Puttur News: ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯ; ಪಿಎಸ್ಐ ಸಹಿತ ಇಬ್ಬರ ಅಮಾನತು, ಡಿಎಸ್ಪಿ ವಿರುದ್ಧ ಶಿಸ್ತುಕ್ರಮ ಎಂದ ಎಸ್ಪಿ ವಿಕ್ರಮ್ ಆಮ್ಟೆ
ಕನ್ನಡ ಸುದ್ದಿ  /  ಕರ್ನಾಟಕ  /  Puttur News: ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯ; ಪಿಎಸ್ಐ ಸಹಿತ ಇಬ್ಬರ ಅಮಾನತು, ಡಿಎಸ್ಪಿ ವಿರುದ್ಧ ಶಿಸ್ತುಕ್ರಮ ಎಂದ ಎಸ್ಪಿ ವಿಕ್ರಮ್ ಆಮ್ಟೆ

Puttur News: ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯ; ಪಿಎಸ್ಐ ಸಹಿತ ಇಬ್ಬರ ಅಮಾನತು, ಡಿಎಸ್ಪಿ ವಿರುದ್ಧ ಶಿಸ್ತುಕ್ರಮ ಎಂದ ಎಸ್ಪಿ ವಿಕ್ರಮ್ ಆಮ್ಟೆ

Puttur News: ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಬ್ಯಾನರ್ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಿಗೆ ದೌರ್ಜನ್ಯವೆಸಗಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿ ದ.ಕ.ಎಸ್ಪಿ ವಿಕ್ರಮ್ ಆಮ್ಟೆ ಶಿಸ್ತುಕ್ರಮದ ಹೇಳಿಕೆ ನೀಡಿದ್ದಾರೆ.

ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಯುವಕ ಅವಿನಾಶ್‌ ಅವರನ್ನು ಭೇಟಿ ಮಾಡಿದ ಯುವಾ ಬ್ರಿಗೇಡ್‌ ನಾಯಕ, ಚಿಂತಕ ಚಕ್ರವರ್ತಿ ಸೂಲಿಬೆಲೆ. ಈ ಸಂದರ್ಭದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರ ಮುಖವೆನಿಸಿಕೊಂಡ ಅರುಣ್‌ ಪುತ್ತಿಲ ಜತೆಗಿದ್ದರು.
ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಯುವಕ ಅವಿನಾಶ್‌ ಅವರನ್ನು ಭೇಟಿ ಮಾಡಿದ ಯುವಾ ಬ್ರಿಗೇಡ್‌ ನಾಯಕ, ಚಿಂತಕ ಚಕ್ರವರ್ತಿ ಸೂಲಿಬೆಲೆ. ಈ ಸಂದರ್ಭದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರ ಮುಖವೆನಿಸಿಕೊಂಡ ಅರುಣ್‌ ಪುತ್ತಿಲ ಜತೆಗಿದ್ದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ವ್ಯಾಪ್ತಿಯ ಪುತ್ತೂರು ಅರಣ್ಯ ಇಲಾಖೆಯ ಆವರಣ ಗೋಡೆಯ ಬಳಿ ಬಿಜೆಪಿ ಮುಖಂಡರಾದ ಡಿ. ವಿ. ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನು ಹಾಕಿ ಬಿಜಿಪಿ ಸೋಲಿಗೆ ಕಾರಣವಾದ ನಾಯಕರಿಗೆ ಶ್ರದ್ಧಾಂಜಲಿಯ ಬ್ಯಾನರ್ ಅನ್ನು ಅಳವಡಿಸಿದ ಪ್ರಕರಣದಲ್ಲಿ ಬಂಧಿತರಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದು ವಿವಾದಕ್ಕೀಡಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ, ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಡಿವೈಎಸ್ಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

ಪುತ್ತೂರಿಗೆ ಆಗಮಿಸಿದ ಅವರು ಗಾಯಾಳುಗಳ ಹೇಳಿಕೆ ಮತ್ತು ದೂರಿಗೆ ಸಂಬಂಧಿಸಿ ಸಮಗ್ರ ವಿಚಾರಣೆಯನ್ನು ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.

ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆ ಯಲ್ಲಿ ವಿಚಾರಣೆಗೆ ಒಳಪಡಿಸಿದ ಆರೋಪಿತರಿಗೆ ಪೊಲೀಸ್ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಅವಿನಾಶ್ ನರಿಮೋಗ್ರು ರವರು ನೀಡಿದ ದೂರಿನ ಮೇರೆಗೆ ಪುತ್ತೂರು ಡಿಎಸ್ಪಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ, ಪುತ್ತೂರು ಗ್ರಾಮಾಂತರ ಠಾಣೆಯ ಪಿಸಿ ಹರ್ಷಿತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣ ದ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲೆ ಪಿಎಸ್.ಐ ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಪಿಸಿ ಹರ್ಷಿತ್ ಅವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ, ಹಾಗೂ ಡಿಎಸ್ಪಿ ಪುತ್ತೂರು ರವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ವಿಕ್ರಮ್ ಆಮ್ಟೆ ಹೇಳಿದರು.

ಘಟನೆಯ ವಿವರ

ಬ್ಯಾನರ್ ಕಟ್ಟಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಕುರಿತು ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪುತ್ತೂರು ನಗರ ಠಾಣೆಗೆ ಸರ್ಕಾರಿ ಆಸ್ತಿಪಾಸ್ತಿಯನ್ನು ಮತ್ತು ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ದೂರು ನೀಡಿದ್ದರು. ಮೇ. 15ರಂದು ಬಿಜೆಪಿ ಪುತ್ತೂರಿನಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಸಹಿತ ಪ್ರಮುಖ ಬಿಜೆಪಿಗರು ಬ್ಯಾನರ್ ಹಾಕಿದ ಹಿಂದು ಕಾರ್ಯಕರ್ತರ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಅದಾದ ಬೆನ್ನಲ್ಲೇ ಪೊಲೀಸ್ ಇಲಾಖೆ ನರಿಮೊಗರು ಮೂಲದ ವಿಶ್ವನಾಥ್, ಮಾಧವ ಎಂಬವರನ್ನು ಪ್ರಾರಂಭದಲ್ಲಿ ವಶಕ್ಕೆ ಪಡೆದುಕೊಂಡಿತು. ಮೇ.15 ರಾತ್ರಿ ನರಿಮೊಗರು ನಿವಾಸಿಗಳಾದ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೆಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಅವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಂದ ವಶದಲ್ಲಿವರಿಗೆ ಹಿಗ್ಗಾಮುಗ್ಗಾ ತಳಿಸಿ ಗಾಯಗೊಳಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಫೊಟೋಗಳು ಹರಿದಾಡಿದವು. ಗಾಯಗೊಂಡ ಯುವಕರ ರಕ್ತಸಿಕ್ತ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸಿಕೊಂಡವು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಠಾಣೆಯಿಂದ ಬಿಡಿಸಿಕೊಂಡು ಬಾರದೇ ಇದ್ದಿದ್ದರೆ, ಮತ್ತೊಂದು ಅನಾಹುತವಾಗುತ್ತಿತ್ತು ಎಂಬ ಮಾತುಗಳು ಕೇಳಿಬಂದವು.

ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಹಿಂದು ಕಾರ್ಯಕರ್ತ ಅವಿನಾಶ್‌ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆ ಹೀಗಿದೆ..

ಹರೀಶ್ ಪೂಂಜಾ, ಅರುಣ್ ಪುತ್ತಿಲ, ಸೂಲಿಬೆಲೆ ಭೇಟಿ

ಗಾಯಾಳುಗಳನ್ನು ಭೇಟಿ ಮಾಡಲು ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪುತ್ತೂರಲ್ಲಿ ಶಾಸಕ ಇಲ್ಲ ಎಂದು ಭೀತಿಗೊಳಗಾಗದಿರಿ, ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಈ ಸಂದರ್ಭ ಮಾತನಾಡಿದ ಹಿಂದು ಸಂಘಟನೆ ಮುಖಂಡ ಅರುಣ್ ಪುತ್ತಿಲ, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆ ಎಂದರು. ಗಾಯಾಳುಗಳನ್ನು ನೋಡಲು ಸ್ಥಳೀಯ ಮುಖಂಡರಲ್ಲದೆ, ಚಕ್ರವರ್ತಿ ಸೂಲಿಬೆಲೆ ಅವರೂ ಆಗಮಿಸಿದರು.

ನೆಟ್ಟಿಗರ ಆಕ್ರೋಶ

ಪುತ್ತೂರು ಘಟನೆ ರಾಜ್ಯದಾದ್ಯಂತ ಸುದ್ದಿ ಮಾಡಿತು. ಸಾಮಾಜಿಕ ಜಾಲತಾಣದಲ್ಲಂತೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸ್ಥಳೀಯ ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ತೀವ್ರ ಟೀಕಾಪ್ರಹಾರ ನಡೆದವು. ಪೊಲೀಸ್ ದೌರ್ಜನ್ಯದಂಥ ಕೃತ್ಯಕ್ಕೆ ಯಾರು ಕಾರಣರು ಎಂದು ಪ್ರಶ್ನಿಸತೊಡಗಿದರು. ಘಟನೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಚುರುಕಾದರು. ಎಸ್ಪಿ ವಿಕ್ರಮ್ ಆಮ್ಟೆ ಮಾರ್ಗದರ್ಶನದಲ್ಲಿ ತುರ್ತು ಕ್ರಮವಾಗಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ಪುತ್ತೂರಿನಲ್ಲಿ ಘಟನೆ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗಾಗಲೇ ಕರೆ ಮಾಡಿ ವಿಚಾರಿಸಿದ್ದಾರೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner