುಧಾಕರ್‌ (ಸಾಂದರ್ಭಿಕ ಚಿತ್ರ)
ಸಚಿವ ಡಾ.ಕೆ.ಸುಧಾಕರ್‌ (ಸಾಂದರ್ಭಿಕ ಚಿತ್ರ) (ANI)

ಬೆಂಗಳೂರು: ಚಿಕಿತ್ಸೆ ನೀಡಲು ನಿರಾಕರಿಸುವ ಆರೋಗ್ಯ ಸೇವಾ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಸಿದ್ದಾರೆ.

ಅವರು ವಿಧಾನ ಪರಿಷತ್‌ನ ಕಲಾಪದಲ್ಲಿ ಸದಸ್ಯ ಕೆ.ಹರೀಶ್‌ ಕುಮಾರ್‌ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತ ಈ ವಿಚಾರವನ್ನ ಸದನಕ್ಕೆ ತಿಳಿಸಿದರು.

ರಾಜ್ಯದ ಆಸ್ಪತ್ರೆಗಳಲ್ಲಿ, ವೈದ್ಯ ಸಂಸ್ಥೆಗಳಲ್ಲಿ 'ನಿಮ್ಮ ಆರೋಗ್ಯ ನಮ್ಮ ಬದ್ಧತೆ' ಎಂಬ ಧ್ಯೇಯ ವಾಕ್ಯದಂತೆ ಎಲ್ಲರಿಗೂ ಚಿಕಿತ್ಸೆ ಒದಗಿಸಲಾಗುತ್ತಿದೆ. ಆದಾಗ್ಯೂ ಚಿಕಿತ್ಸೆ ನೀಡುವುದನ್ನು ನಿರಾಕರಿಸಿದಲ್ಲಿ, ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ/ಇತರ, ಸಿಬ್ಬಂದಿಯನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಅದು ಅವರ ದುರ್ನಡತೆ ಎಂದು ಪರಿಗಣಿಸಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಹೊರ ರೋಗಿಗಳನ್ನ ಪರೀಕ್ಷಿಸುವ ವೈದ್ಯಕೀಯ ಮೌಲ್ಯಮಾಪನದ ಆಧಾರದ ಮೇಲೆ ತುರ್ತು ಪರಿಸ್ಥಿತಿ ಅಥವಾ ಆವಶ್ಯಕತೆಯ ಅನುಗುಣವಾಗಿ ಒಳ ರೋಗಿಗಳಾಗಿ ದಾಖಲಾತಿಯು ನಿರ್ಧಾರವಾಗುತ್ತದೆ ಎಂದು ಅವರು ವಿವರಿಸಿದರು.

ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆ ಪಡೆಯುವ ಸಲುವಾಗಿ ದಾಖಲಾಗುವ ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ದಾಖಲೆಗಳನ್ನು ಒದಗಿಸಿಲ್ಲವೆಂಬ ಕಾರಣಗಳಿಗಾ ಚಿಕಿತ್ಸೆಯನ್ನು ನೀಡಲು ನಿರಾಕರಿಸುವುದನ್ನು ತಡೆಗಟ್ಟುವ ಸುತ್ತೋಲೆಗಳನ್ನು 2022ರ ನ.23 ಮತ್ತು 2022 ನ.4 ರಂದು ಪ್ರಕಟಿಸಲಾಗಿದೆ. ಇದರಲ್ಲಿ ಮಾರ್ಗಸೂಚಿಗಳನ್ನೂ ನಿಗದಿ ಮಾಡಲಾಗಿದೆ. ಇದರಲ್ಲಿ ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆ ನೀಡುವ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ/ಇತರೆ ಸಿಬ್ಬಂದಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿ ವಿವರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಹಾಗೂ ಬಿಪಿಎಲ್ ಕಾರ್ಡ್‍ದಾರರಿಗೆ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ಒದಗಿಸಲಾಗುತ್ತಿದೆ.

ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ…

ಆರೋಗ್ಯ ಇಲಾಖೆಯಲ್ಲಿ ಆಯುಷ್ಮಾನ್ ಭಾರತ ಡಿಜಿಟಲ್ ಅಭಿಯಾನದಡಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು (Skip the Queue) ಎಂಬ ನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ವೈದ್ಯರ ಸಮಾಲೋಚನೆಗಾಗಿ ರೋಗಿಗಳು ಕಾಯುವ ಸಮಯವು ಗಣನೀಯವಾಗಿ ಕಡಿಮೆ ಆಗಿದೆ. ಇದರಿಂದಾಗಿ ಹೊರ ರೋಗಿಗಳು ಶೀಘ್ರವಾಗಿ ವೈದ್ಯರ ಸಲಹೆ ಪಡೆಯುವುದು ಸಾಧ್ಯವಾಗಿದೆ. ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ರೋಗಿಗಳಿಗೆ 5 ಲಕ್ಷ ರೂಪಾಯಿ ತನಕದ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ ಹಾಗೂ ಎಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ವಾರ್ಷಿಕ 1.50 ಲಕ್ಷ ರೂಪಾಯಿ ತನಕದ ಆರೋಗ್ಯ ಸೇವಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್‌ ವಿವರ ನೀಡಿದರು.

ಡಯಾಲಿಸಿಸ್, ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ 10 ಹಾಸಿಗೆಗಳನ್ನು ಹಾಗೂ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಗಳನ್ನು ಡಯಾಲಿಸಿಸ್ ಸೇವೆಗಳಿಗಾಗಿ ಕಾಯಿರಿಸಲಾಗಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಿಟಿ ಸ್ಕ್ಯಾನ್ / ಎಂಆರ್ ಐ ಸ್ಕ್ಯಾನ್ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

IPL_Entry_Point