ಕನ್ನಡ ಸುದ್ದಿ  /  ಕರ್ನಾಟಕ  /  Bengaluru In Charge Minister: ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ; ಬೆಂಗಳೂರು ಉಸ್ತುವಾರಿ ಸಚಿವರು ಯಾರಾಗುವರೆಂಬ ಕುತೂಹಲ

Bengaluru In Charge Minister: ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ; ಬೆಂಗಳೂರು ಉಸ್ತುವಾರಿ ಸಚಿವರು ಯಾರಾಗುವರೆಂಬ ಕುತೂಹಲ

Bengaluru In Charge Minister: ರಾಜಕೀಯ ಸಾಧಕ, ಬಾಧಕಗಳನ್ನು ಅಳೆದೂ ತೂಗಿ ಮುಖ್ಯಮಂತ್ರಿ ಯಾರು ಎಂಬುದನ್ನು ಅಂತಿಮಗೊಳಿಸಿದ್ದಾರೆ ಕಾಂಗ್ರೆಸ್‌ ವರಿಷ್ಠರು. ಇನ್ನು ಸಚಿವ ಸಂಪುಟ ರಚನೆ ವಿಚಾರ ಮುನ್ನೆಲೆಗೆ ಬರಲಿದೆ. ಯಾರೆಲ್ಲ ಸಚಿವರಾಗುತ್ತಾರೆ ಎಂಬುದು ಚರ್ಚೆ ಆಗಲಿದೆ. ಇವೆಲ್ಲ ಆದ ಬಳಿಕ, ಬೆಂಗಳೂರಿಗೆ ಉಸ್ತುವಾರಿ ಯಾರಾಗಬಹುದು ಎಂಬುದು ಕುತೂಹಲದ ವಿಚಾರ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು ರಾಜ್ಯ ರಾಜಧಾನಿ. ಹಲವು ಆಗುಹೋಗುಗಳ ಶಕ್ತಿಕೇಂದ್ರ. ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಬೆಂಗಳೂರಿನ ಪಾಲು 28. ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಹೆಚ್ಚು ಕಡಿಮೆ ಸಮಬಲದ ಪೈಪೋಟಿ ನೀಡಿದರೆ, ಜೆಡಿಎಸ್‌ ತನ್ನ ಅಸ್ತಿತ್ವ ಇದೆ ಎಂಬುದನ್ನು ತೋರಿಸುತ್ತ ಬಂದಿದೆ. ಸರಿಯಾಗಿ 10 ವರ್ಷ ಬಳಿಕ ಸಿದ್ದರಾಮಯ್ಯ ಸರ್ಕಾರದ ಎರಡನೆ ಅವಧಿ ಶುರುವಾಗುತ್ತಿದೆ. 2013ರಿಂದ 2018ರ ತನಕ ಕಾಂಗ್ರೆಸ್‌ ಸರ್ಕಾರ ಸ್ಪಷ್ಟ ಬಹುಮತ ಪಡೆದು ಆಳ್ವಿಕೆ ನಡೆಸಿತ್ತು.ಆದರೆ 2018 ರ ಚುನಾವಣೆಯಲ್ಲಿ ಬಹುಮತ ಪಡೆಯಲಾಗದೆ ಜೆಡಿಎಸ್‌ ಜತೆಗೆ ಮೈತ್ರಿ ಸರ್ಕಾರ ರಚಿಸಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಆಡಳಿತ ನಡೆಸಿತ್ತು. ಈಗ ಐದು ವರ್ಷದ ಬಳಿಕ ಮತ್ತೆ ಕಾಂಗ್ರೆಸ್‌ ಸರ್ಕಾರ ರಚನೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬ ಕುತೂಹಲ ಇದ್ದೇ ಇದೆ. ಸದ್ಯ ಈ ಸಲದ ಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಶಾಸಕರು ಇವರು - ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ, ಗಾಂಧಿನಗರದಿಂದ ದಿನೇಶ್‌ ಗುಂಡೂರಾವ್‌, ಹೆಬ್ಬಾಳದಿಂದ ಬೈರತಿ ಸುರೇಶ್‌, ಸರ್ವಜ್ಞನಗರದಿಂದ ಕೆಜೆ ಜಾರ್ಜ್‌, ಶಿವಾಜಿನಗರದಿಂದ ರಿಜ್ವಾನ್‌ ಆರ್ಷದ್‌, ಶಾಂತಿನಗರದಿಂದ ಎನ್‌ಎ ಹ್ಯಾರಿಸ್‌, ವಿಜಯನಗರದಿಂದ ಎಂ.ಕೃಷ್ಣಪ್ಪ, ಗೋವಿಂದರಾಜನಗರದಿಂದ ಪ್ರಿಯಕೃಷ್ಣ, ಚಾಮರಾಜಪೇಟೆಯಿಂದ ಜಮೀರ್‌ ಅಹ್ಮದ್‌ ಖಾನ್‌, ಬಿಟಿಎಂ ಲೇಔಟ್‌ನಿಂದ ರಾಮಲಿಂಗಾ ರೆಡ್ಡಿ, ಆನೇಕಲ್‌ನಿಂದ ಬಿ ಶಿವಣ್ಣ.

ಸಚಿವ ಸಂಪುಟಕ್ಕೆ ಸೇರಬಲ್ಲ ಬೆಂಗಳೂರು ಶಾಸಕರು ಯಾರ್ಯಾರು?

ಇಷ್ಟು ಶಾಸಕರ ಪೈಕಿ ರಾಮಲಿಂಗಾ ರೆಡ್ಡಿ, ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್‌ ಹಿರಿಯರು. ಹಿಂದೆ ಸಚಿವರಾಗಿದ್ದವರು ಇವರು. ಈ ಸಲ ಸಚಿವರಾಗುವುದನ್ನು ಅಲ್ಲಗಳೆಯಲಾಗದು. ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಬೈರತಿ ಸುರೇಶ್‌, ಜಮೀರ್‌ ಅಹ್ಮದ್‌ ಖಾನ್‌ ಕೂಡ ಮತ್ತೆ ಸಚಿವರಾಗುವ ಸಾಧ್ಯತೆ ಇರುವಂಥವರು.

ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರು ಯಾರಾಗಬಹುದು?

ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಅವಧಿಯಲ್ಲಿ ಅಂದರೆ 2013ರಿಂದ 2018ರ ಅವಧಿಯಲ್ಲಿ ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರಾಗಿದ್ದವರು ರಾಮಲಿಂಗಾ ರೆಡ್ಡಿ. ಅವರಿಗೆ ಈ ವಿಚಾರದಲ್ಲಿ ಹೆಚ್ಚಿನ ಅನುಭವ ಇದೆ. ಈ ಸಲವೂ ಮತ್ತೆ ಅವರಿಗೆ ಆ ಚಾನ್ಸ್‌ ಸಿಗುತ್ತಾ ಅಥವಾ ಎಂ.ಕೃಷ್ಣಪ್ಪ ಅವರನ್ನು ಪರಿಗಣಿಸುತ್ತಾರಾ ಎಂಬುದು ಸದ್ಯದ ಕುತೂಹಲ.

ಹಿರಿಯರನ್ನು ಬಿಟ್ಟು ಬೇರೆಯವರಿಗೆ ಬೆಂಗಳೂರು ಉಸ್ತುವಾರಿ ವಹಿಸುವುದಾದರೆ ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಹೆಸರು ಮುಂಚೂಣಿಗೆ ಬರಬಹುದು. ಬೆಂಗಳೂರು ಉಸ್ತುವಾರಿ ಸಚಿವರ ಸ್ಥಾನಕ್ಕೆ ಇವರು ಕೂಡ ಪೈಪೋಟಿ ನೀಡಬಲ್ಲವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಂಗಳೂರು ಮಹಾನಗರ ಉಸ್ತುವಾರಿ ಸಚಿವರಾಗಲು ಪೈಪೋಟಿ ಯಾಕೆ?

ರಾಜ್ಯ ರಾಜಧಾನಿ ಬೆಂಗಳೂರು. ರಾಜಕೀಯವಷ್ಟೇ ಅಲ್ಲ, ಬಹುತೇಕ ವಾಣಿಜ್ಯ ಚಟುವಟಿಕೆಗಳಿಗೂ ಇದು ಶಕ್ತಿಕೇಂದ್ರ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಬೇಕು. ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯ ಚುನಾವಣೆ ನಡೆಯದೆ ಮೂರೂವರೆ ವರ್ಷ ಆಗಿದೆ. ಇದನ್ನು ಗೆದ್ದರೆ ಇಡೀ ಬೆಂಗಳೂರನ್ನು ಗೆದ್ದುಕೊಂಡಂತೆ. ಈ ರೀತಿ ಅನೇಕ ಸೂಕ್ಷ್ಮ ವಿಚಾರಗಳು ಇಲ್ಲಿವೆ. ಹೀಗಾಗಿ ಬೆಂಗಳೂರು ಮಹಾನಗರ ಉಸ್ತುವಾರಿ ಸಚಿವರ ಆಯ್ಕೆಯನ್ನು ಸ್ವತಃ ಮುಖ್ಯಮಂತ್ರಿಯೇ ಗಮನಿಸುವುದು ವಾಡಿಕೆ.

ನಿಕಟಪೂರ್ವ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಕೆಲಸ ಮಾಡಿದ್ದರು. ಬೇರೆ ಸಚಿವರಿಗೆ ಈ ಹೊಣೆಗಾರಿಕೆ ನೀಡಿರಲಿಲ್ಲ ಎಂಬುದೂ ಗಮನಾರ್ಹ.

IPL_Entry_Point