ಕನ್ನಡ ಸುದ್ದಿ  /  Karnataka  /  Siddaramaiah Cabinet Probable Ministers Speaker Karnataka Govt Congress Dk Shivakumar Political News In Kannada Uks

Siddaramaiah Cabinet: ಸಿದ್ದರಾಮಯ್ಯ ಸಂಪುಟದಲ್ಲಿ ಯಾರ‍್ಯಾರಿಗೆ ಸ್ಥಾನ ಹಿರಿ- ಕಿರಿಯರ ಜತೆಗೆ ಪ್ರಾದೇಶಿಕತೆ, ಸಾಮಾಜಿಕ ನ್ಯಾಯಕ್ಕೆ ಒತ್ತು

Siddaramaiah Cabinet: ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಂಬುದು ಖಚಿತವಾಯಿತು. ಇನ್ನು ಸಚಿವ ಸಂಪುಟದ ವಿಚಾರ. ಸಂಭಾವ್ಯ ಸಚಿವರು ಯಾರೆಂಬ ವಿಚಾರ ಈಗಾಗಲೇ ಚರ್ಚೆಗೆ ಒಳಗಾಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಡಿಸಿಎಂ (ಕಡತ ಚಿತ್ರ)
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಡಿಸಿಎಂ (ಕಡತ ಚಿತ್ರ)

ಕರ್ನಾಟಕದಲ್ಲಿ ಬಹುಮತ ಪಡೆದಿದ್ದರೂ ಅಧಿಕಾರ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ತಲೆದೋರಿದ್ದ ಗೊಂದಲ ತಾತ್ಕಾಲಿಕ ಶಮನವಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಶನಿವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರೊಟ್ಟಿಗೆ ಸಚಿವರಾಗಿ ಯಾರು ಸಂಪುಟ ಸೇರಬಹುದು ಎನ್ನುವ ಚರ್ಚೆ ಶುರುವಾಗಿದೆ.

ಈ ಬಾರಿ 135 ಶಾಸಕರು ಗೆದ್ದಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹಿಂದೆಂದಿಗಿಂತಲೂ ಅಧಿಕವಾಗಿದೆ. 34 ಮಂದಿಗೆ ಸಂಪುಟಕ್ಕೆ ಸೇರಲು ಅವಕಾಶವಿದೆ. ಹಿರಿ- ಕಿರಿಯರ ಜತೆಗೆ ಪ್ರಾದೇಶಿಕತೆ, ಸಾಮಾಜಿಕನ್ಯಾಯಕ್ಕೂ ಒತ್ತಡ ಹೆಚ್ಚು ಇರುವುದರಿಂದ ಮೂರ‍್ನಾಲ್ಕು ಸ್ಥಾನ ಖಾಲಿ ಉಳಿಸುವ ಸಾಧ್ಯತೆಯೂ ಇದೆ.

ಬೆಂಗಳೂರು ನಗರದಲ್ಲಿ ಹಿರಿಯರಾದ ಕೆ.ಜೆ.ಜಾರ್ಜ್, ಆರ್.ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹಮದ್ ಖಾನ್, ಎಂ.ಕೃಷ್ಣಪ್ಪ ಹೆಸರು ಮುಂಚೂಣಿಯಲ್ಲಿದೆ. ಬೆಂಗಳೂರಿನಿಂದ ಕನಿಷ್ಟ ನಾಲ್ಕು ಮಂದಿಗಾದರೂ ಸಚಿವ ಸ್ಥಾನ ಸಿಗಬಹುದು.

ತುಮಕೂರಿನಲ್ಲಿ ಹಿರಿಯರಾದ ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಪ್ರಬಲ ಆಕಾಂಕ್ಷಿಗಳು. ಮೈಸೂರು ಜಿಲ್ಲೆಯಲ್ಲಿ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್ ಸೇಠ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವ ಕುತೂಹಲವಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಕೋಟಾದಡಿ ಯು.ಟಿ.ಖಾದರ್ ಸಚಿವ ಸ್ಥಾನ ಸಿಗಬಹುದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ ಪ್ರಬಲ ಆಕಾಂಕ್ಷಿಗಳು.

ಶಿವಮೊಗ್ಗ ಜಿಲ್ಲೆಯಲ್ಲಿ ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ.ಸಂಗಮೇಶ್ ರೇಸ್‌ನಲ್ಲಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಎಂ.ಬಿ.ಪಾಟೀಲ್. ಶಿವಾನಂದಪಾಟೀಲ್, ಯಶವಂತರಾಯಗೌಡ ಪಾಟೀಲ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಡಿ.ಸುಧಾಕರ್, ಗೋವಿಂದಪ್ಪ ಹಾಗೂ ಎನ್.ವೈ.ಗೋಪಾಲಕೃಷ್ಣ, ಧಾರವಾಡ ಜಿಲ್ಲೆಯಲ್ಲಿ ವಿನಯಕುಲಕರ್ಣಿ, ಪ್ರಸಾದ್ ಅಬ್ಬಯ್ಯ, ಬಾಗಲಕೋಟೆ ಜಿಲ್ಲೆಯಲ್ಲಿ ಎಚ್.ವೈ.ಮೇಟಿ, ಆರ್‌ಬಿತಿಮ್ಮಾಪುರ ಅವರಲ್ಲಿ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು.

ಬೆಂಗಳೂರು ಗ್ರಾಮಾಂತರದಲ್ಲಿ ಕೆ.ಎಚ್.ಮುನಿಯಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬೀದರ್‌ನಲ್ಲಿ ಕೆಪಿಸಿಸಿ ಕರ‍್ಯಾಧ್ಯಕ್ಷ ಈಶ್ವರ ಖಂಡ್ರೆ ಅಥವಾ ರಹೀಂ ಖಾನ್, ಕಲಬುರಗಿ ಜಿಲ್ಲೆಯಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣ ಪ್ರಕಾಶ್ ಪಾಟೀಲ್, ಯಾದಗಿರಿ ಜಿಲ್ಲೆಯಲ್ಲಿ ಶರಣಬಸಪ್ಪ ದರ್ಶನಾಪುರ ಅಥವಾ ರಾಜಾ ವೆಂಕಟಪ್ಪ ನಾಯಕ, ರಾಯಚೂರು ಜಿಲ್ಲೆಯಲ್ಲಿ ಹಂಪಯ್ಯ ನಾಯಕ ಅಥವಾ ಬಾದರ್ಲಿ ಹಂಪನಗೌಡ, ಕೊಪ್ಪಳ ಜಿಲ್ಲೆಯಲ್ಲಿ ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಒಲಿಯಬಹುದು ಎನ್ನಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿರಿಯರಾದ ಆರ್.ವಿ.ದೇಶಪಾಂಡೆ, ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಕುಟುಂಬದ ಎಸ್.ಎಸ್.ಮಲ್ಲಿಕಾರ್ಜುನಗೆ ಅವಕಾಶ ಸಿಗಬಹುದು. ಗದಗ ಜಿಲ್ಲೆಯಲ್ಲಿ ಎಚ್‌ಕೆ ಪಾಟೀಲ, ಚಾಮರಾಜನಗರ ಜಿಲ್ಲೆಯಲ್ಲಿ ಪುಟ್ಟರಂಗಶೆಟ್ಟಿ, ಹಾಸನ ಜಿಲ್ಲೆಯಲ್ಲಿ ಕೆ.ಎಂ.ಶಿವಲಿಂಗೇಗೌಡ, ಮಂಡ್ಯ ಜಿಲ್ಲೆಯಲ್ಲಿ ಎನ್,ಚಲುವರಾಯಸ್ವಾಮಿ, ಕೋಲಾರ ಜಿಲ್ಲೆಯಲ್ಲಿ ಕೆ.ವೈ.ನಂಜೇಗೌಡ, ಕೊಡಗಿನಲ್ಲಿ ಯುವ ನ್ಯಾಯವಾದಿ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ.

ಪರಿಷತ್‌ನಲ್ಲೂ ಅವಕಾಶ: ಪರಿಷತ್‌ನಿಂದಲೂ ಒಬ್ಬರು ಅಥವಾ ಇಬ್ಬರಿಗೆ ಅವಕಾಶ ದೊರೆಯುವ ಸಾಧ್ಯತೆಯಿದ್ದು, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮ್ಮದ್ ಅವರಿಗೆ ಅವಕಾಶ ಲಭಿಸಬಹುದು.

ಸ್ಪೀಕರ್ ಯಾರು?: ಈ ಬಾರಿ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಎಚ್.ಕೆ.ಪಾಟೀಲ, ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್, ಬಸವರಾಜ ರಾಯರೆಡ್ಡಿ ಆಯ್ಕೆಯಾಗಿದ್ದು ಒಬ್ಬರಿಗೆ ಸ್ಪೀಕರ್ ಹುದ್ದೆ ಲಭಿಬಹುದು ಎಂದು ಮೂಲಗಳು ತಿಳಿಸಿವೆ.

(ವಿಶೇಷ ವರದಿ- ಕುಂದೂರು ಉಮೇಶ ಭಟ್ಟ, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ)

IPL_Entry_Point